Thursday, May 15, 2025

ಹೇರ್ ಡ್ರೈಯರ್ ಯಾಕೆ? ಏಣಿ ಇದ್ಯಲ್ಲಾ!

ಬಹಳ ದಿನಗಳ ಬಳಿಕ ನಿಂಗಿ ತಲೆಸ್ನಾನ ಮಾಡಿದ್ದಳು. ಏನ್ ಮಾಡೋದು ದಿನ ಬೆಳಗಾದರೆ ಶುಭಕಾರ್ಯಕ್ಕೆ ಹೋಗೋದು. ಪುರುಸೊತ್ತು ಇಲ್ವೇ ಇಲ್ಲ. ಅಪರೂಪಕ್ಕೆ ಒಂದು ದಿನ ಯಾವುದೇ ಕಾರ್ಯಕ್ರಮ ಇರಲಿಲ್ಲ. ಇದ್ದರೂ ನಿಂಗಿಗೆ ಹೋಗಲು ಕಷ್ಟವಾಗಿತ್ತು. ದಿನಾ ಭರ್ಜರಿ ಊಟ ಮಾಡಿ ಹೊಟ್ಟೆ ಕೆಡಿಸಿಕೊಂಡಿದ್ದಳು. ಗುಂಡನಿಗೋ ಪಾಪ ದಿನ ಅನ್ನ-ಸಾರು-ಮೊಸರು combination ತಿಂದು ತಿಂದು ಬೇಸತ್ತಿದ್ದ. ಹೇಗೂ ಹೊಟ್ಟೆ ಸರಿ ಇರಲಿಲ್ಲ ಅಂತಾ ನಿಂಗಿಯನ್ನು ಬಲವಂತವಾಗಿ ಮನೆಯಲ್ಲಿ ಕುಳ್ಳಿರಿಸಿದ. ನಿಂಗಿಗೆ ಹೊಟ್ಟೆ ಸರಿ ಇಲ್ಲದ ಕಾರಣ ಅವತ್ತು ಗಂಜಿ ಉಣ್ಣೋ ಹಣೆ ಬರಹ. ಏನ್ ಮಾಡೋದು ತಿನ್ನೋದು ಅಂತಾ ತನ್ನ ವಿಧಿಯನ್ನು ಅಪ್ಪಿಕೊಂಡಿದ್ದ ಗುಂಡ.. 

ಬೆಳಗ್ಗೆ ಚಹಾ ಸವಿಯುತ್ತಾ ನಿಂಗಿ "ಅಬ್ಬಬ್ಬಾ ಏನು ಬೆವರು ಅಂತೀರಾ. ಒದ್ದೆಯಾದ ತಲೆ ಕೂಡಾ ಬೆವರಿನಲ್ಲಿ ಒದ್ದೆ ಆಗಿದೆ. ಫ್ಯಾನ್ ಕೆಳಗೆ ಕೂತರೂ ಒಣಗ್ತಾ ಇಲ್ಲ. ಹೇರ್-ಡ್ರೈಯರ್ ಕೂಡಾ ಬೆಂಗಳೂರಲ್ಲೇ ಬಿಟ್ಟು ಬಂದಿದ್ದೇನೆ ನೋಡಿ"

ಮೊದಲೇ ಊಟ-ತಿಂಡಿಯಲ್ಲಿ variety ಇಲ್ಲ ಜೊತೆಗೆ ಮಡದಿ ಗೋಳು ಮಾತನ್ನು ಕೇಳೋಕ್ಕೆ ಗುಂಡನಿಗೆ ತಾಳ್ಮೆ ಸಹ ಇರಲಿಲ್ಲ!

"ಇನ್ನೊಂದು ತಕ್ಕೋಡಕ್ಕೆ ಆಗಲ್ಲ ಕಣೆ! ಬಿಟ್ಟು ಬಂದಿದ್ದು ನಿಂದು ತಪ್ಪು. ಏನು ಎಲ್ಲಾ ಕಡೆ ಎರಡೆರಡು ಕಾಪಿ ಬೇಕಾ ನಿನಗೆ? ಬ್ಯಾಕ್-ಅಪ್ ಎಲ್ಲಾ ಕೊಡ್ಸಕ್ಕೆ ಆಗಲ್ಲ." ಎಂದು ಗುಂಡ ತಟ್ಟನೆ ಮಾರುತ್ತರ ನೀಡಿದನು. 

