Thursday, October 13, 2022

ಸೆಕೆ ಮಧ್ಯೆ ಇವನದೊಂದು ಕಾಟ

ಮಳೆಯಲ್ಲಿ ತೊಯ್ದ ಭತ್ತ ಗದ್ದೆಯ ಕಾಲುದಾರಿ (ಕಾಲುಜಾರಿ ಅಥವಾ ಕಾಲುಜಾರು  ಅನ್ನಲೂ ಬಹುದು) ಮಧ್ಯೆ ನಡೆಯುವುದು ಅಷ್ಟು ಸುಲಭವಲ್ಲ. ಒಂದು ಕಡೆ ೬೦೦mm ಲೆನ್ಸ್ ಗರ್ಭಧರಿಸಿದ ಧಡಿಯ ಕ್ಯಾಮರಾ ರಕ್ಷಿಸಬೇಕು ಮತ್ತೊಂದು ಕಡೆ ಬೆವರನ್ನು ಕೆಳಗಿಳಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದರೆ, ಗದ್ದೆಯ ಕೆಸರಿಗೆ ಬಿದ್ದು ಕ್ಯಾಮರಾ ಮಟಾಶ್ ಮತ್ತು ಕಾಲು ಉಳುಕುವ ಅಪಾಯ ಬೇರೆ. ದುಬಾರಿ ಕ್ಯಾಮರಾಗೆ ಮತ್ತೆ ಹಣ ಹೂಡುವಷ್ಟು ಶ್ರೀಮಂತ ನಾನಲ್ಲ ಬಿಡಿ :-D. ಗದ್ದೆಯ ಮಧ್ಯೆ ಇಷ್ಟೆಲ್ಲ ಜಾಗ್ರತೆ ಮಾಡಿಕೊಂಡು ತೂರಾಡುತ್ತಾ ನಡೆದರೂ ಕಡೆಗೆ ಸಿಕ್ಕುವುದು ಒಂದೆರಡು ಹಕ್ಕಿಗಳು. ಇರಲಿ ಬಿಡಿ ಒಳ್ಳೆ ವ್ಯಾಯಾಮ ಆಗುತ್ತಿತ್ತು. ಜೊತೆಗೆ ಪ್ರಕೃತಿ ಸೌಂದರ್ಯ ಎಲ್ಲಾ ಆಯಾಸವನ್ನು ನಿರ್ನಾಮ ಮಾಡುತ್ತದೆ! ಕಾಡಿನಲ್ಲಿ ಬಹಳಷ್ಟು ಹಕ್ಕಿಗಳು  ಸಿಗುತ್ತವೆ. ಆದರೆ ಅಲ್ಲಿ ಚಿತ್ರ ಹಿಡಿಯೋಣವೆಂದರೆ ಹಾವುಗಳ ಕಾಟ.

ಹಕ್ಕಿಗಳ ಚಿತ್ರ ತೆಗೆಯಲು ಹೊರಟ ನನಗೆ ಬೈಲಿನಲ್ಲಿರುವ ವನಜಕ್ಕನ ಮನೆಯ ಬೆಕ್ಕು ಕಾಣಿಸಿಕೊಂಡಿತು. ಸುಡು ಬಿಸಿಲಿಗೆ ಮೈಯೊಡುತ್ತಾ ತನ್ನ ದೇಹವನ್ನು ನೆಕ್ಕಿ ನೆಕ್ಕಿ ಶುದ್ಧಗೊಳಿಸುತ್ತಿತ್ತು. ನಾನು ಬಂದಾಕ್ಷಣ ಅದಕ್ಕೇನು ಅನ್ನಿಸಲಿಲ್ಲ ಆದರೆ ಕ್ಯಾಮರಾ ಮೇಲೆತ್ತಿದಾಗ ಸ್ವಲ್ಪ ದಿಗ್ಭ್ರಮೆಗೊಂಡಿತು. ತದನಂತರ ಅದಕ್ಕೆ ತಿಳಿಯಿತೇನೋ ಇದು ಚಿತ್ರ ತೆಗೆಯುವ ಉಪಕರಣವೆಂದು :-). ಹಿಂಬದಿ ಕಪ್ಪು, ಬೆಕ್ಕಿನ ಬಿಳಿ ಬಣ್ಣ ಒಳ್ಳೆ ಸ್ಟುಡಿಯೋ ತರಾನೇ ಮ್ಯಾಚ್ ಆಗುತ್ತಿತ್ತು. ಹಕ್ಕಿಗಳು ಸಿಗುವುದು ಅಷ್ಟು ಸುಲಭವಲ್ಲ ಸರಿ ಇದರ ಒಂದೆರಡು ಮುಖಚಿತ್ರ ತೆಗೆಯೋಣ ಎಂದು ಶುರು ಹಚ್ಚಿಕೊಂಡೆ. ಅದರ ಕಾಲ್ಪನಿಕ ಬರಹ ಹೀಗಿದೆ ನೋಡಿ. 

"ಸೆಕೆ, ಬೆವರು, ನೆಲ ಕುದಿತಾ ಉಂಟು ಮಾರ್ರೆ. ಅದರ ಮಧ್ಯೆ ಪೋಸ್ ಬೇರೆ ಕೊಡ್ಬೇಕು ಇವ್ನಿಗೆ. ಈ ಜನಕ್ಕೆ ಬೆಳ್ಳಂಬೆಳಗ್ಗೆ ಮಾಡಕ್ಕೆ ಬೇರೆ ಕೆಲ್ಸಾ ಇಲ್ಲ ಅನ್ಸುತ್ತೆ"  😂



ಒಂದೆರಡು ಬಾರಿ ಕ್ಲಿಕ್ ಮಾಡಿದಾಗ ಆಚೆ ಈಚೆ ತಿರುಗಿತು. ಯಾವುದಕ್ಕೂ ಮೂಡ್ ಇರಲಿಲ್ಲ ಅದಿಕ್ಕೆ. ಮೈ ನೆಕ್ಕುವುದನ್ನು ಮುಂದುವರೆಸಿತು. ನಾನು ಕದಲದ ಕಾರಣ ಅದಕ್ಕೂ ತಲೇಕೆಟ್ಟಿತು ಅನ್ಸುತ್ತೆ! ತಾಳ್ಮೆ ಕಳೆದುಕೊಂಡು "ತಗೋ ಒಂದು ಪೋಸ್. ತೊಲಗು ಆಮೇಲೆ" ಎಂದು ಮುಖ ಸಿಂಡರಿಸಿಕೊಂಡು ನೋಡಿತು.



ಕೊನೆಯದಾಗಿ, ಊರಲ್ಲಿದ್ದಾಗ ಬಹಳಷ್ಟು ಹಕ್ಕಿಗಳು ಕ್ಯಾಮೆರಾ ಸೆರೆ ಸಿಕ್ಕಿದವು. ಅದರ ಸಣ್ಣ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ! ಕರಾವಳಿಯ ಮಳೆ ಹಾಗು ನವರಾತ್ರಿ ದೇವಸ್ಥಾನ ವೀಕ್ಷಣೆಯ ಮಧ್ಯೆ ಹಕ್ಕಿ ವೀಕ್ಷಣೆಗೆ ಸಮಯ ಸಿಗುವುದು ಕಷ್ಟವಾಗುತ್ತಿತ್ತು. 

No comments:

Post a Comment

Printfriendly

Related Posts Plugin for WordPress, Blogger...