Pages

Sunday, April 21, 2019

ಚುನಾವಣೆ ತಪಾಸಣೆ, ಹಳೆ ಶಿರಾಡಿ ಪ್ರಕಟಣೆ, ಕೊನೆಗೆ ಸ್ವಲ್ಪ ಬವಣೆ

ವಿಶಾಲವಾದ ರಸ್ತೆಯಲ್ಲಿ ಅಬ್ಬಬ್ಬಾ ಏನಿದು ಟ್ರಾಫಿಕ್ ಜಾಮ್. ಅಪಘಾತ ಆಯಿತೆ, ಬ್ಯಾರಿಕೇಡ್ ಸಣ್ಣದಾಯಿತೆ ಹೀಗೆ ಹಲವು ಯೋಚನೆಗಳು ತಲೆಯಲ್ಲಿ ಹಾರತೊಡಗಿದವು. ಅದ್ಯಾವುದೂ ಅಲ್ಲ ಮಾರಾಯ್ರೆ ಎಲ್ಲಾ ಚುನಾವಣೆ ಚೆಕಪ್. ಇನ್ನೇನು ಹಿರಿಸಾವೆ ಬಂತೆಂದು ಹಿರಿಹಿರಿ ಹಿಗ್ಗುವಷ್ಟರಲ್ಲಿ, ಟ್ರಾಫಿಕ್ ಜಾಮ್ ಮಧ್ಯೆ ಸಿಕ್ಕಿಹಾಕಿಕೊಂಡೆವು. ನೆಲಮಂಗಲದಿಂದ ಇಲ್ಲಿಯತನಕ ವಿಮಾನದಂತೆ ಹಾರಿಬಂದ ಕಾರು, ಒಮ್ಮೆಲೇ ಎತ್ತಿನಗಾಡಿಯಾಯಿತು. ಪ್ರತಿಯೊಂದು ಗಾಡಿಗೂ ತಪಾಸಣೆ. ಅದರಲ್ಲೂ SUV, omini, truck, tempo-traveller, auto ವಾಹನಗಳ ಮೇಲೆ ವಿಶೇಷ ನಿಗಾ ವಹಿಸುತ್ತಿದ್ದರು. ಮೂಲೆ ಮೂಲೆಯಲ್ಲೂ ಚೆಕಪ್. ಊರಿಗೆ ವೋಟ್ ಹಾಕಲು ಕರೆದುಕೊಂಡು ಹೋಗುತ್ತಿದ್ದ ನಮ್ಮ ವಾಹನಕ್ಕೂ ತಪಾಸಣೆ ಬಿಸಿ. ಮೊದಲೇ ಸಿಕ್ಕಾಪಟ್ಟೆ ಸೆಖೆ ಅದರ ಜೊತೆ ಚೆಕಪ್ ಬಿಸಿ. ಡಿಕ್ಕಿಯಲ್ಲಿದ್ದ ಎರಡು ಗಜಗಾತ್ರದ ಡೈಪರ್ ಕಟ್ಟನ್ನು ಕಂಡು  ಹೆಚ್ಚೇನು ಪರಿಶೀಲಿಸದೆ  ನಮ್ಮನ್ನು ಸಾಗಹಾಕಿದರು.

