Monday, August 22, 2022

ಶ್ರೀ ಕ್ಷೇತ್ರ ಹದ್ದಿನಕಲ್ಲು ಯಾತ್ರೆ, ಗೂಗಲ್ ಮ್ಯಾಪ್ ತಾಪತ್ರೆ

ಬಹಳ ವರ್ಷಗಳ ಬಳಿಕ ಹದ್ದಿನಕಲ್ಲು ಕ್ಷೇತ್ರ ಸಂದರ್ಶಿಸುವ ಅವಕಾಶ ಒದಗಿ ಬಂತು. ಶ್ರಾವಣ ಮಾಸದ ಮುಂಚೆ ಇದರ ಯೋಜನೆ ಇದ್ದರೂ ಹಲವು ಕಾರಣಗಳಿಂದ ಹನುಮಂತರಾಯರು ತಡೆಹಿಡಿದಿದ್ದರು. ಮತ್ತು ಅದನ್ನು ತಡೆಹಿಡಿದದ್ದು ಒಳ್ಳೆಯದಕ್ಕೆ ಅಂತಾ ಮನದಟ್ಟಾಯಿತು! ಕೊನೆಗೆ ಯಾಕೆ ಒಳ್ಳೆಯದು ಅಂತಾ ಬರೆದಿದ್ದೇನೆ.

ಬೆಳಗ್ಗೆ ಬೇಗ ಹೊರಡೋಣವೆಂದರೆ ಅನಾವಶ್ಯಕ ಕಾರಣಗಳು. ಹೇಗೂ ೯ಕ್ಕೆ ಗಾಡಿ ಹೋರಡಿತು. ನಾಗಸಂದ್ರ ಶುಲ್ಕ ವಸೂಲಿ ಕೇಂದ್ರಕ್ಕೆ ಬೇಗನೆ ಬಂದರೂ ತದನಂತರ ಗ್ರಹಚಾರ ಕಾದಿತ್ತು. ೩ದಿನ ಸರಣಿ ರಜೆ ಇದ್ದರಿಂದ ಸಿಕ್ಕಾಪಟ್ಟೆ ವಾಹನ ಸಂದಣಿ. ಸುಮಾರು ೪ಕಿ.ಮೀ ಸಂಚರಿಸಲು ಪೂನಾ ಹೆದ್ದಾರಿಯಲ್ಲಿ ೪೦ ನಿಮಿಷ ಒದ್ದಾಡಬೇಕಾಯಿತು. ಬೇಕೆಂದರೆ ಚಿತ್ರ ನೋಡಿ ಕನ್ಫರ್ಮ್ ಮಾಡಿಕೊಳ್ಳಿ

ನೋಡಿದರೆ ಮಂಗಳೂರು ಹೆದ್ದಾರಿಯಲ್ಲಿ ವಾಹನಗಳ ಮೆರವಣಿಗೆಯೇ ಹೆಚ್ಚು. ಏಕಾಗಿ ವಾಹನ ದಟ್ಟಣೆಯಾಯಿತು ಎಂಬುದು ಕೊನೆಗೂ ತಿಳಿಯಲಿಲ್ಲ ಏಕೆಂದರೆ ನೆಲಮಂಗಲ ಜಂಕ್ಸನ್ ಇಂದ ಕೂಡಾ ಜಾಮ್ ಇರಲಿಲ್ಲ. 

ಏನೋ, ಸಮಯ ಅಂತೂ ಬಹಳ ವ್ಯರ್ಥವಾಯಿತು. ಜೊತೆಗೆ ಕಾಮತ್ ಹೋಟೆಲ್ ಅಲ್ಲಿ ತಿಂಡಿ ಎಲ್ಲವೂ ಖಾಲಿ! ಜನ ಸಿಕ್ಕಾಪಟ್ಟೆ ಆದ್ದರಿಂದ ಇಡ್ಲಿ ಮಾತ್ರ ಉಳಿದಿತ್ತು ಅಂತಾ ಹೇಳಿದರು ಹೋಟೆಲಿನ ಕ್ಯಾಶಿಯರ್. ಕಾಮತ್ ಹೋಟೆಲ್ ಯಾಕೆ ಹೊಕ್ಕೇನೋ ನನಗೆ ತಿಳಿಯದು. ಅವರು ಬಸ್ಸು ಬಂದರೆ ಸಾಕು ಎಲ್ಲಾ ಪ್ರಾಮುಖ್ಯತೆ ಪ್ರಯಾಣಿಕರಿಗೆ ನೀಡುತ್ತಾರೆ. ಚಾಲಕರಿಗೆ ಆದಷ್ಟು ಬೇಗ ನೀಡಿ, ಸ್ವಂತ ವಾಹನದಲ್ಲಿ ಬರುವವರ ಕಡೆಗಣಿಸುವುದನ್ನು ಹಿಂದಿನಿಂದಲೇ ನೋಡುತ್ತಿದೆ. ಈ ಬಾರಿಯೂ ಹಾಗೆಯೇ ಆಯಿತು. ಬಸ್ಸು ಹೊರಡುವವರೆಗೂ ನಮ್ಮನ್ನು ಕೇಳುವವರಿರಲಿಲ್ಲ. ತದನಂತರ ಮತ್ತೊಂದು ರಾಜಹಂಸ ಬಂದಾಗಲೂ ಹೋಟೆಲ್ ಅಲ್ಲಿ ಇರುವ ಎಲ್ಲಾ ಕಾರ್ಮಿಕರ ಗಮನ ಪ್ರಯಾಣಿಕರತ್ತ ವಾಲಿತ್ತು. ಸಾಂಬಾರ್ ಕೊಡಿ ಅಂತಾ ೩-೪ ಬಾರಿ ಕೇಳಿದ ಮೇಲೆಯೇ ಬಂತು ನೋಡಿ. ಒಟ್ಟಿನಲ್ಲಿ ಈ ಬಸ್ಸು ನಿಲ್ಲಿಸುವ ಹೋಟೆಲ್ ಅಲ್ಲಿ ಎಂದೂ ಕಾಲಿಡಬೇಡಿ ಮಾರಾಯ್ರೇ!

