Sunday, January 5, 2020

ಜನವರಿಯ ಮಳೆ ಕೊಡೆ

ಡಿಸೇಂಬರ್  ೩೦, ೨೦೧೯

ಬೆಳಗ್ಗಿನ ಸಮಯ ಜೊತೆಗೆ ತಂಪಾದ ಗಾಳಿ. ಕರಾವಳಿಯ ಹಳ್ಳಿ ಮನೆಯ ವರಾಂಡದಲ್ಲಿ ಕುಳಿತುಕೊಂಡು ಹಕ್ಕಿಯ ಇಂಚರವನ್ನು ಕೇಳುತ್ತಾ, ಭತ್ತದ ಗದ್ದೆಗಳನ್ನು ವೀಕ್ಷಿಸುತ್ತಾ, ತೋಟದ ಮಧ್ಯೆಯಲ್ಲಿ ಮೈಮರೆಯುತ್ತಾ ಕಾಫಿ ಕುಡಿದರೆ ಅದೇನೋ ಮಜಾ ಕಣ್ರೀ. ಬೆಂಗಳೂರಿಗೆ ಬರಕ್ಕೆ ಮನಸ್ಸು ಆಗಲ್ಲಾ. ಅಂದಹಾಗೆ ಡಿಸೆಂಬರ್ ಎಂಡ್ ಚಳಿಗಾಲ ಅಂತಾ ಎಲ್ಲರಿಗೂ ಗೊತ್ತಿರೋ ವಿಷಯ ಅಲ್ವೇ. ಅಲ್ಲೇ ನೋಡಿ ಟ್ವಿಸ್ಟ್! ಎಲ್ಲಾದ್ರೂ ಮಂಜು ಅಂತಾ ಬರೆದಿದ್ದೀನಾ ನೋಡಿ. ಇಲ್ಲಾ ಅಲ್ವಾ! ಹ ಹಹ್ಹ . ಅದೇ ನೋಡಿ ಕರಾವಳಿ ವೆದರ್ ಟ್ವಿಸ್ಟ್! ಬೆಳಗ್ಗೆ ಆಕಾಶದಲ್ಲಿ ಗುಡುಗಿನ ಕಲರವ, ಜೊತೆಗೆ ಮಿಂಚಿನ ದೀಪಮೇಳ. ಇದ್ಯಾವ ಸೀಸನ್ ಮಳೆ ಮಾರಾಯ್ರೇ ಅಂದ್ರೆ, ದೇವನೇ ಬಲ್ಲ. ಗ್ಲೋಬಲ್ ವಾರ್ಮಿಂಗ್ ಅಂತಾದ್ರೂ ಅನ್ನಿ ಅಥವಾ ೨೬ ನೇ ತಾರೀಖಿನ ಗ್ರಹಣ ಎಫೆಕ್ಟ್ ಗೆ ಬೇಕಾದ್ರೂ ಹೋಲಿಸಿ. ಆಗ್ಬೇಕಾಗಿರೋದು ಬೇಡಾ ಅಂದ್ರು ನಡಿತಾ ಇದೆ.




