Pages

Tuesday, September 20, 2022

ಮೇಘ ಬಂತು ಮೇಘ, ಪಡುವಣ ಮೇಘ!

ಕೆಳಗೆ ಇರೋ ಚಿತ್ರ ನೋಡಿದ್ರಾ? ಕರಾವಳಿಯವರಿಗೆ ಮುಂಗಾರಿನ ಸಮಯದಲ್ಲಿ ಇದು ಮಾಮೂಲು ದೃಶ್ಯ. ಈತರ ದೃಶ್ಯ ಕಂಡರೆ ಕೊಡೆ ಇದ್ದವರು ಕೂಡಲೇ ತೆರೆಯುತ್ತಾರೆ, ಕೊಡೆ ಇಲ್ಲದವರು ಕೂಡಲೇ ಓಡಿ ಹೋಗಿ ಯಾವುದಾದರು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುತ್ತಾರೆ, ಸೈಕಲ್ ಇದ್ದವರು ಸೈಕಲ್ ನಿಲ್ಲಿಸಿ ಒಂದೋ ಕೊಡೆ ತೆರೆದು ಒಂದು ಕೈಯಲ್ಲಿ ಸೈಕಲ್ ಪ್ರಯಾಣ ಮುಂದುವರೆಸುತ್ತಾರೆ  ಇಲ್ಲವಾದಲ್ಲಿ ರೈನ್-ಕೋಟ್ ಧರಿಸುತ್ತಾರೆ, ಮತ್ತೆ ಸ್ಕೂಟರ್ ಇದ್ದವರು ಬೇಗನೆ ರೈನ್-ಕೋಟ್ ಧರಿಸಿಕೊಳ್ಳುತ್ತಾರೆ! ಏಕೆಂದರೆ ಪಡುವಣ ದಿಕ್ಕಿನ ಮೋಡ ಬಹು ಬೇಗನೆ ಮೇಲೇರಿ ಧೋ ಎಂದು ಮಳೆ ಸುರಿಯಲು ಪ್ರಾರಂಭಿಸುತ್ತದೆ. ಬೇಗನೆ ತಯಾರು ಮಾಡಿಕೊಳ್ಳದಿದ್ದಲ್ಲಿ ಮಳೆಯಲ್ಲಿ ನೀವು ಒದ್ದೆ ಆಗುವುದು ಗ್ಯಾರಂಟಿ ತಿಳಿದುಕೊಳ್ಳಿ!

ಇನ್ನೇನು ಮಳೆ ಬರುತ್ತೆ :-)

ಇನ್ನು, ಮೂಡಣ ದಿಕ್ಕಿನಲ್ಲಿ ಮೊದಲು ಎಲ್ಲವು ಖಾಲಿ ಇರುತ್ತದೆ. ಕೊನೆಗೆ ಪಡುವಣ ದಿಕ್ಕಿನ ಮೋಡ ಮೂಡಣಕ್ಕೂ ಆವರಿಸಿ, ವಾತಾವರಣ ಕತ್ತಲೆಗೆ ತಿರುಗುತ್ತದೆ. ಈ ಅಂದ ಎಷ್ಟು ಬಾರಿ ನೋಡಿದರೂ  ಬೇಸರವಾಗುವುದಿಲ್ಲ. ಎಷ್ಟು ಮಳೆ ಬಂದರೂ ಚಳಿ ಇರುವುದಿಲ್ಲ. ಆದ್ದರಿಂದ ಮಳೆಯನ್ನು ಬಹಳ ಆನಂದಿಸಬಹುದು. ಇತ್ತೀಚಿಗೆ ಊರಿಗೆ  ಹೋದಾಗ ತೆಗೆದ ಮುಂಗಾರಿನ ದೃಶ್ಯಗಳು ನಿಮಗಾಗಿ. ಈ ಬಾರಿಯೂ ಮುಂಗಾರು ಉತ್ತಮವಾಗಿ ಸುರಿದಿದೆ. ಹೀಗೆ ಪ್ರತಿ ವರುಷವು ಮಳೆ, ಬೆಳೆ ಸಮೃದ್ಧಿಯಾಗಿರಲಿ ಎಂದು ಆಶಿಸೋಣ.


