Monday, January 30, 2023

ಸರ್ವೀಸ್ ಸಮಸ್ಯೆ

ಬಹಳ ದಿನಗಳ ನಂತರ ನಿಂಗಿ ಮತ್ತು ಗುಂಡ ದರ್ಶಿನಿ ಹೋಟೆಲ್ ಒಳಹೊಕ್ಕರು. ಇನ್ನೇನು ಆರ್ಡರ್ ಮಾಡಬೇಕು ಅನ್ನುವಷ್ಟರಲ್ಲಿ ನಿಂಗಿ,

"ರೀ, ಆಕಡೆ ಸರ್ವೀಸ್ ರೂಮ್ ಇದೆ. ಅಲ್ಲಿಗೇ ಹೋಗೋಣ. ಸುಮ್ಮನೆ ಇಲ್ಲಿ ಗಲಾಟೆ ಜಾಸ್ತಿ" ಎಂದಳು.

ಗುಂಡ ಆಕಡೆ ನೋಡಿದನು. ಮಧ್ಯಾಹ್ನವಾದ್ದರಿಂದ ಜನ ಸಿಕ್ಕಾಪಟ್ಟೆ ಇದ್ದರು. ಸರ್ವೀಸ್ ತಡವಾಗುತ್ತಿತ್ತು ಅನ್ನೋದು ಗುಂಡನ ಊಹೆ.

"ಅಲ್ವೇ ಸರ್ವೀಸ್ ರೂಮ್ ನಲ್ಲಿ ಬೆಲೆ ಜಾಸ್ತಿ ಕಣೇ. ನೋಡು ಕೆಲವು ಐಟಂಗಳಿಗೆ ೫೦ ರೂಪಾಯಿ ಜಾಸ್ತಿ. ಜೊತೆಗೆ ಅಲ್ಲೂ ಜನ ಜಾಸ್ತಿ. ಯಾವುದು ಅಲ್ಲೂ ಏನೂ ಬೇಗ ಆಗಲ್ಲ ಬಿಡು. ಅಷ್ಟಕ್ಕೂ ಸೆಲ್ಫ್ ಅಥವಾ ಹೋಟೆಲ್ ಸರ್ವೀಸ್ ಆದರೇನು, ಎಲ್ಲಾ ಒಂದೇ" ಎಂದು ನಿಂಗಿ ಮನವಿಯನ್ನು ತಿರಸ್ಕರಿಸಿದನು.

"ಅದು ಹೇಗೆ ಒಂದೇ ತರ ರೀ! ಸುಮ್ಮನೆ ಏನೇನೋ ಹೇಳ್ಬೇಡಿ. ಅಪರೂಪಕ್ಕೆ ಬರೋದು. ಇನ್ನೂರು ರೂಪಾಯಿ ಜಾಸ್ತಿ ಆದರೆ ಏನಾಯಿತು?" ಎಂದು ನಿಂಗಿ ಪಟ್ಟು ಹಿಡಿದಳು.


"ಹೇಗೆ ಅಂದ್ರೆ. ಸರ್ವೀಸ್ ರೂಮ್ ಅಲ್ಲಿ ಹೋಟೆಲ್ ಸರ್ವ್ ಮಾಡ್ತಾರೆ. ಸೆಲ್ಫ್ ಸರ್ವೀಸ್-ನಲ್ಲಿ ಗಲಾಟೆ, ಜನಜಂಗುಳಿ, ನೂಕುನುಗ್ಗಲಿನ ಮಧ್ಯೆ ನಿಂತುಕೊಂಡು, ವೈಟರ್ ಹೇಳಿದಂತೆ ನಮ್ಮ  ಮೆನು ಅನ್ನು ಮಾಣಿಗಳಿಗೆ ಒಪ್ಪಿಸಿ, ಕಾಯುತ್ತಾ, ನಿನ್ನ ಟೇಬಲ್ ಗೆ ನಾನು ಸರ್ವೀಸ್ ಕೊಡುತ್ತೇನೆ. ನಿನಗೆ ಹೇಗೂ ಕುಳಿತಲ್ಲಿ ಸರ್ವೀಸ್ ಸಿಗುತ್ತೆ ಅಲ್ವಾ ಇನ್ನೇನು ಬೇಕು. ಎರಡರಲ್ಲೂ ನೀನು ಆರಾಮಾಗಿ ರಾಣಿ ತರ  ಕುತಿರ್ತಿಯ ಇನ್ನೇನುಬೇಕು ನಿಂಗೆ. ಸುಮ್ಮನೆ ವೇಯ್ಟ್  ಮಾಡೋದಕ್ಕೆ ಸರ್ವೀಸ್ ದುಡ್ಡು ಯಾಕೆ ಕೊಡ್ಬೇಕು. ನಾನೇ ಇದಿನಲ್ಲ ವೈಟರ್" ಅಂತ ಗುಂಡ ಸಮಜಾಯಿಷಿ ನೀಡಿದ.

