ಸುಮಾರು ಒಂದು ತಿಂಗಳು ಆಗಿರಬೇಕು. ತಿಮ್ಮನ ಪಕ್ಕದ ಫ್ಲಾಟಿನಲ್ಲಿ ಬ್ಯಾಚಲರ್ ಹುಡುಗ ಸೇರಿಕೊಂಡಿದ್ದ. ಒಬ್ಬನೇ ಇದ್ದು ಬೇಜಾರಾಗುತ್ತಿತ್ತು ಅನ್ನಿಸುತ್ತೆ. ಪ್ರತಿ ವಾರ ಅವನ ಗೆಳೆಯರೊಂದಿಗೆ ಪಾರ್ಟಿ, ಕುಡಿತ ನಡೆಯುತ್ತಿತ್ತು. ತಿಮ್ಮನ ಮಲಗುವ ಕೋಣೆಗೆ ಇವರ ರಂಪಾಟ, ಧ್ವನಿವರ್ಧಕ ಚುಚ್ಚಿದಂತೆ ಕೇಳುತ್ತಿತ್ತು. ಎಷ್ಟೊಂದು ಬಾರಿ ನಿದ್ದೆಯೇ ಬರುತ್ತಿರಲಿಲ್ಲ. ಇದರ ಬಗ್ಗೆ ಫ್ಲ್ಯಾಟ್ ಸಂಘಕ್ಕೆ ದೂರು ನೀಡಿದರೆ, ಒಂದೆರಡು ಸಲ ಪೊಲೀಸರು ಬಂದು ಹೋಗುವುದು ಬಿಟ್ಟರೆ ಮತ್ತೆ ಅದೇ ವರಾತ ಮುಂದುವರೆಯುತ್ತಿತ್ತು. ಒಂದೆರಡು ದಿನ ಎಲ್ಲವು ಸರಿ ಇದ್ದಂತೆ ತೋರುತ್ತಿತ್ತು ಮತ್ತೆ ಅದೇ ನೈಟ್ ರಾಗ ಶುರು ಮಾಡುತ್ತಿದ್ದ ನಮ್ಮ ಬ್ಯಾಚೆಲರ್ ಮಹಾನುಭಾವ. ಮನೆ ಮಾಲೀಕರಿಗೆ ಹೇಳಿದರೆ ಸುಮ್ಮನೆ ದೂರು ಕೊಡ್ತಿರಾ ಅಂತಾ ತಿಮ್ಮನಿಗೆ ತಿರುಗಿ ದಬಾಯಿಸುತ್ತಿದ್ದರು. ಅವರಿಗೇನು ಬಾಡಿಗೆ ಬಂದು ಬ್ಯಾಂಕಿನಲ್ಲಿ ದುಡ್ಡು ತುಂಬಿದರೆ ಆಯಿತು. ದೀಪಾವಳಿಯಂತಹ ಉತ್ತಮ ದಿನಗಳನ್ನು ಬಿಟ್ಟಿಲ್ಲ ಇವನ ಕುಡಿಯುವ ಹಬ್ಬ.
ಅಂದೊಮ್ಮೆ ಕಂಠ ಪೂರ್ತಿ ಕುಡಿದು, ಫ್ಲಾಟಿನ ಡಸ್ಟ್-ಬಿನ್ ಬೀರ್ ಬಾಟಲಿಯ ಅವಶೇಷಗಳಿಂದ ತುಂಬಿಹೋಗಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಬಾಡಿಗೆ ತುಂಬಿಸುತ್ತಿದ್ದ ಇವನಿಂದಾಗಿ ಕಾಂಚಾಣ ಎಣಿಸುತ್ತಿದ್ದ ಮನೆ ಮಾಲಕನಿಗೆ ಇದೆಲ್ಲ ಕ್ಯಾರೇ ಇಲ್ಲ. ಮಾಲಕ ಕೂಡಾ ಇವನ ಸಮರ್ಥನೆಯಲ್ಲಿ ಮುಳುಗಿಹೋಗುತ್ತಿದ್ದ. ಒಟ್ಟಾರೆ ಇವನಿಗೆ ಸದಾ ಗುಂಡು, ಮಾಲಿಕನಿಗೆ ಮೂಟೆ ದುಡ್ಡು. ತಿಮ್ಮ ಮತ್ತು ಅವನ ಹೆಂಡತಿ ನಿಂಗಿ ರಾತ್ರಿ ನಿದ್ರಾಹೀನತೆ. ಕೊನೆಗೂ ಇವನ ಕಾಟ ತಾಳಲಾರದೆ ಬೆಡ್-ರೂಮಿನಿಂದ ಹಾಲಿಗೆ ಮಲಗುವ ಕೋಣೆಯನ್ನು ಶಿಫ್ಟ್ ಮಾಡಿಕೊಂಡಿದ್ದರು. ಚಳಿಗಾಲ ಬೇರೆ. ಫ್ಯಾನ್ ಹಾಕಿಕೊಳ್ಳೋದು ದೂರದ ಮಾತು. ಇಲ್ಲವಾದಲ್ಲಿ ಫ್ಯಾನ್ ಶಬ್ದದಿಂದ ಸ್ವಲ್ಪ ನೆಮ್ಮದಿಯಾಗಿ ಮಲಗಬಹುದಿತ್ತು.
