Pages

Wednesday, December 21, 2022

ಮಾಂಡಸ್ ಮಂಡೆಬಿಸಿ, ಸೂರ್ಯನ ಅಸ್ತಿತ್ವವೇ ಹುಸಿ!

೧೪ ಡಿಸೆಂಬರ್ ೨೦೨೨

ಮಾಂಡಸ್ ಚಂಡಮಾರುತ ಪ್ರಭಾವ ಬಹಳ ಜೋರಾಗಿಯೇ ಇದೆ. ಬೆಂಗಳೂರು ನಗರದಲ್ಲಿ ಆಗಲೇ ೪ ದಿನ ಆಗಿದೆ ಸರಿಯಾದ ಸೂರ್ಯ ಕಾಣಿಸದೆ! ಎಲ್ಲೆಲ್ಲೂ ಚಳಿ, ಜೊತೆಗೆ ಕತ್ತಲೆ. ದಿನವಿಡೀ ಜಿಟಿಜಿಟಿ ಮಳೆ. ವೀಕೆಂಡ್ ಮನೆಯಲ್ಲೇ ಕುಳಿತುಕೊಂಡು ಬಜ್ಜಿ, ಮಸಾಲೆಪುರಿ ತಿನ್ನುವಂತಾಗಿದೆ. ಅತ್ತ ಕರಾವಳಿಯಲ್ಲೂ ಅಕಾಲಿಕ ಮಳೆಯದ್ದೇ ಸುದ್ದಿ. ಮಳೆ, ಕತ್ತಲೆ ಜೊತೆಗೆ ಶೀತ ಜ್ವರದ ಕಗ್ಗತ್ತಲೆ. ಸ್ವೇಟರ್, ಪ್ಯಾಂಟ್ ಜೊತೆಗೆ ದಪ್ಪನೆಯ ಕಂಬಳಿ ಹಾಕಿಕೊಂಡರೂ ಚಳಿ ಇಳಿಯುತ್ತಿಲ್ಲ ಮಾರಾಯ್ರೇ. ೫ ದಿನ ಆಯಿತು ಸೂರ್ಯ ಕಾಣೆಯಾಗಿ. ಬಟ್ಟೆ ಕೂಡಾ ಒಣಗುತ್ತಿಲ್ಲ. ಒಗೆದ ಬಟ್ಟೆಗಿಂತ ಒಗೆಯದೇ ಇರುವ ಬಟ್ಟೆಗಳ ವಾಸನೆ ಕಡಿಮೆ ಇದೆ. fabric conditioner ಕೂಡಾ ಉಪಯೋಗಕ್ಕೆ ಬರುವ ಹಾಗೆ ಕಾಣುತ್ತಿಲ್ಲ. ಬೆಂಗಳೂರಿಗರೆಲ್ಲರೂ ಸೂರ್ಯನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಬಹುಷಃ ಬೀದಿ ಬದಿ ವ್ಯಾಪಾರಿಗಳಿಗೆ ವಹಿವಾಟೇ ಇಲ್ಲ ಏಕೆಂದರೆ ಮನೆಯಿಂದ ಹೆಚ್ಚಿನವರು ಹೊರಬರುತ್ತಿಲ್ಲ. ಈ ಊಹಿಸಲಾಗದ ಬೆಂಗಳೂರು ಹವಾಮಾನದಿಂದ ಮಕ್ಕಳಿಗೆ ಔಷಧಿ ಕೊಡುವುದೂ ನಿಂತಿಲ್ಲ. ಏನಾಗಿದೆಯೋ ವಾತಾವರಣಕ್ಕೆ? ಬಹುಶಃ ಮಾನವನ ದುರಾಸೆಯ ಪರಿಣಾಮ ಇದ್ದರೂ ಇರಬಹುದು!




