Wednesday, February 20, 2019

ಹಾಗೆ ಸುಮ್ಮನೆ - ಪಾರ್ಕು ಜಿಮ್ಮು, ಅಜ್ಜಿ ಗೇಮು


ಬಿಬಿಎಂಪಿಯವರು ಎಲ್ಲಾ ಪಾರ್ಕುಗಳಲ್ಲಿ ಓಪನ್ ಜಿಮ್ ಸ್ಥಾಪಿಸಿದ್ದಾರೆ. ಇದು ಸ್ವಾಗತಾರ್ಹ ಕೂಡ. ಸೂರ್ಯನ ಕಿರಣಗಳೊಂದಿಗೆ ವ್ಯಾಯಾಮ ಮಾಡಿದರೆ ಎಷ್ಟೋ ರೋಗಗಳು ಬರುವುದಿಲ್ಲವಂತೆ. ಇದು ನಮ್ಮ ಆಧುನಿಕ ಕ್ಲೋಸ್ಡ್ ಜಿಮ್ ಗಿಂತಲೂ ಸ್ವಲ್ಪ ಉತ್ತಮ ಎನ್ನಬಹುದು. ನಿಮ್ಮ ಅಳುಕನ್ನು ಸ್ವಲ್ಪ ಬದಿಗಿಟ್ಟರೆ, ಸಧೃಡ ಮೈಕಟ್ಟು ನಿಮ್ಮದಾಗುವುದು. ಕ್ಲೋಸ್ಡ್ ಜಿಮ್ಮಿನಲ್ಲಿ ನೀವು ಬೆವರಿನಲ್ಲಿ ಎಷ್ಟೇ ಮಿಂದರೂ ಅದು ಸೂರ್ಯನ ಕಿರಣಗಳಿಂದಾದ ಬೆವರಿಗೆ ಸರಿಸಾಟಿಯಲ್ಲ. ನಾನು ಕೂಡ ಉಪಯೋಗಿಸುತ್ತೇನೆ ಜಾಗಿಂಗ್ ಬಳಿಕ. ಸ್ವಲ್ಪ ಹೊಟ್ಟೆ ಜಗ್ಗಬೇಕಲ್ಲವೇ (ಇದರಲ್ಲಿ ಯಾವುದೇ ಅಳುಕಿಲ್ಲ :P)




ಇರಲಿ ವಿಷಯಕ್ಕೆ ಬರೋಣ. ಜಿಮ್ಮು ಉಪಕರಣಗಳು ಪಕ್ವವಾದ ದೇಹಕ್ಕೆ ಮಾತ್ರ ತಯಾರಿಸಲ್ಪಟ್ಟದ್ದು. ಮಕ್ಕಳ ದೇಹ ಇನ್ನು ಪಕ್ವವಾಗಿರುವುದಿಲ್ಲ ಮತ್ತು ಇಂತಹ ಉಪಕರಣಗಳನ್ನು ಉಪಯೋಗಿಸುವ ಸಾಮರ್ಥ್ಯವಾಗಲಿ ಅಥವಾ ಮೆಚುರಿಟಿಯಾಗಲಿ ಅವರ ಬಳಿ ಇರುವುದಿಲ್ಲ. ಸ್ವಲ್ಪ ಉಳುಕಿದರೆ ಅಥವಾ ಅವಘಡವಾದರೆ, ಜೀವನಪರ್ಯಂತ ದೇಹ ಅಂಗವೈಕಲ್ಯದಿಂದ ನರಳಬಹುದು. ಪಾರ್ಕ್ ಜಿಮ್ಮುಗಳು ೧೫ ವರ್ಷ ಮೇಲ್ಪಟ್ಟವರಿಗೆ ಮಾತ್ರ ಮೀಸಲು. ಇದು ಸರಿಯಾದ ನಿಯಮ ಕೂಡ. ಆದರೆ ಇದರ ವಿಚಾರವಾಗಿ ಯಾವುದೇ ಸೂಚನಾ ಫಲಕಗಳನ್ನು ಇಟ್ಟಿಲ್ಲ. ಆದ್ದರಿಂದ ಮಕ್ಕಳು ಕೂಡ ಇದನ್ನು ಆಟದ ವಿಷಯವೆಂದು ಪರಿಗಣಿಸಿದ್ದಾರೆ. ಪಾರ್ಕ್ ನೋಡಿಕೊಳ್ಳುವವರು ಇದನ್ನು ನೋಡಿದಾಗ ಮಕ್ಕಳನ್ನು ಕೆಳಗಿಳಿಸುತ್ತಾರೆ. ಇಲ್ಲವಾದಲ್ಲಿ ಮಕ್ಕಳ್ಳು ಇದನ್ನು ಎಗ್ಗಿಲ್ಲದೆ ಉಪಯೋಗಿಸುತ್ತಾರೆ. ಇಂದು ಕೂಡಾ ಹಾಗೆ ಆಯಿತು. ಅಜ್ಜಿಯೊಬ್ಬರು ಮೊಮ್ಮಗಳನ್ನು ಜಿಮ್ಮಿನಲ್ಲಿ ವ್ಯಾಯಾಮ ಮಾಡಿಸುತ್ತಿದ್ದರು (ಅವರ ಲೆಕ್ಕದಲ್ಲಿ ಇದು ಆಟ). ಮತ್ತೊಬ್ಬ ಹಿರಿಯರು ತಕ್ಷಣ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇವರ ಸಂಭಾಷಣೆ ಹೀಗಿತ್ತು.