ನವಿಲುಗಳು ಒಮ್ಮೆಲೇ ಚೀರ್ತಾ ಇವೆ. ಆಗಸದಲ್ಲಿ ದಟ್ಟ ಮೋಡ ಕವಿದಿದೆ. ಒಳ್ಳೆ ಮಳೆಗಾಲ ವಾತಾವರಣ. ದೇಶದೆಲ್ಲೆಡೆ ಚಳಿಯಿಂದ ಜನ ಬಸವಳಿಯುತ್ತಿದ್ದಾರೆ. ಇಲ್ಲೇ ಕರ್ನಾಟಕದಲ್ಲೇ ಚಳಿ ಜೋರಾಗಿದೆ. ಆದ್ರೆ ನಮ್ಮ ಕರಾವಳಿ ಮಾತ್ರ ವಿಚಿತ್ರ ಹವಾಮಾನ. ಭಯಂಕರ ಸೆಖೆ, ವೈಶಾಖವನ್ನೇ ಮೀರಿಸುವಂತಹುದು. ಸ್ವಲ್ಪವೂ ಚಳಿ ಇಲ್ಲ ನೋಡಿ.  ಉತ್ತರದಲ್ಲಿ ಕೊರೆಯುವ ಚಳಿ, ಇಲ್ಲಿ ಉರಿಯುವ ಇಳೆ! ಫಾನ್ ಹಾಕೊಂಡ್ರು ರಾತ್ರಿ ಬೆವರಿಳಿಸುವಂತಹ ಸೆಖೆ. ಉತ್ತರದಲ್ಲಿ ವಾರಕ್ಕೆ ಎರಡು ಬಾರಿ ಮಿಂದರೆ ಇಲ್ಲಿ ದಿನಕ್ಕೆ ಎರಡು ಸ್ನಾನ ಮಾಡಲೇ ಬೇಕು. ಎಂತಹ ತೇವಾಂಶ ಅಂತೀರಾ. ಅದಿಕ್ಕೆ ಮಳೆ ಕೂಡಾ ಬರ್ತಾ ಇದೆ. ಅರಬ್ಬೀ ಸಮುದ್ರಕ್ಕೆ ಏನಾಯಿತು ಈ ಬಾರಿ. ಸುಮಾರು ನಾಲ್ಕು ಚಂಡಮಾರುತ ಜೊತೆಗೆ ಲೋ ಪ್ರೆಶರ್ ಮೇಲೆ ಲೋ ಪ್ರೆಶರ್. ಲೋ ಪ್ರೆಶರ್ ಆಯ್ತು ಅಂದ್ರೆ ಫಾನ್ ಮೇಲೆ ಹೈ  ಪ್ರೆಶರ್ ನೋಡಿ. ದಿನಪೂರ್ತಿ ಫಾನ್ ಸುತ್ತುತ್ತಾನೆ ಇರ್ಬೇಕು. ಈ ಲೋ ಪ್ರೆಶರ್ ಇಂದಾನೆ, ಮೋಡಗಳು ಆಕರ್ಷಿತವಾಗಿ ಕರಾವಳಿಯ ತಾಪಮಾನವನ್ನು ಹೆಚ್ಚಿಸಿ ಮಳೆ ಸುರಿಸ್ತಾ ಇದಾವೆ ಅನ್ಸುತ್ತೆ. ಅದು ಬೇರೆ ವಿಪರೀತ ಹವಾಮಾನದಿಂದಾಗಿ, ಅನಾರೋಗ್ಯಗಳು ಒಕ್ಕರಿಸಿಕೊಂಡಿದ್ದಾವೆ. ಮಕ್ಕಳಿಗೂ ಕೆಮ್ಮು ಕಡಿಮೇನೆ ಆಗ್ತಾ ಇಲ್ಲ. ಇನ್ನು ಬೆಂಗಳೂರಿಗೆ ಹೋದಾಗ ಏನಾಗುತ್ತೋ ನೋಡಬೇಕು.



ಇನ್ನು ಭೂಗರ್ಭದಲ್ಲಿ ಚಳಿಗೆ ಧಾನ್ಯವನ್ನು ಶೇಖರಿಸಿಟ್ಟ ಇರುವೆಗಳು, ಉಗ್ರ ನರಸಿಂಹ ನಂತೆ ಅಚಾನಕ್ ಆಗಿ ಭೂಮಿಯ ಮೇಲ್ಭಾಗಕ್ಕೆ ಸೀಳಿಕೊಂಡು ಬಂದಿದ್ದಾವೆ ನೋಡಿ. ಸೆಖೆಗೆ ಇನ್ನೇನು ಸಾಕ್ಷಿ ಬೇಕು ಹೇಳಿ. ಸಾಲದೆಂಬಂತೆ, ಸಿಕ್ಕ ಸಿಕ್ಕ ತಿಂಡಿಗಳಿಗೆ ದಾಳಿ ಬೇರೆ ಇಡುತ್ತಿವೆ. ಮನೆ ಮಂದಿಗೆಲ್ಲಾ ಇರುವೆಯನ್ನು ಕಾಯುವುದೇ ಕೆಲಸವಾಗಿದೆ. ಬಹುಷಃ, ಅರಿಶಿಣ ಪುಡಿಯು ಅಡಿಗೆಗಿಂತ ಇರುವೆ ರೇಖೆ ಎಳೆಯಲೇ ಹೆಚ್ಚು ಖರ್ಚಾಗಿದೆ ಅನ್ನಿಸುತ್ತೆ.

ಇದು ಇಬ್ಬನಿ ಅಲ್ಲಾ ಮಾರಾಯ್ರೆ, ಮಳೆ ನೀರು.


ಶುಭ್ರ ನೀಲಿ ಆಕಾಶ ಕಾಣಬೇಕಾದ ಸಮಯದಲ್ಲಿ ದಟ್ಟ ಮೋಡ ಆವರಿಸಿಕೊಂಡಿದೆ ನೋಡಿ.


ಅದೆನಾಗುತ್ತೋ ಗೊತ್ತಿಲ್ಲ ನೋಡಿ. ಬೆಳ್ಳಂಬೆಳಗ್ಗೆ ದಟ್ಟ ಮೋಡ ಆವರಿಸಿತ್ತಿರುತ್ತೆ. ಮಧ್ಯಾಹ್ನದ ನಂತರ ಹೀಗೆ ನೀಲಿ ಇರುತ್ತೆ.