ಇಂದಿಗೆ ಸೂರ್ಯ ದೇವರ ದರುಶನವಾಗಿದೆ. ಬಟ್ಟೆ ಒಗೆಯಲೂ ಸುಮಾರು ಇದೆ. ದಿನಪೂರ್ತಿ ಇರುವನೆಂಬ ಆಶೆ ಇದೆ. ಎರಡು ದಿನ ಸ್ವಲ್ಪ ಸಮಯಕ್ಕೆ ಭೂಮಿ ಹೊಕ್ಕವನು ಮತ್ತೆ ಪತ್ತೆಯಾಗಲೇ ಇಲ್ಲ. ಆಶ್ಚರ್ಯದ ಸಂಗತಿಯೇನೆಂದರೆ ಇಷ್ಟು ಚಳಿ ಇದ್ದರೂ ಮಳೆ ಯಾಕೆ ಒಕ್ಕರಿಸುತ್ತಿದೆಯೋ? ಸಮುದ್ರ ಅಷ್ಟೊಂದು ಬಿಸಿಯಾಗಿದೆಯೇ?

ಯಾಕೆ ಮೂಕನಾದ್ಯೋ (ಮುನಿಸಿಕೊಂಡೆಯೋ ಅಥವಾ ಕಾಣೆಯಾದೀಯೋ) ಸೂರ್ಯದೇವನೇ?
ಯಾಕೆ ಮೂಕನಾದೆ?

ಯಾಕೆ ಮೂಕನಾದೆ ಲೋಕ ಬೆಳಗುವ ದಿನಕರ,
ಬೆಳಕು ಚೆಲ್ಲುವರಾರಯ್ಯ ಭಾಸ್ಕರ ಶುಭಕರ 

ಮಕ್ಕಳ ಲಂಗ್ಸು, ನೆಗಡಿ ಜ್ವರದ ಬೀಡು 
ಕೇಳುವವರಿಲ್ಲ ಒಗೆದ ಬಟ್ಟೆಗಳು ಪಾಡು 
ಚಳಿಗೆ ದಿನಪೂರ್ತಿ ನಿದ್ರೆಯ ಮೂಡು (mood)
ದಿನವೆಲ್ಲಾ ಕತ್ತಲು ಕವಿದಿದೆ ನೋಡು
ಶೀಘ್ರದಲಿ ನಮಗೆ ದರುಶನ ನೀಡು

ನಾಲ್ಕು ದಿನದಿಂದ ಮೋಡದ ಪಾರುಪತ್ಯ. ಏನು ಮಾಡುವುದು ಅಂತ ಸುಮ್ಮನೆ ಒಂದು ಸಂಜೆ ಟೈಮ್-ಲಾಪ್ಸ್ ತೆಗೆದೆ. ಹೀಗೆ ಬಂತು ನೋಡಿ ಕೊನೆಗೆ. ಸೂರ್ಯ ಬರುವ ಸೂಚನೆಯೇ ಇರಲಿಲ್ಲ.



ಮಾಂಡಾಸ್ ಮಂಡೆಬಿಸಿಯ ರಗಳೆಯೊಂದಿಗೆ ಸೂರ್ಯ ರಜೆ ಹಾಕಿರುವಂತೆ ಭಾಸವಾಗುತ್ತಿತ್ತು. ಸೂರ್ಯನ ಅಸ್ತಿತ್ವವೇ ಹುಸಿ ಎನ್ನುವಷ್ಟು ರೋಸಿಹೋಗಿತ್ತು. ಇಂದು ಕೊನೆಗೂ ಸೂರ್ಯನ ದರ್ಶನವಾಯಿತು ನೋಡಿ. ಮಾಂಡಸ್ ಮಂಡೆಬಿಸಿ ಮುಗಿಯುತ್ತಿದ್ದಂತೆ ಮುಂದಿನ ವಾರ ಮತ್ತೆ ಕಗ್ಗತ್ತಲು ಒಕ್ಕರಿಸುತ್ತಂತೆ. ಬಂಗಾಳ ಕೊಲ್ಲಿಯಲ್ಲಿ ಆಗಲೇ ಗುಸುಗುಸು ಶುರುವಾಗಿದೆ! ಅಲ್ಲಿ ತನಕ ಸೂರ್ಯನ ಕಿರಣಗಳನ್ನು ಆನಂದಿಸಿ.



