Tuesday, September 10, 2024

ಬಾಸ್ಮತಿ ಅಕ್ಕಿ, ಸೋಮಾರಿ ಹಕ್ಕಿ, ಸಿಟಿ ಸ್ವಿಗ್ಗಿ!

ಸುಮಾರು ೫೦ ದಿನ ಆಗಿರಬೇಕು ಕೆಂಚ ಊರಿಗೆ ತೆರಳಿ. ಮ್ಯಾನೇಜರ್ ಅಪ್ಪಣೆಯೊಂದಿಗೆ ಸ್ವಲ್ಪ ದಿನ ಊರಿನಲ್ಲಿ ಕೆಲಸ ಮಾಡಿ, ಹಳ್ಳಿಯ ವಾತಾವರಣವನ್ನು ಸವಿದು ಬೆಂಗಳೂರಿಗೆ ವಾಪಾಸಾದನು. ಮನೆ ಒಳ ಹೊಕ್ಕಿದ್ದೆ ತಡ, ದಿನಸಿ ಡಬ್ಬಗಳೆಲ್ಲಾ ಹುಳಿ ಹಿಡಿದುಕೊಂಡಿದ್ದವು. ಕೆಂಚನ ಮಡದಿ ನಿಂಗಿಗೆ ಅವ್ಯವಸ್ಥೆಯನ್ನು ಸರಿಪಡಿಸಲು ೨-೩ ದಿನ ಹಿಡಿಯಿತು. ಕೆಲವೊಂದು ಅನಿವಾರ್ಯವಾಗಿ ಕಸದ ಬುಟ್ಟಿಗೆ ಸೇರಿದವು. ಮತ್ತು ಕೆಲವನ್ನು ಏನು ಮಾಡುವುದೆಂದು ಇಬ್ಬರು ಕುಳಿತು ಯೋಚಿಸುತ್ತಿದ್ದರು. 

"ಅಲ್ರಿ ಬಾಸ್ಮತಿ ಅಕ್ಕಿ ಅಷ್ಟೊಂದು ಉಳಿದಿದೆ. ಅದನ್ನು ಬಿಸಾಡಲಿಕ್ಕೆ ನಂಗಂತೂ ಮನಸ್ಸು ಬರುತ್ತಿಲ್ಲ. ಅದನ್ನು ಬಿಡಿಸಿ ದಿನಪೂರ್ತಿ ಬಾಲ್ಕನಿಯಲ್ಲಿ ಒಣಗಲು ಇಡೋಣ. ಏನಂತೀರಾ?" ಎಂದು ನಿಂಗಿ ಸಲಹೆ ನೀಡಿದಳು. 

ಕೆಂಚ ಸ್ವಲ್ಪ ಹೊತ್ತು ಯೋಚಿಸುತ್ತ "ಅಲ್ವೇ ಟೆರೇಸ್ ಅಲ್ಲಿ ಇಡೋಣಾ. ಹೇಗೂ ಬಿಸಿಲು ಜಾಸ್ತಿ ಇದೆ. ಹಕ್ಕಿಗಳು ಕೂಡಾ ಹತ್ತಿರ ಬರಲ್ಲಾ.."

"ಅದು ಹೌದು ಬಿಡಿ. ಆದ್ರೆ ಯಾರಾದ್ರೂ ಎತ್ಕೊಂಡು ಹೋದ್ರೆ? ಈ ಅಪಾರ್ಟಮೆಂಟ್ ಜನನಾ ನಂಬೋದು ಹೇಗೆ? ಅಷ್ಠಕ್ಕೂ ಬಹಳಷ್ಟು ಜನ ಬಂದು ಹೋಗೋ ಜಾಗ ಇದು" ಎಂದು ನಿಂಗಿ ಸಂದೇಹ ವ್ಯಕ್ತಪಡಿಸಿದಳು. 