ಮತ್ತೆ ವಿಷಯಕ್ಕೆ ಬರೋಣ :-).

ಸನ್ನಿವೇಶ - ೧

ಯಡಿಯೂರಿನ ಬಳಿಕ ಹದ್ದಿನಕಲ್ಲು ತಲುಪಲು ಸ್ವಾಗತ ಕಮಾನು ಸಿಗುವುದೆಂದು ನನಗೆ ತಿಳಿದಿತ್ತು. ಆದರೂ ಮ್ಯಾಪ್ ಚಾಲು ಮಾಡಿದೆ. ಅಲ್ಲಿಯೇ ನೋಡಿ ಗ್ರಹಚಾರ ಶುರು ಆಗಿದ್ದ. ಸ್ವಾಗತ ಕಮಾನು ದಾರಿಯ ಬದಲು ಮ್ಯಾಪ್ ಟಿ.ನರಸೀಪುರ-ಶಿರಾ ರಸ್ತೆಯ ಮೂಲಕ ದಾರಿ ತೋರಿಸಿತು. ಆ ರಸ್ತೆಯಲ್ಲಿ  ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ಸುಮಾರು ೪-೫ ಅಡ್ಡ ದಾರಿಗಳು, ಸಣ್ಣ ರಸ್ತೆಗಳು ಜೊತೆಗೆ ಹಳ್ಳಿಯ ಗಲ್ಲಿ ರಸ್ತೆಗಳು! ಅಲ್ಲಿ ಕಾರ್ ಹೋಗುವುದು ಸಾಧ್ಯವಾಗಲಿಲ್ಲ! ಕೊನೆಗೆ ವಿಧಿಯಿಲ್ಲದೇ ಹಳ್ಳಿ ಜನರನ್ನು ಕೇಳಿದಾಗ, ಅವರು ಸರಿಯಾದ ದಾರಿ ತೋರಿಸಿದರು. ನೋಡಿ ಮ್ಯಾಪ್ ದಾರಿ. ಈಗಲೂ ಇದೇ ದಾರಿ ತೋರಿಸುತ್ತಿದೆ.


ಹದ್ದಿನಕಲ್ಲಿನಲ್ಲಿ ಶ್ರಾವಣ ಶನಿವಾರದ ನಿಮಿತ್ತ ಜನಜಾತ್ರೆಯೇ ಸೇರಿತ್ತು. ಹಲವು ಮಂದಿ ಬೆಟ್ಟ ಹತ್ತಿ ಆಂಜನೇಯನ ದರ್ಶನ ಪಡೆಯುತ್ತಿದ್ದರು. ನಾವು ಕೂಡಾ ಬರಿಗಾಲಿನಲ್ಲಿ ಬೆಟ್ಟ ಹತ್ತಿ ಆಂಜನೇಯನ ಆಶೀರ್ವಾದ ಪಡೆದು ಧನ್ಯರಾದೆವು. 

ವಾಪಸ್ ಬಂದಾಗ ಶ್ರವಣಬೆಳಗೊಳಕ್ಕೆ ಮ್ಯಾಪ್ ಹಾಕಿದೆ. ಈಗ ಮ್ಯಾಪ್ ಸ್ವಾಗತ ಕಮಾನು ದಾರಿ ತೋರಿಸಿತು. ಆದರೆ ದಾರಿ ಮಧ್ಯೆ ಮತ್ತೆ ಮಣ್ಣಿನ ರಸ್ತೆಗೆ ತಿರುಗಲು ಹೇಳಿತು. ನನಗೆ ಸಂಶಯ ಬಂದು, ಅದರ ಸೂಚನೆಯನ್ನು ಧಿಕ್ಕರಿಸಿ ಉತ್ತಮ ರಸ್ತೆಯಲ್ಲಿ ಮುಂದುವರೆದೆನು. ಏನಾಶ್ಚರ್ಯ! ಮಂಗಳೂರು ರಸ್ತೆ ಬಳಿ ಇರುವ ಸ್ವಾಗತ ಕಮಾನಿಗೆ ಕೇವಲ ೧೦ ನಿಮಿಷದಲ್ಲಿ ಸಲೀಸಾಗಿ ತಲುಪಿದೆವು! ರಸ್ತೆ ಕೂಡಾ ಬೊಂಬಾಟ್! ಜೊತೆಗೆ ಹೆಚ್ಚು ಎಂದರೆ ೪ ಕಿ.ಮೀ ಅಷ್ಟೇ! ಗೊತ್ತಿದ್ದರೂ ಸುಮ್ಮನೆ ಮ್ಯಾಪ್ ಹಾಕಿದ್ದೆ ತಪ್ಪು ಆಯಿತು. ಭಾರತದ ಗ್ರಾಮೀಣ ಪ್ರದೇಶದಲ್ಲಿ ಒಂದೋ ಜನರ ಸಹಾಯ ಕೇಳಬೇಕು, ಗೊತ್ತಿದ್ದರೆ ನಾವೇ ಸಂಚರಿಸುವುದು ಒಳ್ಳೆಯದು ಎಂಬ ಪಾಠ ಗೂಗಲ್ ಮ್ಯಾಪ್ ಕಲಿಸಿತ್ತು!

