ಹಾಸನ-ಮಂಗಳೂರು ಬ್ರಾಡ್‍ಗೇಜ್ ಆದದ್ದೇ ತಡ, ರೈಲ್ವೇ ಇಲಾಖೆಗೆ ಸುಗ್ಗಿಯೋ ಸುಗ್ಗಿ. ಮೊದಲೇ ಶಿಖರ ಮುಟ್ಟಿದ್ದ ಗಣಿ ವ್ಯವಹಾರ ಅದರ ಪಾಲಿಗೆ ವರವಾಗಿ ಪರಿಣಮಿಸಿತು. ಚಿತ್ರದುರ್ಗ-ಬಳ್ಳಾರಿ ಪ್ರದೇಶಗಳಿಂದ ಮಣ್ಣು ಸಾಗಿಸಿದ್ದೋ ಸಾಗಿಸಿದ್ದು. ಕೋಟಿಗಟ್ಟಲೆ ಲಾಭ ಮಾಡಿದ್ದೇ ಮಾಡಿದ್ದು. ಪ್ರಯಾಣಿಕ ರೈಲಿಗೆ ಮಾತ್ರ ಸುರಕ್ಷತೆಯ ನೆಪ. ದಿನಕ್ಕೆ ೫೦೦೦ಟನ್ ಭಾರವನ್ನು ನಿಭಾಯಿಸುವ ಶಿರಾಡಿ ಘಾಟಿಯ ರೈಲು ಹಳಿಗಳು, ಸಾಧಾರಣ ಪ್ರಯಾಣಿಕ ರೈಲಿನ ಭಾರ ತಡೆಯಲಾರದೇ? ಘಾಟಿಯಲ್ಲಿ ದಿನಕ್ಕೆ ೮ಕ್ಕಿಂತ ಹೆಚ್ಚು ರೈಲು ಓಡಿಸಬಾರದೆಂಬ ರೈಲ್ವೇ ಸುರಕ್ಷತಾ ವಿಭಾಗದ ತಾಕೀತು ಬೇರೆ. ಇನ್ನು ಪ್ರಯಾಣಿಕ ರೈಲನ್ನು ಓಡಿಸಿದರೆ ಕೋಟಿ ಎಣಿಸುವುದು ಗಗನಕುಸುಮ. ಸುಮ್ಮನೆ ಕುಳಿತಿತ್ತು ರೈಲ್ವೇ ಇಲಾಖೆ. ಕಡೆಗೆ ಜನ ಪ್ರತಿನಿಧಿಗಳು ರೈಲು ಬಿಡಲು ಶುರುಮಾಡಿದರೂ ಉಗಿಬಂಡಿ ಹಳಿಗೆ ಮಾತ್ರ ಬರಲಿಲ್ಲ. ಅತ್ತ ಶಿರಾಡಿ ಘಾಟಿ ರಸ್ತೆ ಕೂಡ ಮೃತ್ಯುಕೂಪವಾಗಿರುವ ವಿಷಯ ಎಲ್ಲರಿಗೂ ತಿಳಿದದ್ದೆ. ಈ ವರ್ಷವೂ ಅದೇ ದೃಶ್ಯವನ್ನು ಕಾಣಬಹುದು. ಹೆದ್ದಾರಿ ಇಲಾಖೆಯವರು ಸುಮ್ಮನೆ ಮಳೆಯನ್ನು ದೂರುತ್ತಾರೆ. ಹಲವು ವರ್ಷಗಳಿಂದ ಮಳೆ ಬರುತ್ತಿಲ್ಲವೇ? ಈಗ್ಯಾಕೆ ಮಳೆ ನೆನಪಾಯಿತು? ಟನ್‍ಗಟ್ಟಲೆ ಅದಿರು ತುಂಬಿದ ಲಾರಿಗಳು ಕಾಣಿಸುವುದಿಲ್ಲವೇ? ಇಲಾಖೆಯ ಭ್ರಷ್ಟಾಚಾರದ ಮುಖವನ್ನು ಸ್ವತಃ ರಸ್ತೆಯಲ್ಲೇ ಕಾಣಬಹುದು. ಯಾವುದಾದರೂ ಖಾಸಗಿ ಕಂಪೆನಿಗೆ ಈ ರಸ್ತೆಯನ್ನು ಗುತ್ತಿಗೆ ಕೊಟ್ಟು ಶುಲ್ಕ ಸಂಗ್ರಹ ಮಾಡಬಹುದು. ಅದಕ್ಕೂ ಸಹ ಹೆದ್ದಾರಿ ಇಲಾಖೆಯವರು ತಯಾರಿಲ್ಲ. ಹಲವು ವರ್ಷದಿಂದ ಕುಂಟು ನೆಪಗಳನ್ನು ಹೇಳುತ್ತಾ, ಬಸ್ಸು-ಗಣಿ ಲಾಬಿಗಳಿಗೆ ಮಣಿಯುತ್ತಾ ರೈಲು ಬಿಡುತ್ತಿರುವ ಇಲಾಖೆಗೆ ಬಿಸಿ ಮುಟ್ಟಿಸುವುದು ಹೋರಾಟದ ಮೂಲಕ ಮಾತ್ರ ಸಾಧ್ಯ ಎಂದು ಕರಾವಳಿಯ ಜನ ಅರಿತರು. ಜನರು ಒಗ್ಗಟ್ಟಾಗಿ ಗಲಾಟೆ ಮಾಡಿದರು. ಅದರ ಫಲವಾಗಿ ಡಿಸೆಂಬರ್ ೨೦೦೭ರಲ್ಲಿ ರಾತ್ರಿ ರೈಲು ಹಳಿಗೆ ಬಂತು. ಆದರೇನು ೨೦೦೯ ಬಜ್ಜೆಟ್ಟಿನಲ್ಲಿ ಅದು ಕೇರಳಿಗರ ಪಾಲಾಯಿತು. ಕಷ್ಟದಿಂದ ಲಭಿಸಿದ್ದು ಅನ್ಯರಿಗೆ ಸುಲಭವಾಗಿ ಕೈತಪ್ಪಿಹೋಯಿತು. ಸಧ್ಯಕ್ಕೆ ಇನ್ನೂ ಕೇರಳಕ್ಕೆ ಹೋಗಿಲ್ಲ, ಯಾವಾಗ ಹೋಗುತ್ತದೋ ತಿಳಿದಿಲ್ಲ. ರಾಜಕೀಯ ಲಾಭಕ್ಕಾಗಿ ವಿಸ್ತರಿಸಿದ ರೈಲು ಈಗ ಕೇರಳ ರಾಜ್ಯದವರಿಗೆ ಉಪಯೋಗವಿಲ್ಲವೆನ್ನುತ್ತದೆ ರೈಲ್ವೆ ಇಲಾಖೆ. ಇದರಿಂದಾಗಿ ರೈಲು ವಿಸ್ತರಿಸಲು ಇಲಾಖೆ ಹಿಂದೇಟು ಹಾಕುತ್ತಿದೆ ಎಂಬುದು ಇತ್ತೀಚಿನ ಸುದ್ಧಿ.