ಟಿಂಗ್...... ಟಾಂಗ್
"ಸಾಬ್ ಆಪ್ಕೋ ಬುಲಾ ರಹೇ ಹೇನ್" ಕಾವಲುಗಾರ ಅಜಿತ್-ಸಿಂಗ್ ತಿಮ್ಮನನ್ನು ಉದ್ದೇಶಿಸಿ ಮಾತನಾಡಿದ.
"ಕಿಸ್ಕೇಲಿಯೇ ಭಯ್ಯಾ" ಎಂದು ತಿಮ್ಮ ಮರು ಪ್ರಶ್ನಿಸಿದನು.
"ಪತಾ ನಹೀ ಸಾಬ್. ರಂಜನ್ ಸಾಬ್ ಆಪ್ಕೋ ಬುಲಾನೆಕೇಲಿಯೆ ಕಹಾ ಮುಜೆ"
"ಟೀಕ್ ಹೇ ಆತಾ ಹೂನ್" ಎಂದು ಗುಂಡಾ ಅಲ್ಲೇ ಇದ್ದ ಅಂಗಿಯನ್ನು ಸಿಕ್ಕಿಸಿಕೊಂಡು ಹೊರನಡೆದನು.
"ಬಾಗ್ಲು ಹಾಕೊಳೇ .. ಏನೋ ಕರಿತಾ ಇದಾರಂತೆ ಹೋಗಿ ಬರ್ತಿನಿ" ಎಂದು ತಿಮ್ಮ ತನ್ನ ಮಡದಿ ನಿಂಗಿಗೆ ತಿಳಿಸಿ ಲಿಫ್ಟ್ ಬಳಿ ನಿಂತ
ಏನಪ್ಪಾ ಆಯಿತು ಒಮ್ಮೆಲೆ ಎಂದು ಮನಸಿನಲ್ಲೇ ಯೋಚಿಸತೊಡಗಿದ ಗುಂಡ. ನಾಲ್ಕನೆಯ ಮಹಡಿಯಿಂದ ಲಿಫ್ಟ್ ಮುಖಾಂತರ ಕೆಳಗಿಳಿದ ತಿಮ್ಮ ಬಾಗಿಲು ತೆರೆದಂತೆ ಪೊಲೀಸ್ ದರ್ಶನವಾಯಿತು. ತಿಮ್ಮ ಒಮ್ಮೆಲೇ ಹೆದರಿದ್ದು ಪೊಲೀಸ್ ಕೂಡಾ ಗಮನಿಸಿದರು. ಅಲ್ಲೇ ಇದ್ದ ಸಂಘದ ಅಧ್ಯಕ್ಷ ರಂಜಿತ್ "ಹೆಲೋ ತಿಮ್ಮ, ಮೀಟ್ ಹಾನರೆಬಲ್ ಎಸ-ಐ ಆಫ್ ದಿಸ್ ಏರಿಯಾ ಮೀ.ರುದ್ರೇಶ್. ಪಕ್ಕದ ಮನೆಯ ಹುಡುಗನ ರಂಪಾಟದ ಬಗ್ಗೆ ನಿಮ್ಮತ್ರ ಸ್ವಲ್ಪ ವಿವರ ಬೇಕಂತ ಕರಿಸಿದ್ದಾರೆ. ಸೊ, ಕೈಂಡ್ಲಿ ಸಹಕರಿಸಿ"
ಇಲ್ಲಿಯವರೆಗೆ ಗಾಬರಿಯಾಗಿದ್ದ ತಿಮ್ಮ ದೀರ್ಘ ನಿಟ್ಟುಸಿರುಬಿಟ್ಟ. ಇನ್ನಾದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅಂತಾ ಅವನ ಆಶೆಯಾಗಿತ್ತು.
"ಒಹ್ ವೈ ನಾಟ್ ಇಂಸ್ಪೆಕ್ಟರ್!! ಖಂಡಿತವಾಗಿ ಅವನಿಂದ ನಮಗೆ ಹೆಚ್ಚಿಗೆ ತೊಂದರೆ ಆಗ್ತಿರೋದು ಯು ನೋ! ಇಂಸ್ಪೆಕ್ಟರ್ ಸರ್, ಮಾತುಕತೆ ಶುರು ಮಾಡಬಹುದಾ?" ಎಂದು ಗಂಭೀರ ಸ್ವರದಲ್ಲಿ ತನ್ನ ಸಮ್ಮತಿಯನ್ನು ಸೂಚಿಸಿದನು ತಿಮ್ಮ.
ಇಂಸ್ಪೆಕ್ಟರ್: ನಾನು ಕೆಲವೊಂದು ಸಿಂಪಲ್ ಪ್ರಶ್ನೆಗಳನ್ನ ಕೇಳ್ತೀನಿ. ಅದಕ್ಕೆಲ್ಲಾ ಪ್ರಾಮಾಣಿಕ ಉತ್ತರ ನೀಡಿ.
