Wednesday, April 8, 2015

ಹಳದಿ ಬಣ್ಣದ ನ್ಯಾನೋ

ಮೊದಲೇ ಚಂಚಲ ಮನಸ್ಸು, ಮಹಾನ್ ದೈವಭಕ್ತ ಜೊತೆಗೆ ಮೂಢನಂಬಿಕೆಯ ದಾಸನಾಗಿದ್ದ. ಸ್ವಲ್ಪ ಕಷ್ಟ ಬಂದರೂ ಅದನ್ನೆದುರಿಸುವ ಬದಲು ದೇವರ ಮೊರೆ ಹೋಗುತ್ತಿದ್ದ. ಬಂದ ಸಂಭಾವನೆಯೆಲ್ಲ ಹುಂಡಿ ಪಾಲಾಗುತ್ತಿತ್ತು. ಸ್ವಲ್ಪ ದಿನದ ಬಳಿಕ ಮನೆ ಬದಲಾಯಿಸುವ ಪ್ರಮೇಯ ಬಂದಿತೆನ್ನಿ. ಅದಕ್ಕೆ ಸಹ ಹುಂಡಿಗೆ ಹಣ ಸುರಿಯಲು ಮರೆಯಲಿಲ್ಲ. ಅಂತು ಇಂತು ದೇವರ ದಯೆಯಿಂದ ಮನೆ ಶಿಫ್ಟ್ ಆಯಿತೆಂದು ಮತ್ತೊಂದು ಬಾರಿ ಹುಂಡಿಗೆ ಹಣ ಹಾಕಿದ. ಹೊಸ ಮನೆಯಲ್ಲಿ ನೆಲೆಗೊಂಡ ನಂತರ ಅಲ್ಲೇ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಪ್ರತಿದಿನ ಭೇಟಿ ಕೊಡಲು ಮರೆಯಲಿಲ್ಲ. ಆರತಿ ತಟ್ಟೆಗೆ ದಿವಸ ೫೦ ರುಪಾಯಿ ಬೀಳುತ್ತಿತ್ತು ಸಹ. ಇದನ್ನೇ ಅಲ್ಲಿನ ಅರ್ಚಕರು ಗಮನಿಸುತ್ತಿದ್ದರು. ಒಂದು ದಿನ ಅವನೊಂದಿಗೆ ಗುಪ್ತವಾಗಿ ಮಾತನಾಡಲು ಮನವಿ ಮಾಡಿದರು. ಮಾತು ಬೆಳೆದಂತೆ ಅರ್ಚಕರು ತಮ್ಮ ತಾಯಿಯ ಅನಾರೋಗ್ಯದ ದುಃಖ ತೋಡಿಕೊಂಡರು. ಅವರ ಆಪರೇಶನ್ ಗೆ ಸುಮಾರು ೧೦ಸಾವಿರ ಖರ್ಚಾಗುವುದೆಂದು ಮತ್ತು ಅದನ್ನು ತೀರಿಸಲು ಹಣ ವ್ಯವಸ್ಥೆ ಮಾಡುವ ಕಷ್ಟ ತೋಡಿಕೊಂಡರು. ಮೆಲ್ಲನೇ ಅವನ ಬಳಿ ಸಹಾಯ ಯಾಚಿಸಿದರು ಜೊತೆಗೆ ಆದಷ್ಟು ಬೇಗ ಹಿಂದಿರುಗಿಸುವ ಆಶ್ವಾಸನೆ ಕೂಡ ನೀಡಿದರು ಕೂಡ.