ರಾತ್ರಿ ರೈಲು ನಂತರ ಇನ್ನು ೬ತಿಂಗಳಲ್ಲಿ ಹಗಲು ರೈಲು ಬಿಡುವುದಾಗಿ ಇಲಾಖೆ ಹೇಳಿಕೆ ನೀಡಿತು. ಆದರೆ ಅದು ರೈಲು ಎಂದು ಎಲ್ಲರಿಗೂ ಗೊತ್ತಿತ್ತು. ಎರಡು ವರ್ಷದ ನಂತರ ಜನರ ಆಕ್ರೋಶ ಮುಗಿಲು ಮುಟ್ಟುವ ಮೊದಲು ಹಗಲು ರೈಲಿನ ಕನಸು ಕೈಗೂಡಿತು. ಆಗಸ್ಟ್ ೨೯,೨೦೦೯ ರಂದು ರೈಲು ಹಳಿಗೆ ಇಳಿಯಿತು. ವಿಪರ್ಯಾಸವೆಂದರೆ ೨೦೦೫ರ ಬಜ್ಜೆಟ್ಟಿನ ಪ್ರಕಾರ ಇದು ನಿತ್ಯ ಓಡುವ ರೈಲು ಆಗಬೇಕಿತ್ತು ಆದರೆ ಘಾಟಿಯಲ್ಲಿ ಕ್ರಾಸಿಂಗ್ ತೊಂದರೆಯಾಗುವುದರಿಂದ ಇದು ಸಧ್ಯಕ್ಕೆ ವಾರಕ್ಕೆ ಮೂರು ದಿನ ಮಾತ್ರ ಎಂಬುದು ಇಲಾಖೆಯ ಹೇಳಿಕೆ. ಘಾಟಿಯಲ್ಲಿ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರವೇ ಪ್ರತಿದಿನ ಓಡಿಸುವುದಾಗಿ ಸಚಿವರು ಬೇರೆ ಹೇಳಿದ್ದಾರೆ. ಇಷ್ಟು ವರ್ಷಗಳಿಂದ ಗೂಡ್ಸ್ ರೈಲು ಸಾಗಣೆಯಿಂದ ಕೋಟ್ಯಂತರ ಲಾಭ ಮಾಡುತ್ತಿರುವ ರೈಲ್ವೆ ಇಲಾಖೆಗೆ ಈಗ ಇದರ ಅರಿವಾಗಿದೆ ಅಂದರೆ ಲಾಭಾಂಶ ಎಲ್ಲಿ ಹೋಯಿತೆನ್ನುವುದು ಇನ್ನೂ ನಿಗೂಢ. ಬಹುಶಃ ಲಾಲೂ ಇದ್ದಾಗ ಎಲ್ಲವೂ ಬಿಹಾರದ ಕಡೆಗೆ ಮುಖ ಮಾಡಿದರೆ ಈಗ ದೀದಿ ಪಶ್ಚಿಮ ಬಂಗಾಳದ ಕಡೆಗೆ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯಕ್ಕೆ ಎಲ್ಲವೂ ಶೂನ್ಯ. ಇರಲಿ ವಿಷಯಕ್ಕೆ ಬರುವ. ಹಗಲು ರೈಲಿನಲ್ಲಿ ಪ್ರಯಾಣಿಸುವುದು ಛಾಯಾಗ್ರಹಕರಿಗೆ, ಪ್ರಕೃತಿ ಪ್ರಿಯರಿಗೆ ಹಬ್ಬವೇ ಸರಿ. ಸುಬ್ರಮಣ್ಯ-ಸಕಲೇಶಪುರ ಘಾಟಿಯಲ್ಲಿ ಪ್ರಕೃತಿ ವೀಕ್ಷಣೆ, ಕುಮಾರಪರ್ವತದ ದಿವ್ಯ ನೋಟ, ಅಲ್ಲಲ್ಲಿ ಕಾಣಿಸುವ ಜಲಪಾತಗಳು, ಸುಮಾರು ೫೫ ಸುರಂಗಗಳು, ಆಳವಾದ ಕಂದಕಗಳು ಪ್ರಯಾಣವನ್ನು ಒಂದು ಮರೆಯಲಾರದ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ. ಪ್ರಕೃತಿಯನ್ನು ಅತಿ ಹತ್ತಿರದಿಂದ ನೋಡಬಹುದು, ಏಕೆಂದರೆ ೫೫ ಕಿ.ಮೀ ಘಾಟಿ ಮಾರ್ಗದಲ್ಲಿ ರೈಲು ಪ್ರಯಾಣಿಸುವುದು ಕೇವಲ ೧೫ಕಿ.ಮೀ ಪ್ರತಿ ಗಂಟೆ ವೇಗದಲ್ಲಿ. ಪ್ರತಿ ಕಿಲೋಮೀಟರಿಗೂ ಟನೆಲ್ ಇದೆ. ಮಳೆಗಾಲದಲ್ಲಿ ರೈಲು ಕೆಲವೊಮ್ಮೆ ಘಾಟಿ ಮಧ್ಯೆ ನಿಲ್ಲಲೂಬಹುದು. ಒಮ್ಮೆ ಖಂಡಿತವಾಗಿ ಪ್ರಯಾಣಿಸಲೇಬೇಕಾದ ರೈಲಿದು.