ಇದು ನೋಡಿ ಸರಿಯಾದ ದಾರಿ. ರಸ್ತೆಯೂ ಸೂಪರ್ ಇದೆ. ಸುಮ್ಮನೆ (X) ದಾರಿಯಲ್ಲಿ ಸಂಚರಿಸಬೇಡಿ! 


ಆಶ್ಚರ್ಯವೆಂದರೆ, ಹದ್ದಿನಕಲ್ಲಿನಿಂದ ವಾಪಾಸ್ ಯಡಿಯೂರು ಬರಲು, ಮ್ಯಾಪ್ ಇದೇ ದಾರಿ ತೋರಿಸುತ್ತಿದೆ! ಮ್ಯಾಪ್ ಯಾಕೆ ಹೀಗೆ ಆಗಿದಿಯೋ?


ಆವಾಗ ತಟ್ಟನೆ ಒಂದು ಕಗ್ಗ ಬರೆದೆ (ಗ್ರಾಮೀಣ ಪ್ರದೇಶಕ್ಕೆ ಅನ್ವಯ)

ಊರ ಜನರ ಕಡೆಗಣಿಸಿ 

ಮ್ಯಾಪ್ ಹಾಕೊಂಡು ತಿರುಗಿದರೆ

ಕೆರೆಯೋ ಬಾವಿಯೊ (ಅಥವಾ ಕಣಿವೆಯೊ) ಗತಿ ಮ್ಯಾಪ್-ತಿಮ್ಮ!

ಪುಣ್ಯಕ್ಕೆ ಈ ಬಾರಿ ಕೆರೆ ಅಥವಾ ಕಣಿವೆಗೆ ದಾರಿ ತೋರಿಸಲಿಲ್ಲ.

ಸನ್ನಿವೇಶ - ೨

ಹದ್ದಿನಕಲ್ಲು ಆಂಜನೇಯನ ಆಶೀರ್ವಾದ ಪಡೆದು ವಾಪಸ್ ಬೆಂಗಳೂರಿಗೆ ಬಂದಾಗ ಸುಮ್ಮನೆ ನಾಗಸಂದ್ರದಿಂದ ಕೊಡಿಗೇಹಳ್ಳಿಗೆ ಮ್ಯಾಪ್ ಹಾಕಿ ಮತ್ತೆ ತಪ್ಪು ಮಾಡಿದೆ. ದಾರಿ ಗೊತಿದ್ದರೂ  ತಂತ್ರಜ್ಞಾನದ ಮೊರೆ ಹೋಗಿದ್ದೆ ತಪ್ಪಾಯಿತು ನೋಡಿ. ನನ್ನನ್ನು ನಾನೇ ಅಪನಂಬಿಕೆಯಿಂದ ನೋಡಿದೆನೋ ಅನ್ನಿಸುತ್ತಿತ್ತು. ಅಥವಾ ನಾವು ತಂತ್ರಜ್ಞಾನದ ದಾಸರಾಗಿದ್ದೇವೆಯೋ ನಾ ಕಾಣೆ. ಒಟ್ಟಿನಲ್ಲಿ ೭ಘಂಟೆಗೆ ನಾಗಸಂದ್ರಕ್ಕೆ ಬಂದವನು, ೮:೪೫ಕ್ಕೆ ಕೊಡಿಗೇಹಳ್ಳಿಗೆ ಮುಟ್ಟಿದೆನು. ಯಾಕಾದ್ರೂ ಮ್ಯಾಪ್ ಹಾಕಿದೆ ಅನ್ನಿಸಿತು!

ವಿಷಯ ಏನೆಂದರೆ, ಜಾಲಹಳ್ಳಿ ಎಲಿವೇಟೆಡ್ ಹೆದ್ದಾರಿ ಇನ್ನೇನು ಮುಗಿಯಬೇಕು ಅನ್ನುವಷ್ಟರಲ್ಲಿ, ಶುರು ಆಯಿತು ನೋಡಿ ಕೆಂಪು ದೀಪದ ದೀಪಾಲಂಕಾರ ಶೋ! ಎಲ್ಲೆಲ್ಲೂ ವಾಹನ, ಎಲ್ಲೆಲ್ಲೂ ವಾಹನ. ಗೊರಗುಂಟೆಪಾಳ್ಯ ಬರುವಷ್ಟರಲ್ಲಿ ಸುಮಾರು ೩೦ ನಿಮಿಷ ತಾಗಿರಬೇಕು. ಇಷ್ಟಕ್ಕೆ ಮುಗಿಯಿತೋ? ಇಲ್ಲ. ಮ್ಯಾಪ್ ಪ್ರಕಾರ ಹೆಬ್ಬಾಳವರೆಗೂ ಕೆಂಪು ಕೆಂಪು. ಯಾಕಾದರೂ ಈ ದಾರಿ ತೋರಿಸಿತೋ? ಮಾಮೂಲಿ HMT ರಸ್ತೆ ಮೂಲಕ ಹೋದರೆ ಹೆಚ್ಚು ಎಂದರೆ ಬಾಗಲುಗುಂಟೆ ಜಂಕ್ಸನ್ ಅಲ್ಲಿ ವಾಹನ ದಟ್ಟಣೆ ಇರುತ್ತಿತ್ತು. ಜಾಲಹಳ್ಳಿ ಕ್ರಾಸ್ ಅಲ್ಲಿ BMTC ಕೃಪೆ ಇಂದ ಟ್ರಾಫಿಕ್ ಇರುತ್ತಿತ್ತೇ ವಿನಹಾ ಅಂತಹ ಟ್ರಾಫಿಕ್ ಇರುತ್ತಿರಲಿಲ್ಲ. ಹೆಬ್ಬಾಳ ವರೆಗೆ ಸಲೀಸಾಗಿ ಬರಬಹುದಿತ್ತು. ಈಗ ನೋಡಿದರೆ ತೆವಳುತ್ತ ಸಾಗುತ್ತಿದ್ದೆವು. ಬಹುಶಃ ಹೆಬ್ಬಾಳ ಫೈ-ಓವರ್ ದಾಟಿದ ಮೇಲೆಯೇ ೪ನೇ ಗೇರಿಗೆ ಕಾರು ಓಡಿದ್ದು. ಟ್ರಾಫಿಕ್ ಮಧ್ಯೆ ತಾಳ್ಮೆ ಕಳೆದುಕೊಂಡ ವಾಹನ ಚಾಲಕನೊಬ್ಬ ನಮಗೆ ಯಾಕೆ ಬೈದನೆಂದೇ ತಿಳಿಯಲಿಲ್ಲ. ಎಲ್ಲೂ ಹೋಗಕ್ಕೆ ಆಗಲ್ಲ ಅದರ ಮಧ್ಯೆ ಯಾವ ಸಾಹಸದಿಂದ ಇದನ್ನು ಭೇಧಿಸಬಹುದೆಂದು ಬಹುಷಃ ಆ ತಾಳ್ಮೆ ಕಳೆದುಕೊಂಡ ಚಾಲಕನಲ್ಲಿ ಕೇಳಬಹುದು. ಇರಲಿ, ಅದನ್ನು ಹೆಚ್ಚು ತಲೆಗೆ ಹಾಕಿಕೊಳ್ಳಲಿಲ್ಲ. 