"ಅಮ್ಮಾ ಇದು ದೊಡ್ಡವರಿಗೆ ಮಾತ್ರ. ಮಕ್ಕಳು ಆಟ ಆಡೋ ಉಪಕರಣ ಅಲ್ಲ ಇದು"

"ಏ ಇರ್ಲಿ ಬಿಡ್ರಿ. ಪಾಪ ಮಗು ಇಲ್ಲಿ ಆಟ ಆಡ್ಲಿ (!!!) ನಿಮೇನು" ಇದು ಗೇಮು ಅಲ್ಲ ಅಂದಾಕ್ಷಣ ಅಜ್ಜಿ ಗರಮ್ಮು ಆಗಿದ್ದೆ ಸುಳ್ಳಲ್ಲ.

"ಅಲ್ಲಮ್ಮಾ ಅಲ್ಲಿ ಮಕ್ಕಳಿಗೋಸ್ಕರ ಆಟದ ಉಪಕರಣಗಳು ಇದೆ ಅದ್ರಲ್ಲಿ ಆಡಲಿ" ಅಂದಾಗ ಅಜ್ಜಿಯ ರೋದನೆ ಮತ್ತಷ್ಟು ಹೆಚ್ಚಾಯಿತು.

"ಇರಲಿ ಬಿಡ್ರಿ ಆಟ ಆಡುತ್ತೆ ಅಂದ್ರೆ ನಾನು ಏನು ಮಾಡಕ್ಕೆ ಆಗುತ್ತೆ" ಅಂತಾ ತನ್ನ ಮೊಮ್ಮಗಳನ್ನು ಮತ್ತಷ್ಟು ಪ್ರೇರಿಸಿದಳು. ಒಂದೋ ಮೊಮ್ಮಗಳ ಮೇಲಿನ ಮೋಹ ಅಥವಾ ತನ್ನ ವಾದವೆ ಸರಿ ಎನ್ನುವ ಮೊಂಡುವಾದ (stubbornness)

ಸುಮ್ಮನೆ ಇವರ ಸಹವಾಸ ಸಾಕು ಅಂತಾ ಸಲಹೆ ಕೊಡಲು ಹೋದವರು ತಮ್ಮ ವ್ಯಾಯಾಮ ಮುಂದುವರೆಸಿದರು.