ಈ ಬಾರಿ ಉಡುಪಿ ಶ್ರೀಕೃಷ್ಣನ ದರುಶನ ಭಾಗ್ಯವೂ ದೊರೆಯಿತು, ಹಾಗೆ ಪುರಾತನ ಪ್ರಸಿದ್ಧ ಅನಂತೇಶ್ವರ-ಚಂದ್ರೇಶ್ವರ ದರುಶನ ಕೂಡಾ ಸುಸೂತ್ರವಾಗಿ ಆಯಿತು. ಬಹಳ ದಿನಗಳ ಬಳಿಕ ಕೃಷ್ಣನ ದರುಶನ ಪಡೆದೆವು. ಜೊತೆಗೆ ಕುಂಭಾಶಿ ಹರಿಹರ ಮತ್ತು ವಿನಾಯಕನ ದರುಶನವೂ ಆಯಿತು.  ಚಿತ್ರಗಳು ನಿಮಗಾಗಿ (ಕುಂಭಾಶಿಯ ಚಿತ್ರಗಳನ್ನು ತೆಗೆಯಲು ಮರೆತುಹೋಯಿತು)

ನೀನೇ ದೊಡ್ಡವನು ಹರಿಯೇ _/\_

ಅನಂತೇಶ್ವರ _/\_

ಹಾಗೆಯೇ ಅನಂತೇಶ್ವರ ದೇವಾಲಯದ ಹಿಂದಿನ ದಿನದ ಅನಂತ ಚತುರ್ದಶಿಯ ಅಲಂಕಾರವನ್ನು ಕಂಡು ಧನ್ಯರಾದೆವು.





ಶೀರ್ಷಿಕೆ ಬರೆಯಲು ಒಂದು ಕಾರಣವಿದೆ. ಬಹಳ ಹಿಂದೆ ಕನ್ನಡ ಚಲನಚಿತ್ರ "ಮೇಘ ಬಂತು ಮೇಘ" ನೋಡಿದಾಗ ನನಗೆ ಮೊದಲು ಆಕರ್ಷಿಸಿದ್ದು ಮೇಲುಕೋಟೆಯ ಅದ್ಭುತ ಸೌಂದರ್ಯ! ಹೌದೌದು ಅದೆಂತಹ ಪ್ರಕೃತಿಯ ಸೊಬಗು ಈ ಗ್ರಾಮದಲ್ಲಿ. ಜೊತೆಗೆ ಚೆಲುವನಾರಾಯಣ ಮತ್ತು ಯೋಗಾನರಸಿಂಹ ದೇವರ ದಿವ್ಯಸ್ಥಾನ. ಪ್ರಾಚೀನ ಭಾರತದ ಅದ್ಭುತ ಶಿಲ್ಪಕಲೆಗಳು!  ಯೋಗಾನರಸಿಂಹ ಬೆಟ್ಟದಿಂದ ಕಾಣುವ ಮೇಲುಕೋಟೆಯ ವಿಹಂಗಮ ನೋಟ ಎಂತಹವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಎಲ್ಲೇಲ್ಲಿ  ನೋಡಿದರೂ ಕಾಣುವ ಸಣ್ಣ ಸಣ್ಣ ಕೆರೆಗಳು ಪ್ರಕೃತಿಯ ಸೊಬಗಿಗೆ ಆಭರಣವಿಟ್ಟಂತಿದೆ. ದೂರ ದೂರಕ್ಕೂ ಬೆಟ್ಟ-ಗುಡ್ಡಗಳಿಂದ ತುಂಬಿದ ಮನಮೋಹಕ ದೃಶ್ಯ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದು ನಿಸ್ಸಂದೇಹ! ಕೊನೆಯದಾಗಿ ಮೇಲುಕೋಟೆಯ ಪುಳಿಯೊಗರೆ, ಮೊಸರನ್ನ, ಸಕ್ಕರೆ-ಪೊಂಗಲ್, ಚುರುಮುರಿ ಸವಿಯನ್ನು ಮರೆಯಲಾಗುತ್ತದೆಯೇ! ಆ ಆಲೆಮನೆಯ ಘಮ-ಘಮ, ತಾಜಾ ಕಬ್ಬಿನ ಹಾಲು, ಎಳನೀರು ಎಲ್ಲವೂ ಮರೆಯಲಾರದು ನೆನಪುಗಳು. ಸುಮಾರು ೪ ಬಾರಿ ಮೇಲುಕೋಟೆಗೆ ಹೋಗಿದ್ದೇನೆ, ಆದರೂ ಪದೇ ಪದೇ ಹೋಗುವ ಮನಸ್ಸಾಗುತ್ತದೆ. ೩ ವಾರದ ಹಿಂದೆ ಶ್ರಾವಣ ಶನಿವಾರದ ಶುಭದಿನದಂದು ಮತ್ತೆ ಭೇಟಿ ನೀಡಿದೆನು. ಭಕ್ತಜನಸಾಗರದ ಮಧ್ಯೆ  ಚೆಲುವನಾರಾಯಣ ಮತ್ತು ಯೋಗಾನರಸಿಂಹರ ಆಶೀರ್ವಾದ ಪಡೆದು, ನೆನಪುಗಳನ್ನು ಮೆಲುಕು ಹಾಕಿದೆನು. ಶನಿವಾರ ಆದ್ದರಿಂದ ನಾರಸಿಂಹನಿಗೆ ಇಷ್ಟವಾದ ದಿನ ಕೂಡಾ! ಶ್ರಾವಣ ಶನಿವಾರದಂದು ಪುಣ್ಯಕ್ಷೇತ್ರ ದರ್ಶನ ಮಾಡಿ ಧನ್ಯರಾದೆವು.