ತಿಮ್ಮ: ಆಫ್-ಕೋರ್ಸ್ ಸರ್
ಇಂಸ್ಪೆಕ್ಟರ್: ನೀವು ಇಲ್ಲಿಗೆ ಬಂದು ಎಷ್ಟು ಸಮಯ ಆಯಿತು?
ತಿಮ್ಮ: ಸುಮಾರು ಎರಡು ವರ್ಷ ಆಗಿದೆ.
ಇಂಸ್ಪೆಕ್ಟರ್: ನಿಮ್ಮ ಪಕ್ಕದ ಮನೆಯವ ಬಂದು?
ತಿಮ್ಮ: ಏನೋ ಗೊತ್ತಿಲ್ಲ ಸರ್. ಒಂದು ತಿಂಗಳಿಂದ ರಂಪಾಟ ಸಿಕ್ಕಾಪಟ್ಟೆ ಆಗಿದೆ. ರಾತ್ರಿ ಮಲ್ಕೊಳಕ್ಕೂ ಬಿಡಲ್ಲ. ಒಳ್ಳೆ ನೈಟ್ ಕ್ಲಬ್ ತರ ಆಗಿದೆ ಈ ಫ್ಲಾಟ್. ದಿನಾ ಪೂರ್ತಿ ಟ್ಯೂಬ್-ಲೈಟ್ ಉರಿತಾನೆ ಇರುತ್ತೆ. ಏನ್ ಮಾಡೋದು ಸಂಘದವರಿಗೆ ಹೇಳಿದ್ರೆ ಕ್ಯಾರೇ ಇಲ್ಲ ಅಂತಾರೆ. ಇಷ್ಟಕ್ಕೂ ಅವರಿಗೇನಾಗಬೇಕು :-(
ಇಂಸ್ಪೆಕ್ಟರ್ ರಂಜನ್ ಕಡೆ ಮುಖ ತಿರುಗಿಸಿ ನೋಡಿದಾಗ ಅವರು ತಲೆ ತಗ್ಗಿಸಿದ್ದರು.
ಇಂಸ್ಪೆಕ್ಟರ್: ರಾತ್ರಿ ನಿಖರವಾಗಿ ಏನು ನಡಿತಾ ಇತ್ತು ಸ್ವಲ್ಪ ವಿವರಿಸಿ ಹೇಳಬಹುದಾ?
ತಿಮ್ಮ: ನಿಖರವಾಗಿ ಅನ್ನಕ್ಕೆ ನಾನೇನು ವಿಡಿಯೋ ಕ್ಯಾಮೆರಾ ಇಟ್ಟಿಲ್ಲ ಬಿಡಿ (ನಕ್ಕನು ತಿಮ್ಮ). ಅಂದ ಹಾಗೆ ಚಂದ್ರ ಸಿಂಹ ರಾಶಿ ಪ್ರವೇಶಿಸದಾನೆಂದು ಖಡಾಖಂಡಿತವಾಗಿ ಹೇಳಬಹುದಿತ್ತು. ಏನ್ಕಕೆಂದ್ರೆ ರಾತ್ರಿ ಅಂದು ಸಿಂಹದಂತೆ ಘರ್ಷಿಸುತ್ತಾನೆ ಆ ಆಸಾಮಿ. ಪಂಚಾಗನೂ ಟ್ಯಾಲಿ ಮಾಡಿ ನೋಡಿದ್ದೀವಿ ಸರ್. ಮೊನ್ನೆ ಸೂರ್ಯಗ್ರಹಣ ಕೂಡಾ ಸಿಂಹರಾಶಿಯಲ್ಲೇ ಆಗಿದಲ್ವಾ. ಅವತ್ತು ಅವನದ್ದು ಮಹಾಘರ್ಜನೆ. ನಮ್ಮ ನಿದ್ರೆಗೆ ಪೂರ್ಣ ಗ್ರಹಣ ಹಿಡಿಸಿದ್ದ ಪಾಪಿ. ಚಂದ್ರನ ಜೊತೆ ಸೂರ್ಯ-ರಾಹು ಸೇರಿದ್ದರಿಂದ ಎರಡು ಪೆಗ್ ಜಾಸ್ತಿ ಹಾಕಿದ ಅನ್ಸುತ್ತೆ. ಅವನ ಮಹಾಘರ್ಜನೆಯಿಂದ ನಮಗೆ ಜಾಗರಣೆ. ಬಹುಶಃ ಅವನ ಜಾತದಕದಲ್ಲಿ ಚಂದ್ರ ಸಿಂಹ ರಾಶಿಯ ಗಂಡಾಂತದಲ್ಲಿ ಇರಬೇಕು ಅದಿಕ್ಕೆ ಚಂದ್ರ ಸಿಂಹ ರಾಶಿ ಹೊಕ್ಕ ಕೂಡಲೇ ನಮಗೆ ಇಲ್ಲಿ ಗಂಡಾಂತರ ಕಾದಿರುತ್ತೆ!
