Pages

Sunday, May 9, 2021

ಹಾಡು ಬಾರೆ ಕೋಗಿಲೆ!

೦೪ ಮೇ ೨೦೨೧

ನಲಿದಾಡು ಬಾರೆ ನವಿಲೇ! ಅಂತಾ ತಲೆ ಬರಹ ಮುಂದುವರೆಸೋಕ್ಕೆ ಬೆಂಗಳೂರಲ್ಲಿ ನವಿಲುಗಳು ಎಲ್ಲಿವೆ ಹೇಳಿ. ಇಂದು ಸ್ವಲ್ಪ ಹೆಚ್ಚಾಗೇ ಮಳೆ ಬಂತು. ಆದರು ಕುಣಿಯೋಕ್ಕೆ ನವಿಲು ಇರಲಿಲ್ಲ ಮಾತ್ರ. ಕೋಗಿಲೆ ಮಾತ್ರ ಹಾಡು ಹೇಳುತ್ತಿತ್ತು. ಅದು ಕೂಡಾ ಬೇರೆ ಕಾರಣಕ್ಕೆ ಇರಬೇಕು ಯಾಕಂದ್ರೆ ದಿನಪೂರ್ತಿ ಹಾಡುತ್ತ ಇರುತ್ತೆ.

ಇರಲಿ ವಿಷಯ ಹಾಗಲ್ಲ. ಎಲ್ಲು ಹೋಗುವಂತೆ ಇಲ್ಲ. ಮನೆಯಿಂದ ಆಚೆ ಹೋದರೆ ಹೆದರಿಕೆ ನೋಡಿ. ಅಷ್ಟು ಪ್ರತಾಪ ತೋರಿಸ್ತಾ ಇದೆ ರೂಪಾಂತರಿತ ಕರೋನಾ ವೈರಸ್! ಎಲ್ಲಿ ಬಂದು ಒಕ್ಕರಿಸಿಕೊಳ್ಳುತ್ತೋ ಅನ್ನೋ ದುಗುಡ. ಅಥವಾ ಒಕ್ಕರಿಸಿ-ಕೊಲ್ಲುತ್ತೋ  ಅಂದ್ರು ತಪ್ಪಾಗಲಾರದು! ಅಷ್ಟು ಭಯಾನಕ ದೃಶ್ಯಗಳನ್ನು ಕಾಣುತ್ತಿದ್ದೇವೆ. ಆದರೂ ಏನು ಮನೆಯಲ್ಲಿ ಕೂತರೆ ದೇಹದ ರೋಗನಿರೋಧಕ ಶಕ್ತಿ ಕೂಡಾ ಕುಂದುತ್ತದೆ. ಅದಕ್ಕೆ ಸಂಜೆ ೩೦ ನಿಮಿಷ ಅಪಾರ್ಟಮೆಂಟಿನ ಟೆರೇಸ್ ಹೋಗಿ ಸ್ವಲ್ಪ ಗಾಳಿ ಎಳೆದುಕೊಳ್ಳುತ್ತೇವೆ ಅದು ಕೂಡಾ ಕೆಲಸ ಕಡಿಮೆ ಇದ್ದಾಗ. ಅದೊಂದು ರಗಳೆ ನೋಡಿ. ಇಂತಹ ಕಷ್ಟ ಸಮಯದಲ್ಲೂ ಮ್ಯೂಟೆ ತುಂಬಾ ಕೆಲಸ ಹೊರುತ್ತಾರೆ ಕಂಪನಿಯವರು. ಏನ್ ಹೇಳೋದಾ ತಿಳಿತಿಲ್ಲ. ಅಧಿಕ ಒತ್ತಡ, ಅಧಿಕ ಕೆಲಸ ಮಾಡಿದ್ರು ಇಮ್ಮ್ಯೂನಿಟಿ ಕಡಿಮೆ ಆಗುತ್ತೆ ಅಂತಾನೂ ಹೇಳ್ತಾರೆ. ಇರಲಿ ಬಿಡಿ. ನಾವು ಎಷ್ಟಾಗುತ್ತೋ ಅಷ್ಟೇ ಕೆಲಸ ಮಾಡೋಣ. 

