Friday, June 22, 2018

ಮೇ ತಿಂಗಳಲ್ಲಿ ಮಳೆಗಾಲದ ಚಿತ್ರಣ

ಮೇ ೧೨, ೨೦೧೮

"ಮೊನ್ನೆ ಮಳೆ ಬಂದಿದೆ ಮಾರಾಯಾ ಅರ್ಧ ಬಾವಿ ತುಂಬಿ ಹೋಗಿದೆ. ಇಂತಹ ಬೇಸಗೆ ಮಳೆಯನ್ನೇ ಕಂಡಿಲ್ಲ!" ಒಂದೆಡೆ ಆಶ್ಚರ್ಯ ಮತ್ತೊಂದೆಡೆ ಆತಂಕದಿಂದ ನುಡಿದಳು ಅಮ್ಮ. ಆತಂಕಕ್ಕೆ ಎರಡು ಕಾರಣಗಳಿವೆ. ಗುಡುಗು-ಮಿಂಚಿನ ಜುಗಲ್-ಬಂದಿ ರಾತ್ರಿ ಮಲಗಲು ಬಿಡುತ್ತಿರಲಿಲ್ಲ. ಅದರೊಂದಿಗೆ ಎಲ್ಲಿ ವಿದ್ಯುತ್ ಉಪಕರಣಗಳು ಕೈಕೊಡುವವೋ ಹೇಳಲಾಗದು. ಜೊತೆಗೆ ಬಿರುಗಾಳಿ. ವಿದ್ಯುತ್ ಕೈಕೊಡುವುದು ಮಾಮೂಲಿ. ಅದರಲ್ಲೂ ಹಳ್ಳಿಯ ಚಿತ್ರಣ ಎಲ್ಲರಿಗು ತಿಳಿದದ್ದೇ. ಕರೆಂಟ್ ಹೋಯಿತು ಅಂದ್ರೆ ಕೆಲವೊಮ್ಮೆ ೨ ದಿನ ಆದರೂ ಪತ್ತೆ ಇರುವುದಿಲ್ಲ. ಎಷ್ಟೇ ಮಳೆ ಬಂದರೂ ಕರಾವಳಿಯ ಸೆಖೆ ಕಡಿಮೆ ಆಗುವುದಿಲ್ಲ ಎಂಬುದು ಎಲ್ಲರಿಗು ತಿಳಿದ ವಿಷಯ. ಕರೆಂಟ್ ಹೋದರೆ ರಾತ್ರಿ ನಿದ್ರೆ ಮಾಡುವುದು ಮರೀಚಿಕೆಯೇ!



ಬೆಂಗಳೂರಿನಲ್ಲಿ ನಿನ್ನೆ ಜೋರು ಮಳೆ. ಸುಮಾರು ಅರ್ಧ ಘಂಟೆ ಬಾರಿಸಿರಬೇಕು. ಅದಕ್ಕೆ ಸರಿಯಾಗಿ ಊರಿಗೆ ತೆರಳುವ ಬಸ್ಸು ಕೂಡ ತಡ. ಮರುದಿನದ ಮತ ಚಲಾವಣೆಗೆ ಉತ್ಸುಕನಾಗಿ ನಾನು ಊರಿಗೆ ಹೊರಟಿದ್ದೆ. ಮಳೆಯಿಂದಾಗಿ ಬಸ್ಸು ಕೆ.ರ್.ಪುರಂ ನಲ್ಲೆ ಸಿಕ್ಕಿಹಾಕಿಕೊಂಡಿತ್ತು. ರಾತ್ರಿ ಬೇಗನೆ ತಿಂದಿದ್ದರಿಂದ ಬಸ್ಸು ಕಾಯುವಾಗ ಹೊಟ್ಟೆ ಕೂಡ ಮತ್ತೆ ಆಹಾರಕ್ಕಾಗಿ ಕಾಯುತ್ತಿತ್ತು. ಪುಣ್ಯಕ್ಕೆ ೫ ರುಪಾಯಿಯ ಪಾರ್ಲೆ-ಜಿ ಬಿಸ್ಕತ್ತು ತೆಗೆದುಕೊಂಡಿದ್ದೆ. ಬಸ್ಸು ಬರುವವರೆಗೆ ಎಲ್ಲಾ ಬಿಸ್ಕತ್ತುಗಳು ಹೊಟ್ಟೆಗೆ ಸೇರಿದ್ದವು. ಸುಮಾರು ೯೦ ನಿಮಿಷಗಳ ವಿಳಂಬವಾಗಿ ನಮ್ಮ ಬಸ್ಸು ಬಂತು. ತದನಂತರ ಒಳದಾರಿಯಲ್ಲಿ ಸಂಚರಿಸುವುದರಿಂದ ಮತ್ತೆಲ್ಲೂ ಜಾಮ್ ಇರಲಿಲ್ಲ.