ಇಂಸ್ಪೆಕ್ಟರ್ (ಕೋಪದಿಂದ): ಸ್ಟಾಪ್ ಇಟ್ ಮಿ.ತಿಮ್ಮ. ಬೀ ಸೀರಿಯಸ್ ಐ ಸೇ!!
ರಂಜನ್: ಮಿ.ತಿಮ್ಮ ಸರಿಯಾಗಿ ಮಾತಾಡ್ರಿ.
ತಿಮ್ಮ: "ಏನ್ ಸರ್. ಕಷ್ಟ ಇದ್ದಾಗ ಸುಮ್ನೆ ಇರೋರು ಈಗ ಏನು ಅಧಿಕಾರ ಚಲಾಯಿಸ್ತೀರಾ? ನಿಮಗೆ ಮಾತಾಡೋ ಹಕ್ಕಿಲ್ಲ. ಆಚೆ ಸರಿರಿ ಮಧ್ಯ ಮಾತಾನಾಡಬೇಡಿ!" ಅಂತ ರಂಜನ್ ಗೆ ತಿರುಗೇಟು ನೀಡಿದ ತಿಮ್ಮ.
ತಿಮ್ಮ (ಇಂಸ್ಪೆಕ್ಟರ್ ಉದ್ದೇಶಿಸಿ): ಸರಿ ಸಾರ್ ಹೇಳ್ತಿನಿ ಕೋಪ ಮಾಡ್ಕೋಬೇಡಿ. ನಮ್ಮ ಕಷ್ಟ ಕೇಳೋರಿಲ್ಲ ಅದಿಕ್ಕೆ ನಮಿಗೆ ನಾವೇ ಹಾಸ್ಯ ಮಾಡಿಕೊಂಡು ಕಾಲ ದೂಡುತ್ತಾ ಇದೀವಿ. ಎಕ್ಸ್ಯಾಟ್ಲಿ ಏನು ಆಗ್ತಿತ್ತು ಅಂತಾ ಗೊತ್ತಿಲ್ಲ. ಹುಡುಗ್ರು ಹುಡಿಗೀರು ಸೇರೋದು. ಗಲಾಟೆ ಮಾಡಿಕೊಂಡು ಪಾರ್ಟಿ ಮಾಡೋದು. ಅದೇ ಶೋಕಿ ಅಲ್ವಾ ಈಗಾ! ನಾವೆಲ್ಲಾ ಹಳೆ ಮಂದಿ ಅವರೆಲ್ಲಾ ಮಾಡರ್ನ್ ಮಂದಿ. ತೊಂದರೆ ಕೊಡೋದೇ ಈಗಿನ ಟ್ರೆಂಡ್ ನೋಡಿ. ಹಗಲು ರಾತ್ರಿ ಆಗುತ್ತೆ, ರಾತ್ರಿ ಹಗಲು ಆಗುತ್ತೆ ಅವರಿಗೆ. ನಮಗೆ ಅಂತೂ ನಿದ್ದೆ ಅನ್ನೋದು ಮರೀಚಿಕೆ ಆಗಿದೆ. ಇವರು ತುಂಬಾ ಬಾಡಿಗೆ ಕಟ್ಟುತ್ತಾರೆ ಅಂತಾ ಮಾಲೀಕರು ಕೂಡಾ ತೆಪ್ಪಗೆ ಇದ್ದಾರೆ. ಅವರು ನಮಗೆ ದೂರುತ್ತಾರೆ ನೋಡಿ. ಈ ಏರಿಯಾ ಬಾಡಿಗೆ ಜಾಸ್ತಿ ಬರಲ್ಲ ಅದಿಕ್ಕೆ ಮನೆ ಮಾಲೀಕರು ಕೂಡಾ ಇವರ ರಂಪಾಟವನ್ನ ಸಮರ್ಥಿಸಿಕೊಳ್ತಾರೆ. ಉತ್ತರ ಭಾರತದವರು ಅಲ್ವಾ ದುಡ್ಡು ಬೇಕಾದಷ್ಟು ಇದೆ. ಪುಣ್ಯಕ್ಕೆ ನಾಯಿ ಸಾಕಿಲ್ಲ ಪುಣ್ಯಾತ್ಮ. ಇಲ್ಲಾಂದ್ರೆ ಬೆಳಗ್ಗೆನು ಅಧೋಗತಿ ಆಗ್ತಿತ್ತು.
ಇಂಸ್ಪೆಕ್ಟರ್: hmmm.. ಹಾಗೇನೋ ವಿಷಯ. ನೀವು ಯಾವತ್ತಾದ್ರೂ ಇಂತ ಚಟುವಟಿಕೆಗಳಿಗೆ ಮುಖಾಮುಖಿಯಾಗಿ ಆಕ್ಷೇಪ ವ್ಯಕ್ತಪಡಿಸಿದ್ದೀರಾ?