ವಿಷಯ ಎಲ್ಲೆಲ್ಲೋ ಹೋಗ್ತಾ ಇದೆ. ಇಂದು ಸಂಜೆ ವಾಯುವಿಹಾರದಲ್ಲಿ ಬಹಳಷ್ಟು ಹಕ್ಕಿಗಳು ಕಾಣಸಿಕ್ಕವು. ಅದರಲ್ಲಿ ನಮ್ಮ ಮುದ್ದಾದ ಕೋಗಿಲೆ ಕೂಡಾ ಮಧುರ ಕಂಠದಲ್ಲಿ ಹಾಡುತ್ತಿತ್ತು. ಬಹುಶಃ ಅದಕ್ಕೆ ಸಧ್ಯದ ಸ್ಥಿತಿ ಗೊಂದಲಕ್ಕೆ ತಳ್ಳಿರಬೇ. ಏನಪ್ಪಾ ಇಂತಹ ಸಿಟಿಯಲ್ಲೂ ನನ್ನ ಗಾಯನ ಬಹು ದೂರ ಕೇಳುತ್ತಿದೆ ಅಂತಾ ಖುಷಿಪಟ್ಟಿರಬಹುದು. ಹೌದು ಸ್ಥಬ್ದವಾದ ನಗರದಿಂದಾಗಿ ಹಕ್ಕಿಗಳ ಕಲರವ ಬಹಳ ಸೊಂಪಾಗಿ ಕೇಳಿಸುತ್ತಿದೆ. ಅಥವಾ  ದೇಶದ ಇಂದಿನ ಸ್ಥಿತಿ ಕಂಡು ಮರುಕ ಪಟ್ಟಿರಲೂಬಹುದು. ಅದರ ಕಾಲ್ಪನಿಕ ಸಂಭಾಷಣೆ ಇಲ್ಲಿದೆ.

"ಏನಪ್ಪಾ! ಈಗ ಹಕ್ಕಿ ಚಿತ್ರ ತೆಗೆಯಲು ಹೊರಗೆ ಹೋಗಕ್ಕೆ ಆಗ್ತಾ ಇಲ್ವಾ? ಒಳ್ಳೆದಾಯ್ತು ಬಿಡು. ಮನೇಲಿ ಕುತ್ಕೋ ಅದೇ ನಿಮಗೆ ಈಗ ಒಳ್ಳೇದು. ಹಾಗೆ ನಮ್ಮ ಜಾತಿಯವರು ಕೂಡಾ ಕೆರೆಯಲ್ಲಿ ಸ್ವಚಂದವಾಗಿ ಓಡಾಡಲಿ.  ನಮಗೇನು ಚಿತ್ರ ಹೊಡ್ಕೊಳ್ಳೊ ಗೀಳು ಇಲ್ಲ ನೋಡು.  ಯಾವಾಗಲೂ ಮನುಷ್ಯರಿಗೆ ಹೆದರಿಕೊಂಡೇ ಜೀವನ ಮಾಡೋದಾಯಿತು. ಈಗಲಾದ್ರೂ ಸ್ವಲ್ಪ ಆರಾಮಾಗಿದೆ. ನೋಡ್ರಪ್ಪಾ ನಾವು ಕೂಡಾ ದೇವರ ಮಕ್ಕಳು. ನಮಗೂ ಬದುಕೋ ಹಕ್ಕಿದೆ ಆದರೆ ನಿಮ್ಮನ್ನು ಎದುರು ಹಾಕೊಳೋ ಸಾಮರ್ಥ್ಯ ಇಲ್ಲ. ಈಗ ದೇವರೇ ನಮ್ಮ ಅಳಲನ್ನ ಕೇಳಿದ್ದಾನೆ. ನಮಗೆ ಇರೋಕ್ಕೆ ನಿಮ್ಮ ಹಾಗೆ ಬಂಗ್ಲೆ ಗಾಡಿ ಬೇಡ. ಚೂರು-ಪಾರು ಜಾಗ ಇರೋ ಮರದಲ್ಲೇ ಬಿಸಿಲು-ಮಳೆ-ಚಳಿ ಎದುರಿಸಿಕೊಂಡು ಇರ್ತೀವಿ. ಹಾಗಂತ ನಮ್ಮ ಮನೆ-ಮಠಗಳನ್ನ (ಅರಣ್ಯ ನಾಶ) ಸಂಹಾರ ಮಾಡ್ತಾ ಇದಿರಲ್ಲ ಇದು ಯಾವ ನ್ಯಾಯ? ನಿಮ್ಮ ಮತ್ಸರಕ್ಕೆ ಕೊನೆಯೇ ಇಲ್ಲವೇ? ನಮ್ಮ ತರ ಸರಳ ಜೀವನ ಮಾಡಿದ್ರೆ ಯಾವ ತೊಂದರೇನು ಬರಲ್ಲ, ಆ ದೇವರೇ ನೋಡಿಕೊಳ್ಳುತ್ತಾನೆ. ನಾವು ಇಷ್ಟು ವರ್ಷ ನಿಮ್ಮಿಂದಾಗಿ ಎಷ್ಟು ಕಷ್ಟ ಪಟ್ಟಿದ್ದೀವಿ ಗೊತ್ತಾ? ಇದೆಲ್ಲ ನಿಮಗೆ ಯಾವಾಗ ಅರ್ಥ ಆಗುತ್ತೋ?"




