Wednesday, March 11, 2020

ಹಾಗೆ ಸುಮ್ಮನೆ - MRPಗಿಂತ ರೈಸು selling ಪ್ರೈಸು

ಬೆಂಗಳೂರಿನ ಮಾರ್ಟ್-ಗಳಿಗೆ ಬಿಲೋ ಎಮ್.ಆರ್.ಪಿ ತೋರಿಸಿ ಜನಗಳನ್ನು ಆಕರ್ಷಿಸೋ ಹುಚ್ಚು ಜಾಸ್ತಿ ನೋಡಿ. ಜನಗಳು ಕೂಡಾ ಮೋಡಿ ಹೋಗೋದು ಮಾಮೂಲು. ಎಮ್.ಆರ್.ಪಿ ಗಿಂತ ಕಡಿಮೆ ಅಂತಾ ಅವಶ್ಯಕತೆ ಇಲ್ಲದೆ ಇರೋದನ್ನ ಕೂಡಾ ತಗೊಂಡು ಕೊನೆಗೆ ಧನನಾಶಕ್ಕೆ ಕಾರಣರಾಗುತ್ತಾರೆ. ಮಾರ್ಟ್ ಗಳಿಗೂ ಅದೇ ಬೇಕು. consumption economy ಅಲ್ಲಿ ಜನ ಉಳಿಸೋದಕ್ಕಿಂತ ಖರ್ಚು ಮಾಡೋದೆ ಜಾಸ್ತಿ. ಜೊತೆಗೆ ಇಂತಹ ಮಾರ್ಟ್-ಗಳ ಮೋಡಿ ಮಾತುಗಳಿಂದ ಜನರು ಉಳಿಸಲು ಹೋಗಿ ಕೈ (ಅಥವಾ ನೋಟು) ಸುಟ್ಟಿಕೊಳ್ಳೋದೇ ಜಾಸ್ತಿ. ಅದಕ್ಕೆ ಸರಿಯಾಗಿ ವರ್ಚುವಲ್ ಮನಿ ಬೇರೆ ಇದೆ ಜನರ ಬಳಿ (ಡೆಬಿಟ್, ಕ್ರೆಡಿಟ್ ಕಾರ್ಡ್, ಮೊಬೈಲ್ ವಾಲೆಟ್ ಮುಂತಾದವು). ಗೀಚಿದ್ದು ಲೆಕ್ಕಕ್ಕೆ ಸಿಗೋದಿಲ್ಲ, ಕೊನೆಗೆ ಬ್ಯಾಂಕ್ ಬಾಲೆಂಸ್ ಸೊನ್ನೆ ಆದಾಗಲೇ ಜ್ಞಾನೋದಯವಾಗುವುದು.

ಇರಲಿ ವಿಷಯಕ್ಕೆ ಬರೋಣ. ನಮ್ಮ ಮನೆ ಪಕ್ಕ ಕೂಡಾ ಇಂತಹದೆ ಎಮ್.ಆರ್.ಪಿ ಕೆಳಗೆ ಮಾರುವ ಮಾರ್ಟ್ ಇದೆ. ಮಕ್ಕಳಿಗೆ ಆಗಾಗ ಒಣ ಕೆಮ್ಮು ನಿವಾರಿಸಲು ಸ್ಟೀಮರ್ ಅಗತ್ಯವಿತ್ತು. ಅದಕ್ಕೆಂದೆ ಮಾರ್ಟ್ ನುಗ್ಗಿದೆ. ಚೆನ್ನಾಗೇನೋ ಇತ್ತು. ಅಲ್ಲಪ್ಪಾ ಸರಿ ಇಲ್ಲಾಂದ್ರೆ ವಾಪಾಸ್ ತಗೋತಿರಾ ಅಂದ್ರೆ ಮಲೆಯಾಳಿ ಮಿಶ್ರಿತ ಕನ್ನಡದಲ್ಲಿ "ಸರಿ ಇದೆ ಸರ್" ತೊದಲುತ್ತಾ ಮಾತನಾಡಿದ. ಕೊನೆಗೆ ಒತ್ತಾಯಕ್ಕೆ ಮಣಿದು, ಅದನ್ನು ಪರೀಕ್ಷೆ ಮಾಡಿ, ಆವಿ ಕೂಡಾ ಬರಿಸಿದ. ಬಿಲ್ ಕೌಂಟರಿನಲ್ಲಿ ದುಡ್ಡು ಕೊಡಲೆಂದು ಬಂದಾಗ ನನಗೆ ಆಶ್ಚರ್ಯ ಕಾಣಿಸಿತ್ತು.