ಕರಾವಳಿ ಕಡೆ ಸಂಚರಿಸುವವರಿಗೆ ಘಾಟಿ ಇಳಿದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಥಟ್ಟೆಂದು ಎಚ್ಚರವಾಗುತ್ತದೆ ಏಕೆಂದರೆ ಸೆಕೆ ಒಮ್ಮೆಲೆ ಹೆಚ್ಚಾಗುತ್ತದೆ :-). ನನಗೂ ಚಾರ್ಮಾಡಿ ಘಾಟಿ ಇಳಿದದ್ದು ಬೇಗನೆ ತಿಳಿಯಿತು. ಚಳಿಯೆಂದು ಮುಚ್ಚಿದ ಕಿಟಕಿಯನ್ನು ಬೆವರಿನಿಂದಾಗಿ ತೆರೆಯಲೇಬೇಕಾಯಿತು. ನಂತರವೇ ಮತ್ತೊಮ್ಮೆ ನಿದ್ದೆ ಏರಿದ್ದು. ಬೆಳಿಗ್ಗೆ  ೬:೩೦ ಗೆ ಎದ್ದಾಗ ಬಂಟ್ವಾಳದಲ್ಲಿದ್ದೆ. ಸುತ್ತಲೂ ಕಣ್ಣಾಡಿಸಿದಾಗ ಎಲ್ಲೆಲ್ಲೂ ಹಸಿರಿನ ಹೊದಿಕೆ. ನೇತ್ರಾವತಿ ಆಗಲೇ ಕೆಸರುಮಯವಾಗಿದ್ದಳು. ದೀಪದಲಂಕಾರದಂತೆ ಕಂಗೊಳಿಸುತ್ತಿರುವ ಸೂರ್ಯೋದಯದ ಬಾನು. ಅಬ್ಬಬ್ಬಾ! ಎಂತಹ ನಯನಮನೋಹರ ಸೌಂದರ್ಯ. ಇಂದೇ ನೇತ್ರಾವತಿಯ ಮದುವೆಯಂತೆ ಭಾಸವಾಗುತಿತ್ತು. ನದಿಯ ಸುತ್ತಲೂ ಹಸಿರಿನ ಹೊದಿಕೆ ಜೊತೆಗೆ ಸೂರ್ಯನ ಕೇಸರಿ ತಿಲಕ. ಮದುವೆಗೆ ಪ್ರಕೃತಿಯ ಸುಂದರ ಮೇಕಪ್. ಇನ್ನೇನು ಮಳೆ ಬಂದರೆ ಗಟ್ಟಿಮೇಳ ಬಾರಿಸಬಹುದು :-). ಇಂತಹ ಸನ್ನಿವೇಶಗಳಲ್ಲಿ ಕಾರಿನಲ್ಲಿ ಬರಬೇಕು. ಮದುವೆಯ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಳ್ಳಬಹುದು :-).