ಅಷ್ಟೊತ್ತಿಗಾಗಲೇ ೨೦ ನಿಮಿಷ ಖೋತಾ ಆಗಿತ್ತು. ಏರುವ ದಾರಿ ಬೇರೆ, ಟ್ರಕ್ಕುಗಳು ಉಸಿರುಗಟ್ಟಿ, ದುರ್ನಾತದ ಕಾರ್ಮೋಡ ಬೀರುತ್ತಾ, ಫಿಟ್ಸ್ ರೋಗ ಬಂದಂತೆ ತೆವಳಿಕೊಂಡು ಮೇಲೇರುತ್ತಿದ್ದವು. ಇಂತಹ ವಿಶಾಲವಾದ, ಅಚ್ಚುಕಟ್ಟಿನ, ಸ್ವಚ್ಛಂದವಾದ ರಸ್ತೆಯಲ್ಲಿ ಟ್ರಕ್ಕುಗಳ ಒದ್ದಾಟ ನೋಡಿದರೆ,  ಎಲ್ಲಾ ಇದ್ದು ಭೂರಿ ಭೋಜನವನ್ನು ಉಣ್ಣಲಾಗದೆ ಅನಿವಾರ್ಯವಾಗಿ ಮುದ್ದೆ ಜೊತೆಗೆ ಸೊಪ್ಪು ಸಾರನ್ನು ಮಾತ್ರ ತಿನ್ನಬಹುದಾದ  ಸಿರಿವಂತನಂತಿತ್ತು! ಅವುಗಳ ಹಿಂದಿರುವ ವಾಹನದವರು  ಜೀವ ಹೋದಂತೆ ಹಾರ್ನ್ ಮಾಡುತ್ತಿದ್ದರು. ಅವರಿಗೆ ಇನ್ನು ೨೦ ನಿಮಿಷ ವ್ಯರ್ಥವಾಗಿರಬೇಕು. ಅವುಗಳ ಮಧ್ಯೆ ನುಸುಳುವುದೇ ಮಹಾಸಾಹಸ ಎಂದರೆ ತಪ್ಪಾಗದು. ಇಷ್ಟೆಲ್ಲಾ ತಪಾಸಣೆ ಮಾಡಿದರೂ ಹಣ, ಹೆಂಡಕ್ಕೇನೂ ಕಡಿಮೆಯೇ. ಸುಮ್ಮನೆ ಜನ ಸಾಮಾನ್ಯರ ಸಮಯ ವ್ಯರ್ಥ. ಚುನಾವಣೆ ಡೀಲ್ ಎಷ್ಟು ತಿಂಗಳ ಮುಂಚೆಯೇ ಆಗಿರುತ್ತೋ ಯಾರಿಗೆ ತಿಳಿದಿದೆ. ತಪಾಸಣೆ ಮಾಡುವವರು ಯಾವ ಪಾರ್ಟಿಯೊಂದಿಗೂ ಗುರುತಿಸಿಕೊಂಡಿಲ್ಲವೆನ್ನುವುದಕ್ಕೆ ಏನು ಆಧಾರವಿದೆ. ಮೊನ್ನೆ ವರದಿ ಪ್ರಕಾರ ತಮಿಳುನಾಡಿನಲ್ಲಿ ಹೆಂಡದ ಹೊಳೆಗೆ ಸೇರಿದ ವೋಟುಗಳು ಲೆಕ್ಕವೇ ಇಲ್ಲ. ಇಷ್ಟಲ್ಲದೆ ಸಾಲು ಸಾಲು ರಜೆ ಬೇರೆ. ನನ್ನ ಪ್ರಕಾರ ಅಕ್ರಮ ಮಾಡುವವರ ಜೊತೆಗೆ ಹಕ್ಕು ಚಲಾಯಿಸದೆ ರಜಾ ಮಜಾ ಮಾಡುವವರನ್ನೂ ಜಪ್ತಿ ಮಾಡಿ ಕೇಸ್ ದಾಖಲಿಸಬೇಕು. ಅವರು ವೋಟ್ ಹಾಕಿದ ಬಳಿಕವೇ ಕೇಸ್ ವಾಪಾಸ್ ಪಡೆಯಬೇಕು.


