Saturday, March 14, 2026

ಅವಿಯಲ್ ಪುಲಾವ್!

ಭರ್ಜರಿ ನಿಶ್ಚಿತಾರ್ಥ ನಡೆಯುತ್ತಿತ್ತು. ಗುಂಡ ಮತ್ತು ಕುಟುಂಬ ಕೂಡಾ ಹಾಜರಿದ್ದರು. ಬಹಳ ಗ್ರ್ಯಾಂಡ್ ಅಲಂಕಾರ, ಜಗಮಗದ ದೀಪಗಳು, ಎಲ್ಲೆಲ್ಲೂ ಆಭರಣಗಳು ಕೊನೆಗೆ ಎಲ್ಲರೂ ಅಪೇಕ್ಷಿಸುವ ಭೋಜನ. ಭೋಜನಕ್ಕೆ ಬಹಳ ಜನಸಂದಣಿ ಕೂಡಾ ಇತ್ತು. ಹೇಗೂ ಗುಂಡನ ಕುಟುಂಬಕ್ಕೆ ಜಾಗ ಸಿಕ್ಕಿತ್ತು. ಅದರ ಮಧ್ಯೆ ಗುಂಡ ಇರುವ ಪದಾರ್ಥಗಳ ಮೇಲೆ ಕಣ್ಣು ಹಾಯಿಸಿದನು.

ಭೋಜನ ಶುರು ವಾಗುವ ಮುಂಚೆ, "ಮಕ್ಕಳೇ ಪುಲಾವ್ ಇದೆ, ಅನ್ನ ಸಾರು ಎಲ್ಲಾ ಎಷ್ಟು ಬೇಕು ಅಷ್ಟೇ ಹಾಕೋಳಿ. ಜಾಸ್ತಿ ತಿನ್ನಕ್ಕೆ ಹೋಗಬೇಡಿ ಅನ್ನೋ ಸಲಹೆ ನೀಡಿದನು! ನಿನಗೂ ತಿಳಿತು ಅಲ್ವೇನೇ?" ಎಂದು ಮದಡಿಯನ್ನು ಕೇಳಿದನು.

"ಆಯ್ತು ಕಣ್ರೀ. ಆದರೆ ನಾನು ನೋಡಿದ ಹಾಗಿಲ್ಲ. ನೀವೇ ಕ್ಯಾಟರಿಂಗ್ ವಹಿಸಿಕೊಂಡಿರುವಂತೆ ಮಾತನಾಡ್ತಾ ಇದೀರಾ?!" ಎಂದು ಸಂದೇಹ ಪಟ್ಟಳು.

"ಆದಿಕ್ಕೆ ಕಣೆ! ಎಲ್ಲ ಕಡೆ ನೋಡಬೇಕು ಅನ್ನೋದು. ಶಾರ್ಪ್ ಇರಬೇಕು ತಲೆ!" ಎಂದು ಗುಂಡ ಹೆಮ್ಮೆ ಪಟ್ಟನು.

ಊಟ ಶುರು ಆಯ್ತು. ಸಾರು ಮುಗೀತು, ಸಿಹಿತಿಂಡಿಗಳು ಬಂತು ಆದರೆ ಪಲಾವಿನ ಸುದ್ಧಿಯೇ ಇಲ್ಲ!

"ಅಲ್ರೀ ನಿಮ್ಮ ಶಾರ್ಪ್ ತಲೆ ಸರಿಯಾಗಿ ನೋಡಿದೆ ಅಲ್ವಾ? ಸಾರನ್ನ ಅರೆಬರೆ ತಿಂದೆ, ಇಷ್ಟವಾದ ಮಾವಿನಕಾಯಿ ಗೊಜ್ಜು ಬಿಟ್ಟೆ. ಇನ್ನೂ ಏನೇನು ಬಿಡಬೇಕೋ?!  " ಎಂದು ಮಡದಿ ಕುಟುಕಿದಳು. 

"ಯಾಕೆ ಗೇಲಿ ಮಾಡ್ತೀಯಾ? ನೋಡಿದ್ದೇನೆ. ಈ ಕಡೆ ಸ್ವಲ್ಪ ಊಟದ ಕ್ರಮ ಬೇರೆ ಇರಬೇಕು. ಸ್ವಲ್ಪ ತಾಳು" ಎನ್ನುತ್ತಾ ಅವನಿಗೆ ಸಂದೇಹ ಆಯಿತು. 