ಮುಂದುವರೆಸುತ್ತ, ಅರೆರೆ ಗೋರುಗುಂಟೆಪಾಳ್ಯ ರಿಂಗ್-ರೋಡ್ ಬಂದ್ ಆಗಿದೆ. ಏನಕ್ಕೆ ಗೊತ್ತಿಲ್ಲ. ಯಶವಂತಪುರವೇ ಗತಿ. ಎಲ್ಲೆಲ್ಲೂ ಟ್ರಾಫಿಕ್ ಜೊತೆಗೆ ಅರೆಬೆಂದ ಕಾಮಗಾರಿಗಳು. ಕಾಲು, ಕ್ಲಚ್-ಬ್ರೇಕ್ ಮೇಲೆಯೇ ಇತ್ತು. ಕೈ, ಗೇರ್ ಮೇಲೆಯೇ ಇತ್ತು. ಸಾಕಾಗಿ ಹೋಯಿತು. ಏರು ರಸ್ತೆಯಲ್ಲಿ ಪೆಟ್ರೋಲ್ ಕಾರಿನ ಕ್ಲಚ್ ಬಾಲೆನ್ಸ್ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಸ್ವಲ್ಪ ಕ್ಲಚ್ ತಪ್ಪಿ ಹೋದರೆ ಗಾಡಿ ಬಂದ್ ಬಿದ್ದರೆ ಮತ್ತೆ ಗೊತ್ತಿದೆ ಅಲ್ಲವೇ. ಹಿಂದಿರುವವರು ಯಗ್ಗಾ-ಮಗ್ಗ ಹಾರ್ನ್ ಮಾಡಿ ಬೈದು ಬಿಡುವರು. ಗಾಡಿ ಹಿಂದಕ್ಕೆ ಹೋದರೆ ಹಿಂದಿನ ಗಾಡಿಗೆ ತಾಗುವ ಭಯ. ತಾಗಿದರೆ ಟ್ರಾಫಿಕ್ ಜಾಮ್ ಮಧ್ಯೆಯೇ ಜಗಳ ಕಾಯುವ ಜನ. ಅಬ್ಬಬ್ಬಾ ಈ ಬೆಂಗಳೂರು ಸಹವಾಸವೇ ಬೇಡ. permanent WFH ಕೊಟ್ಟರೆ ಊರಕಡೆ ಹೊರಟು ಹೋಗುತ್ತೇವೆ ಮಾರಾಯ್ರೇ. ಸುಮ್ಮನೆ ರಿಯಲ್-ಎಸ್ಟೇಟ್, ರಾಜಕಾರಣಿಗಳ ದಂಧೆಯ ಮಧ್ಯೆಯೇ ನಾವು ಸಿಕ್ಕಿ ಹಾಕಿಕೊಂಡಿದ್ದೇವೆ ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟ. ನಗರ ಬೆಳೆದಂತೆ ಅದಕ್ಕೆ ಬೇಕಿರುವ ಸೌಕರ್ಯಗಳು ಮಾತ್ರ ಹಾಗೆಯೇ ಉದ್ಧಾರವಾಗದೆ ಇದೆ. ನಮ್ಮಂತ ಸಾಮಾನ್ಯ ಜನರ ಬಳಿ ಟ್ಯಾಕ್ಸ್ ತೆಗೆದುಕೊಂಡು ಯಾರ ಹೊಟ್ಟೆ ತುಂಬಿಸ್ತಾ ಇದಾರೋ ಆ ಆಂಜನೇಯನೇ ಬಲ್ಲ. ಏನು ಮಾಡುವುದು, ಎಲ್ಲಾ ನಮ್ಮ ಗ್ರಹಚಾರ ಅಂದು ಸುಮ್ಮನಾಗುವುದು ಒಳಿತು.

