Sunday, August 5, 2018

ಹಾಗೆ ಸುಮ್ಮನೆ - ಡೈವ್!

ನಮ್ಮ ಜೀವನದಲ್ಲಿ ಬಹಳಷ್ಟು ಆಗುಹೋಗುಗಳು ನಡೆಯುತ್ತವೆ. ಎಷ್ಟೊಂದು ಬಾರಿ ಸಣ್ಣ ಸಣ್ಣ ವಿಷಯಗಳು ನಮಗೆ ಗೋಚರಿಸುವುದೇ ಇಲ್ಲ. ಅಂತಹ ಸಣ್ಣ ವಿಷಯಗಳನ್ನು ಬರಹ ರೂಪದಲ್ಲಿ ವಿವರಿಸುವ ಕೆಲಸಕ್ಕೆ ಕಾಲಿಟ್ಟಿದ್ದೇನೆ :-). ಇವೆಲ್ಲಾ ಬರಹಗಳು ಹಾಗೆ ಸುಮ್ಮನೆ ಅನ್ನುವ ತಲೆಬರಹದಲ್ಲಿ ಬರೆಯುತ್ತಿದ್ದೇನೆ. ಹಾಗೆ ಬರಹಗಳನ್ನು ಚಿಕ್ಕವಾಗಿ ಹಾಗೂ ಚೊಕ್ಕವಾಗಿ ಬರೆಯುವ ಇರಾದೆ ಕೂಡ ಇದೆ. ಇಂದಿನ ಟಾಪಿಕ್ ಹಾಲಿನಂಗಡಿಯಲ್ಲಿ ನಡೆದ ಘಟನೆ.

೦೯ ಜೂನ್ ೨೦೧೮

ಹ ಹ ಹಾ.. ಎನ್ ಸ್ಪೆಷಲ್ ಅನ್ಕೋಂಡ್ರಾ.. ಛೇ ಛೇ ಹಾಗೇನು ಇಲ್ಲ ;-). ಹಾಗೆ ಹೊಸ ಕಾರಿನಲ್ಲಿ ಊರಿಗೆ ಹೋಗುತ್ತಿರುವಾಗ ಕಂಡಾಗ ದೃಶ್ಯ. ಮಳೆಗಾಲ ಭರ್ಜರಿಯಾಗೆ ಕರಾವಳಿಯಲ್ಲಿ ಸುರಿತಾ ಇದೆ. ಕಾರನ್ನು ಚಲಾಯಿಸುತ್ತಿರುವಾಗ ಒಂದೆಡೆ ಉಲ್ಲಾಸ ಮತ್ತೊಂದೆಡೆ ತಳಮಳ. ಉಲ್ಲಾಸ ಯಾಕೆಂದರೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಸೊಬಗು ವರ್ಣನಾತೀತ. ಅದರ ಸೌಂದರ್ಯವನ್ನು ಕಣ್ಣಿನಿಂದ ಸವಿಯುವುದು ಮನಸ್ಸಿಗೆ ಒಂತರಾ ಭೂರಿ ಭೋಜನವಿದ್ದಂತೆ. ಮತ್ತೊಂದೆಡೆ ತಳಮಳ ಕೂಡ. ಭಾರಿ ಮಳೆಯ ಮಧ್ಯೆ ಎಲ್ಲಿ ಭೂಕುಸಿತವಾಗುವುದೋ ಎಂಬ ಭಯ. ಹೊಸ ಕಾರು ಬೇರೆ ಅದರ ಜೊತೆ ಮಳೆಯ ಅವಾಂತರ ಏನೇನು ಅವಘಡಗಳನ್ನು ಸೃಷ್ಟಿಸುತ್ತೋ ಅನ್ನೋ ದುಗುಡ. ಕೊನೆಗೆ ಇದ್ಯಾವುದು ಆಗಿಲ್ಲವೆನ್ನಿ :-). ದೇವರ ದಯೆಯಿಂದ ಎಲ್ಲೆಲ್ಲೂ ಉತ್ಸಾಹವೇ ಮನೆ ಮಾಡಿತ್ತು. ತಳಮಳಕ್ಕೆ ಅವಕಾಶವೇ ಇರಲಿಲ್ಲ. ಮಳೆ ರಾತ್ರಿ ಸುರಿದು ಬೆಳಗ್ಗಿನ ಜಾವ ಬಿಡುವು ನೀಡಿತ್ತು. ನೀರೆಲ್ಲ ಹರಿದು ಹೋಗಿದ್ದವು. ಸಂಜೆ ಮನೆ ತಲುಪಿದಾಗ ಕರಾವಳಿಯ ಮಳೆಯೂ ಶಾಂತವಾಗಿತ್ತು. ಇದರ ಜೊತೆ ಕೊಟ್ಟಿಗೆಹಾರದಲ್ಲಿ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಎಲ್ಲಿ ನೋಡಿದರೂ ಪ್ರಕೃತಿಯದ್ದೆ ವೈಯ್ಯಾರ. ಎಂತಹವರ ಮನಸ್ಸನ್ನೂ ಸೆಳೆಯುವ ಹಾಲಿನ ಹೊಳೆ. ಸಹ್ಯಾದ್ರಿಯ ಶ್ರೇಣಿಯಿಂದ ಬೆಳ್ಳಿಯ ನೊರೆ ಮೈದುಂಬಿ ಧುಮುಕುತ್ತಿತ್ತು. ಆಹಾ ಎಂತಹ ವಿಸ್ಮಯಕಾರಿ ಜಲಪಾತಗಳು. ಸುಮಾರು ೧೦ ಕಿ.ಮೀ ಅವುಗಳದ್ದೆ ರಾಜ್ಯ. ನಮಗಂತೂ ಹಬ್ಬವೇ ಹಬ್ಬ. ಜೂನ್, ಜುಲೈ ತಿಂಗಳುಗಳು ಶುಭಕಾರ್ಯಗಳಿಗೆ ಒಣಹವೆ ಇದ್ದಂತೆ ಆದರೆ ನಿಸರ್ಗ ಪ್ರಿಯರಿಗೆ ಹಬ್ಬವೆ ಹಬ್ಬ!

