Pages

Wednesday, November 14, 2018

ಹಾಗೆ ಸುಮ್ಮನೆ - ನಾಯಿಯ ದರ್ಬಾರು

"ಹೌದಾ ಚಿನ್ನಾ! ನನ್ನ ಬಂಗಾರು" ಬೆಳಗ್ಗೆ ಬೆಳಗ್ಗೆ ಸ್ಕೂಟಿ ಮೇಲೆ ಕುಳಿತಿದ್ದ ಮಗಳ ತಲೆ ಸವರುತ್ತ ಅಮ್ಮ ರಾಗ ಎಳೆಯುತ್ತಿದ್ದಳು. ಸಧ್ಯ ಕನ್ನಡ ಮಾತನಾಡುವವರು ಸಿಕ್ಕಿದ್ದು ಪುಣ್ಯ. ಬಹುಶಃ ಶಾಲೆ ಬಸ್ ಹಿಡಿಯಲು ರಸ್ತೆ ಬದಿಗೆ ನಿಲ್ಲಿಸಿ ಮಗಳ ಮಾತುಗಳನ್ನು ಆಲಿಸುತ್ತಿದ್ದಳು ತಾಯಿ. ಅಲ್ಲೇ ಇದ್ದ ನಾಯಿಯೊಂದು ಸ್ಕೂಟಿ ಬಳಿ ಅದರ ಚಕ್ರ ಮೂಸುತ್ತಿತ್ತು. ಯಾರಿಗಾದರೂ ಊಹಿಸಬಹುದು ಅದರ ಮುಂದಿನ ಹೆಜ್ಜೆ. ಅಲ್ಲಿದ್ದ ತಾಯಿಗೂ‌ ಇದರ ಮರ್ಮ ಮನದಟ್ಟಾಗಲು ತುಂಬಾ ಸಮಯ ಹಿಡಿಯಲಿಲ್ಲ. "ಛೂ ಛೂ। ಆಕಡೆ ಹೋಗು ದರಿದ್ರ ಮುಂಡೆದೆ" ಅಂತಾ ಕಲ್ಲು ಎತ್ತಿಕೊಂಡು ತಾಯಿ ಅದಕ್ಕೆ ಹೊಡೆಯಲು ಬಂದಳು. ನಾಯಿಯೋ ಏನು ಆಗದೆಂಬಂತೆ ದೀಪಾವಳಿಯ ಹೂಕುಂಡದಂತೆ ತನ್ನ ಪ್ರಸಾದವನ್ನು ಚಕ್ರಕ್ಕೆ ಚಿಮ್ಮಿಸಿತು. ಅದೇನು ಆಂಗಲ್ ಅಪ್ಪಾ  ನಾಯಿಗಳದ್ದು, ಬೆಕಮ್ ಗೋಲು ಹೊಡೆದಂಗೆ ನೇರ ಗುರಿ ತಲುಪಿಸುತ್ತಾವೆ. ಅಲ್ಲಿದ್ದ ನಾಯಿಯಂತೂ ತಾಯಿಯ ಜೋರಿನ ಮಾತಿಗೆ ಕ್ಯಾರೆ ಇಲ್ಲವೆಂಬಂತೆ ತನ್ನ ಕಾರ್ಯ ಪೂರ್ಣಗೊಳಿಸಿತು. ವಾರ್ಧಾ ಚಂಡಮಾರುತದ ಪ್ರಭಾವದಿಂದಾಗಿ ರಸ್ತೆಯ ಮೇಲಿನ ಮಣ್ಣು ಕೆಸರಾಗಿತ್ತು (ಅರೆರೆ ರಸ್ತೆಯ ಮೇಲೆ ಮಣ್ಣೇ!! ಇದೆಪ್ಪ ಬೆಂಗಳೂರು ರಸ್ತೆಗಳ ವಿಶೇಷತೆ. ಎಲ್ಲಿ ನೋಡಿದರೂ‌ ಮಣ್ಣು ಇಲ್ಲ ಗುಂಡಿ. ಡಾಂಬರು ಮಾತ್ರ ಕಾಣೋದೇ ಇಲ್ಲ). ಕೆಸರು ಇಲ್ಲದಿದ್ದರೆ, ಯಜ್ಞದ ಪೂರ್ಣಾಹುತಿಯಂತೆ ಮಣ್ಣನ್ನು ಕಾಲಿನಿಂದ ಚಿಮುಕಿಸಿ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುತ್ತಿತ್ತೇನೋ!