ನಡೆದು ಹೋಗಿದ್ದರೆ ಬೇಗ ತಲುಪಬಹುದಿತ್ತು ಅಂತಾ ಮಡದಿ ಹೇಳುತ್ತಿದ್ದಳು. ಯಶವಂತಪುರ ಫೈ-ಓವರ್ ಬಳಿಯ ಅಪಾರ್ಟ್ಮೆಂಟನ್ನು ನೋಡಿದಾಗ ಟ್ರಾಫಿಕ್-ಜಾಮ್ ವ್ಯೂ ಅಪಾರ್ಟ್-ಮೆಮೆಂಟ್ ಅಂತಾ ಮರು ನಾಮಕರಣ ಮಾಡಬಹುದೇನೋ :-D. ಇಂತಹ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿ, ಕಷ್ಟದ ಮಧ್ಯೆ ಸುಖವನ್ನು ಕಂಡೆವು. ಮೇಖ್ರಿ ವೃತ್ತದ ಬಳಿಕ ಮತ್ತೆ ಜಾಮ್! ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ಸುಗಳ ಆಶೀರ್ವಾದದಿಂದ. ಎಲ್ಲಾ ತರಹದ ಬಸ್ಸುಗಳು ಇಲ್ಲಿ ಯದ್ವಾ ತದ್ವ ಓಡಿಸಿ ಸುಮ್ಮನೆ ವಾಹನ ದಟ್ಟಣೆ ಸೃಷ್ಟಿಸುತ್ತವೆ. ಕಡೆಗೆ ಪೊಲೀಸ್ ಬಂದು ಬಸ್ಸುಗಳನ್ನು ನಿಯಂತ್ರಿಸಿ ಮುಖ್ಯ ರಸ್ತೆಯ ದಟ್ಟಣೆಯನ್ನು ಸುಗಮಗೊಳಿಸಿದರು.


ಇಂತಹ ಟ್ರಾಫಿಕ್ ಜಾಮ್ ಕಾಣೆನೋ ಈ ಜಗದಲ್ಲಿ ಇಂತಹ ಟ್ರಾಫಿಕ್ ಜಾಮ್ ಕಾಣೆನೋ 

ವಾಹನ ಶಬ್ದ ಜೊತೆಗೆ ಜನರ ಬೈಗುಳ ಜೊತೆಗೆ ಚಿಂದಿ-ಚಿತ್ರಾನ್ನ ರಸ್ತೆ,

ಕೊನೆಗೆ ಕಾಲು ನೋವು ಕ್ಲಚ್ಚು ಒತ್ತಿ!

ಇವತ್ತು ಮ್ಯಾಪ್ ಇಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ :-(. ೨ ಘಂಟೆ ದೀರ್ಘ ಯುದ್ಧಧ ಬಳಿಕ ಸೂರು  ಸೇರಿದೆವು. ಇನ್ನೆಂದೂ ಗೊತ್ತಿರುವ ಮಾರ್ಗದಲ್ಲಿ ಮ್ಯಾಪ್ ಅನ್ನು ಅನುಕರಿಸುವುದಿಲ್ಲ ಮಾರಾಯ್ರೇ. ಹಾಗೆ ಒಂದು ಕಗ್ಗ, ಥಟ್ ಅಂತಾ ತಲೆಗೆ ಹೊಳೆಯಿತು.


ತಿಳಿದ ಮಾರ್ಗವ ತೊರೆದು 

ಮಾಪ್ ದಾರಿ ಅರಸು (ಅಥವಾ ತಂತ್ರಜ್ಞಾನದ ದಾರಿ)

ಟ್ರಾಫಿಕ್ ಜಾಮ್ ಸವಿಯಲು ಇದೆ ದಾರಿ ಮಂಕುಬೂದಿಯೇ!

ಸಮಯ ಉಳಿಸುದಕ್ಕಿಂತ, ನೆಮ್ಮದಿಯ ರಸ್ತೆಯ ತೋರಿಸಯ್ಯ ಗೂಗಲ್ ಮ್ಯಾಪಯ್ಯಾ! ಗುಂಡಿ, ನೀರು ತೋರಿಸಿ, ನಮ್ಮ ಬೆನ್ನು ಮುರಿಯಬೇಡಯ್ಯಾ!

ಕೊನೆಯದಾಗಿ: ಆಗೋದೆಲ್ಲ ಒಳ್ಳೆಯದಕ್ಕೆ ಆಯಿತು!