ಹಾಸನದಲ್ಲೂ ಇದೆ ಗೋಳು. ಹೆಚ್ಛೆನು ವ್ಯರ್ಥವಾಗಲಿಲ್ಲ ಪುಣ್ಯಕ್ಕೆ. ಆದರೆ ಈ ಸೂಚನಾ ಫಲಕ ಕಣ್ಣಿಗೆ ಕುಕ್ಕಿತು. ಶಿರಾಡಿ ರಸ್ತೆ ಸಿದ್ಧವಾಗಿ ವರುಷ ಕಳೆದರೂ ಇದನ್ನು ತೆಗೆದಿಲ್ಲ. ಜೊತೆಗೆ ರಾಹೆ ಸಂಖ್ಯೆ ೪೮ ಹಾಗೆ ಇದೆ. ಈ ಸಂಖ್ಯೆ  ೭೫ ಕ್ಕೆ ಮರು ನಾಮಕರಣವಾದರೂ ಲೋಕೋಪಯೋಗಿ ಇಲಾಖೆ ಇನ್ನು ೪೮ರ ಗುಂಗಿನಲ್ಲಿ ಇದೆ ಅನ್ನಿಸುತ್ತೆ! ಗೂಗಲ್ ಮ್ಯಾಪ್ ಕೂಡಾ ೪೮ ಅಂತಾ ತೋರಿಸ್ತಾ ಇದೆ ಆದರೆ ವಿಕಿಪೀಡಿಯಾದಲ್ಲಿ ಸರಿಯಾದ ಮಾಹಿತಿ ಇದೆ. ಪೂರ್ವ-ಪಶ್ಚಿಮ ರಾಹೆ ಮಾರ್ಗಗಳಿಗೆ ಬೆಸ ಸಂಖ್ಯೆಯನ್ನು ಮತ್ತು ಉತ್ತರ-ದಕ್ಷಿಣ ಮಾರ್ಗಗಳಿಗೆ ಸಮ ಸಂಖ್ಯೆಯನ್ನು ಬಳಸುತ್ತಾರೆ. ಇರಲಿ ವಿಷಯಕ್ಕೆ ಬರೋಣ. ಪ್ರತಿ ವರ್ಷ ಘಾಟಿ ರಸ್ತೆ ಹಾಳಾಗುವುದು ಮಾಮೂಲಾಗಿದೆ. ಅದಕ್ಕೆ ಹೆದ್ದಾರಿ ಇಲಾಖೆಯವರು ಶಾಶ್ವತ ಬೋರ್ಡ್ ಹಾಕಿರಬೇಕು. ಅವರಿಗೂ ತಿಳಿದಿದೆ ಮುಂದಿನ ವರ್ಷವೂ ಇದೆ ಗೋಳು ಅಂತಾ. ಅದಕ್ಕೆ ಅದರಲ್ಲಿ ದಿನಾಂಕವನ್ನು ನಮೂದಿಸಿಲ್ಲ ನೋಡಿ. ಅಥವಾ ಬೋರ್ಡ್ ತೆಗೆಯಲು ಟೆಂಡರ್ ಕರೆಯಬೇಕೋ? ದೇವರೇ ಬಲ್ಲ. ಸಮಾಧಾನದ ವಿಷಯವೆಂದರೆ ಈ ಬಾರಿ ತಡವಾಗಿ ತಲುಪಲು ಘಾಟಿ ರಸ್ತೆ ಕಾರಣವಲ್ಲ. ಸಧ್ಯಕ್ಕೆ ೪೦ಕಿ.ಮೀ ಘಾಟಿ ರಸ್ತೆಯನ್ನು ಸರಾಗವಾಗಿ ಒಂದು ಘಂಟೆಯ ಒಳಗೆ ಕ್ರಮಿಸಬಹುದು. ಮೊದಲೆಲ್ಲಾ ೨:೩೦ ಘಂಟೆ ತೆಗೆದುಕೊಂಡದ್ದು ಉಂಟು. ಇನ್ನು ಮಳೆಗಾಲ ಮತ್ತು ತದನಂತರದ ಗೋಳೇನಿದೆಯೋ ಆ ದೇವರೇ ಬಲ್ಲ! ಅಂದಹಾಗೆ ತಪಾಸಣೆಯು ೩೦ ನಿಮಿಷ ನುಂಗಿಹಾಕಿದ್ದು ಸುಳ್ಳಲ್ಲ.


ಇವರಿಗೆ ತಪಾಸಣೆ ನಮಗೆ ಬವಣೆ. ಸುಮಾರು ಅರ್ಧ ತಾಸು ಹಾಳಾಗಿರಬೇಕು. ಉಡುಪಿ ತನಕ ಹೋಗಬೇಕು ಆದಷ್ಟು ಬೇಗ ತಲುಪಬೇಕೆನ್ನುವ ತವಕ ಕೂಡ ಯಾಕಂದ್ರೆ ಸುಡು ಬಿಸಿಲು ಜೊತೆಗೆ ಬೆವರಿನ ಹರಿವು. ಏನು ಮಾಡೋದು. ಅವರದ್ದು ಕರ್ತವ್ಯ ನಮ್ಮದು ಸಮಯ ವ್ಯಯ. ಪಾಪ ಬಿಸಿಲಲ್ಲಿ ಕೆಲಸ ಮಾಡೋದು ಸುಲಭನಾ! ಅವರದ್ದು ಬೇರೆಯೇ ಬವಣೆ.