[ಮಂಗಳವಾರ, ಗುರುವಾರ, ಶನಿವಾರ]
ಮಂಗಳೂರಿನಿಂದ ಹೊರಡುವ ವೇಳೆ: ಬೆಳಿಗ್ಗೆ ೮:೪೦
ಬೆಂಗಳೂರು ತಲುಪುವ ವೇಳೆ: ಸಂಜೆ ೭:೦೦ (ಯಶವಂತಪುರ ರೈಲು ನಿಲ್ದಾಣ)
[ಸೋಮವಾರ, ಬುಧವಾರ,ಶುಕ್ರವಾರ]
ಬೆಂಗಳೂರಿನಿಂದ ಹೊರಡುವ ವೇಳೆ: ಬೆಳಿಗ್ಗೆ ೭:೩೦ (ಯಶವಂತಪುರ ರೈಲು ನಿಲ್ದಾಣದಿಂದ)
ಮಂಗಳೂರು ತಲುಪುವ ವೇಳೆ: ಸಂಜೆ ೬:೦೦
ದರ:
೧) ಸೆಕಂಡ್ ಸಿಟ್ಟಿಂಗ್ - ೧೧೬ ರುಪಾಯಿ
೨) ೩-ಟೈರ್ ಎ.ಸಿ. - ೫೩೧ ರುಪಾಯಿ
೩) ಸಾಮಾನ್ಯ -
ಸಧ್ಯಕ್ಕೆ ರೈಲಿಗೆ ಮಂಗಳೂರೇ ಕೊನೆ. ಮುಂದಿನ ದಿನ ಈ ರೈಲನ್ನು ಪ್ರತಿದಿನ ಓಡಿಸುವುದಾಗಿಯೂ ಹಾಗೆಯೇ ಕುಂದಾಪುರದವರೆಗೆ ವಿಸ್ತರಿಸುವುದಾಗಿಯೂ ರೈಲ್ವೇ ಸಚಿವರು ಭರವಸೆ ನೀಡಿದ್ದಾರೆ. ಯಾವಾಗ ಕೈಗೂಡುವುದೆಂಬುದು ಇನ್ನೂ ಕೂಡ ನಿಗೂಢವಾಗಿಯೆ ಉಳಿದಿದೆ. ಮತ್ತೆ ಕೇರಳಕ್ಕೆ ಹೋಗದಿದ್ದರೆ ಸಾಕು. ಕೇರಳ ಲಾಬಿ ತಡೆಯಲು ಅದಷ್ಟು ಬೇಗ ಮಂಗಳೂರು ದಕ್ಷಿಣ ರೈಲಿನ ಹಿಡಿತದಿಂದ ಹೊರಗೆ ಬಂದು ನೈರುತ್ಯ ರೈಲ್ವೆ ವಲಯಕ್ಕೆ ಸೇರಬೇಕು. ಇದರಿಂದ ಮಂಗಳೂರಿನಿಂದ ಹೊರಡುವ ನಿರುಪಯೋಗಿ ತಿರುವನಂತಪುರ ರೈಲುಗಳೂ ಕಡಿಮೆಯಾಗುವುದು. ಸುಮಾರು ೧೦ ಗಂಟೆಯ ಪ್ರಯಾಣವಾಗಲಿದೆ. ಇದರಲ್ಲಿ ಮೂರು ಗಂಟೆ ಘಾಟಿ ಪ್ರದೇಶಕ್ಕೆ ಅವಶ್ಯಕ. ಮಳೆಗಾಲದಲ್ಲಿ ಹೇಳಲು ಬಾರದು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಬೆಂಗಳೂರು-ಕುಣಿಗಲ್-ಹಾಸನ ನೇರ ರೈಲು ಮಾರ್ಗ ಆದಷ್ಟು ಬೇಗ ಪೂರ್ಣಗೊಂಡರೆ ಮಂಗಳೂರನ್ನು ರೈಲಿನಲ್ಲಿ ಕೇವಲ ೮ಗಂಟೆ ಅವಧಿಯಲ್ಲಿ ತಲುಪಬಹುದು. ರೈಲಿನಲ್ಲಿ ಒಟ್ಟು ೨ ಜನರಲ್ ಬೋಗಿಗಳು, ಒಂದು ಎ.ಸಿ ಬೋಗಿ ಮತ್ತು ೯ ಸಿಟ್ಟಿಂಗ್(ರಿಸರ್ವ್‍ಡ್) ಬೋಗಿಗಳಿವೆ. ರೈಲು ಬಂಟ್ವಾಳ, ಕಬಕ-ಪುತ್ತೂರು, ಸುಬ್ರಮಣ್ಯ, ಸಕಲೇಶಪುರ, ಹಾಸನ, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲ್ಲುತ್ತದೆ.
ಕೊನೆ ಹನಿ: ಶಿರಾಡಿ ಘಾಟಿ ಕೊನೆಗೂ ಕಾಂಕ್ರಿಟ್ ಆಗಲಿದೆ. ಆದರೆ ೧೧೫ ಕೋಟಿ ಬಿಡುಗಡೆ ಮಾಡುವೆನೆಂದಿದ್ದ ಕೇಂದ್ರ ಈಗ ಮೊತ್ತವನ್ನು ೧೦೦ ಕೋಟಿಗೆ ಇಳಿಸಿದ್ದಾರೆಂಬ ಸುದ್ಧಿ ಬಂದಿದೆ. ಇದರ ಪರಿಣಾಮವಾಗಿ ದಕ್ಷಿಣ-ಕನ್ನಡದ ಹೆದ್ದಾರಿ ಅಧಿಕಾರಿಗಳು ಟೆಂಡರ್ ಮೊತ್ತ ಹೆಚ್ಚಿಸಲು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮುಂದೆ ಏನಾಗುತ್ತೋ ಎಂಬುದು ಕಾಮಗಾರಿ ಪ್ರಾರಂಭವಾದಾಗಲೇ ತಿಳಿಯುವುದು. ಕಾಮಗಾರಿ ಸುಸೂತ್ರವಾಗಿ ನಡೆದರೆ ಮುಂದಿನ ಮಳೆಗಾಲಕ್ಕೆ ಶಿರಾಡಿಯ ಹೆದ್ದಾರಿ ಕಾಂಕ್ರಿಟ್ ರಸ್ತೆಯಾಗುತ್ತದೆ. ಆರು ತಿಂಗಳು ಹೆದ್ದಾರಿ ಬಂದ್. ಕಾಮಗಾರಿಗೆ ಹಣ, ಲಾರಿಗಳು ಮುಖ್ಯವಾಗಿ ಅದಿರು ಲಾರಿಗಳು ಅಡ್ಡಿ ಬರದಿದ್ದರೆ ಸಾಕು.
ಚಿತ್ರ: ನಂದಕುಮಾರ (ಮಂಜು ಮುಸುಕಿದ ಮಳೆಗಾಲದ ಮುಂಜಾನೆಯಲ್ಲಿ ಸುಬ್ರಮಣ್ಯ ರೈಲು ನಿಲ್ದಾಣ)