ಗುಂಡನ ಈ ಮಾತು ಕೆಲವರಿಗೆ ಕೇಳಿಸಿತೋ ಏನು, ಹೋಟೆಲ್ ಕ್ಯಾಶಿಯರ್ ಸೇರಿಸಿ ಮೆಲ್ಲನೆ ನಗುತ್ತಿದ್ದರು. 

ಇಷ್ಟು ಹೇಳಿದ್ದೇ ತಡ, ನಿಂಗಿಗೆ ಅವಮಾನವಾದಂತಾಯಿತು.  "ಏನಾದ್ರೂ ಮಾಡ್ಕೊಳಿ ಹೋಗ್ರಿ. ನನಗೇನು ಆಗಬೇಕು" ಎಂದು ಮುಖ ತಿರುಗಿಸಿ ಮುನಿಸಿಕೊಂಡಳು ನಿಂಗಿ.


" ಸರಿ ಕೋಪ ಮಾಡ್ಕೋಬೇಡ, ಇರೋದನ್ನ ಹೇಳಿದೆ ಅಷ್ಟೇ. ಏನು ಬೇಕು ತಿನ್ನಲು ಹೇಳು" ಗುಂಡ ಸಮಾಧಾನಿಸಲು ಪ್ರಯತ್ನಿಸಿದನು.


"ನೀವೇ ವೈಟರ್ ಮತ್ತು ಓನರ್, ಮೇನು ಕೂಡಾ ನಿಮ್ಮ ಬಳಿಯೇ ಇದೆ. ಆರ್ಡರ್ ಮಾಡಿ. ನನ್ನ ಏನು ಕೇಳೋದು. ಬೇಕಾದ್ರೆ ತಿಂತೀನಿ" ಎಂದು ಮುಖ ತಿರುಗಿಸಿಕೊಂಡು ಇದ್ದ ನಿಂಗಿ ಕೊಂಕು ಮಾತನಾಡಿದಳು.


ಸ್ವಲ್ಪ ಹೊತ್ತು ಇಬ್ಬರ ಮುಖ ನಾರ್ತೆಂಡ್-ಸೌತೆಂಡ್ ಆಗಿತ್ತು. ಕೆಲವು ಜನರು ಕೂಡಾ ಇದನ್ನು ಗಮನಿಸಿದರು. ಹೋಟೆಲ್ ಕ್ಯಾಷಿಯರ್ ಗುಂಡನ ಬಳಿ ಬಂದು "ಸರ್ ಸರ್ವೀಸ್ ಇದೆ ಆಕಡೆ ಹೋಗಿ. ಮೇಡಂ ಗೆ ಸೆಲ್ಫ್ ಸರ್ವೀಸ್ ಸರಿ ಹೋಗಲ್ವೇನೋ" ಅಂತಾ ಗುಂಡನನ್ನು ಪರೋಕ್ಷವಾಗಿ  ಮಡದಿಗೆ ಮಣಿಯಲು ಮನವಿ ಮಾಡಿಕೊಂಡನು.


ಅನಿವಾರ್ಯವಾಗಿ ಮಡದಿಯನ್ನು ತಣ್ಣಗಾಗಿಸಲು ಗುಂಡ ಸರ್ವೀಸ್ ರೂಮ್ ಗೆ ತೆರಳಬೇಕಾಯಿತು ಎನ್ನೋದು ಹೇಳಬೇಕಾಗಿಲ್ಲ! ನಿಂಗಿ ಮಾತ್ರ ಮುಗುಳ್ನಗೆಯೊಂದಿಗೆ ಜಯದಲ್ಲಿ ಬೀಗುತ್ತಾ ಮೆನುವನ್ನು ತಿರುವಿದಳು.

No comments:

Post a Comment

Printfriendly

Related Posts Plugin for WordPress, Blogger...