"ಒಂದು ಕೆಲಸ ಮಾಡು. ಅಲ್ಲಿರೋ ಏಣಿ ತಗೊಂಡು ಬಾ. ಕೂದಲು ಡ್ರೈ ಮಾಡಲು ಉಪಯೋಗ ಆಗುತ್ತೆ" ಅನ್ನೋ ವಿಚಿತ್ರ ಸಲಹೆ ಗುಂಡ ನೀಡಿದನು. 

"ಏನಕ್ರಿ ಕೋಪ ಮಾಡ್ಕೋತೀರಾ. ಅಂದಹಾಗೆ ಏಣಿ ಏನಕ್ಕೆ?!" ನಿಂಗಿ ಆಶ್ಚರ್ಯದಿಂದ ಕೇಳಿದಳು. 

"ಏನು ಇಲ್ಲ. ಏಣಿ ಹತ್ತಿದ್ರೆ ಫ್ಯಾನ್ ಬುಡಕ್ಕೆ ತಲುಪೋಕ್ಕೆ ಆಗುತ್ತೆ. ಜೊತೆಗೆ ಗಾಳಿನೂ ಜೋರಾಗೆ ಬೀಸುತ್ತೆ. ಬೇಗ ಡ್ರೈ ಆಗುತ್ತೆ ನೋಡು. ಇಲ್ಲ ಮಕ್ಳನ್ನು ಕರಿ. ಎರಡು ಬೀಸಣಿಗೆ ರಾಜರಿಗೆ ಬೀಸಿದಂತೆ ನಿನಗೂ ಗಾಳಿ ಹಾಕಕ್ಕೆ ಹೇಳು. ಇಲ್ಲ ಫಂಕ್ಷನ್ ಇರೋವಾಗ ಕೂದಲು ಬಸ್ಸಿನಿಂದ ಹೊರಗೆ ಹಾಕು. ಹೇಗೋ ಬಿಸಿಲು ಜಾಸ್ತಿ ಜೊತೆಗೆ ಗಾಳಿಯಿಂದ ಬೇಗ ಕೂದಲು ಒಣಗುತ್ತೆ. express ಬಸ್ಸಲ್ಲಿ ಹೋದ್ರೆ ಬೇಗ ಒಣಗುತ್ತೆ. shuttle ಆದ್ರೆ problem ನೋಡು. ಪದೇ ಪದೇ ನಿಲ್ಲಿಸ್ತಾನೆ" ಎಂದು ಗುಂಡ ಸಣ್ಣಗೆ ಹಾಸ್ಯ ನುಡಿದನು. 

ನಿಂಗಿ ಒಂದೇ ಸಮನೆ ಚಹಾ ಕುಡಿದು ಸೀದಾ ಲೋಟೆಯನ್ನು ಸಿಂಕಿಗೆ ಎಸೆದಳು. ಒಳಗೆ ಎರಡು ಪಾತ್ರಗಳೂ ಕೂಡಾ ಪರ್ವತದಲ್ಲಿ ಭೂಕುಸಿತ ಆದಂತೆ ಉರುಳಿ ಉರುಳಿ ಭೀಕರ ಸಡ್ಡು ಮಾಡಿದವು. ಗುಂಡನಿಗೂ ಎಲ್ಲಾ ಮನವರಿಕೆ ಆಯಿತು!

Tuesday, May 6, 2025

ಮುಖ ತೋರಿಸಬೇಕೂಂದ್ರೆ ವಿಡಿಯೋ ಕಾಲ್ ಮಾಡು ಸಾಕು!

ಸ್ವಲ್ಪ ದಿನದ ಮಟ್ಟಿಗೆ ಗುಂಡ ಊರಿಗೆ ಬಂದಿದ್ದ. ಹೇಗೋ ಕಷ್ಟ ಪಟ್ಟು ಮ್ಯಾನೇಜರ್ ಪುಸಲಾಯಿಸಿ ೨ ವಾರಕ್ಕೆ permission ಕೇಳಿದ್ದ ಮನೆಯಿಂದ ಕೆಲಸ ಮಾಡಲು. ಗುಂಡನ ಹೆಂಡತಿಗೆ ಮಾತ್ರ ಖುಷಿಯೋ ಖುಷಿ! ದಿನಾಲೂ ಕಾರ್ಯಕ್ರಮಗಳು, ಭರ್ಜರಿ ಊಟ, ಜೊತೆಗೆ ನೆಂಟರ ಜೊತೆ ಸಮ್ಮಿಲನ. ಗುಂಡನಿಗೆ ಮಾತ್ರ ತುಂಬಾ ಹೊಟ್ಟೆ ಉರಿಯುತ್ತಿತ್ತು. ಕೆಲಸ ಬಿಟ್ಟು ಬರಲು ಆಗುತ್ತಿರಲಿಲ್ಲ. ಜೊತೆಗೆ ನಿಂಗಿ ಊಟದ ಮೆನು ಉದುರಿದಾಗ ಗುಂಡನಿಗೆ ಎಲ್ಲಿಲ್ಲದ ಕೋಪ. ನೆಂಟರ ಮನೆಯಿಂದ ಪಾರ್ಸಲ್ ಕೂಡಾ ಬರುತ್ತಿರಲಿಲ್ಲ. ಭರ್ಜರಿ ಊಟ ಮೆದ್ದು ನಿಂಗಿಯ ತೂಕ ಕೂಡಾ ಒಂದು ಮಟ್ಟಿಗೆ ಹೆಚ್ಚಾಗಿತ್ತು. ಗುಂಡನಿಗೆ ಅಣಕಿಸಲು ಅವಕಾಶವೂ ಸಿಗುತ್ತಿತ್ತು. ಇದರಿಂದ ನಿಂಗಿ ಕೆಲವೊಮ್ಮೆ ಕಷ್ಟ ಪಟ್ಟು ಅನ್ನ ಸಾರು ಮೊಸರು ಮಾತ್ರ ತಿಂದಿದ್ದೂ ಇದೆ :-). 