ತಿಮ್ಮ: ಖಂಡಿತಾ ಇಲ್ಲ ಸರ್. ಹಾಗೇನು ಮಾಡಿದ್ರೆ ಕುಡಿದಿರೋ ಮತ್ತಿನಲ್ಲಿ ಹೊಡೆದು ಬಿಡ್ತಾರೆ ಅಷ್ಟೇ. ನಾನು ಯಾವಾಗಲೂ ನನ್ನ ಮನೆ ಮಾಲಕರ ಮೂಲಕ ಅಥವಾ ಅಪಾರ್ಟಮೆಂಟ್ ಅಧ್ಯಕ್ಷರ ಮೂಲಕ ದೂರು ಸಲ್ಲಿಸೋದು. ಆದರೂ ಏನು ಆಗಿಲ್ಲ ಅನ್ನೋದು ಬೇರೆ ವಿಷಯ. ಹಾ ಒಂದು ನೆನಪಿದೆ. ಒಮ್ಮೆ ಕಾವಲುಗಾರ ಅವರ ಮನೆಗೆ ತೆರಳಿ ಸುಮ್ಮನೆ ಇರಲಿಕ್ಕೆ ವಿನಂತಿಸಿದ್ದ. ಆದ್ರೆ ಇವರುಗಳು ಮರ್ಕಟ ಸುರಾಪಾನ ಮಾಡಿದಂತೆ, ಮಂಗನಂತೆ ನಗಾಡಿಕೊಂಡು ಅವನನ್ನೇ ಗೋಳು ಹೋಯ್ಕೊಂಡ್ರು ಅನ್ನಿಸ್ಸುತ್ತೆ!
ಇಂಸ್ಪೆಕ್ಟರ್: ಒಹೋ ಐ ಸೀ.. ಇದು ಯಾವಾಗ್ ಆಯಿತು ಗೊತ್ತಾ?
ತಿಮ್ಮ: ೩ ವಾರ ಹಿಂದೆ ಅನ್ನಿಸುತ್ತೆ. ಅವನ ಬರ್ತ್-ಡೇ ಇತ್ತು ಅವನ.
ತಿಮ್ಮ: ನಾಲ್ಕೈದು ದಿನದಿಂದ ಹೆದ್ರುಕೊಂಡಿದ್ದಾನೆ ಅನ್ಸುತ್ತೆ ಸರ್. ಲೈಟ್ ಆಫ್ ಮಾಡ್ತಾನೆ ಆದ್ರು ಗಲಾಟೆ ಮಾತ್ರ ನಿಂತಿಲ್ಲ. ಈ ಚಳಿಯಲ್ಲಿ ಫ್ಯಾನ್ ಹಾಕೊಂಡು ಮಲಗೋ ಸನ್ನಿವೇಶ ಬಂದಿದೆ ನೋಡಿ. ಕಡೆಗೆ ಮಲಗುವ ಕೋಣೆಯನ್ನು ಹಾಲ್-ಗೆ ಶಿಫ್ಟ್ ಮಾಡಿದ್ದೀವಿ. ಆದರು ಒಂದೆರಡು ದಿನ ಏನೋ ಕೆಟ್ಟು ವಾಸನೆ ಹೊಡಿತಾ ಇತ್ತು. ಕಸದ ಬುಟ್ಟಿಯಲ್ಲಿ ಅವನ ಕುಡಿತದ ಬಾಟಲಿನ ಅವಶೇಷಗಳು ಕಾಣಿಸ್ತಾ ಇಲ್ಲ. ಬಹುಶಃ ಕಸ ಎಲ್ಲಾ ಮನೆಯೊಳಗೇ ಇಟ್ಟುಕೊಂಡು ನಮ್ಮನ್ನ ಇಲ್ಲಿಂದ ಓಡಿಸೋ ಯೋಜನೆ ಮಾಡಿದ್ದಾನೆ ಅನ್ನಿಸುತ್ತೆ. ಗೆಳೆಯರನ್ನ ಒಳಗೆ ಬಿಡ್ತಾ ಇಲ್ಲ ಅಲ್ವಾ ಅದಿಕ್ಕೆ ನಮ್ಮ ಮೇಲೆ ಸೇಡು ತೀರಿಸಿಕೊಳ್ಳೋ ಪ್ಲಾನ್ ಇರಬೇಕು. ಅಂದಹಾಗೆ ನಿನ್ನೆ ಬೆಳಗ್ಗೆ ಅವನ ಗೆಳೆಯರು ಬಂದು ಏನೋ ಗುಸುಗುಸು ಮಾತಾಡ್ತಾ ಇದ್ರು. ಏನೋ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿದ್ದಾರೇನೋ?
