Monday, September 3, 2018

ಬ್ಯಾಕೆಂಡ್-೨೦

ಮತ್ತೊಮ್ಮೆ ಬ್ಯಾಕೆಂಡ್ ಸರಣಿಗೆ ಸುಸ್ವಾಗತ. ಈ ಬಾರಿಯ ವಿಶೇಷ ಜಲದರ್ಶಿನಿ, ಮಳೆಗಾಲದ ಬ್ಯಾಕೆಂಡ್. ಈ ಬರಹ ಹಾಸ್ಯಕ್ಕಿಂತ ಬೇಸರವನ್ನು ಒತ್ತಿ ಹೇಳುತ್ತದೆ ಎಂಬ ಮುನ್ಸೂಚನೆಯನ್ನು ನೀಡಬಯಸುತ್ತೇನೆ.

೨೪ ಆಗಸ್ಟ್ ೨೦೧೮

ನಮ್ಮ ಅಚ್ಚುಮೆಚ್ಚಿನ ಗಜಾನನ ಮೋಟಾರ್ಸ್ ಹಿಂಬದಿಯಲ್ಲಿ ಕಂಡುಬಂದ ಶೀರ್ಷಿಕೆ. ಸಮಯೋಚಿತ ಕೂಡಾ.  ಬಸ್ಸು ಕೂಡಾ  ಜೋಗಕ್ಕೆ ಸಂಚರಿಸುವುದರಿಂದ ಈ ಲೇಬಲ್ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಂದ ಹಾಗೆ ಮುಂಗಾರಿನ ಆರ್ಭಟಕ್ಕೆ ಜಲಾಶಯಗಳೆಲ್ಲ ತುಂಬಿ ಜಲಪಾತಗಳಿಗೆ ಪೊಗರು ಬಂದಿದೆ. ಇದಕ್ಕೆ ಜೋಗವೂ ಒಂದು ಉದಾಹರಣೆ. ಜೋಗದ ವೈಭವ ಕಾಣಿಸುವುದೇ ಅಪರೂಪ ಏಕೆಂದರೆ ಲಿಂಗನಮಕ್ಕಿ ಆಣೆಕಟ್ಟು ತುಂಬಲು ಬಹಳಷ್ಟು ಮಳೆ ಬೀಳಬೇಕು. ಹಲವಾರು ವರ್ಷದಿಂದ ಕೈಕೊಡುತಿದ್ದ ಮುಂಗಾರು ಈ ವರ್ಷ ಭರ್ಜರಿಯಾಗಿ ಸುರಿದಿದೆ. ಅದರಿಂದಾಗಿ ಲಿಂಗನಮಕ್ಕಿ ಬಹುಬೇಗನೆ ಪೂರ್ಣ ಮಟ್ಟಕ್ಕೆ ತಲುಪಿದೆ. ಲಿಂಗನಮಕ್ಕಿ ತುಂಬಿದ್ದರಿಂದ ಜೋಗದ ಜಲಪಾತವು ಸಾಗರದಂತೆ ಧುಮ್ಮಿಕ್ಕುತ್ತಿದೆ. ಬಸ್ಸಿನಲ್ಲಿ ಬರೆದಿರುವ "ಸಾಗರ ಜೋಗ ಫಾಲ್ಸ್" ಒಂದೇ ಪದದಂತೆ ಓದಿದರೂ ಇಂದಿನ ಪರಿಸ್ಥಿಗೆ ಅತಿಶಯೋಕ್ತಿ ಅಂತೂ ಅಲ್ಲ ಬಿಡಿ ;-). ಮತ್ತೊಮ್ಮೆ ಜೋಗದ ವೈಭವ ಮರುಕಳಿಸಿದೆ ಮತ್ತು ಅದರ ಸೌಂದರ್ಯವನ್ನು ಸವಿಯುವ ಭಾಗ್ಯ ಅಂದು ನಮ್ಮದಾಗಿತ್ತು.