ದೇವರಲ್ಲಿ ನಂಬಿಕೆ ಇಟ್ಟರೆ ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದು ನಿಜ. ಹದ್ದಿನಕಲ್ಲಿಗೆ ಯೋಜನೆ ಹಾಕಿದ್ದರೂ ೨ ವಾರದ ಹಿಂದೆ ಮಕ್ಕಳ ಅನಾರೋಗ್ಯದಿಂದ ಸಂಚರಿಸಲು ಆಗಲಿಲ್ಲವೆನ್ನುವುದಕ್ಕೆ ಬಹಳ ಬೇಸರ ಇತ್ತು. ಆಗ ಬಹಳ ಮಳೆಯೂ ಇತ್ತು ಜೊತೆಗೆ ಬಲವಾದ ಮುಂಗಾರು ಗಾಳಿ ಬೀಸುತ್ತಿತ್ತು. ಇಂದು ಹದ್ದಿನಕಲ್ಲಿಗೆ ಬಂದಾಗಲೇ ತಿಳಿದದ್ದು ಆಗ ಬೆಟ್ಟ ಪೂರ್ತಿ ಗಿಡಗಂಟೆಗಳಿಂದ ತುಂಬಿತ್ತು ಎಂದು! ಶ್ರಾವಣ ಮಾಸದ ಪ್ರಯುಕ್ತ ಬೆಟ್ಟ ಪೂರ್ತಿ ಶುಚಿ ಮಾಡಿ ಜನಗಳಿಗೆ ಹತ್ತಲು ಅನುಕೂಲ ಮಾಡಿದ್ದಾರೆ. ಜೊತೆಗೆ ಮಳೆ-ಗಾಳಿಯ ಮಧ್ಯೆ ಬೆಟ್ಟ ಹತ್ತುವುದು ಅಸಾಧ್ಯದ ಮಾತು! ಏಕೆಂದರೆ ಜಾರುವ ಕಲ್ಲು ಮತ್ತೆ ಕೆಲವೊಮ್ಮೆ ಕಡಿದಾದ ಮಾರ್ಗ. ಮಕ್ಕಳನ್ನು ಕರೆದುಕೊಂಡು ಕೆಳಗಿಳಿಯುವುದು ಬಹು ಕಷ್ಟ! ಅದಕ್ಕೆ ಇರಬೇಕು ಹನುಮಂತ ರಾಯರು ನಮ್ಮ ಯೋಜನೆಯನ್ನು ಮುಂದೂಡಿದ್ದು! ಇಂದು ದಾರಿ ಕೂಡಾ ಸುಗಮವಾಗಿತ್ತು ಜೊತೆಗೆ ಬಿಸಿಲು-ಮೋಡದ ಜುಗಲ್-ಬಂದಿ, ಬೆಟ್ಟ ಹತ್ತುವುದನ್ನು ಸುಗಮವಾಗಿಸಿತ್ತು. ಗಾಳಿ ಕೂಡಾ ಅಷ್ಟೇನೂ ಬಿಸುತ್ತಿರಲಿಲ್ಲ, ಜೊತೆಗೆ ಶ್ರಾವಣ ಶನಿವಾರದ ಶುಭದಿನ ಬೇರೆ. ಎಲ್ಲವು ಒಳ್ಳೆಯದಾಗಿದಕ್ಕೆ ಶ್ರೀ ಆಂಜನೇಯ ದೇವರಿಗೆ ಧನ್ಯವಾದವನ್ನು ಸಲ್ಲಿಸಿದೆ.

ಬುದ್ಧಿರ್ಬಲಂ ಯಶೋಧರ್ಯಂ ನಿರ್ಭಯತ್ವಂ ಅರೋಗತ।

ಅಜಾಡ್ಯಮ್ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್|| 

ಬಲ, ಅರೋಗ, ಅಜಾಡ್ಯ ಬೇಕೆಂದರೆ ಸದಾ ಚಟುವಟಿಕೆಯಿಂದ ಕೂಡಿರಬೇಕು. ದೇಹ ದಂಡನೆಯಿಲ್ಲದೆ ಆರೋಗ್ಯವನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಮಕ್ಕಳು, ದೊಡ್ಡವರು, ಮುದುಕರು ಎಂಬ ಭೇದವಿಲ್ಲದೆ ಎಲ್ಲರೂ ಬೆಟ್ಟ ಹತ್ತಿ ದೇವರ ದರ್ಶನ ಮಾಡುತ್ತಿದ್ದರು. ಹುಟ್ಟಿದ ಕೂಸನ್ನು ಕರೆದುಕೊಂಡು ಬಂದು ತಮ್ಮ ಸೇವೆಯನ್ನು ಸಮರ್ಪಿಸುತ್ತಿದ್ದರು. ತುಂಬಾ ಸುಸ್ತಾಗಿ ವಾಪಾಸ್ ಹೋಗಬಯುಸುವವರಿಗೆ, ಅವರ ಹತ್ತಿರದವರು "ಇಷ್ಟೊಂದು ದೂರ ಬಂದು ದೇವರ ನೋಡಿಕೊಂಡು ಹೋಗಾವಾ! ಆಂಜನೇಯ ಸ್ಮರಿಸು, ಅವನೇ ಬೆಟ್ಟ ಹತ್ತಲು ಶಕ್ತಿ ಕೊಡ್ತಾನೆ" ಎಂಬ ಧೃಢ ನಂಬಿಕೆಯಿಂದ ಹುರಿದುಂಬಿಸುತ್ತಿದ್ದರು. ನಮಗೂ ಅವರ ಮಾತುಗಳು ಪ್ರೇರಣೆಯಾಗುತ್ತಿದ್ದವು. ಅದಕ್ಕಾಗಿಯೇ ಹದ್ದಿನಕಲ್ಲಿನ ಆಂಜನೇಯ ಬೆಟ್ಟ ಹತ್ತಿ ಬನ್ನಿ ಅಂತ ಭಕ್ತರನ್ನು ಆರೋಗ್ಯ ದೃಷ್ಟಿಯಿಂದ ಕರೆಯುವಂತಿದೆ. ಜೊತೆಗೆ ಮನೆ ಸೇರುವ ಹೊತ್ತಿಗೆ ತಾಳ್ಮೆ ಎಂಬುವ ಪಾಠವನ್ನು ಹೇಳಿಕೊಟ್ಟಂತಿದೆ. ಶ್ರೀ ಕ್ಷೇತ್ರಕ್ಕೆ ನೀವು ಹೋಗಿ ಬನ್ನಿ. ಶ್ರಾವಣ ಶನಿವಾರ ಒಳ್ಳೆಯ ಸಮಯ. ಜನಜಂಗುಳಿ ಇದ್ದರೂ, ಸಾರ್ಥಕತೆಯ ಭಾವ ಇರುವುದು. ಜೊತೆಗೆ ಮಳೆಗಾಲದ ಸುಂದರ ಪ್ರಕೃತಿಯನ್ನು ಸವಿಯಬಹುದು. 