ಮೊದಲೇ ಯಾರೋ ಕಪಟ ಜ್ಯೋತಿಷಿ "ನಿನ್ನ ದಶಾಭುಕ್ತಿಯಲ್ಲಿ ಶನಿ ಅವತರಿಸಿದ್ದಾನೆಂದು, ಪರಿಹಾರವಾಗಿ ದಾನ ಧರ್ಮಗಳನ್ನು ನಿಷ್ಠೆಯಿಂದ ಕೈಗೊಳ್ಳಬೇಕಂದು" ಪಾಠ ಹೇಳಿದ್ದರಂತೆ. ಇದನ್ನು ನೆನೆಸಿಕೊಂಡ ಅವನಿಗೆ ಮೈ ಜುಮ್ ಎಂದಿತು. ಎಲ್ಲಿ ದಾನ ಮಾಡದಿದ್ದರೆ ಶನಿ ತನ್ನನ್ನು ಹಿಂಡಿ ಹಾಕುತ್ತಾನೋ ಎಂಬ ಹೆದರಿಕೆ ಅವನಲ್ಲಿ ಆವರಿಸಿತು. ಜೊತೆಗೆ ಅರ್ಚಕರ ಅಳುಮೋರೆ ಕಂಡು ಅವನಿಗೂ ಕನಿಕರ ಉಕ್ಕಿ ಬಂತು. ಹಾಗಾಗಿ ಅಳುಕಾದರೂ ೫ಸಾವಿರ ಮರುದಿನವೇ ಕೈಗಿತ್ತ. ಪೂರ್ತಿ ನೀಡಲು ಅರ್ಚಕರು ದಮ್ಮಯ್ಯ ಹಾಕಿದಾಗ ಅವನ ದಶಾಭುಕ್ತಿ ಮತ್ತು ಚಂಚಲ ಮನಸ್ಸಿಗೆ ಮತ್ತಷ್ಟು ಕನಿಕರ ಮೂಡಿತು. ಅಲ್ಲೇ ಪಕ್ಕದಲ್ಲಿ ಇದ್ದ ಏಟಿಮ್ ಕಡೆಗೆ ಧರಧರನೆ ಓಡಿ ಹಣ ಅರ್ಚಕರ ಕೈಗಿತ್ತ. ಅರ್ಚಕರು ಧನ್ಯತಾ ಭಾವದಿಂದ ಅವನಿಗೆ ತುಂಬು ಹೃದಯದ ಧನ್ಯವಾದವನ್ನರ್ಪಿಸಿದರು. ಬ್ರಾಹ್ಮಣ ಅರ್ಚಕನಿಗೆ ಉಪಕಾರ ಮಾಡಿದ ಸಂತೃಪ್ತ ಭಾವನೆ ಅವನಲ್ಲಿ ಮೂಡಿತ್ತು. ವಾರದ ನಂತರ ದೇವಸ್ಥಾನದ ವಾರ್ಷಿಕೋತ್ಸವಕ್ಕೆ ಇವನೇ ಕೇಂದ್ರಬಿಂದು. ಮೂಟೆಗಟ್ಟಲೆ ಪ್ರಸಾದ ಕಟ್ಟಿಕೊಟ್ಟರು ಅರ್ಚಕರು. ತಾಯಿಯು ಆರೋಗ್ಯದಿಂದಿರುವರೆಂದು ಅರ್ಚಕರು ಅವನಿಗೆ ಸುದ್ಧಿ ಮುಟ್ಟಿಸಿದರು. ಅವನಿಗೂ ತಾನು ದೊಡ್ಡ ಕೆಲಸ ಮಾಡಿದನೆಂಬ ಹೆಮ್ಮೆ ಕೂಡ. ಅಂದು ರಾತ್ರಿ ರುಚಿಯಾದ ಪ್ರಸಾದವನ್ನು ತಿಂದು ನಿಶ್ಚಿಂತೆಯಿಂದ ಮಲಗಿದ.

ಒಂದು ವಾರ ಆಗಿರಬೇಕು, ತಂದೆಯ ನೆಪವೊಡ್ಡಿ ಮತ್ತೆ ಅರ್ಚಕರು ಇವನ ಬಳಿ ಹಣ ಯಾಚಿಸಿದರು. "ಎಲಾ ಇವನಾ! ಹಳೆ ಬಾಕಿಯೇ ಚುಪ್ತಾ ಆಗಿಲ್ಲಾ, ಆಗಲೇ ಮತ್ತೆ ಹಣ ಕೇಳುತ್ತಿದಾನಲ್ಲವೇ" ಇವನಿಗೆ ಆಶ್ಚರ್ಯದ ಜೊತೆಗೆ ಸಂಶಯವೂ ಮನೆ ಮಾಡಿತು. ಆದರೆ ಪಕ್ಕನೆ ದಶಾಭುಕ್ತಿ ನೆನಪಾಗಿ ಸ್ವಲ್ಪ ಕೊಡಲು ಮುಂದೆ ಬಂದ. ೫ಸಾವಿರ ಬದಲು ೨ಸಾವಿರ ಕೊಟ್ಟ. ಮನೆಗೆ ಬಂದಿದ್ದೆ ತಡ ಅನಾಮಿಕ ಕಾಲ್ ಬಂದಿತು. ಯಾರೋ ಮೊಬೈಲ್ ಕಂಪೆನಿಯವರು ಇರಬೇಕೆಂದು ಕಟ್ ಮಾಡಿದ. ಪದೇ ಪದೇ ಮೊಬೈಲ್ ರಿಂಗಣಿಸುವುದನ್ನು ಗಮನಿಸಿದ ಇವನು ಒಮ್ಮೆ ಕಾಲ್ ಎತ್ತಿಯೇ ಬಿಟ್ಟ. ಆಶ್ಚರ್ಯ! ಅರ್ಚಕರ ಕಾಲ್! ಅವರು ಮತ್ತೆ ದುಡ್ಡು ಕೊಡಲು ಅಳುಮೋರೆಯಲ್ಲಿ ಫೋನಿನಲ್ಲಿ ಪೀಡಿಸುತ್ತಿದ್ದರು. ಜೊತೆಗೆ ತಾಯಿಯ ಮುಖಾಂತರವೂ‌ ಅಂಗಲಾಚಿಸಿದ. ಇವನಿಗೆ ಕನಿಕರವಾದರೂ, ಧೈರ್ಯ ತಂದುಕೊಂಡು, "ನನ್ನ ಸಾಮರ್ಥ್ಯವಿಷ್ಟೇ" ಎಂದು ಹೇಳಿ ಫೋನ್ ಕೆಳಗಿಟ್ಟ. ಮತ್ತೆ ೪-೫ ಬಾರಿ ಕಾಲ್ ಬಂದರೂ ಎತ್ತುವ ಸಾಹಸ ಮಾಡಲಿಲ್ಲ. ಮುಂದಿನ ದಿನವೇ ದೇವಸ್ಥಾನ ಬದಲಿಸಿದ. ತನ್ನ ನಂಬರ್ ಇವರಿಗೆ ಹೇಗೆ ಸಿಕ್ಕಿತೆಂದು ಯೋಚಿಸಿದಾಗ, ವಾರ್ಷಿಕೋತ್ಸವಕ್ಕೆ ಸೇವೆ ಕೊಡುವ ಸಮಯದಲ್ಲಿ ನಂಬರ್ ನೀಡಿದ್ದುದ್ದು ನೆನಪಾಯಿತು.