"ಅದಕ್ಯಾಕ್ಕೆ ಚಿಂತೆ? ಇತ್ತೀಚಿನ ಅಧ್ಯಯನ ನೋಡಿಲ್ವಾ ಅಂತರ್ಜಾಲದಲ್ಲಿ? ಬೆಂಗಳೂರಿನ ಜನ  ಪಾರ್ಸಲ್ ತಿನ್ನೋದು ಜಾಸ್ತಿ ಆಗಿದೆ ಕಣೆ. ಆದ್ದರಿಂದ Swiggy/Zomato/Pizza  ಪಾರ್ಸಲ್ ಖದೀತಾರೆ ವಿನಹಾ ಅಕ್ಕಿ,ಬೇಳೆ ನೋಡಿದ್ರೆ ಹತ್ರಾನೂ ಬರಲ್ಲ. ಅಡುಗೆ ಮಾಡಕ್ಕೆ ಪುರ್ಸೊತ್ತು ಯಾರಿಗಿದೆ?! ಎಷ್ಟೋ ಜನಕ್ಕೆ ಅಡಿಗೆ ಬರೋದು ಇಲ್ಲ, ಇಷ್ಟಾನೂ ಇಲ್ಲ! ಜೊತೆಗೆ ಬಿಸಿಲು ಬೇರೆ. ಯಾರು ಕೂಡಾ ಟೆರೇಸ್ ಬಳಿ ಕಾಲು ಕೂಡಾ ಇಡಲ್ಲ. ಆರಾಮಾಗಿ ಇಡು ಯಾರು ಮುಟ್ಟಕ್ಕೂ ಹೋಗಲ್ಲ!" ಅಂತ ಕೆಂಚ ಧೈರ್ಯ ಹೇಳಿದನು.

"ಸಿಟಿಯ ಹಕ್ಕಿಗಳೂ ಕೂಡಾ ಹಾಗೇನೇ! ಇಲ್ಲಿ ಸಿಗೋ ರೆಡಿಮೇಡ್ ಆಹಾರದಿಂದ ಅವುಗಳು ಸೋಮಾರಿ ಆಗಿದೆ. ಹದ್ದುಗಳು ಬೇಟೆ ಕೂಡ ಮರ್ತಿವೆ ಕಣೆ. ಹಕ್ಕಿಗಳೂ ಕೂಡಾ ಪಾರ್ಸೆಲ್-ನಲ್ಲಿ ಬಿಟ್ಟಿರೋ ಆಹಾರ ಮಾತ್ರ ತಿಂತಾವೆ. ಆದ್ರಿಂದ ಹಕ್ಕಿಗಳ ತೊಂದರೆ ಕೂಡಾ ಇಲ್ಲ ನೋಡು!" ಎಂದು ಬೋನಸ್ ಧೈರ್ಯ ತುಂಬಿದನು. 

ಕೆಂಚನ ಮಾತಿಗೆ ನಿಂಗಿ ಗೊಳ್ಳೆಂದು ನಕ್ಕಳು. ತದನಂತರ ಟೆರೇಸಿನಲ್ಲಿ ಬಹಳ ಹೊತ್ತು ಬಿಸಿಲಿನಲ್ಲಿ ಅಕ್ಕಿ ಹರಡಿಸಿ ಇಟ್ಟಳು. ಕೆಂಚ ಕೂಡ ಸಹಾಯ ಮಾಡಿದನು. ಸಂಜೆ ಹೊತ್ತಿಗೆ ಹುಳಗಳೆಲ್ಲ ಮಾಯವಾಗಿದ್ದು ಬಿಟ್ಟರೆ, ಅಕ್ಕಿ ಹರಡಿದ್ದಂತೆ ಇತ್ತು. ಬಹುಶ: ಒಂದು ಕಾಳು ಕೂಡಾ ಕಳುವಾಗಿರಲಿಕ್ಕಿಲ್ಲ. 

1 comment:

  1. I liked reading that. We buy basmati rice, its the nicest of all the types of rice

    ReplyDelete

Printfriendly

Related Posts Plugin for WordPress, Blogger...