ಯಾಕೋ ದಿನವೇ ಸರಿ ಇಲ್ಲ ಅನ್ನಿಸುತ್ತಿತ್ತು. ಎಡಿಯೂರು ಪಕ್ಕ ಸ್ವಾತಿ ಹೋಟೆಲ್ ನಲ್ಲಿ ಅರೆಬೆಂದ ಇಡ್ಲಿ ವಡೆ, ರುಚಿಯಿಲ್ಲದ ದೋಸೆ ಪಲ್ಯ ತಿಂದು ನಮ್ಮ ಪರ್ಸ್ ಸುಟ್ಟುಕೊಂಡೆವು. ಒಂದು ಪ್ಲೇಟ್ ಮಸಾಲೆ ದೋಸೆ ಅಥವಾ ಒಂದು ಪ್ಲೇಟ್ ಇಡ್ಲಿ-ವಡೆಗೆ (೨ಇಡ್ಲಿ-೧ವಡೆ) ಬರೋಬ್ಬರಿ ೮೦ ರೂಪಾಯಿ ಮಾರಾಯ್ರೆ. ಬೆಂಗಳೂರಿನ ಎಂಟಿಆರ್ ಕೂಡಾ ಇದಕ್ಕಿಂತ ಅಗ್ಗ ಜೊತೆಗೆ ಅತ್ಯುತ್ತಮ ಗುಣಮಟ್ಟ. ಸಾಲದಕ್ಕೆ ಇಲ್ಲಿನ ಜ್ಯೂಸ್ ಕೂಡಾ ಅಷ್ಟಕ್ಕಷ್ಟೇ. ಕಲ್ಲಂಗಡಿ ರಸಕ್ಕೆ ಅದೇನು ೮೦ ರೂಪಾಯಿನೋ ನಾ ತಿಳಿಯೇ. ಸುಮ್ಮನೆ ಚನ್ನರಾಯಪಟ್ಟಣ ಬೈಪಾಸಿನಲ್ಲಿ ಒಂದು ಲೋಟ ಕಬ್ಬಿನಹಾಲು ಇಲ್ಲವೇ ಒಂದು ಎಳನೀರು ಕುಡಿಯುವುದೇ ಲೇಸು. ಹೆಚ್ಚೆಂದರೆ ೩೫ ರುಪಾಯಿ ಖರ್ಚು ಅಷ್ಟೇ! ನೀವು ಈ ರಸ್ತೆಯಲ್ಲಿ ಸಂಚರಿಸುವುದಾದರೆ ಅಲ್ಲೇ ಪಕ್ಕ ಇರುವ ಮಯೂರ ಹೋಟೆಲಿಗೂ ಭೇಟಿ ನೀಡಿ. ಸ್ವಾತಿಗಿಂತ ಎಷ್ಟೊ ಬೆಟರ್. ದುಡ್ಡು ಕೂಡಾ ಕಡಿಮೆ. ಏನಂದರೆ ಎಡಿಯೂರು ಪೇಟೆ ಸುತ್ತು ಹಾಕಿ ಬರಬೇಕು ಅಷ್ಟೇ! ಸ್ವಲ್ಪ ಸ್ವಾತಿ ಹೋಟೆಲಿನ ಬಿಲ್ಲು ನೋಡಿ ನಿಮಗೆ ತಿಳಿಯುತ್ತೆ! ಮಧ್ಯಾಹ್ನ ಊಟಕ್ಕೆ ಉಪ್ಪಿನಂಗಡಿಯ ಆದಿತ್ಯ ಹೋಟೆಲನ್ನು ಆಯ್ಕೆ ಮಾಡಿಕೊಂಡೆವು. ಮಧ್ಯಾಹ್ನ ಊಟ ಆದರೂ ಸರಿ ಇರಬಹುದೆಂಬ ಆಸೆ ಕೂಡಾ ನಿರಾಸೆಯಾಯಿತು. ಅಲ್ಲಿ ಕೂಡಾ ತಂದೂರಿ ರೋಟಿ ಹುಳಿಯಾಗಿತ್ತು. ಕರಾವಳಿಯ ಸೆಖೆಗೆ ಇರಬೇಕು ಅಥವಾ ನಿನ್ನೆಯದ್ದೇ? ಅವರಿಗೇ ಗೊತ್ತು. ಸೈಡ್ ಡಿಶ್ ಕೂಡಾ ಸರಿ ಇರಲಿಲ್ಲ ಜೊತೆಗೆ ರೋಟಿಗೆ ಇದ್ದಿಲು ಅಂಟಿಕೊಂಡಿತ್ತು. ದುಡ್ಡಿಗೆ ಬೆಲೆಯೇ ಇಲ್ಲದಂತಾಗಿದೆ ಈಗಿನ ಕಾಲದಲ್ಲಿ :(. ಸಂತಸದ ವಿಷಯವೆಂದರೆ ಮೊಸರನ್ನ ಬಹಳ ಚೆನ್ನಾಗಿತ್ತು. ಮೊಸರನ್ನ ರೋಟಿಯ ಬೇಸರವನ್ನು ಮಾಸಿದ್ದು ಸುಳ್ಳಲ್ಲ.