ಚೆಲುವನಾರಾಯಣನ ಚಂದದ ಊರು _/\_


ಸಂಪತ್ಕುಮಾರ ಚರಣಂ ಶರಣಂ ಪ್ರಪದ್ಯೇ _/\_

ಭಳಿರೇ ಭಳಿರೇ ನಾರಸಿಂಹ _/\_


"ಮೇಘ ಬಂತು ಮೇಘ" ಚಲನ ಚಿತ್ರವನ್ನು ಸಂಪೂರ್ಣವಾಗಿ ಮೇಲುಕೋಟೆಯಲ್ಲಿ ಚಿತ್ರೀಕರಿಸಿದ್ದು. ಚಿತ್ರ ಉತ್ತಮವಿದ್ದರೂ, ಅದರ ಶೀರ್ಷಿಕೆಯ ಹಾಡು ನನಗೆ ಅಚ್ಚುಮೆಚ್ಚು. ವಿ.ಮನೋಹರ್ ಅವರ ಸಾಹಿತ್ಯ ಮತ್ತು ಸಂಗೀತ ಹಾಗೂ ಕೆ.ಎಸ್. ಚಿತ್ರಾ ಅವರ ಸುಮಧುರ ಕಂಠದಲ್ಲಿ ಮೂಡಿಬಂದ ಗಾಯನ ನನಗೆ ಬಹಳ ಮೆಚ್ಚು. ಈ ಹಾಡಿನ ಸಂಗೀತ ಕೂಡಾ ನಾದಸ್ವರ, ತವಿಲ್ ಸಂಯೋಜನೆಯೊಂದಿಗೆ ಮೇಲುಕೋಟೆ ಪರಿಸರಕ್ಕೆ ಹೋಲುವಂತಿದೆ. ನಿಮಗಾಗಿ ಈ ಸುಂದರ ಹಾಡನ್ನು ಮತ್ತೆ ನೆನಪಿಸುತ್ತಿದ್ದೇನೆ.


ಕರಾವಳಿಯ ನಮ್ಮ ಸುಂದರ ಗ್ರಾಮದಲ್ಲಿ ಪಡುವಣ ದಿಕ್ಕಿನಲ್ಲಿ ಮೂಡಿ ಬಂದ ದಟ್ಟ ಮುಂಗಾರು ಮೋಡ ನನಗೆ (ಮೊದಲನೆಯ ಚಿತ್ರ)  "ಮೇಘ ಬಂತು ಮೇಘ" ಹಾಡನ್ನು ಸ್ವಲ್ಪ ಮಾರ್ಪಾಡು ಮಾಡಲು ಪ್ರೇರೇಪಿಸಿತು. ಈ ಹಾಡಿನ ಎಲ್ಲಾ ಅಭಿಮಾನಗಳ  ಕ್ಷಮೆ ಕೇಳುತ್ತಾ ಹೀಗಿದೆ ಹೊಸ ಪಲ್ಲವಿ. 

ಮೇಘ ಬಂತು ಮೇಘ, ಮುಂಗಾರಿನ ಮೇಘ,

ಶ್ರೀಕೃಷ್ಣನ ಊರಿನ ಸುಂದರ ಗ್ರಾಮಕೆ 

ಹಾಸಿತು ಹಚ್ಚ ಹೆಸರಿನ ಹೊದಿಕೆ!

ಉಡುಪಿಗೂ ಮೇಲುಕೋಟೆಗೂ ಎತ್ತಣಿಂದೆತ್ತ ಸಂಬಂಧವಯ್ಯಾ! ಯಾಕಿಲ್ಲ ಹೇಳಿ :-). ಎರಡೂ  ಪುಣ್ಯಕ್ಷೇತ್ರಗಳು ಶ್ರೀಮನ್ನಾರಾಯಾಣನ ಸನ್ನಿಧಿನಾವಲ್ಲವೇ? ಕೊನೆಯದಾಗಿ ಸಂಬಂಧ ಕಲ್ಪಿಸಲು ಈ ಬರಹ ಬರೆದಿಲ್ಲ ಮಾರಾಯ್ರೇ , ಬದಲಾಗಿ ಉಡುಪಿ ಶ್ರೀ ಕೃಷ್ಣ, ಮೇಲುಕೋಟೆ ಚೆಲುವನಾರಾಯಣ ಮತ್ತು  ಯೋಗಾನರಸಿಂಹ ಎಲ್ಲರಿಗು ಒಳಿತನ್ನೇ ಮಾಡಲಿ ಎಂದು ಹಾರೈಸುತ್ತ ನನ್ನ ಬರಹವನ್ನು ಮುಗಿಸುತ್ತಿದ್ದೇನೆ.

No comments:

Post a Comment