ತಿಮ್ಮ: ಮತ್ತೊಂದು ವಿಷಯ. ಇತ್ತೀಚಿಗೆ ರಾತ್ರಿ ಒಬ್ಬನೇ ಬೊಬ್ಬೆ ಹೊಡೆಯೋದು ಕೇಳುತ್ತೆ. ಲೈಟ್ ಆಫ್, ಮ್ಯೂಸಿಕ್ ಇಲ್ಲ, ಬಾಟ್ಲಿ ಶಬ್ದ ಇಲ್ಲ, ಸ್ನೇಹಿತರು ಇಲ್ಲ. ತುಂಬಾ frustrate ಆದಂಗೆ ಕಾಣಿಸ್ತಾನೆ. ಹಾ ಕೇವಲ ೩೦ ನಿಮಿಷ ಅಷ್ಟೇ. ಆದರಿಂದ ತೊಂದರೆ ಇಲ್ಲ.
ಇಂಸ್ಪೆಕ್ಟರ್: ಓಕೆ ಓಕೆ!! ಅದೆಲ್ಲಾ ಇರಲಿ. ಅಂದಹಾಗೆ ನೀವು ಮಲಗೋ ಕೋಣೆನ ಹಾಲ್-ಗೆ ಶಿಫ್ಟ್ ಮಾಡಿದ್ರಿ ಅಂದ್ರಲ್ಲಾ? ಅಲ್ಲಿ ಕೂಡಾ ಶಬ್ದ ಜೋರಾಗಿ ಕೇಳಿಸ್ತಾ ಇತ್ತಾ?
ತಿಮ್ಮ: ಅಷ್ಟೊಂದು ಇಲ್ಲ. ಮಧ್ಯೆ ಕೆಲವೊಮ್ಮೆ ಶೌಚಕ್ಕೆ ಹೋಗುವಾಗ ಕೇಳಿಸ್ತಾ ಇತ್ತು. ನಿನ್ನೆ ಸ್ವಲ್ಪ ಜಾಸ್ತಿನೇ ಇತ್ತು. ನನ್ನ ಹೆಂಡತಿ ಎಬ್ಬಿಸಿ ಇಬ್ರು ಕಿಟಕಿ ಆಚೆ ನೋಡಿದ್ವಿ. ಆದ್ರೆ ಕತ್ತಲು ಇದ್ದಿದ್ರಿಂದ ಏನು ಕಾಣಿಸ್ತಾ ಇರಲಿಲ್ಲ. ಆದ್ರೆ ಸ್ವಲ್ಪ ಹೊತ್ತಲ್ಲಿ ಶಾಂತ ಆದ ಪಾರ್ಟಿ. ಅದೇನೋ ಹಿಂದಿಯಲ್ಲಿ ಧೋಕಾ ಧೋಕಾ ಅಂತಾ ಹೊಡೀತಾನೆ ಸರ್. ಮೊನ್ನೆ ಒಂದಷ್ಟು ಹುಡುಗ್ರು ಬಂದಿದ್ರಲ್ಲ, ಏನೋ ಆಗಿರಬೇಕು.
ಇಂಸ್ಪೆಕ್ಟರ್: ಹೊ ಐ ಸಿ. ಹಾಗಾ ವಿಷಯ. ಅರ ಯು ಶ್ಯೂರ್? ಅವನೇ ಅಂತಾ?
ತಿಮ್ಮ: ಹೂ ಸರ್. ಸಂದೇಹಾನೆ ಇಲ್ಲ. ಅದೇ ಟಾಪಿಕ್ಕು ಕುಡಿಯೋ ಮತ್ತಿನಲ್ಲಿ ನಮಗೆ ಕೇಳಿ ಕೇಳಿ ಸಾಕಾಗಿಬಿಟ್ಟಿದೆ. ಅದು ಸರಿ.. ಈ ವಿಷಯಕ್ಕೆ ಇಷ್ಟೊಂದು ವಿಚಾರಣೆ ಯಾಕೆ ಅಂತಾ ಕೇಳಬಹುದಾ?
ಇಂಸ್ಪೆಕ್ಟರ್: ಮೀ.ತಿಮ್ಮ.. ಸ್ವಲ್ಪ ಹತ್ರ ಬನ್ನಿ..
(ಇಂಸ್ಪೆಕ್ಟರ್ ತಿಮ್ಮನ ಕಿವಿಯ ಬಳಿ ಸುಮಾರು ೨ ನಿಮಿಷ ಪಿಸುರಿದರು)
ಇಂಸ್ಪೆಕ್ಟರ್ (ಸ್ವಲ್ಪ ಗಂಭೀರ ಮುಖದಿಂದ): ನಿಮಗೆ ಅವನ ಮೇಲಿರೋ ದ್ವೇಷ ನೋಡಿದ್ರೆ ನೀವೆ ಯಾಕೆ....??
ತಿಮ್ಮ: ಏ... ಏ... ಏ... ಏನ್ ಹೇಳ್ತಾ ಇದಿರಾ ಸರ್. ನಾ.. ನಾ.. ನಾವು ಕಂಪ್ಲೇಂಟ್ ಮಾತ್ರ ಕೊಟ್ಟಿದ್ದು. ತುಂಬಾ ಸಭ್ಯರು ನಾವು ಸ.. ಸ.. ಸಾರ್! ಆದ್ರೂ ನಿನ್ನೆ ತಾನೇ ಅವನು ಬೊಬ್ಬೆ ಹೊಡೆದಿದ್ದು.. ಅಯ್ಯೋ...