ದುಡ್ಡು ಸುಟ್ಟಿಕೊಂಡಿದಕ್ಕೆ ಮತ್ತೊಂದು ಕಾರಣ ಹೆದ್ದಾರಿ ಶುಲ್ಕ. ಟೋಲ್ ಶುಲ್ಕ ಜಾಸ್ತಿ ಮಾಡಿದ್ದಾರೆ ಆದರೆ ನಿರ್ವಹಣೆಯಲ್ಲಿ ಎಂತದ್ದೂ ಬದಲಾಗಿಲ್ಲ. ಎಕ್ಸ್-ಪ್ರೆಸ್ಸ್ ರಸ್ತೆಯಲ್ಲಿ ಅದೇ ವೇಗ ನಿಯಂತ್ರಿಸುವ ಬ್ಯಾರಿಕೇಡ್, ಒಂದಿಷ್ಟು ಹಂಪುಗಳು ಮತ್ತು ತಪ್ಪು ದಿಕ್ಕಿನಲ್ಲಿ ಚಲಿಸುವ ವಾಹನಗಳು.

ಮತ್ತೆ ಎಲೆಕ್ಷನ್ ಬೊಗಳೆ!

ಕುಟುಂಬ ರಾಜಕಾರಣ ಮಾಡುವವರು ನಮ್ಮ ಊರಿನ ಜನರ ತಿಳುವಳಿಕೆ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಸಿಎಂ ಆದ ನಂತರ ಹಳೆ ಮೈಸೂರು ಪ್ರಾಂತ್ಯದ ಬಗ್ಗೆ ಮಾತ್ರ ಕಾಳಜಿ ತೋರಿಸುವವರು ಎಷ್ಟು ತಿಳುವಳಿಕೆಯುಳ್ಳವರು? ಕುಟುಂಬ ಉದ್ಧಾರ ಮಾಡುವವರು ಆಡಳಿತ ಚುಕ್ಕಾಣಿ ಹಿಡಿದರೆ ಸಾಮಾನ್ಯ ಜನರ ಕಷ್ಟಗಳನ್ನು ಹೇಗೆ ಜತನದಿಂದ ಆಲಿಸುವರು? ಅಷ್ಟೇ ಅಲ್ಲದೇ ಕುಟುಂಬ ರಾಜಕಾರಣವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುತ್ತಾರೆ. ಇಂತಹವರನ್ನು ಅಧಿಕಾರಕ್ಕೇರಿಸಿದ ನಾವು ನೀವು ಜನಸಾಮಾನ್ಯರೇ ತಿಳುವಳಿಕೆ ಇಲ್ಲದವರು!

ಅಂದಹಾಗೆ ಕರಾವಳಿಯ ಜನತೆಗೆ ಸಿಎಂನ ಮುಂದಿನ ತಿಳುವಳಿಕೆ ಪಾಠ ಹೀಗಿರಬಹುದು!