ಸುಮಾರು ಒಂದು ವಾರ ಆಗಿರಬೇಕು, ದೇವಸ್ಥಾನದ ಮುಂದೆ ಹಳದಿ ಬಣ್ಣದ ಹೊಸ ನ್ಯಾನೋ ಕಾರು ನಿಂತಿತ್ತು. ಯಾರೋ ದೇವಸ್ಥಾನಕ್ಕೆ ಪೂಜೆ ಮಾಡಿಸಲೆಂದು ತಂದಿರಬೇಕೆಂದು ಭಾವಿಸಿದ. ಅದರ ಬಗ್ಗೆ ಹೆಚ್ಚು ಗಮನ ಕೊಡಲು ಹೋಗಲಿಲ್ಲ. ಅಂಗಡಿಯಿಂದ ಸಾಮಾನು ಕೊಂಡು ವಾಪಾಸ್ ಹೊರಡುವಾಗ, ಅದೇ ಕಾರು ಅಂಗಡಿಯ ಮುಂದೆ ನಿಂತಿತು. ಏನಾಶ್ಚರ್ಯ! ಸ್ವಲ್ಪ ದಿನದ ಹಿಂದೆ ಅಳು ಮೋರೆ ಹಾಕಿದ್ದ ಅರ್ಚಕರು ಏಗ ತಮ್ಮ ೩೨ ಹಲ್ಲುಗಳನ್ನು ತೆರೆದು ಹಾಯಾಗಿ ಕಾರಿನಿಂದ ಜಮೀನುದಾರನಂತೆ ಇಳಿಯುತ್ತಿದ್ದಾರೆ. ಮೊಸಳೆ ಕಣ್ಣೀರಿಟ್ಟವ ಈಗ ಕಾರಿನ ಮಾಲಿಕ. ಎಷ್ಟು ಜನರಿಗೆ ಹೀಗೆ ಟೊಪಿಯಿಟ್ಟಿದ್ದಾನೆಂಬುದು ತಿಳಿಯದು. ರೋಗಗ್ರಸ್ಥರೆಂದು ಭಾವಿಸಿದ್ದ ಅವನ ಪೋಷಕರು ಆರೋಗ್ಯವಂತರಾಗಿ ಹವಾನಿಯಂತ್ರಿತ ಕಾರಿನಲ್ಲಿ ಕುಳಿತು ಗತ್ತಿನಿಂದ ಹೊರ ಪ್ರಪಂಚವನ್ನು ಆಸ್ವಾದಿಸುತ್ತಿದ್ದರು. ಆತ ಇವನನ್ನು ನೋಡಿಯೂ ನೋಡದಂತೆ ಅಂಗಡಿಯ ಬಳಿ ಬಂದರು. ಇವನಿಗೆ ಕ್ಲೇಶ ತಡೆಯಲಾಗದೆ, ಆತುರದಿಂದ ಮನೆಯ ಕಡೆ ಹೆಜ್ಜೆ ಇಟ್ಟ. ಮನೆ ಬಂದ ತಕ್ಷಣ ಇವನ ಹತಾಶೆ ಮುಗಿಲು ಮುಟ್ಟಿತು. ಇಷ್ಟು ದಿನ ಅರ್ಚಕರ ಅಳುಮೋರೆ ನೋಡಿದವನಿಗೆ ಇಂದು ಅಳುವ ಸರದಿ ಇವನದಾಗಿತ್ತು. ಹಳದಿ ಬಣ್ಣದ ಕಾರನ್ನು ಕಂಡು, ಹಳದಿ ರೋಗ ಬರುವುದು ಬಾಕಿ ಇತ್ತು. ಚೇತರಿಸಿಕೊಳ್ಳಲು ಬರೋಬ್ಬರಿ ೨೪ ಘಂಟೆ ಹಿಡಿಯಿತೆನ್ನಿ. ಒಂದು ದಿನದ ಬಳಿಕ ತಾನು ಮಾಡಿದ ತಪ್ಪಿನ ಅರಿವಾಯಿತು ಎಂದು ಹೇಳುವುದು ಕೂಡ ಅಗತ್ಯವಿಲ್ಲ. ೧೨ಸಾವಿರ ಕೈಚೆಲ್ಲಿದ್ದು ಅವನಿಗೆ ಬೇಸರ ಸಂಗತಿಯಲ್ಲ, ಬದಲಾಗಿ ಅದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಲಿಲ್ಲ ಎಂದು ಚಿಂತೆ ಅವನಿಗೆ ಬಹಳ ದಿನಗಳ ವರೆಗೆ ಕಾಡುತ್ತಿತ್ತು.