ಇದೆಪ್ಪಾ ಪ್ರಾಬ್ಲಮ್. ಇಲ್ಲಿ ವಾಸ್ತವಕ್ಕಿಂತ ಅಜ್ಜಿ ಎಮೋಷನ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು. ಮಗುವಿಗೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವವರು ಭಾವನೆಗಳಿಗೆ ಬಂಧಿಯಾಗಿದ್ದರು. ಭಾವನೆಗಳು ಇರಬೇಕು ಆದರೆ ಜೊತೆ ಸ್ವಲ್ಪ ವೈಚಾರಿಕೆಯು ಇರಬೇಕು. ಹಿರಿಯರಿಗೆ ತಾವು ಹೇಳಿದ್ದೇ ಸರಿ ಎನ್ನುವ ಚಾಳಿ ಇದ್ದೇ ಇದೆ. ಅದಕ್ಕೆ ಅನುಭವವೆನ್ನುವ ಸಾಕ್ಷಿ ಬೇರೆ. ಮೇಲೆ ತಿಳಿಸಿದ ಘಟನೆಗೊಂದೆ ಸೀಮಿತವಾಗಿಲ್ಲ. ಉದಾಹರಣೆಗೆ ಹಿಂದೊಂದು ಕಾಲವಿತ್ತು. ಸರಕಾರಿ ಕೆಲಸ ಸಿಕ್ಕರೆ ಜೀವನ ಸೆಟಲ್ ಎಂಬೋ ಭಾವನೆ. ನಿವೃತ್ತಿಯ ನಂತರ ಸರಕಾರಿ ಪಿಂಚಣಿ ಕೂಡ ಬರುತ್ತಿತ್ತು. ಇದೇ ಭಾವನೆಗಳನ್ನು ಇಂದಿನ ಹಿರಿಯರು ಇಟ್ಟುಕೊಂಡು ಕೆಲಸ ಸಿಕ್ಕರೆ ಜೀವನ ಸೆಟಲ್ ಅಂದುಕೊಳ್ಳುತ್ತಾರೆ. ಇದು ಇಂದಿನ ಕಾಲಕ್ಕೆ ಒಗ್ಗುವುದೇ ಇಲ್ಲ. ಎಲ್ಲಿ ನೋಡಿದರೂ ಕೆಲಸ ಹೋಗುವುದೆಂಬ ಭಯ, ಪಿಂಚಣಿ ಈಗ ಸರಕಾರವು ಕೊಡುವುದಿಲ್ಲ. ಸರಕಾರಿ ಕೆಲಸಗಳೇ ಗ್ಯಾರಂಟಿ ಇಲ್ಲ (ಎನ್-ಜಿ-ಇ-ಎಫ್, ಬಿಎಸ್-ಎನ್-ಎಲ್, ಬ್ಯಾಂಕುಗಳ ಮೆರ್ಜೆರ್ ಕೆಲವು ಉದಾಹರಣೆಗಳು). ಇನ್ನು ಹಿರಿಯರ ತತ್ವಸಿದ್ಧಾಂತವನ್ನು (dogmatic thinking) ನಂಬಿ ಕುಳಿತರೆ ಜೀವನವೂ ಸಾಗುವುದಿಲ್ಲ. "ನೀನೇನು ಜೀವನ ಕಂಡಿದ್ದಿಯಾ" ಎನ್ನುವುದು ಅವರ ಏರುದನಿ ಮಾತು. ಆದರೆ ಜೀವನ ಕಾಲಕ್ಕೆ ತಕ್ಕಂತೆ ಬದಲಾಗುವುದೆಂದು ಅವರು ಒಪ್ಪಲು ತಯಾರಿಲ್ಲ.  ಕೃಷ್ಣನೇ ಹೇಳಿದ್ದಾನೆ "ಬದಲಾವಣೆಯೇ ಜಗದ ನಿಯಮ" (change is the only permanence) ಎಂದು. ಇನ್ನು ಹಿರಿಯರನ್ನು ಗೌರಿವಿಸಬಾರದೆಂದು ಹೇಳುತ್ತಿಲ್ಲ ಆದರೆ ಅವರ ಎಲ್ಲಾ ಸಿದ್ಧಾಂತಗಳು ಈಗಿನ ಕಾಲಕ್ಕೆ ಒಗ್ಗುವುದಿಲ್ಲ. "benjamin graham " ತಮ್ಮ ಪುಸ್ತಕ "the intelligent investor"ನಲ್ಲಿ ಹೇಳುವಂತೆ, "ಎಮೋಷನ್ ಮತ್ತು ಹಣವನ್ನು ಬೆರೆಸಿದರೆ, ಹಣ ಕಳೆದುಕೊಳ್ಳುವುದು ನಿಶ್ಚಿತ". ಇದಕ್ಕೆ ನಾನೇ ಉದಾಹರಣೆ, ನನಗೆ ಇದರ ಅರಿವಾಗಿದೆ. ಹೇಗೆಂದು ಹೇಳಲು ಬಯಸುವುದಿಲ್ಲ ಯಾಕೆಂದರೆ ಅದು ಬಹಳ ನೋವನ್ನು ನೀಡುತ್ತದೆ. ಹಳೆ ತತ್ವ ಸಿದ್ಧಾಂತಕ್ಕೆ ಶರಣಾಗಿ ಈಗ ಪರಿತಪಿಸುವುದಕ್ಕೆ ನಾನೇ ಉದಾಹರಣೆ. ಏನೂ ಮಾಡಲಾಗುವುದಿಲ್ಲ ಎಲ್ಲಾ ವಿಧಿ ಕಲಿಸಿದ ಪಾಠ. ಕಾಲಾಯ ತಸ್ಮೈ ನಮಃ.