ಎಲ್ಲರಿಗೂ ಅವರದ್ದೇ ಸ್ವಾರ್ಥ ನೋಡಿ. ಬೇಸಿಗೆಯಲ್ಲಿ ಮಳೆ ಬೇಕು, ಚಳಿಗಾಲಕ್ಕೆ ಬಿಸಿಲು ಬೇಕು. ಒಟ್ಟಿನಲ್ಲಿ ಪ್ರಕೃತಿಯನ್ನು ಕೇಳುವವರು ಯಾರೂ ಇಲ್ಲ. ಎಲ್ಲವು ಮಾನವನೇ ನಿರ್ಮಿಸಿದ ವಾತಾವರಣ. ಪ್ರಕೃತಿ ನಾಶ ಹೆಚ್ಚಾದಂತೆ ಹವಾಮಾನ ಕೂಡಾ ಅದನ್ನು ಸರಿದೂಗಿಸಲು ಶ್ರಮಿಸುತ್ತಿದೆ. ಅದು ನಮಗೆ ವಿಚಿತ್ರ ಆಟದಂತೆ ಕಾಣುವುದು. ನಮಗೆ ನಾವೇ ಹಾಕಿಕೊಂಡ ಬಲೆಯೇ ವಿನಹಾ ಪ್ರಕೃತಿಯ ವೈಚಿತ್ರ್ಯವಲ್ಲ. ಜೀವನವೂ ಹಾಗೆ ನೋಡಿ. ಎಲ್ಲರೂ ಸ್ವಾರ್ಥಿಗಳೇ! ಬಂಧುಗಳಾಗಲಿ, ರಕ್ತಸಂಬಂಧಿಗಳಾಗಳಿ ಎಲ್ಲರೂ ಅವರವರ ಬದುಕಲ್ಲೇ ಮಗ್ನರಾಗಿರುತ್ತಾರೆ. ನಮ್ಮವರು ಎಂಬ ಭ್ರಮೆಯಲ್ಲಿ ನಾವು ಬದುಕಿದರೆ ಕೊನೆಗೆ ಬಲೆಯಲ್ಲಿ ನಾವೇ ಸಿಕ್ಕಿಹಾಕಿಕೊಳ್ಳುತ್ತೇವೆ. ನಮ್ಮ ಜವಾಬ್ದಾರಿ ನಮಗೆ ಅಷ್ಟೇ! ಯಾರನ್ನೋ ನಂಬಿ ಜೀವನ ಮಾಡುವ ಕಾಲವಲ್ಲ ಈ ಕಲಿಯುಗ. ನಮ್ಮ ಕಾಲಲ್ಲಿ ನಾವು ನಿಲ್ಲದಿದ್ದರೆ,  ಕಾಲ ಯಾವಾಗ ಕೈಕೊಡುವುದೋ ತಿಳಿಯದು. ಕಾಲ ಕೆಟ್ಟಾಗ ರಕ್ತ ಸಂಬಂಧಿಗಳೂ ಕೂಡಾ ರಕ್ತ ಹೀರುತ್ತಾರೆ.

ಇನ್ನೇನು ಸೂರ್ಯ ಬಂದೇಬಿಟ್ಟ ಅನ್ನುವಷ್ಟರಲ್ಲಿ ಸಂಜೆ ಮತ್ತೆ ಮೋಡದ ಹಿಂದೆ ಮರೆಯಾದ. ಹೀಗೆ ನೋಡಿ ಜೀವನ ಕೂಡಾ. ಅನ್ಯರನ್ನು ಅವಲಂಬಿಸಿದರೆ ಮತ್ತೆ ಕತ್ತಲೇ ಕಾಣುವುದು ನಿಶ್ಚಿತ. ನಮ್ಮ ಪ್ರಯತ್ನದಲ್ಲೇ ಮೇಲೆ ಬರಬೇಕು. ಆಗಲೇ ಭರವಸೆಯ ಎಂಬ ಆಶಾಕಿರಣ ಮೂಡುವುದು.

No comments:

Post a Comment