ಮೊದಲೇ ಬಿಳಿನಾಯಿ ಅದರ ಮಧ್ಯೆ ಚಳಿಗಾಲ ಸೀಸನ್ ಬೇರೆ ಅವುಗಳಿಗೆ. ಎಲ್ಲಿ ಕೆಸರೆರಚಿದರೆ ತನ್ನ ಮೈ ಕಾಂತಿ ನಶಿಸಿ ಹೋಗುವುದೋ ಎಂಬ ಚಿಂತೆ ಅದಕ್ಕೆ ಕೂಡಾ ಇರಬಹುದು. ಇಲ್ಲದಿದ್ದರೆ ರಾತ್ರಿ ವೇಳೆಗೆ 'ಶ್ವಾನಿ'ಗಳನ್ನ  ಇಂಪ್ರೆಸ್ ಮಾಡೋದು ಹೆಂಗಪ್ಪಾ ಅಂದುಕೊಂಡು ಹಾಗೆ ಬಿಟ್ಟಿರಬಹುದು. ಪಕ್ಕದಲ್ಲಿ ಯಾವುದು ಶ್ವಾನಿಗಳು ಇರಲಿಲ್ಲ. ಇಲ್ಲದಿದ್ರೆ ಮನುಷ್ಯರಿಗೆ ಯಾಮಾರಿಸ್ತೀನಿ ಅಂತ ಒಂದೆರಡು ಬಾರಿ ಕೆಸರು ಎರಚಿ ತನ್ನ ಶೌರ್ಯ ಪ್ರದರ್ಶಿಸುತಿತ್ತೇನೋ! ವಾರ್ಧಾ ಚಂಡಮಾರುತ ಬಂಗಾಳಕೊಲ್ಲಿಯ ಮೇಲೆ ಸುತ್ತುತ್ತಿದ್ದರೆ, ಇತ್ತ ಬಿಳಿ ಶ್ವಾನ ಪಾಲಿಕೆ ಮತ್ತು ಜಲಮಂಡಳಿಯವರು ಅಗೆದು ನಂತರ ಉಳಿದ ಡಾಮರು ರಸ್ತೆಯಲ್ಲಿ ೭-೮ ಪ್ರದಕ್ಷಿಣೆ ಹಾಕಿ ನಿರಾಳವಾಗಿ ಮಲಗಿತು.

ಇದಪ್ಪಾ ನಾಯಿಗಳ ಕಥೆ ಅಟ್ಲೀಸ್ಟ್ ಬೆಂಗಳೂರ್ ನಾಗೆ. ಪ್ರಾಣಿ ದಯಾ ಸಂಘದವರ ಕೃಪೆಯಿಂದಾಗಿ ಇಲ್ಲಿನ ನಾಯಿಗಳಿಗೂ ಸೊಕ್ಕು ಏರಿಬಿಟ್ಟಿದೆ. ಅಲ್ಲ ನಮ್ಮ ಗಾಡಿ ಮುಂದೆ ಇಷ್ಟೊಂದು ಭಂಡತನದಿಂದ ಯಾಮಾರಿಸ್ತಾವೆ ಅಂದ್ರೆ! ಏನೆ ಆದ್ರೂ ಅವುಗಳ ರಕ್ಷಣೆಗೆ ಕ್ಷಣಮಾತ್ರದಲ್ಲಿ ಪ್ರಾಣಿಪ್ರಿಯರು ಬರುತಾರೆಂಬ ಧೃಡವಾದ ನಂಬಿಕೆ ನಮ್ಮ ಶ್ವಾನಗಳದ್ದು. ಅದಕ್ಕೆ ರಾತ್ರಿಯೆಲ್ಲಾ ಕೊರೆಯುವ ಚಳಿಯಲ್ಲಿ ಅವುಗಳ ಪ್ರಣಯ ಪ್ರಸಂಗಕ್ಕೆ ನಮ್ಮ ನಿದ್ದೆಯನ್ನು ಬಲಿಕೊಡೊದು ಆದ್ರು, ನ್ಯಾಯ ಶ್ವಾನಗಳ ಕಡೇನೆ ವಾಲೋದು. ಬೀದಿನಾಯಿಗಳು ಕಡಿಮೆಯಾದರೆ ತೊಟ್ಟಿಯಲ್ಲಿರುವ ಕಸ ಖಾಲಿಯಾಗೋದಿಲ್ಲ ಅನ್ನೋದು ಪ್ರಾಣಿಪ್ರಿಯರ ಅಂಬೋಣ. ಇದರಿಂದ ಇಲಿ ಸಂತತಿ ಹೆಚ್ಚಿ , ಹಾವುಗಳು ಕೂಡ ಹೆಚ್ಚಾಗುತ್ತವಂತೆ. ಇದಕ್ಕೆ ಹೇಳೋದು ಭಾರತ "work-around" ಗಳ ದೇಶ ಅಂತಾ. ಶಾಶ್ವತ ಪರಿಹಾರ ಹುಡುಕಿದ್ರೆ ಭ್ರಷ್ಟರ ಜೇಬು ತುಂಬೋದು ಕಷ್ಟ. ಒಟ್ಟಿನಲ್ಲಿ ಶ್ವಾನಗಳಿಗಿಲ್ಲ ನಷ್ಟ.

No comments:

Post a Comment