ಅಲ್ಲಾ ಮಾರಾಯ್ರೆ, ಎಮ್.ಆರ್.ಪಿ ಇರೋದು ೩೬೫ ರುಪಾಯಿ ಇವನು ಅದಕ್ಕೆ ೫ ರುಪಾಯಿ ಜಾಸ್ತಿ ಮಾಡಿ ೧೪ ರುಪಾಯಿ ಡಿಸ್ಕೌಂಟ್ ತೋರಿಸ್ತಾ ಇದಾನೆ. ಒಂತರಾ ಹಗಲು ದರೋಡೆನೆ ಅನ್ನಬಹುದು. ಎಷ್ಟೋ ಜನ ಎಮ್.ಆರ್.ಪಿ ನೋಡೋದೆ ಇಲ್ಲ. ಮಾರ್ಟ್-ಗಳ ಸ್ಟಿಕ್ಕರ್ ಮೇಲೆನೆ ನಂಬಿಕೆ ಇಟ್ಟಿರುತ್ತಾರೆ. ಅಂಗಡಿಯವರಿಗೂ ಅದೇ ಬೇಕೆನೋ. ಬಹುಶ: ಎಮ್.ಆರ್.ಪಿ ಮೇಲೆ ಸ್ಟಿಕ್ಕರ್ ಅಂಟಿಸೋ ಬದಲು ಬೇರೆಲ್ಲೋ ಅಂಟಿಸಿರಬೇಕು. ನಾನೇನು ಚೌಕಾಸಿ ಮಾಡಲು ಹೋಗಲಿಲ್ಲ ಯಾಕಂದ್ರೆ ೩೫೬ ಎಮ್.ಆರ್.ಪಿ ಗಿಂತ ಕಡಿಮೆನೇ ಅಲ್ವೇ? ನನಗೇನೋ ತಿಳಿಯಿತು ಆದರೆ ಅದೇ ಎಮ್.ಆರ್.ಪಿ ಹೆಚ್ಚು ಮಾಡಿ ಕೊನೆಗೆ ಎಮ್.ಆರ್.ಪಿ ಬೆಲೆಗೆ ಸೆಲ್ಲಿಂಗ್ ಪ್ರೈಸ್ ಇಟ್ಟರೆ ಎಷ್ಟೋ ಜನರು ಗಮನಿಸೋದು ಇಲ್ಲ. ಅದಕ್ಕೆ ಮಾರ್ಟ್-ಗಳು ತುಂಬಾ ಲಾಭ ಮಾಡೋದು ಅನ್ಸುತ್ತೆ.

ಬಿಲ್ ನಂತರ ವಾರಂಟಿ ಕಾರ್ಡಿಗೇ ನಾನೆ ಸಹಿ ಹಾಕಿಸಿದೆ. ಪಾಪಿಗಳು ಅದನ್ನೂ ಮಾಡಲ್ಲ. ನಾವೇ ನೆನಪಿಸಬೇಕು. ಬಿಸಿನೆಸ್ ಮಾಡಿದವರದ್ದು ಜಾಣ ಮರೆವು ಅಂದ್ರೂ ತಪ್ಪಾಗದು. ಒಂದು ವರ್ಷ ವಾರಂಟಿ ಇದ್ದರೂ ಉಪಕರಣ ಕೆಟ್ಟಿದ್ದರೆ ಬದಲಾಯಿಸಲು ಗೊಣಗೊಣ ಅನ್ನುತ್ತಿದ್ದ. ಅಲ್ರೀ ಬಿಲ್ ಕೊಡ್ತಾರಲ್ಲ ಅದೇ ವಾರಂಟಿ ಅಂದ್ರೆ, ಮಹಾನುಭಾವರೆ ಅದು ಪ್ರಿಂಟೆಡ್ ಬಿಲ್, ಕೇವಲ ಎರಡೇ ದಿನದಲ್ಲಿ ಅಳಿಸಿ ಹೋಗುತ್ತದೆ. ಮತ್ತೆ ಐಟೆಮ್ ಹಾಳಾದರೆ ನಾವೇನು ಮಾಡೋದು ಹೇಳಿ.  ಅಂದಹಾಗೆ ಐಟೆಮ್ ಸಧ್ಯಕ್ಕೇನೋ ಸರಿ ಇದೆ, ಮುಂದೆ ಹೇಗೆ ನೋಡಬೇಕು.

No comments:

Post a Comment

Printfriendly

Related Posts Plugin for WordPress, Blogger...