ಹದ್ದಿನಕಲ್ಲು ಶ್ರೀ ಆಂಜನೇಯ ಸ್ವಾಮಿಯ ದರುಶನ ಮಾಡಿ.

ವೀರ ಹನುಮ ಬಹು ಪರಾಕ್ರಮ 
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ

ನಿಮಗಾಗಿ ದೇವರ ಮಂಗಳಾರತಿಯ ವಿಡಿಯೋ. ಸಮಯ ಸಿಕ್ಕಾಗ ಪೂರ್ತಿ ವಿಡಿಯೋ ಅಪ್-ಲೋಡ್ ಮಾಡುವೆ.

Tuesday, August 9, 2022

ಚಾಮುಂಡಿ ಬೆಟ್ಟದಲ್ಲಿ ಲಡ್ಡು ಗೋಲ್ಮಾಲ್

೦೫ ಆಗಸ್ಟ್ ೨೦೨೨,

ಬಹಳ ವರ್ಷಗಳ ಬಳಿಕ ಮತ್ತೆ ಮೈಸೂರು ಸುತ್ತಾಡುವ ಅವಕಾಶ ಒದಗಿ ಬಂದಿತು. ಕುಟುಂಬದವರೊಂದಿಗೆ ಮೂರು ದಿನಗಳ ಕಾಲ ಖುಷಿಯಿಂದ ಮೈಸೂರು ಸುತ್ತಾಡಿದೆವು. ಆಗಾಗ ಜಿಟಿಜಿಟಿ ಹಾಗು ಕೆಲವೊಮ್ಮೆ ಜೋರು ಮಳೆ ಸುರಿದರೂ, ನಾವು ತಿರುಗಾಡುವ ಸಮಯದಲ್ಲಿ ಮಳೆರಾಯ ಬಿಡುವು ನೀಡು ನಮ್ಮ ಪ್ರವಾಸಕ್ಕೆ ಸಹಕರಿಸಿದನು :-).

ಅಂತೆಯೇ ಮೊದಲ ದಿನ ಶುಕ್ರವಾರದಂದು (ವರಮಹಾಲಕ್ಷ್ಮೀ ಪುಣ್ಯದಿನ ಬೇರೆ), ಚಾಮುಂಡಿ ಬೆಟ್ಟ ನಮ್ಮ ಮೊದಲ ಗುರಿಯಾಗಿತ್ತು. ತಾಯಿ ಚಾಮುಂಡಿಯನ್ನು ಕಂಡು ಸುಮಾರು ೧೦ ವರ್ಷವೇ ಆಗಿರಬೇಕು. ಇಂದು ಶುಭದಿನದಂದು ಆ ಅವಕಾಶ ಒದಗಿ ಬಂದಿದ್ದು ನಮ್ಮ ಪುಣ್ಯ. ಅಷ್ಟೇನು ಜನಜಂಗುಳಿ ಇರಲಿಲ್ಲ. ಮಲೆನಾಡಿನಲ್ಲಿ ಮುಂಗಾರು ಬಿರುಸು ಪಡೆದರೆ, ಬಯಲುಸೀಮೆಯಲ್ಲಿ ಜೋರು ಗಾಳಿ ಜೊತೆಗೆ ಜಿಟಿಜಿಟಿ ಮಳೆ ಸಾಥ್ ನೀಡುವುದು ಸಾಮಾನ್ಯ. ಗಾಳಿ ಬಹಳ ಬಿರುಸಾಗಿಯೂ ಜೊತೆಗೆ ತಣ್ಣನೆ ಬೀಸುತ್ತಿತ್ತು. ಕೋತಿಗಳ ಕಾಟದ ಮಧ್ಯೆ, ಜನರ ನೂಕುನುಗ್ಗಲಿನ ನಡುವೆ, ೩೦ ನಿಮಿಷದ ಒಳಗೆ ದೇವಿಯ ದರ್ಶನ ಮುಗಿಸಿದೆವು. ತಾಯಿಯನ್ನು ಕಂಡು ಮನಸ್ಸು ಕೂಡಾ ಹಗುರವಾಗಿ ಸಂತೋಷವಾಯಿತು. ತಾಯಿಯ ಕೃಪೆಯಿಂದ ನಮ್ಮ ದರ್ಶನದ ಬಳಿಕವೇ ಮಳೆ ಸುರಿಯಲಾರಂಭಿಸಿತು. 