ಇಲ್ಲಿ ಬೆವರು ಜಾಸ್ತಿ ಅದಕ್ಕೆ ಇಲ್ಲಿನ ವಾತಾವರಣಕ್ಕೂ ತಿಳುವಳಿಕೆಯಿಲ್ಲ. ಮಳೆಗಂತೂ ಸ್ವಲ್ಪವೂ ತಿಳುವಳಿಕೆ ಇಲ್ಲ. ಬಯಲು ಸೀಮೆಯಲ್ಲಿ ಕಡಿಮೆ ಮಳೆ ಇಲ್ಲಿ ಪ್ರವಾಹ ಬಂದು ಸಮುದ್ರಕ್ಕೆ ಪೋಲಾಗುವಷ್ಟು ಮಳೆಯ ರೌದ್ರನರ್ತನ. ಈ ಮಳೆಗೆ ಬಯಲು ಸೀಮೆಯಲ್ಲಿ ಸುರಿಯಬೇಕು ಅನ್ನುವಷ್ಟೂ ತಿಳುವಳಿಕೆಯಿಲ್ಲವೇ! ಕಡಲಿಗಂತೂ ಸ್ವಲ್ಪವೂ ತಿಳುವಳಿಕೆಯಿಲ್ಲ ಅನ್ನಿಸುತ್ತೆ. ಮಳೆಗಾಲ ಶುರುವಾಯಿತೆಂದರೆ ಅದ್ಯಾಕೆ ಅದರ ಜಾಗ ಬಿಟ್ಟು ಭೂಮಿಯನ್ನು ಆಕ್ರಮಿಸುತ್ತೋ! ನಾವು ಕುಟುಂಬದವರಿಗೆ ಆಸ್ತಿ, ರಾಜಕೀಯ ಪಟ್ಟ ಕೊಟ್ಟರೆ ಜನ ಆಡ್ಕೋತಾರೆ. ಈ ಸಮುದ್ರದ ಆಕ್ರಮಣ ಬಗ್ಗೆ ಯಾಕೆ ಯಾರು ಮಾತು ಎತ್ತಲ್ಲ ಎಂಬ ಪ್ರಬಲವಾದ ವಾದ ಎಬ್ಬಿಸಬಹುದು ನಮ್ಮ ತಿಳುವಳಿಕೆಯುಳ್ಳ ಸಿಎಂ.

ಒಟ್ಟಿನಲ್ಲಿ ಕರಾವಳಿಯಲ್ಲಿ ಎಲ್ಲವೂ ತಿಳುವಳಿಕೆಯಿಲ್ಲದವು ಎನ್ನುವ ಬಲವಾದ ಸಮರ್ಥನೆ ಸಿಎಂ ಅವರಿಂದ ಕೇಳಿಸಿಕೊಳ್ಳುವ ಗ್ರಹಚಾರ ಮುಂದಿನ ದಿನಗಳಲ್ಲಿ ನಮಗೆ ಒಕ್ಕರಿಸಬಹುದು.

ನಮ್ಮ ಹಳ್ಳಿಯಲ್ಲಿ ವೋಟ್ ಹಾಕಲು ಎಲ್ಲಿಲ್ಲದ ಉತ್ಸಾಹ. ಬೆವರಿನ ಹರಿವನ್ನು ಲೆಕ್ಕಿಸದೆ ಕರಾವಳಿಯವರು ಬೆಳಗ್ಗಿನ ಜಾವದಿಂದಲೇ ಮತ ಚಲಾಯಿಸುತ್ತಿದ್ದಾರೆ. ಸಾಲದೆಂಬಂತೆ ವೀಕ್ಷಕರು ಬಂದು ಪದೇ ಪದೇ ವೋಟ್ ಹಾಕಿದಿರ ಎಂದು ವಿಚಾರಿಸಿ  ಶ್ರಮಪಡುತ್ತಿದ್ದಾರೆ. ಶೇಕಡಾ ೭೮ ಜನ ಮತ ಚಲಾಯಿಸಿದ್ದು ಕರಾವಳಿ ಜನರು ಹೆಮ್ಮೆ ಪಡುವ ವಿಷಯ. ನೀವು ಕೂಡಾ ನಿಮ್ಮ ಹಕ್ಕನ್ನು ಪ್ರತಿಬಾರಿ ತಪ್ಪದೆ ಚಲಾಯಿಸಿ ಕೃತಾರ್ಥರಾಗಿ. ಮತ ಹಾಕದೆ ಮುಂದೆ ಪಶ್ಚಾತ್ತಾಪ ಪಡಬೇಡಿ. ಸರಣಿ ರಜೆ ಇದೆ ಎಂದು ಮಜಾ ಮಾಡಲು ಹೋಗಿ ಮುಂದಿನ ದಿನದಲ್ಲಿ ಭಾರತವನ್ನು ಹರಾಜಿಗೆ ಇಡುವಂತಹ ರಾಜಕಾರಣಿಗಳಿಗೆ ಅಧಿಕಾರ ನೀಡಬೇಡಿ.