ಬಸ್ಸು ಮಂಗಳೂರಿಗೆ ಬಂದಿತು. ಅಲ್ಲಿಂದ ಮುಲ್ಕಿ ನಂತರ ಕಾಪು. ಎಲ್ಲೆಲ್ಲೂ ಪ್ರಕೃತಿಯದ್ದೇ ಸೆಳೆತ. ಶಾಂಭವಿ ನದಿ ತಾನೇನು ಕಡಿಮೆ ಇಲ್ಲವೆಂದು ರಾಡಿಯಲ್ಲಿ ತೊಯ್ದು ಹರಿಯುತ್ತಿದ್ದಾಳೆ. ಕರ್ನಾಟಕದ ಮೇಲಿನ ಸುಳಿಗಾಳಿ ಪೂರ್ವ ಮುಂಗಾರಿಗೆ ಅತೀವ ಶಕ್ತಿ ತುಂಬಿರುವುದಂತು ನಿಜ! ಎಲ್ಲೆಲ್ಲೂ ವರ್ಣಿಸಲಾಗದಷ್ಟು ಸೌಂದರ್ಯ. ಮುಲ್ಕಿಯ ತಗ್ಗು ಪ್ರದೇಶಗಳಲ್ಲಿ ಆಗಲೇ ಒಂದಿಂಚು ನೀರು ತುಂಬಿಕೊಂಡಿದೆ.ಕೆಲವರು ಆದಾಗಲೇ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಷ್ಟು ದಿನ ಮಳೆ ಸುರಿಯುವುದೋ ತಿಳಿಯೆ. ಸಧ್ಯಕ್ಕೆ ಮಾತ್ರ ಎಲ್ಲೆಲ್ಲೋ ನೀರೆ ನೀರು. ಮಳೆಯಿಂದ ಜೀವಜಲಕ್ಕೆ ಕಳೆ ಬಂದಿದೆಯಾದರೂ ಆಕಾಶದ ಘರ್ಜನೆ ಎಲ್ಲರಲ್ಲೂ ಭಯ ಆವರಿಸಿದೆ ಕೂಡ.




ಊರಿಗೆ ಬಂದಿಳಿದಾಗ ಮನಸ್ಸು ಮುದಗೊಂಡಿತು. ಕಾಪುವಿನಿಂದ ಹಳ್ಳಿಗೆ ನಾಲ್ಕು ಕಿ.ಮೀ ರಸ್ತೆಯಲ್ಲಿ  ಸಂಚಿರುಸುವಾಗ ಧನಾತ್ಮಕ ಚಿಂತನೆ ದ್ವಿಗುಣವಾಗುತ್ತದೆ. ಸದ್ದಿಲ್ಲದೆ ಸಂಚರಿಸುವ ಮೋಡಗಳು, ಮೋಡದ ಬಲೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ರವಿ, ಸುತ್ತಲೂ ಬೆಳೆದಿರುವ ಹಚ್ಚಹಸುರಿನ ಹುಲ್ಲು ಮತ್ತು ಅದನ್ನು ಮೇಯುತ್ತಿರುವ ದನಕರುಗಳು, ಜೊತೆಗೆ ಅಲ್ಲಲ್ಲಿ ಹರಿಯುತ್ತಿರುವ ಕಾಲುವೆ, ಆಹಾಹಾ ಎಂತಹ ಸುಮಧುರ ಚಿತ್ರಣ ಅರೆರೆ ಮನೆ ಪಕ್ಕದ ಸಣ್ಣ ಚೆಕ್-ಡ್ಯಾಮ್ ಕೂಡ ಫುಲ್ ಆಗಿದೆ. ಹಾಗಾದರೆ ಅಮ್ಮ ಹೇಳಿದ್ದು ಉತ್ಪ್ರೇಕ್ಷೆಯಂತೂ ಅಲ್ಲಾ.




ಮನೆಗೆ ತಲುಪಿದಂತೆ ಚಹಾ ಸವಿದಂತೆ ಮೊದಲು ನೋಡಿದ್ದು ಬಾವಿಯ ನೀರಿನ ಮಟ್ಟ ನಂತರ ಹೊರಟಿದ್ದು ಹೊಲದ ಕಡೆಗೆ. ಕೇವಲ ಮೊಬೈಲ್ ಕ್ಯಾಮೆರಾ ಸಾಕಾಗಿತ್ತು ಪ್ರಕೃತಿಯ ಸುಂದರತೆಯನ್ನು ಸೆರೆಹಿಡಿಯಲು. ಸ್ಥೂಲ ಕಾಯದ DSLR ಕ್ಯಾಮರಾದ ಅವಶ್ಯಕತೆಯೇ ಇರಲಿಲ್ಲ. ಅಷ್ಟು ಸ್ವಚ್ಚಂದವಾಗಿತ್ತು ಅಂದಿನ ವಾತಾವರಣ.

ಮುಂಗಾರು ಪೂರ್ವ ಮಳೆ
ಹಸಿರಾಯಿತು ಇಳೆ  |
ಬಾವಿಗೆ ಬಂತು ಕಳೆ
ಛಾಯಾಚಿತ್ರಕನ ಪ್ರಕೃತಿ ಸೆಳೆ ||



ಜೋರು ಮಳೆ ಹುಯ್ದಾಗ, ಬೆಳಗ್ಗೆ ಆಕಾಶ ಶುಭ್ರವಾಗಿರುವುದು. ಸೂರ್ಯನ ಮೊದಲ ಕಿರಣಗಳು ಆ ಸುಂದರ ಭೂದೃಶ್ಯದ ಮೇಲೆ ಹರಡಿದಾಗ, ನೀಲಿಯ ಬಾನಿನ ಮತ್ತು ಹಸಿರಿನ ಸಮ್ಮಿಲನ ಕಣ್ಣಿಗೆ ಆಹ್ಲಾದವನ್ನುಂಟು ಮಾಡುವವು.

ಶುಭ್ರ ನೀಲಿ ಆಕಾಶ
ಪೂರ್ವದಿ ಸೂರ್ಯನ ಪ್ರಕಾಶ  |
ಪಶ್ಚಿಮದಿ ಪ್ರಕೃತಿಯ ಗಾಂಭೀರ್ಯ
ಸೆರೆ ಹಿಡಿದೆನು ಅದರ ಸೌಂದರ್ಯ  ||




ಎಷ್ಟು ಮಳೆ ಬಂದರೂ ಮನೆಯ ಪಕ್ಕದ ಕಾಲುವೆಯಲ್ಲಿ ನೀರು ಹರಿಯಲು ಮಳೆಗಾಲ ಶುರುವಾಗಲೇಬೇಕು.



ಬೇಸಗೆಯಲ್ಲಿ ಕೃತಕವಾಗಿ ನೀರನ್ನು ಬಿಟ್ಟು ಹುಲ್ಲು ಬೆಳೆಸಬೇಕು. ಆದರೆ ಮಳೆಯ ಮೋಡಿಯಿಂದ ಎಲ್ಲೆಲ್ಲೂ ಸೊಂಪಾಗಿ ಬೆಳೆದಿರುವ ಫ್ರೆಶ್ ಹುಲ್ಲು. ದನಗಳಿಗೆ ಸುಗ್ಗಿಯೋ ಸುಗ್ಗಿ.

ಅಯ್ಯೋ ಮಾರಾಯ ಕಣ್ಣು ಹಾಕಬೇಡಪ್ಪ. ಮುಂಗಾರು ಕೈಕೊಟ್ರೆ ಕಷ್ಟ :-).