ಕೊನೆಯದಾಗಿ ತಲೆಬರಹ ವಿಚಿತ್ರವಾಗಿದೆ ಅಲ್ವೇ? "ಚಳಿಗಾಲದ ಬೆವರು", "ಚಳಿಗಾಲದ ಬೇಸಿಗೆ" ಅಂತಲೂ ಕರೆಯಬಹುದಿತ್ತು ಅಲ್ವಾ? ಹಾಗೇನಿಲ್ಲ, "circumstances define statements" ಹಾಗೆ ಬೆಳಗ್ಗೆ ಚಹಾ ಕುಡಿಯುತ್ತಿದ್ದಾಗ, ಹೊರಗೆ ವಾತಾವರಣ ಕುದಿಯುತ್ತಿತ್ತು. ಮೋಡದ ಜೊತೆಗೆ ಗುಡುಗುತ್ತಿದ್ದರೂ ಸೆಖೆ ಮಾತ್ರ ವಿಪರೀತ. ಹನಿ ಹನಿ ಮಳೆಯ ಮಧ್ಯೆ, ಹೆಂಗಸರೊಬ್ಬರು ಕೊಡೆ ಹಿಡಿಯುತ್ತಾ ಭತ್ತದ ಗದ್ದೆಯ ಕಾಲುದಾರಿಯಲ್ಲಿ ನಡೆಯುತ್ತಿದ್ದರು ನೋಡಿ. ಅದಿಕ್ಕೆ ಈ ತಲೆಬರಹ. ಯಾಕಂದ್ರೆ ಇಂತಹ ಚಿತ್ರಣ ಸಿಗೋದು ಮಳೆಗಾಲದಲ್ಲಿ ಮಾತ್ರ. ಜನವರಿಯಲ್ಲಿ ಏನಿದ್ದರೂ ಬಿಸಿಲಿನ ತಾಪಕ್ಕೆ ಮಾತ್ರ ಕೊಡೆ.

ಹೊಸ ವರುಷದ ಮುನ್ನಾದಿನ ಕರಾವಳಿಯಲ್ಲಿ ಚಳಿಗಾಲದ ಮುನ್ಸೂಚೆಯನ್ನು ನೀಡಿದೆ.

ಹೊಲಗಳಲ್ಲಿ ದಟ್ಟನೆಯ ಮಂಜು ಹಾಸಿ ಸುಂದರವಾಗಿ ಕಾಣುತ್ತಿತ್ತು.


ಇಲ್ಲಿ ನೀರು ಇಬ್ಬನಿಯದು. ರಾತ್ರಿ ಸ್ವಲ್ಪ ಚಳಿ ಬೇರೆ ಇತ್ತು.



ಬೆಂಗಳೂರಿಗೆ ವಾಪಾಸಾಗುತ್ತಿದ್ದಾಗ ಕೆಲವು ದೃಶ್ಯವನ್ನು ಶಿರಾಡಿ ಘಾಟಿಯಲ್ಲಿ ಸೆರೆ ಹಿಡಿದೆ.

ಡಿಸೆಂಬರ್ ಮಳೆಗೆ ಪುಷ್ಟಿ ನೀಡುವಂತೆ ಶಿರಾಡಿ ಘಾಟಿಯ ಸಣ್ಣ ಜಲಪಾತ ಕೂಡಾ ಮೈದುಂಬಿ ಹರಿಯುತ್ತಿದೆ ನೋಡಿ.



ಪ್ರಕೃತಿಯನ್ನೇ ಶೋಷಿಸುವ ಎತ್ತಿನಹೊಳೆ ಯೋಜನೆ ನೋಡಿ. ಇದೇ ತರ ಆದರೆ ಹವಾಮಾನ ವೈಪರಿತ್ಯ ಆಗುವುದಿಲ್ಲವೇ. ಯಾಕಾದರೂ ಇಂತಹ ದುಸ್ಸಾಹಸಕ್ಕೆ ಕೈ ಹಾಕುವರೋ! ಬಯಲುಸೀಮೆಯ ಅಂತರ್ಜಲ ವೃದ್ಧಿಸುವ ಬದಲು, ಇಂತಹ ಮಾರಕೆ ಯೋಜನೆಗೆ ಯಾಕೆ ಕೈ ಹಾಕುತ್ತಾರೋ ದೇವರಿಗೆ ಗೊತ್ತು. ಮುಂದೊಂದು ದಿನ ಪ್ರಕೃತಿ ಮಾತೆಯೆ ನಮ್ಮೆಲ್ಲರಿಗೆ ಪಾಠ ಕಲಿಸಬೇಕು. ಹಕ್ಕಿಗಳ ಕಲರವ ಕೇಳಿಸಬೇಕಾದ ಜಾಗದಲ್ಲಿ ಜಿಸಿಬಿಯ ಘರ್ಜನೆ ಕೇಳುತ್ತಿದೆ ನೋಡಿ ಇಲ್ಲಿ. ಸಕಲೇಶಪುರ ಬಳಿಯಲ್ಲಿ ಕ್ಲಿಕ್ಕಿಸಿದ್ದು


Wednesday, January 1, 2020

Quite Longer!

This was the banana tree shot while having tea at Aditya Restaurant near Uppinangady. There is no speciality in picture. The only alluring part was the banana bunch with log true stem. I have not seen such long stem till date and hence found interesting. Here are pictures for you.



Printfriendly

Related Posts Plugin for WordPress, Blogger...