ಮೇಲೆ ತಿಳಿಸಿದಂತೆ ನನ್ನ ಡ್ರೈವ್ ಕೂಡ ನಿರಾಳವಾಗಿತ್ತು. ಯಾವುದೇ ಅಡೆತಡೆ ಇಲ್ಲದೆ ಚಾರ್ಮಾಡಿ ಘಾಟಿ ಇಳಿದಾಯಿತು. ಗುರುವಾಯನಕೆರೆ ತಲುಪಿದಾಗ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ ಎನ್ನುವುದು ಮನದಟ್ಟಾಯಿತು. ಅಲ್ಲಿನ ಕೆರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಲೇ ನೀರು ತುಂಬಿಕೊಂಡಿದೆ. ಇನ್ನೂ ಮುಂಗಾರಿನ ಮೊದಲನೆಯ ವಾರ ಅಷ್ಟೇ! ಮುಂದಿನ ದಿನಗಳಲ್ಲಿ ಕೆರೆ ಉಕ್ಕಿ ಹರಿಯುವುದರಲ್ಲಿ ಸಂಶಯವೇ ಇಲ್ಲ.



ಅಂದ ಹಾಗೆ ಅದು ರೋಡ್ ಸೈನ್ ಮಾರಾಯ್ರೆ ನಿಮಗೆ ಡೈವ್ ಹೊಡೆಯಲು ಸೂಚನೆ ಅಲ್ಲ.. ಅಲ್ಲೇ ಪಕ್ಕ ರೋಡ್ ಸ್ವಲ್ಪ ಕರ್ವ್ ಇದೆ ಅದಕ್ಕೆ ಸೈನ್-ಬೋರ್ಡ್ ಹಾಕಿದ್ದಾರೆ. ಇದನ್ನು ನೀವು ಈಜುವ ಸೂಚನೆ ಅಂದು ಕೊಂಡರೆ ಮತ್ತೆ ವಾಪಾಸ್ ಬರುವುದು ಡೌಟೆ! ಟೈಟ್ ಆಗಿ ಗಾಡಿ ಓಡಿಸೋರು ಇದನ್ನು ನೋಡಿ ಜಲಮಾರ್ಗಕ್ಕೆ ನುಗ್ಗುವುದರಲ್ಲಿ ಸಂಶಯವೇ ಇಲ್ಲ. ಕೆರೆಗೆ ರಕ್ಷಣಾ ಗೋಡೆ ಕಟ್ಟಿದ್ದರೂ ಮಳೆಗಾಲಕ್ಕೆ ಅದು ಸವೆದು ಹೋಗುವುದರಿಂದ ಅದರ ಸಾಮರ್ಥ್ಯದ ಮೇಲೂ ಸಂಶಯ ಮೂಡುವುದು ಸಹಜವೇ ಆಗಿದೆ. ಅದರಲ್ಲೂ ಕಿಕ್ ಏರಿದ ಮೇಲೆ ಗಾಡಿ ಮೆಲ್ಲಗೆ ಓಡಿಸುವವರನ್ನ ಎಲ್ಲಾದರೂ ಕೇಳೀದ್ದೀರಾ ;-)

ಇರಲಿ, ಬರಹ ಇಷ್ಟ ಆಯಿತು ಅಂದುಕೊಳ್ಳುತ್ತೇನೆ.

No comments:

Post a Comment

Printfriendly

Related Posts Plugin for WordPress, Blogger...