ಬೊಗಳೆ ಮಾತ್ರ ಅಲ್ಲಾ ಮಾರಾಯ್ರೆ ನನ್ನ ಮತ ಕೂಡಾ ಚಲಾಯಿಸಿ ಬಂದೆ ನಾನು ಕಲಿತ ಶಾಲೆಯಲ್ಲಿ!




ಬೆಂಗಳೂರು ವೋಟರ್ಸ್ ಎಲ್ಲಿದಿರಪ್ಪ
ವೋಟರ್ ಟರ್ನ್ ಔಟ್ 50 ದಾಟಿಲ್ಲವಲ್ಲಪ್ಪ!

ಸುಂದರವಾದ ಕಡಲಿನ ತೆರೆಗಳ ಮಧ್ಯೆ ಜಳಕ ಮಾಡುತ್ತಾ, ಸಂಜೆಯ ತಿಳಿ ಬಿಸಿಲಿನ ಮುಗ್ಧತೆಯನ್ನು ಆನಂದಿಸುತ್ತಾ, ಸೆಲ್ಫಿ ತೆಗೆದುಕೊಂಡು ಜಾಲತಾಣಕ್ಕೆ ಮೇಲೇರಿಸುತ್ತಾ, ಸಿಂಪ್ಲಿ ಎಂಜಾಯ್ ಮಾಡುತ್ತಿದ್ದೇವೆ ಕಣ್ರೀ!



ವೋಟ್ ನಂತರ ಸಂಜೆ ಕಾಪು ಸಮುದ್ರ ತೀರಕ್ಕೆ ಹೋಗಿದ್ದೆವು. ಅಲ್ಲಿ ಬೆಂಗಳೂರು ಮೈಸೂರು ಕಾರುಗಳದ್ದೇ ಕಾರುಬಾರು. ಊರಿನವರೆ ಇರಬಹುದೆಂದು ಅಂದುಕೊಂಡರೆ ಜೂಮ್ ಕಾರ್, ಡ್ರೈವ್ ಜೀ ಯದ್ದೇ ಕಾರುಬಾರು. ಎಲ್ಲಾ ತಿರುಗಲು ಹೋಗಿದ್ದಾರೆ ಅನ್ಸುತ್ತೆ. ಇಂತಹ ಜನಗಳೇ ದೇಶದ ಅವಸ್ಥಯೇ ಬಗ್ಗೆ ಸದಾ ಸೋಷಿಯಲ್ ನೆಟ್-ವರ್ಕ್ ನಲ್ಲಿ ಬೊಗಳೆ ಬಿಡುವುದು.

ಬವಣೆಯಿಂದಾಚೆಗೆ, ಕಾಪು ಸಮುದ್ರ ತೀರದ ಸೂರ್ಯಾಸ್ತದ ಸೊಬಗು ಎಂತಹವರನ್ನೂ ಮೋಡಿ ಮಾಡುವುದು.


ಕೊನೆಯ ಮಾತು:

ಭವ್ಯ ಭಾರತದ ಕನಸು ನನಸಾಗಿಸಿ
ಕುಟುಂಬ ರಾಜಕಾರಣ ತೊಲಗಿಸಿ
ನ್ಯಾಯ ಯೋಜನೆಯನ್ನು 'ಕೈ'ಕೆಳಗಿಳಿಸಿ

No comments:

Post a Comment