ಪ್ರತಿ ಪುಣ್ಯ ಕ್ಷೇತ್ರ ದರ್ಶನದ ಬಳಿಕ, ಅಲ್ಲಿಯ ಲಾಡು ಕೊಳ್ಳುವ ಅಭ್ಯಾಸ ನನಗೆ. ಚಾಮುಂಡಿ ಬೆಟ್ಟದಲ್ಲೂ ಅದೇ ಅಭ್ಯಾಸ ಮುಂದುವರೆಸಿದೆ.  ದೇವಸ್ಥಾನದ ಒಳಗಡೆ ೨ ಲಡ್ಡುವಿಗೆ ೩೦ ರೂಪಾಯಿ ನಿಗದಿಪಡಿಸಿದ್ದರು. ಮಂಗಗಳ ಕಾಟದಿಂದ ನಾನು ಹೊರಗೆ ಖರೀದಿಸಲು ನಿರ್ಧರಿಸಿದೆ. ದೇವಸ್ಥಾನದ ಆವರಣದಿಂದ ಹೊರಬಂದ ನಂತರ, ಲಡ್ಡು ಕೌಂಟರ್ ನಲ್ಲಿ ಲಡ್ಡು ತೆಗೆದುಕೊಳ್ಳಲು ಹೋದೆವು. ಅಲ್ಲಿ ೩ ಲಡ್ಡುವಿಗೆ ೫೦ ರೂಪಾಯಿ ಎಂದು ಹೇಳಿದನು. ನಾನು ಎರಡು ಸಾಕು ಎಂದಾಗ, "ಚೆಂಜ್ ಇಲ್ಲ, ಮೂರು ತಗೋಬೇಕು" ಅಂತಾ ಪಟ್ಟುಹಿಡಿದನು. ನಾನು ವಿಧಿಯಿಲ್ಲದೇ ೫ ರೂಪಾಯಿ ಅಧಿಕ ಶುಲ್ಕ ನೀಡಿ ಖರೀದಿಸಿದೆ.



ದೇವರ ಹೆಸರಲ್ಲಿ ಎಂತಹ ಗೋಲ್ಮಾಲ್ ನೋಡಿ. ಚೇಂಜ್ ಇಲ್ಲ ಅಂತಾ ಸುಲಿಗೆ ಮಾಡೋದಾ. ಇಂದಿನ  ಮೊಬೈಲ್ ಪೇಮೆಂಟ್ ಯುಗದಲ್ಲಿ "ಚೇಂಜ್ ಇಲ್ಲ" ಅನ್ನೋ ಪದವನ್ನೇ ಕೇಳದೆ ಬಹು ವರ್ಷಗಳಾಗಿವೆ. ಸರಕಾರಿ ಯಂತ್ರಗಳೇ ಈ ರೀತಿ ಹೇಳಿದರೆ ಹೇಗೆ.  ಮತ್ತೊಂದು ಮಾತು ಏನೆಂದರೆ, ವಿಶೇಷ ದರ್ಶನದ ಟಿಕೆಟ್ ಪಡೆದವರಿಗೆ ಹೊರಗಡೆ ಲಾಡು ವಿತರಿಸಲಾಗುತ್ತದೆ. ಇಲ್ಲಿ ಹಾಗೆಯೇ ಕೊಳ್ಳುವವರಿಗೆ ಇರುವ ಕೌಂಟರ್ ಅಲ್ಲ ಅಂದುಕೊಳ್ಳುತ್ತೇನೆ. ಏಕೆಂದರೆ ನನಗೆ ಅವನು ಬಿಲ್ ಕೊಡಲಿಲ್ಲ. ಅಂದರೆ ಈ ದುಡ್ಡು ಅವನ ಅಕೌಂಟ್ ಗೆ ಸೇರುತ್ತದೆಯೇನೋ? ಇರಲಿ ಒಟ್ಟಿನಲ್ಲಿ ಎಲ್ಲಾ ಸುಲಿಗೆ. ನಮ್ಮಂತ ಸಾಮಾನ್ಯ ಜನರು ದೇವಸ್ಥಾನದಲ್ಲಿ ಯಾಕೆ ವಾದ-ವಿವಾದ ಅಂತಾ ಸುಮ್ಮನಿರುತ್ತೇವೆ. ಅದಕ್ಕೆ ಸರಿಯಾಗಿ ಲಾಡು ವಿತರಿಸುವವ ಕೂಡಾ "ಬೇಕಾದ್ರೆ ತಗೊಳ್ಳಿ ಇಲ್ಲಾಂದ್ರೆ ಹೋಗ್ರಿ" ಅಂತಾ ಸಿಟ್ಟಿನಲ್ಲಿ ಉಡಾಫೆಯಿಂದ ಉತ್ತರಿಸುತ್ತಾರೆ. ಇಂತಹ ಹಲವು ಒರಟು ನುಡಿಗಳನ್ನು ಬೆಳಗ್ಗಿಯಿಂದ ಕೇಳಿದ್ದೆ. ಇರಲಿ ಬಿಡಿ ಅದೊಂದು ಬೇರೆಯೇ ಕಥೆ. ಟ್ಯಾಕ್ಸ್ ದುಡ್ಡಿನಲ್ಲಿ ಸರಕಾರ ಸೌಕರ್ಯಗಳನ್ನು ನೀಡುತ್ತವೆ. ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ಈತರ ಹಗಲು ಸುಲಿಗೆ ಮಾಡುತ್ತಾರೆ. ನಿಯತ್ತಿನ್ನಲಿ ಟ್ಯಾಕ್ಸ್ ಕಟ್ಟುವವರ ಪಾಡು ಇಷ್ಟೇ ಅಂತಾ ನಾನು ಸುಮ್ಮನೆ ಮೈಸೂರು ಕಡೆ ಪ್ರಯಾಣ ಬೆಳೆಸಿದೆ. 

ಒಟ್ಟಿನಲ್ಲಿ ಗೋಲ್ ಗೋಲ್ ಲಡ್ಡು ಮಾರಾಟದಲ್ಲಿ ದೊಡ್ಡ ಗೋಲ್ಮಾಲ್ ನಡೆಯುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ತಾಯಿ ಚಾಮುಂಡಿ ನೀನೇ ಕಾಪಾಡಬೇಕು.

ಈ ಬ್ಲಾಗ್ ವೀಕ್ಷಿಸಿದವರಾದರೂ ಜಾಗೃತರಾಗಿ, ಮೋಸಹೋಗಬೇಡಿ!

Printfriendly

Related Posts Plugin for WordPress, Blogger...