ಎಂದಿನಂತೆ ಒಂದು ದಿನ ನಿಂಗಿ ಗುಂಡನನ್ನು ಉದ್ಧರಿಸುತ್ತ "ರೀ ನಾಳೆ ನನ್ನ ಅಜ್ಜಿ ತಂಗಿ ಮಗಳ ಮಗನಿಗೆ ಮದುವೇ  ಇದೆ. ಅಲ್ಲಿಗೆ ಬಸ್ ಕೂಡಾ ಇಲ್ಲ ಅಂತೆ. ಹೇಗೆ ಹೋಗೋದು ಅಂತಾ ತಿಳಿತಿಲ್ಲ" ಎಂದು ತನ್ನ ಅಳಲು ತೋಡಿಕೊಂಡಳು. 

"ತುಂಬಾ important ಮದುವೆ ನಾ?!" ಎಂದು ಗುಂಡ ಪ್ರಶ್ನಿಸಿದನು. 

"ಹಾಗೇನು ಇಲ್ಲ! ಊರಿಗೆ ಬಂದಿದ್ದೇನೆ ಅಲ್ವಾ ಅದಿಕ್ಕೆ ಮುಖಾ ಆದ್ರೂ ತೋರಿಸಬೇಕು. ಅಂತಾ" ನಿಂಗಿ ಮಾರುತ್ತರ ನೀಡಿದಳು. 

"ಅತ್ತೆಯವರು ಹೋಗ್ತಾರಾ?" ಗುಂಡ ಕೇಳಿದನು. 

"ಅವ್ರಿಗೂ ಕಷ್ಟಾನೇ ರೀ. ವಾಹನ ಇಲ್ಲ. ಬಸ್ ಇಳಿದು ೫ ಕಿ.ಮೀ ರಿಕ್ಷಾದಲ್ಲೇ ಹೋಗಬೇಕು. ರಿಕ್ಷಾ ಕೂಡಾ ವಿರಳ ಅಂತೆ" ಎಂದು ನಿಂಗಿ ಅಸಾಹಾಯಕತೆ ತೋಡಿಕೊಂಡಳು.