"ಹೂ ಅಪ್ಪಾ. ಪಿಸ್ತಾ ಹೋಳಿಗೆ ಅರ್ಧನೇ ಹಾಕೋಂಡ್ವಿ. ಚೆನ್ನಾಗಿತ್ತು ಬೇರೆ! ಎರಡನೇ ಬರಲೇ ಇಲ್ಲ.. ಪಲಾವ್ ಬರುತ್ತೆ ಅಲ್ವಾಪ್ಪ " ಎಂದು ಮಕ್ಕಳು ಕೂಡಾ ಸಂದೇಹದಿಂದ ಕೇಳಿದರು. 

"ಬರುತ್ತೆ ಕಣ್ರೋ! ಸ್ವಲ್ಪ ತಾಳಿ" ಎಂದು ಅಪ್ಪ ಧೈರ್ಯ ತುಂಬಿದರು. 

ಇನ್ನೇನು ಪಾಯಸಕ್ಕೆ ಮುನ್ನ, ದೂರದಿಂದ ಹಸಿರು ಪದಾರ್ಥ ಇರುವ ಪಾತ್ರೆ ಕಾಣಿಸಿತು.

"ನೋಡೇ ಬಂದೆ ಬಿಡ್ತು. ಹೇಳಿಲ್ವಾ ನಾನು!" ಮತ್ತೆ ಗುಂಡ ಹೆಮ್ಮೆಯಿಂದ ಮಡದಿಗೆ ಹೇಳಿದನು. 

ಪಾತ್ರೆ ಹತ್ತಿರ ಬಂದಿದ್ದೆ ತಡ, ಆ ಹಸಿರು ಪದಾರ್ಥ ಪುಲಾವ್ ಆಗಿರಲಿಲ್ಲ ಬದಲಾಗಿ ಅವಿಯಲ್ ಆಗಿತ್ತು. 

ಗುಂಡನ ಹೆಮ್ಮೆ ಪೇಚಿಗೆ ಬದಲಾಯಿತು.

"ಏನು! ರಾಯರ ಪಲಾವ್ ಗೆ ನೀರು ಜಾಸ್ತಿ ಆಗಿದೀಯ ಅಥವಾ ತಮ್ಮ ಶಾರ್ಪ್ ಕಣ್ಣು ಡ್ರೈ ಆಗೀತ್ತೊ ಅವಿಯಲ್ ನೋಡಿದಾಗ? ಸುಮ್ಮನೆ ನಮ್ಮ ಊಟ ಎಲ್ಲಾ ಹಾಳು ಮಾಡಿದ್ರಿ ನೋಡಿ! ಪುಲಾವ್ ಬದಲು ಅವಿಯಲ್ ತಯಾರಿಸಿ ಆಳೋ ತರ ಮಾಡಿದ್ರಿ. ಒಳ್ಳೆ ಊಟ ಸುಮ್ಮನೆ ಮಿಸ್ ಆಯ್ತು. ಏನ್ ಗ್ರಹಚಾರನೋ. ಅನ್ನಕ್ಕೆ ಅವಿಯಲ್ ಹಾಕಿದರೆ ಅದೇ ಪುಲಾವ್ ಹೇಳೋದು ಬಾಕಿ ನೀವು. ಹೇಗೂ ಒಂದೇ ಮಸಾಲೆ ತರ ಟೆಸ್ಟ್ ಇದೆ ನೋಡಿ" ಎಂದು ಮಡದಿ ಕೊಂಕು ನುಡಿದಳು.

ನಿನ್ ಮಾತು ಕೇಳಿ ಅಪ್ಪಾ, ಸ್ವೀಟ್ ಕೂಡ ಸ್ವಲ್ಪನೆ ತಿಂದ್ವಿ :-( ಈಗ ಮತ್ತೆ ತರ್ಸಿ ಕೊಡು ಎಂದು ಮಕ್ಕಳು ಕೂಡಾ ಅಪ್ಪನನ್ನು ಗೋಳು ಹೊಯ್ದುಕೊಂಡರು. 

ಎಲ್ಲರನ್ನೂ ತಣ್ಣಗೆ ಮಾಡಲು ಗುಂಡನು ಐಸ್-ಕ್ರೀಮ್ ಪಾರ್ಲರ್ ಕರೆದುಕೊಂಡು ಹೋಗಿ ತಂಪು ಮಾಡಿದನು. ಇನ್ನೆಂದೂ ಇಂತಹ ತಪ್ಪು ಮಾಡದಿರಲು ನಿರ್ಧರಿಸಿದನು. 

No comments:

Post a Comment

Printfriendly

Related Posts Plugin for WordPress, Blogger...