"ಸರಿ ನಾನು ಸ್ವಲ್ಪ ಹತ್ರ ಬರ್ತೀನಿ ಇರೋದ್ರಲ್ಲಿ ತೃಪ್ತಿಪಟ್ಟು ಆನಂದಪಡು. ಈಗಷ್ಟೆ ಮಳೆ ಬೇರೆ ಬಂದು ಹೋಗಿದೆ. ವಾತಾವರಣ ಸ್ವಲ್ಪ ತಂಪಾಗಿದೆ. ಹಾಡು ಕೂಡಾ ರೆಕಾರ್ಡ್ ಮಾಡಿ ಖುಷಿ ಪಡು. ಯಾರಿಗೊತ್ತು ನಿಮ್ಮ ದುರಾಸೆಯಿಂದ ನಮ್ಮಂತ ಸಾಮಾನ್ಯ ಪಕ್ಷಿಗಳು ನಾಶ ಆಗಬಹುದು ಮುಂದೊಂದು ದಿನ ! ಮರುಭೂಮಿಯಲ್ಲಿ ಸಿಗುವ ನೀರಿನಂತಾಗಿದೆ ನಿಮಗೆ ಆಮ್ಲಜನಕ ಸಿಗೋದು.  ಕಾಡುಗಳನ್ನು ಹಾಳು ಮಾಡಬೇಡಿ"