"ಹಾಗೆ ಅಲ್ಲ ಕಣೆ. ಅತ್ತೆಯವರು ಹೋಗ್ತಾರೆ. ನಿನಗೆ ಬರಿ ಮುಖ ಮಾತ್ರ ತೋರಿಸಬೇಕು. ಅದಕ್ಕೆ ಒಂದು ಕೆಲಸ ಮಾಡು. ಹೇಗೂ ಸೆಖೆ, ಬೆವರಿನಲ್ಲಿ ಒದ್ದೆಯಾದ ರೇಷ್ಮೆ ಸೀರೆಯಲ್ಲಿ ನಡೆಯೋದು ನಿನಗೆ ಕಷ್ಟ. ಸುಮ್ಮನೆ ಯಾಕೆ energy ನಷ್ಟ ಮಾಡ್ತೀಯ. ಮನೆಯಲ್ಲೇ ಸೀರೆ ಉಟ್ಟು, ಮೇಕಪ್ ಮಾಡಿ, ಆಭರಣಗಳನ್ನು ಹಾಕಿ ಸರ್ವಾಲಂಕಾರದಿಂದ ರೆಡಿಯಾಗು! ಅತ್ತೆಯವರು ನವವಿವಾಹಿತರಿಗೆ ಆಶೀರ್ವಾದ ಮಾಡಲು ಮಾಡುವೆ ಮಂಟಪಕ್ಕೆ ಹೋದಾಗ ನಿನಗೆ ವಿಡಿಯೋ ಕಾಲ್ ಮಾಡಲು ಹೇಳು. ಹೇಗೂ ನಿನಗೆ ಮುಖ ಮಾತ್ರ ತೋರಿಸಬೇಕು ಅಲ್ವಾ.. ವಿಡಿಯೋ ಕಾಲ್ ಅಲ್ಲೇ ನಿನ್ನ ಸೀರೆರೂಪ ದರ್ಶನ ಕೊಟ್ಟು ಅವರಿಗೆ ವಿಶ್ ಮಾಡು. ಸುಲಭದಲ್ಲೇ ಕೆಲಸ ಆಗುತ್ತೆ! ಜೊತೆಗೆ ಭರ್ಜರಿ ಊಟ ತಿಂದು ಸುಮ್ಮನೆ ತೂಕ ಕೂಡ ಜಾಸ್ತಿ ಆಗುತ್ತೆ ಅಲ್ವಾ, ಅದಕ್ಕೆ avoid ಮಾಡೋದು ಒಳ್ಳೇದು! ಹಾಗೆ ಆಭರಣಗಳನ್ನು ರೋಲ್ಡ್-ಗೋಲ್ಡ್ ಮಾತ್ತ್ರ ಹಾಕಿಕೋ! ಯಾರು ಕೇಳಲ್ಲ ನೋಡಲ್ಲ ಆಲ್ವಾ.. ಸುಮ್ನೆ ಯಾಕೆ ಸ್ವಲ್ಪ ಹೊತ್ತಿಗೆ ಅದನ್ನ ಬೆವರಲ್ಲಿ ಒದ್ದೆ ಮಾಡ್ತಿಯಾ!? ಕಪ್ಪು ಆಗೋದು ತಪ್ಪುತ್ತೆ ನೋಡು!" ಎಂದು ಚಟಾಕಿ ಹಾರಿಸಿದನು ಗುಂಡ. 

ಗುಂಡನ ಮಾತನ್ನು ಕೇಳಿದ ತಕ್ಷಣ ನಿಂಗಿ ಸಿಡಿಮಿಡಿ ಗೊಂಡು "ಏನಾದ್ರೂ ಸೊಲ್ಯೂಶನ್ ಹೇಳಿ ಅಂದ್ರೆ, ನಿಮ್ಮ ಡಿಜಿಟಲ್ ಜುಗಾಡ್ ಐಡಿಯಾಗಳು ನನಗೆ ಬೇಕಾಗಿಲ್ಲ" ಎಂದು ಹೊರ ನಡೆದಳು.

"ಸುಮ್ಮನೆ ಹೇಳ್ದೆ ಕಣೆ ಸಿಟ್ಟು ಮಾಡ್ಕೋಬೇಡ" ಎಂದು ಗುಂಡ ಸಮಾಧಾನಿಸಿದರೂ, ನಿಂಗಿ ತುಟಿ ಬಿಚ್ಚಲಿಲ್ಲ.

ಸ್ವಲ್ಪ ಹೊತ್ತಿನ ಬಳಿಕ ಕಾರಿನ ಚಾವಿ ತೆರೆಯಿತು. ಗುಂಡನ ಎಲ್ಲಿಗೋ ಹೋಗಿ ಬಂದನು. "ನೋಡೇ ಫುಲ್ ಪೆಟ್ರೋಲ್ ಹಾಕಿಸಿ ಬಂದಿದ್ದೀನಿ. ಕಾರಲ್ಲಿ ಪಿಕ್-ಅಪ್ ಅಂಡ್ ಡ್ರಾಪ್ ನಾನೇ ಮಾಡ್ತೀನಿ. ಮದುವೆ ಅಟೆಂಡ್ ಮಾಡಲ್ಲ  ಕೆಲಸ ತುಂಬಾ ಇದೆ" ಅಂತಾ ಗುಂಡ ಮಡದಿಗೆ ಸಮಾಧಾನ ಮಾಡಿದನು. ಕಡೆಗೂ ನಿಂಗಿಯ ಮುದುಡಿದ ಕೆನ್ನೆ ಅರಳಿತು. ಸ್ವಲ್ಪ ಹೊತ್ತಿನಲ್ಲಿ ತಂಪಾದ ಪಾನಕ ಕೂಡಾ ಗುಂಡನ ಬಳಿ ತಲುಪಿತು. 


Related Posts Plugin for WordPress, Blogger...