ಶ್ರೀನಿವಾಸ ಕಲ್ಯಾಣ ಚಿತ್ರದ ಕಾನಡ ರಾಗದಲ್ಲಿ ಸಂಯೋಜಿಸಿರುವ "ನಾನೇ ಭಾಗ್ಯವತಿ" ಹಾಡನ್ನು ಈ ಸನ್ನಿವೇಶಕ್ಕೆ  ಮಾರ್ಪಾಡು ಮಾಡಿದಾಗ ಮೂಡಿದ ಪದ್ಯ. ಅಣ್ಣಾವ್ರು ಮತ್ತು ಜಾನಕಿ ಅವರ ಸುಮಧುರ ಕಂಠಕ್ಕೆ ಸರಿಸಾಟಿಯಿಲ್ಲ.

ಎಲ್ಲಾದರೂ ಮೇಯುವ ಸ್ವಾತಂತ್ರ್ಯ ಹೊಂದಿರುವ ನಾನೇ ಭಾಗ್ಯವತಿ
ವರುಣನೇ ನಿನ್ನಿಂದ ಹೊಟ್ಟೆ ತುಂಬಾ ಮೇಯುತ್ತಿರುವ ನಾನೇ ಭಾಗ್ಯವತಿ

ಎನ್ನುವಂತಿದೆ ಅವುಗಳ ಮುಖ ಭಾವ.

ಛೇ! ಇವ್ನು ಇನ್ನು ಸಾ ಫೋಟೋ ಹೋಡಿತಾ ಮಾರಾಯ. ಹೋಗೋ ಮಾರಯಾ ನಮ್ ಹೊಟ್ಟೆಗೆ ಕಣ್ ಹಾಕ್ಬೇಡ





ಇಂದು ಮತದಾನದ ಕಾವು ಬೇರೆ. ಮಳೆರಾಯನು ಅದನ್ನು ತಣ್ಣಗಾಗಿಸಲು ಪ್ರಯತ್ನಿಸಿದರೂ ಕರಾವಳಿಯ ಸೆಖೆ ಬಿಡಬೇಕೆ! ಆರ್ದ್ರತೆ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆವರು ಜಲಪಾತದಂತೆ ಸುರಿಯುತ್ತಿದೆ. ಆಕಾಶದಿಂದ ಮಳೆಯಂತೆ, ದೇಹದಿಂದ ಬೆವರು. ಸೆಖೆ ಇಳಿದಂತೆ ಮಳೆ ಕೂಡ ಇಳಿಯುತ್ತದೆ. ಮಳೆಬೀಳಲು ಆರ್ದ್ರತೆ ಕೂಡ ಅತಿ ಮುಖ್ಯ. ವಿಪರೀತ ಮಳೆ ಮತ್ತೊಂದು ರೀತಿಯಲ್ಲಿ ಭಯ ಹುಟ್ಟಿಸುತ್ತಿದೆ. ಹಲವು ಬಾರಿ ಬೇಸಿಗೆ ಮಳೆ ಹೆಚ್ಚಿದಾಗ, ಮುಂಗಾರು ಕೈಕೊಟ್ಟಿದೆ. ಈ ಬಾರಿಯೂ ಅದೇ ಸ್ಥಿತಿ ಉದ್ಭವವಾಗುತ್ತದೋ ಎನ್ನುವ ಭಯ ಸಹಜ. ಮುಂಗಾರು ಮಳೆ ದೇಶದೆಲ್ಲೆಡೆ ಸರಿಯಾದ ಪ್ರಮಾಣದಲ್ಲಿ ಬೀಳಲೆಂದು ಬನ್ನಿ  ಶ್ರೀ ಕೃಷ್ಣನನ್ನು, ಶ್ರೀ ಮುಖ್ಯಪ್ರಾಣನನ್ನು ಹಾಗೂ ಶ್ರೀ ಮಹೇಶ್ವರನನ್ನು ಪ್ರಾರ್ಥಿಸೋಣ.