"ಅಲ್ಲ ಕಣಯ್ಯಾ ಹೊಸ ಹಕ್ಕಿನಾ ಹುಡುಕೋನಿಗೆ ಇವತ್ತು ನಾವೇ ಗತಿನಾ :-D. ಅದಿಕ್ಕೆ ಹಳಬ್ರನ್ನ ಮರೀಬಾರ್ದು ಅನ್ನೋದು. ಇರಲಿ ಮತ್ತೆ ಯಾಕೆ ಬೇಜಾರ್ ಮಾಡೋದು. ನಮ್ಮನ್ನ ನೋಡಿ ಮತ್ತೆ ಖುಷಿ ಪಡು ಮತ್ತು ಪಾಠ ಕಲಿ.  ಅದ್ರಲ್ಲೂ ಸ್ವಲ್ಪ ಸರಳತೆ ಇರಲಿ.  ಕಾಡು,ವನ್ಯಜೀವಿಗಳನ್ನ ಉಳಿಸಿಕೊಳ್ಳಿ.. ನಿಮಗೆ ದೇವರು ಬುದ್ಧಿ ಕೊಟ್ಟಿರೋದು ಎಲ್ಲಾರು ಒಂದಾಗಿ ಬಾಳಲಿ ಅಂತಾ, ಬೇರೆಯವರನ್ನ  ಹಾಳು  ಮಾಡಕ್ಕೆ ಅಲ್ಲ! ಸಿಟಿಯವರಿಗೆ ನಾಯಿ, ಬೆಕ್ಕು ಬಿಟ್ರೆ ಬೇರೆ ಪ್ರಾಣಿನೇ ಕಾಣಿಸಲ್ಲ. ಪಾರಿವಾಳ, ಕಾಗೆ ಬಿಟ್ರೆ ಬೇರೆ ಪಕ್ಷಿಗಳ ಪರಿಚಯ ಕೂಡಾ ಇಲ್ಲ. ಕಬ್ಬನ್-ಪಾರ್ಕ್, ಲಾಲಬಾಗ್ ಬಿಟ್ರೆ ಮರಗಳೇ ಕಾಣಲ್ಲ. ದೂರದ ಪಶ್ಚಿಮ ಘಟ್ಟಗಳು ನಾಶ ಆಗೋದನ್ನು ಸ್ವಲ್ಪ ನೋಡಿ. ನಿಮಗೆ ಹುಲಿ ಸಾಯೋದು ಕಾಣಲ್ಲ, ಅಳಿವಿನ ಅಂಚಿನಲ್ಲಿರೋ ಪಕ್ಷಿಗಳು ಕಾಣಲ್ಲ.! ನೀವು ಕುಡಿಯೋ ಚಹಾ-ಕಾಫಿ ಕೂಡಾ ನಮ್ಮ ಅರಣ್ಯ ಸಂಪತ್ತಿನ ನಾಶದಿಂದಲೇ ಬಂದಿದ್ದು. ನೀವು ಹೋಂ-ಸ್ಟೇ ಹೋಗಿ "ವಾವ್ ನೇಚರ್"  ಅಂತೀರಾ ಅಲ್ವಾ, ಅದು ಕೂಡಾ ಗುಡ್ಡ ಕಡಿದೇ ಮಾಡಿರೋದು. ಅದಿಕ್ಕೆ ನೋಡಿ ವರುಣ ದೇವ ಮೂರು ವರ್ಷದಿಂದ ಗುಡ್ಡನ ನಿರ್ನಾಮ ಮಾಡ್ತಾನೆ ಇದಾರೆ. ಆದ ಬುದ್ಧಿ ಬರಲ್ಲ. ಅದೇನೋ ಎತ್ತಿನಹೊಳೆಯಂತೆ ಅದರಿಂದ ಮತ್ತಷ್ಟು ಕಾಡು ಹಾಳಾಯಿತು. ನಿಮ್ಮ ದುರಾಸೆಗೆ ಕೊನೆಯೇ ಇಲ್ಲ."

ಅದರ ಹತ್ತಿರ ಹೋಗಿ ಟೆರೇಸಿನಿಂದ ಕೆಲವು ಚಿತ್ರ ತೆಗೆದೆ. 




"ಏಯ್ ತುಂಬಾ ಹತ್ರ ಬರ್ಬೇಡ. ಕೊರೋನಾದಿಂದ ಸಿಂಹಗಳು ಸತ್ತಿವೆ ಅಂತಾ ಸುದ್ದಿ ಬರ್ತಾ ಇದೆ. ಕರೋನ ನಮಗೂ ತಾಕಿಸಬೇಡ" ಅನ್ನೋ ಥರಾ ಇತ್ತು ಅದರ ಮುಖಭಾವ. 

ಇರಲಿ ಚಿತ್ರಗಳ ಜೊತೆಗೆ ಅದರ ಸುಂದರ ಗಾನದ ವಿಡಿಯೋ ನಿಮಗಾಗಿ.



ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

No comments:

Post a Comment