ಅಂದ ಹಾಗೆ ಮುಂಗಾರಿನ ಆರ್ಭಟಕ್ಕೆ ಮಲೆನಾಡಿನಲ್ಲಿ ಎಲ್ಲಿ ನೋಡಿದರು ನೀರು. ಬಸ್ಸಿನ ಶೀರ್ಷಿಕೆ ಸರಿಯಾಗಿ ಹೊಂದಿಕೊಂಡಿದೆ. ಬಸ್ಸು ಸಂಚರಿಸುವ ಹಾದಿಯಲ್ಲಿ ನಿರೋ ನೀರು. ಆದ್ದರಿಂದ ಬಸ್ಸಿನಲ್ಲಿ ಕುಳಿತವರಿಗೆ ದಾರಿಯುದ್ದಕ್ಕೂ ಜಲದರ್ಶನವಾಗುವುದರಲ್ಲಿ ಸಂಶಯವೇ ಇಲ್ಲ. ಆಕಾಶದಿಂದ ಜಲದರ್ಶನ, ಕಾಲುವೆಯಲ್ಲಿ ಜಲದರ್ಶನ, ಕೆರೆಯಲ್ಲಿ ಜಲದರ್ಶನ ಮತ್ತೆ ಜಲಪಾತದಲ್ಲಿ ಜಲಘರ್ಜನೆ ಎಂದರು ಉತ್ಪ್ರೇಕ್ಷೆಯಾಗದು. ಮಳೆಗಾಲದಲ್ಲಿ ಶಿವಮೊಗ್ಗದಿಂದ ಜೋಗದವರೆಗೂ ಮಳೆರಾಯನ ಕೃಪೆಯಿಂದ ಎಲ್ಲೆಲ್ಲೂ ನೀರೇ ನೀರು. ಆದ್ದರಿಂದ ಜೋಗ ಜಲಪಾತವೊಂದೇ ಅಲ್ಲ,  ದಾರಿಯುದ್ದಕ್ಕೂ ನಿಮಗೆ ಜಲದರ್ಶನದ ಸೌಭಾಗ್ಯ ಪ್ರಕೃತಿ ಮಾತೆಯು ಕರುಣಿಸುತ್ತಾಳೆ!

ನಾವು ಶಿವಮೊಗ್ಗದಿಂದ ಜೋಗಕ್ಕೆ ಸಂಚರಿಸುವಾಗ ಕಂಡಿದ್ದು. ನನ್ನ ಭಾರ್ಯೆಯ ಕ್ಯಾಮೆರಾ ಕೈಚಳಕದ ಮುಖಾಂತರ ಸೆರೆ ಹಿಡಿದದ್ದು.

ಕೊನೆಯ ಮಾತು:

ಅತಿವೃಷ್ಟಿಯಿಂದಾಗಿ ಕೊಡಗು ಅಕ್ಷರಶಃ ಕೊಚ್ಚಿಹೋಗಿದೆ. ಹೌದು ಕೊಡಗಿನಲ್ಲಿ ವಿಪರೀತ ಮಳೆ. ಇದರಿಂದಾಗಿ ಗುಡ್ಡಗಳು ನೀರಿನಂತೆ ಜರಿಯುತ್ತಿದೆ. ಊರಿಗೆ ಊರೇ ಮಣ್ಣುಪಾಲಾಗಿದೆ. ಎಲ್ಲೆಂದರಲ್ಲಿ ನೀರಿನ ಕಾಲುವೆ ಸೃಷ್ಟಿ ಆಗಿದೆ. ಆದರೆ ವಿಷಯ ಅದಲ್ಲ. ಇಂದು ಜೋಗದಿಂದ  ಭಟ್ಕಳಕ್ಕೆ ತೆರಳುತ್ತಿದ್ದಾಗ ಕಂಡ ದೃಶ್ಯದಿಂದ ಆಶ್ಚರ್ಯವಾಯಿತು. ಈ ಭಾಗದಲ್ಲೂ ಮಳೆಗೇನು ಕೊರತೆ ಇಲ್ಲ. ಕೊಡಗಿಗಿಂತ ಸ್ವಲ್ಪ ಹೆಚ್ಚೇ ಎನ್ನಬಹುದು. ವ್ಯತ್ಯಾಸ ಏನೆಂದರೆ ಈ ಪ್ರದೇಶ ಶರಾವತಿ ಕಣಿವೆ ಅಭಯಾರಣ್ಯಕ್ಕೆ ಸೇರಿದ್ದರಿಂದ ನಾಗರಿಕತೆ ಕಡಿಮೆ ಪ್ರಮಾಣದಲ್ಲಿದೆ. ಅದರಲ್ಲೂ ಸುಮಾರು ೩೦ ಕಿ.ಮೀ ನಷ್ಟು ಗೊಂಡಾರಣ್ಯ ಮಾತ್ರ ಕಾಣಸಿಗುತ್ತದೆ. ಆಕಾಶಕ್ಕೆ ಚುಂಬಿಸುವಂತ ಮರಗಳು ಮಳೆಯನ್ನು ಮೆಲ್ಲನೆ ಭೂಮಿಗಿಳಿಯುವುದಕ್ಕೆ ಸಹಾಯ ಮಾಡುವುದಲ್ಲದೆ, ಅದರ ಬಲಾಢ್ಯ ಬೇರುಗಳು ಬೆಟ್ಟಕ್ಕೆ ಶಕ್ತಿ ತುಂಬುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಒಂದೆರಡು ಸಣ್ಣ ಪುಟ್ಟ ಮರ ಬಿದ್ದಿದ್ದು ಬಿಟ್ಟರೆ ಅಂತಹ ವಿಪತ್ತು ಕಾಣಸಿಗಲಿಲ್ಲ. ಅತ್ತ ಕೊಡಗಿನಲ್ಲಿ ಇಂತಹ ಮಳೆಕಾಡುಗಳನ್ನು ಕೊಲೆಗೈದು, ನಗರಿಕರಣಕ್ಕೆ ಮಾನವ ಪ್ರಯತ್ನಿಸಿದ್ದೆ ತಪ್ಪು. ಸಂಪಾಜೆಯಿಂದ ಮಡಿಕೇರಿವರೆಗೆ  ಕೇವಲ ರೆಸಾರ್ಟ್, ರಬ್ಬರ್, ಕಾಫಿ ತೋಟಗಳದ್ದೇ ಕಾರುಬಾರು. ಸಾಲದೆಂಬಂತೆ ಗುಡ್ಡ ಕಡಿದು ಕಟ್ಟಡ ಕಟ್ಟಿದರೆ ಇನ್ನೇನಾಗಬೇಕು.  ಪ್ರಕೃತಿ ಮಾತೆ ತಾಳ್ಮೆ ಕಳೆದುಕೊಂಡು ಅತಿವೃಷ್ಟಿ ಮೂಲಕ ತನ್ನ ಜಾಗವನ್ನು ವಾಪಾಸ್ ಪಡೆದುಕೊಂಡಳು. ರಸ್ತೆಯನ್ನೇ ಸೀಳಿ ತೊರೆ ನಿರ್ಮಿಸಿಕೊಂಡಳು. ತನ್ನ ಮಡಿಲನ್ನು ಕಡಿದವರಿಗೆ ಅದೇ ರೀತಿಯಲ್ಲಿ ಉತ್ತರಿಸಿದಳು. ಇನ್ನೆಂದು