ಭರ್ಜರಿ ಪೂರ್ವ ಮುಂಗಾರು ಸುರಿದಿದೆ
ನೈಜ ಮುಂಗಾರು ಕೈಕೊಡುವ ಭೀತಿ ಆವರಿಸಿದೆ  |
ಹಾಗೆನ್ನುವುದು ತಿಳಿದವರ ಅಂಬೋಣ
ಹಾಗಾಗದಿರಲೆಂದು ದೇವರನ್ನು ಪ್ರಾರ್ಥಿಸೋಣ  ||

ಅರೆರೆ ಚಿತ್ರ ಹೊಡಕೊಂಡು ಬೊಗಳೆ ಮಾತ್ರ ಬರ್ದಿದಲ್ಲ, ವೋಟ್ ಕೂಡಾ ಹಾಕಿ ಬಂದೆ ನಾನು ಕಲಿತ ಶಾಲೆಯಲ್ಲಿ ;-). ಹೌದು ವೋಟ್ ಹಾಕಲೆಂದೇ ಬಂದಿದ್ದು. ನನಗೆ ರಾಜಕೀಯ ಮಾತನಾಡುವುದೆಂದರೆ ಅಲರ್ಜಿ. ಆದರೆ ವೋಟನ್ನು ತಪ್ಪದೆ ಚಲಾಯಿಸುತ್ತೇನೆ. ವೋಟಿಗೆಂದೆ ಬಂದು ಊರಿನ ಪ್ರಕೃತಿಯ ನೋಟಕ್ಕೆ ನಾ ಬೆರಗಾಗಿದ್ದು ಉತ್ಪ್ರೇಕ್ಷೆಯಲ್ಲ!



ಸಂಜೆ ಕಾಪು ಕಡಲ ತೀರದಲ್ಲಿ ಸುಮಾರು ಹೊತ್ತು ಕಳೆದಾಗ ಊರಿಗೆ ಬಂದಿದ್ದು ಪರಿಪೂರ್ಣವಾಯಿತು. ಈ ರಮಣೀಯ ದೃಶ್ಯಕ್ಕೆ ಮಳೆಯ ಕೊಡುಗೆ ಅಪಾರ. ಮರುದಿನ ಮಕ್ಕಳೊಂದಿಗೆ ಬೆರೆತಾಗ ಬದುಕು ಅರ್ಥಪೂರ್ಣವಾಯಿತು.

ಮಳೆ ಬಂದ ಮರುದಿನದ ಸೂರ್ಯಾಸ್ತದ ದೃಶ್ಯ ಎಂತಹವರ ಮನವನ್ನು ಸೆಳೆಯುತ್ತದೆ. ನಿಮಗಾಗಿ ಬೋನ್ಸಸ್ ಚಿತ್ರಗಳು.  ಚಿತ್ರಗಳನ್ನು ನನ್ನ ಹಳ್ಳಿಯಲ್ಲಿ, ಪಕ್ಕದ ಹಳ್ಳಿಯಲ್ಲಿ ಮತ್ತು ಕುಂದಾಪುರ ಬಳಿಯ ಹಳ್ಳಿಯಲ್ಲಿ ಸೆರೆಹಿಡಿದದ್ದು!



ಹೊರಡುವ ಮುನ್ನ:

ಸುರಿಯಲಿ ಉತ್ತಮ ಮುಂಗಾರು
ಮೂಡಲಿ ಪ್ರಕೃತಿಯ ಚಿಗುರು  |
ಹೆಚ್ಚಲಿ ಜಲಾಶಯಗಳ ಪೊಗರು
ಫಲ ನೀಡಲಿ ನೇಗಿಲಯೋಗಿಯ ಬೆವರು  ||

ಎಲ್ಲಾ ಚಿತ್ರಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು. ನಿಮಗೆಲ್ಲರಿಗೂ ಇಷ್ಟವಾಯಿತೆಂದು ಊಹಿಸುತ್ತೇನೆ. ಮತ್ತಷ್ಟು ಚಿತ್ರಗಳನ್ನು ಆಂಗ್ಲ ಬರಹದಲ್ಲಿ ಸೇರಿಸುತ್ತೇನೆ. ಓದಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು :-)

No comments:

Post a Comment

Printfriendly

Related Posts Plugin for WordPress, Blogger...