ಇಂಸ್ಪೆಕ್ಟರ್: ಹ ಹ ಹಾ. ಸುಮ್ನೆ ತಮಾಷೆಗೆ ಹೇಳ್ದೆ ಅಷ್ಟೇ! ಗಾಬರಿ ಮಾಡ್ಕೋಬೇಡ್ರಿ. ಪಕ್ಕದ ಮನೆಯವರು ಅಂತಾ ಕರೆದಿದ್ದು ಅಷ್ಟೇ! ಸಂಘದವರು ಸುಮ್ಮನೆ ಅಪಾರ್ಟಮೆಂಟ್ ಹೆಸರು ಹಾಳಾಗಬಾರದು ಅಂತಾ ಸೀದಾ ಪೊಲೀಸ್ ಗೆ ಹೇಳಿದ್ದಾರೆ. ಏನಿವೆಸ್, ಥ್ಯಾಂಕ್ಸ್ ಫಾರ್ ಇಂಫಾರ್ಮಶನ್ ತಿಮ್ಮ ಅವರೇ. ನೀವಿನ್ನು ಹೊರಡಬಹುದು.
ಇಂಸ್ಪೆಕ್ಟರ್ ಮಾತನ್ನ ಕೇಳಿದ ತಿಮ್ಮನ ಎದೆ ಜಲ್ಲೆಂದಿತು. ತಕ್ಷಣ ಧರಧರನೆ ನಾಲ್ಕು ಮಹಡಿ ಮೆಟ್ಟಿಲು ಹತ್ತಿ ಮನೆಗೆ ತಲುಪಿದವನೆ ಮಡದಿಯನ್ನು ಉದ್ದೇಶಿಸಿ ಗಾಬರಿಯಿಂದ "ಲೇ… ನಿನ್ನ ಸ್ನೇಹಿತೆಯ ಮನೆ ಈಗಲೂ ಖಾಲಿ ಇದೆ ತಾನೆ?।"
"ಹೂ… ರಿ… ಇವತ್ತು ಬೆಳಗ್ಗೆ ತಾನೆ ಫೋನ್ ಮಾಡಿದ್ಲು. ಯಾಕ್ರಿ ಏನಾಯ್ತು? ತುಂಬಾ ಬೆವರಿದ್ದೀರಾ" ಎಂದು ನಿಂಗಿ ಕೂಡಾ ಆತಂಕದಿಂದ ನುಡಿದಳು
ತಿಮ್ಮ ಅವಸರದಲ್ಲಿ ಫೋನ್ ಎತ್ತಿಕೊಂಡು ಗೂಗಲ್ ನಲ್ಲಿ ಸರ್ಚ್ ಹೂಡಿದನು. ಸಿಕ್ಕಿದ ನಂಬರ್ ಫೋನಾಯಿಸಿ "ಹ…ಹ… ಹಲೋ… ಪ್ಯಾಕರ್ಸ್ ಆಂಡ್ ಮೂವರ್ಸ್ ಅಲ್ವಾ? ನಾಲೆ ನಮ್ಮ ಮನೆ ಶಿಫ್ಟ್ ಮಾಡಬೇಕು. ಹೌದು ನಾಳೆನೇ ಆಗಬೇಕು. ಜಾಸ್ತಿ ದುಡ್ಡು ಆದ್ರೂ ಪರ್ವಾಗಿಲ್ಲ ಆದಷ್ಟು ಹೆಚ್ಚು ಜನರನ್ನು ಕಳಿಸಿಕೊಡಿ. ಕೆಲಸ ಬೇಗ ಆಗಬೇಕು. ತಿಳಿತಾ…" ಎಂದು ಹೇಳಿದವನೇ ಫೋನ್ ಇಟ್ಟ.
ಮಾತು ಮುಗಿಯುವಷ್ಟರಲ್ಲಿ ಫೋನ್ ಬೆವರಿನಿಂದ ತೊಯ್ದು ಹೋಗಿತ್ತು. ಹೇಮಂತ ಋತುವಿನಲ್ಲಿ ಮರದ ಎಲೆಗಳು ಉದುರಿದಂತೆ ಅವನ್ ಮುಖದಿಂದ ಬೆವರಿನ ಹನಿಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿತ್ತು
ಇತ್ತ ಮಡದಿ ಕೂಡಾ ಗಾಬರಿಯಿಂದ ಸೌಟು ಹಿಡಿದುಕೊಂಡು ಅಡುಗೆ ಮನೆಯಿಂದ "ಏನಾಯ್ತು ರೀ. ನಿಮ್ಮ ಮೈ ಪೂರ್ತಿ ಬೆವರಿನಿಂದ ತೊಪ್ಪೆ ಆಗಿದೆ. ಯಾಕೆ ಅಂತಾ ಹೇಳಿ" ಎಂದು ಗಂಡನನ್ನು ಒತ್ತಾಯಿಸಿದಳು
ತಿಮ್ಮ ತೊದಲು ನುಡಿಯಲ್ಲಿ "ಪೋಲಿಸ್ ಬಂದಿದ್ರು ಕಣೆ" (ಎಂಜಲು ನುಂಗುತ್ತ್ತಾ).