ಇರಲಿ ಬೋರ್ ಆಯಿತೇ ಅಥವಾ ಅತಿ ಆಯಿತೇ!! ನಿಮ್ಮ ಭಾವನೆಗಳನ್ನು ಹೊಂದಿಕೊಳ್ಳುವುದಕ್ಕೆ ನಾನು ಬರೆದಿಲ್ಲ :P.

ಸರಿ ಕೊನೆಗೆ ಪಾರ್ಕ್-ನಲ್ಲಿ ಏನಾಯಿತು. ಏನೂ ಆಗಿಲ್ಲ. ಅಜ್ಜಿ ತನ್ನ ಮೊಮ್ಮಗಳನ್ನು "ನೀನು ಆಟಾಡಮ್ಮ" ಅಂತಾ ಮತ್ತಷ್ಟು ಹುರಿದುಂಬಿಸತೊಡಗಿದಳು. ಅಲ್ಲೇ ಇದ್ದ ಮೊಮ್ಮಗನನ್ನು ಉದ್ಧರಿಸಿ "ನೋಡೋ ನಿನ್ನ ತಂಗಿ ಎಷ್ಟು ಚನ್ನಾಗಿ ಆಟ ಆಡ್ತಾ ಇದಾಳೆ. ನೀನು ಬಾ" ಅಂತಾ ಅವನನ್ನು ಹುರಿದಂಬಿಸ ಹೊರಟಳು. ಅವನ ಸಪ್ಪೆ ಮುಖವನ್ನು ಕಂಡಾಗ ಎಂತವರಿಗೂ ಅವನ ಅನಾಸಕ್ತಿ ಅರಿವಾಗುವುದು . "ನೀನು ಆಟ ಆಡಮ್ಮಾ" ಅಜ್ಜಿಯ ಮೋಹ ಮುಂದುವರಿಯಿತು. ಆಟ ಎಂಬ ಶಬ್ಧ ಕೇಳಿದಾಗ ನನಗೆ ನಗು ಬರುತ್ತಿತ್ತು. ವಾಸ್ತವಿಕ ವಿಷಯಗಳಲ್ಲಿ ಭಾವನೆಯ ಕಲಬೆರಕೆ ಮಾಡಿದರೆ ನಷ್ಟ ಅವರೆ ಅನುಭವಿಸಬೇಕು. ಮತ್ತೆ ನಾನೇನು ಮಾಡಿದೆ? ಬೆವರು ಒರೆಸಿಕೊಂಡು ಮನೆ ಕಡೆ ಹೊರಟೆ!

No comments:

Post a Comment

Printfriendly

Related Posts Plugin for WordPress, Blogger...