ಊರಿಗೆ ಹೋದಾಗ ಪೆಚ್ಚು ಮೋರೆಯಿಂದ ಅಪ್ಪನ ಬಳಿ ಇರುವ ವಿಷಯವನ್ನೆಲ್ಲಾ ತಿಳಿಸಿದ. ಮೂಢನಂಬಿಕೆ ಹೋಗಲಾಡಿಸಲು ಅಪ್ಪ ಚಾಣಕ್ಯನ ನೀತಿಯ ಪುಸ್ತಕವನ್ನು ಮಗನ ಕೈಗಿತ್ತರು. ಅದರ ಒಂದು ವಾಕ್ಯ ಹೀಗಿತ್ತು "ನೀಚರು  ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಬೇಕೆಂಬ ಭಯದಿಂದ ಶತ್ರುತ್ವ ಬೆಳೆಸಿಕೊಳ್ಳುತ್ತಾರೆ". ಅದರ ಪ್ರತಿಯೊಂದು ಅಕ್ಷರವು ಅವನ ಜೀವನದ ಮುಂದೆ ಕಣ್ಣಿಗೆ ಕಟ್ಟುವಂತೆ ಪಾಠ ಹೇಳಿತ್ತು. ಅಂದೇ ಕಡೆ ಇರಬೇಕು ಮತ್ತೆಂದೂ ಯಾರಿಗೂ ಸಹಾಯ ಮಾಡುವ ಗೋಜಿಗೆ ಹೋಗಲಿಲ್ಲ. ಧೈರ್ಯದಿಂದ ಕಷ್ಟಗಳನ್ನು ಎದುರಿಸುತ್ತಾ ದಿನ ದೂಡಿದ.

ಹೇಗಿದೆ ಕಥೆ ಸುಮ್ಮನೆ ಟೈಮ್-ಪಾಸ್ ;). ಯಾರದೋ ಕಥೆ ಕುಮಾರನ ಬ್ಲಾಗ್ ಪೋಸ್ಟ್. ಸುಮ್ಮನೆ ಚಾಣಕ್ಯನ ನೀತಿ ಪುಸ್ತಕದ ಮೇಲೆ ಕಣ್ಣಾಡಿಸುವಾಗ ಥಟ್ಟನೆ ಬರೆದ ಬರಹವಿದು. ವ್ಯಾಕರಣದಲ್ಲಿ ಬಹಳಷ್ಟು ತಪ್ಪಿರಬಹುದು ಆದರೂ ಕಥೆಯ ಸೊಗಡನ್ನು ಓದುಗರ ಮುಂದೆ ತೋರ್ಪಡಿಸಲು ಸ್ವಲ್ಪ ಮಟ್ಟಿಗೆ ಯಶಸ್ಸು ಹೊಂದಿರುವ ಆಶಾಭಾವನೆ ಇದೆ!

No comments:

Post a Comment

Printfriendly

Related Posts Plugin for WordPress, Blogger...