ತನ್ನ ಜಾಗಕ್ಕೆ ಬರದಿರುವಷ್ಟು ಪಾಠ ಕಳಿಸಿದಳು. ಭ್ರಷ್ಟ ಅಧಿಕಾರಿಗಳು ಅವಿರತವಾಗಿ ರಬ್ಬರ್ ಕೃಷಿಗೆ ಒಪ್ಪಿಗೆ ಕೊಟ್ಟಿದ್ದು ದೊಡ್ಡ ತಪ್ಪು. ದಟ್ಟ ಮಳೆಕಾಡುಗಳನ್ನು ಮತ್ತೆ ಜೀವಕ್ಕೆ ತರುವುದು ನೂರಾರು ವರ್ಷಗಳ ತಪಸ್ಸು. ಆದರೆ ಈಗಲೂ ಸಮಯ ಮೀರಿಲ್ಲ. ನಮ್ಮ ಮಳೆಕಾಡುಗಳನ್ನು ಮರು ಸೃಷ್ಟಿಸಲು ಇದು ಪಕ್ವವಾದ ಸಮಯ. ಪ್ರಕೃತಿಯಿಂದ ಈಗಲಾದರೂ ಪಾಠ ಕಲಿತರೆ ಮುಂದಿನವರಿಗೆ ಒಳಿತಿದೆ. ಅಣೆಕಟ್ಟುಗಳು ಮತ್ತೊಂದು ಗಂಡಾಂತರ ಸೃಷ್ಟಿಸುವುದು ನಿಚ್ಚಳವಾಗಿದೆ. ಕರ್ನಾಟಕದ ಬಹುತೇಕ ಅಣೆಕಟ್ಟುಗಳು ಹಳೆಯದಾಗಿದೆ. ಬಹು ಹಳೆಯದಾದ ಇವು ಭಾರಿ ಪ್ರಮಾಣದ ನೀರಿನ ಹೊಡೆತವನ್ನು ತಡೆದುಕೊಳ್ಳುವ ಸಾಮರ್ಥ್ಯ ಕುಗ್ಗುತ್ತಿದೆ. ಹೀಗೆ ಮುಂದುವರೆದರೆ ಆಣೆಕಟ್ಟುಗಳು ಒಡೆಯುವ ದಿನ ದೂರವಿಲ್ಲ. ನದಿ ನೀರಿನ ಸಹಜ ಪಥಕ್ಕೆ ಅಣೆಕಟ್ಟೆನೆಂಬ ಅಡ್ಡಗಾಲು ಇಡುವುದೇ ದೊಡ್ಡ ತಪ್ಪು. ಇದರಿಂದ ಹೂಳು ತುಂಬಿ ಅಣೆಕಟ್ಟಿಗೆ ತೊಂದರೆ. ಅಷ್ಟೇ ಯಾಕೆ ಎತ್ತಿನಹೊಳೆಯಂತಹ ನದಿಯ ಪಥವನ್ನೇ ಬದಲಾಯಿಸುವಂತಹ ಯೋಜನೆಯಿಂದ ಇನ್ನೆಷ್ಟು ಗಂಡಾಂತರ ಕಾದಿದೆಯೋ ಆ ಪ್ರಕೃತಿ ಮಾತೆಯೇ ಬಲ್ಲಳು. ಕೊಡಗಿನ ದುರ್ಘಟನೆಯಿಂದ ಸರಕಾರ ಈಗಲಾದರೂ ಎಚ್ಛೆತ್ತುಕೊಂಡು ಎತ್ತಿನಹೊಳೆಯಂತಹ ಮಾರಕ ಯೋಜನೆಗಳಿಗೆ ಅಂತ್ಯ ಹಾಡುಬೇಕೆನ್ನುವ ಆಶಯ ನನ್ನದಾಗಿದೆ.

ಆಗಸ್ಟ್ ೨೬, ೨೦೧೮ ನೇ ತಾರೀಖಿನ ಉದಯವಾಣಿ  ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿರುವ ನರೇಂದ್ರ ರೈ  ದೇರ್ಲ ಅವರ "ಜಲಪ್ರಳಯ" ಲೇಖನವನ್ನು ತಪ್ಪದೆ ಓದಿ.

No comments:

Post a Comment

Printfriendly

Related Posts Plugin for WordPress, Blogger...