"ಅಯ್ಯೋ ನಾವೇನು ಮಾಡಿದ್ವಿ ಪೋಲಿಸರು ಕಣ್ಣು ಹಾಕೋವಷ್ಟು" ಗಾಬರಿಯಿಂದ ಪ್ರಶ್ನಿಸಿದಳು ನಿಂಗಿ
"ಸ್ವಲ್ಪ ಸುಮ್ಮನಿರೆ… ಅದೇನೆಂದರೆ, ಕಳೆದ ವಾರ ಪಕ್ಕದ ಮನೆಯವನ ರಂಪಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿತ್ತು ಅಲ್ವಾ… ಅದಿಕ್ಕೆ ನಾವು ದೂರು ಕೊಟ್ಟಿದ್ವಿ ನೆನಪಿದೆ ತಾನೆ. ಈಗ ಪೋಲಿಸ್ ಹೇಳ್ತಾರೆ" ಮಾತೆ ಬರದವನಂತೆ ತಿಮ್ಮನ ಬಾಯಿ ನಿಂತಿತು.
"ಏನಾಯ್ತು ಹೇಳ್ರಿ ಮುಂದೆ" ಹೆಂಡತಿ ಗಾಬರಿ ಮತ್ತು ಕುತೂಹಲದಿಂದ ಕೇಳಿದಳು
"ಪೋಲಿಸ್ ಹೇಳ್ತಾ ಇದಾರೆ ಅದು ಸಹಜ ಸಾವಲ್ಲ ಅವನು ೧೦ ದಿನ ಮುಂಚೆನೆ ಸಿಕ್ಕಾಪಟ್ಟೆ ಕುಡಿದು ಸತ್ತುಹೋಗಿದ್ದಾನೆ ಅಂತೆ. ಅದು ಸಹಜ ಸಾವೋ ಅಥಾವ ಸ್ನೇಹಿತರ ಕುತಂತ್ರವೋ ಅಂತ ತಿಳಿದುಕೊಳ್ಳುವುದಕ್ಕೆ ಪೋಲಿಸ್ ನವರು ವಿಚಾರಣೆ ಮಾಡಕ್ಕೆ ಬಂದವ್ರೆ. ಯಾವುದೋ ಹುಡುಗಿಗೋಸ್ಕರ ಇವನಿಗೂ ಸ್ನೇಹಿತರಿಗೂ ಯಾವಗಲೂ ಜಗಳ ಆಗ್ತಾ ಇತ್ತಂತೆ" ಗುಂಡ ದುಗುಡದಿಂದ ನುಡಿದನು.
ತಿಮ್ಮ ಮಾತು ಮುಂದುವರೆಸುತ್ತಾ "ಈಗ ಆ ಮನೆಯಲ್ಲಿ ಯಾ… ಯಾ… ಯಾರು ಇಲ್ವಂತೆ. ನಿನ್ನ ಸ್ನೇಹಿತಿಗೆ ಫೋನಾಯಿಸಿ ನಾವೇ ಬರ್ತೀವಿ ಅಂತ ಹೇಳು. ನನಗೆ ಭಯ ತಡ್ಕೋಳಕ್ಕೆ ಆಗದೆ, ಲಿಫ್ಟ್ ಬದಲು ಮೆಟ್ಟಿಲು ಹತ್ತೆ ಬಂದೆ ಮಾರಾಯ್ತಿ?!! ಎಲ್ಲಿ ಪಾರ್ಟಿ ಲಿಫ್ಟ್ ಅಲ್ಲೂ ಒಕ್ಕರಿಸಿಕೊಳ್ತಾನೋ ಅಂತಾ" ಎಂದು ಹೇಳಿ ಮತ್ತೆ ಬೆವರನ್ನು ಒರೆಸಿಕೊಂಡನು.
ನಿಂಗಿಯ ಇದನ್ನು ಕೇಳಿಸಿಕೊಂಡ ಮರುಕ್ಷಣವೇ "ಮತ್ತೆ ನಿನ್ನೆ/ಮೊನ್ನೆ ಮಧ್ಯರಾತ್ರಿ ಕೇಳಿದ್ದ ಅವನ ಶಬ್ಧ, ಗಲಾಟೆ ಎಲ್ಲಾ… ಅಯ್ಯಯ್ಯೋ?!!!"
(ಸೌಂಟು ಕೈಯಿಂದ ಜಾರಿ ಅದರ ಶಬ್ಧ ಮನೆಯ ತುಂಬಾ ಪ್ರತಿಧ್ವನಿಸಿತು. ಸ್ವಲ್ಪ ಹೊತ್ತು ಸ್ತಬ್ಧಳಾದ ನಿಂಗಿಯನ್ನು ಕಂಡು ತಿಮ್ಮನ ಗಾಬರಿ ಇಮ್ಮಡಿಯಾಯಿತು)
No comments:
Post a Comment