ನಿವೃತ್ತಿಯ ಬಳಿಕ ಊರಿಗೆ ಬಂದು ಸೇರಿದ ತಿಮ್ಮರಾಯ ದಂಪತಿ, ತಮ್ಮ ಸಂಪ್ರದಾಯವನ್ನು ಮತ್ತಷ್ಟು ಶಿಸ್ತಿನಿಂದ ರೂಢಿಸಿಕೊಳ್ಳಲು ನಿರ್ಧರಿಸಿದರು. ಅದರಲ್ಲಿ ಈರುಳ್ಳಿ ಉಪಯೋಗ ಕಡಿಮೆ ಮಾಡುವುದು, ಹೊರಗಿನ ಊಟಕ್ಕೆ ಕಡಿವಾಣ ಹಾಕುವುದು ಮತ್ತು ಏಕಾದಶಿಯಂದು ಫಲಾಹಾರ ಪಾಲಿಸಲು ಕಟ್ಟುನಿಟ್ಟಾದ ನಿಯಮವನ್ನು ಹೇರಿಕೊಂಡರು. ಸ್ವಲ್ಪ ದಿನ ಏನೋ ನಡೆಯಿತಾದರೂ, ಬರ ಬರುತ್ತಾ ಅದರ ಕಠಿಣತೆ ಕಡಿಮೆಯಾಗತೊಡಗಿತು. ಎಲ್ಲವು ಅವರವರ ಅನುಕೂಲಕ್ಕೆ ಮಾಡುತ್ತಿದ್ದರಾದರು ಬೇರೆಯವರ ಆಚರಣೆಯ ಬಗೆಗ್ಗಿನ ದೂಷಣೆ ಮಾತ್ರ ಕಡಿಮೆ ಮಾಡಿರಲಿಲ್ಲ ತಿಮ್ಮರಾಯರು.
ಅವರ ಮಗ ನಂಜುಂಡಗೆ ಇದೆಲ್ಲವೂ ಸರಿ ಅನ್ನಿಸುತ್ತಿರಲಿಲ್ಲ. "ನೀವು ಮಾಡುವುದು ಎಲ್ಲಾ ಸರಿ, ಬೇರೆಯವರೆಲ್ಲ ತಪ್ಪು ಅನ್ನೋದು ಈ ವಯಸ್ಸಿಗೆ ಬೇಕಾ" ಅಂತಾ ತಿಳಿ ಹೇಳುತ್ತಿದ್ದ. ಆದರೂ ವಯಸ್ಸಿನ ದರ್ಪದಿಂದ ತಿಮ್ಮರಾಯ ದಂಪತಿಗಳು ಮಗನ ಮಾತನ್ನು ಮೂದಲಿಸುತ್ತಿದ್ದರು. "ಅವನೇನು ಜೀವನ ನೋಡಿದ್ದಾನೆ. ಸುಮ್ಮನೆ ದೊಡ್ಡವರಿಗೆ ಪಾಠ ಹೇಳ್ತಾನೆ. ಈಗಿನ ಜೆನರೇಷನ್ ಸರಿ ಇಲ್ಲಾ" ಅಂತಾ ತಮ್ಮ ಹಿರಿತನದ ಅಹಂ ತೋರ್ಪಡಿಸುತ್ತಿದ್ದರು ದಂಪತಿಗಳು. ಇಷ್ಟು ವರ್ಷ ಸರಕಾರೀ ಕೆಲಸದಲ್ಲಿದ್ದರೂ ಸರಿಯಾಗಿ ಉಳಿತಾಯ ಮಾಡದೆ ಎಲ್ಲದಕ್ಕೂ ಮಗನ ಬಳಿ ಹಣ ಕೇಳುತ್ತಿದ್ದ ತಿಮ್ಮರಾಯರಿಗೆ ಅದೇನು ಹಿರಿತನನೊ ಅನ್ನೋದು ಮಗನಿಗೂ ತಿಳಿಯುತ್ತಿರಲಿಲ್ಲ.
ಏಕಾದಶಿ ಆಚರಣೆ ಅಂದಾಗ, ಕೆಲವೊಮ್ಮೆ ಆರ್ಯಭಟ ಮತ್ತು ದೃಗ್ಗಣಿತ ಲೆಕ್ಕಾಚಾರಗಳು ಆಚೀಚೆ ಆಗುತ್ತಿದ್ದವು. ಅಂತೆಯೇ ತಿಮ್ಮರಾಯರ ಅನುಸರಿಸುತ್ತಿದ್ದ ಪ್ರಕಾರ ಭಾನುವಾರದಂದು ಏಕಾದಶಿ ಆಚರಣೆ ಮಾಡಬೇಕಿತ್ತು. ಕೆಲವರು ಶನಿವಾರ ಆಚರಿಸುತ್ತಿದ್ದರು. ಊರಿನಲ್ಲಿ ಭಾನುವಾರದಂದು ನಿಶ್ಚಿತ ತಾಂಬೂಲ ಇತ್ತು. ಇವರಿಗೆ ಏನು ಮಾಡಲು ತಿಳಿದಿರಲಿಲ್ಲ. ಆದರೂ ಏಕಾದಶಿ ಆಚರಣೆಯಂದು, ನಿಶ್ಚಿತ ತಾಂಬೂಲ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಅಕ್ಕಿಯ ದೋಸೆ ಹಾಗು ಉದ್ದಿನ ಇಡ್ಲಿ ತಿಂದು ಬಂದರು.
ಮಗ ಫೋನ್ ಮಾಡಿದಾಗ ಎಲ್ಲವು ವಿವರವಾಗಿ ತಿಳಿಸಿದರು.
"ಅಲ್ಲಮ್ಮ ನಾನು ಇಲ್ಲಿ ಏಕಾದಶಿ ಅಂತ ಮನೆಯಲ್ಲಿ ಕಷ್ಟ ಪಟ್ಟು ಫಲಾಹಾರ ಮಾಡಿದ್ರೆ ನೀವು ಅನುಕೂಲ ಶಾಸ್ತ್ರ ಮಾಡಿಕೊಂಡಿದ್ದೀರಲ್ಲ" ಅಂತ ಬೇಸರ ವ್ಯಕ್ತಪಡಿಸಿದನು.
"ಹಾಗೇನು ಇಲ್ಲ ಕಣೋ ಶಾಸ್ತ್ರ ಪ್ರಕಾರ..." ಹಾಗೆ ಹೀಗೆ ಅಂತ ತಿಮ್ಮರಾಯರು ಇಲ್ಲದ ಸಮಜಾಯಿಷಿ ನೀಡಿದರು. ಮತ್ತೆ ತಪ್ಪು ಒಪ್ಪಿಕೊಳ್ಳಲು ಹಿರಿತನದ ಅಹಂ ಬಿಡಬೇಕಲ್ಲವೇ!
"ಅದಿರಲಿ ನಿಮಗೆ ಬೇಕಾದಾಗ ಇಲ್ದೆ ಇರೋ ಪರದೇಶದ ಶಾಸ್ತ್ರವನ್ನು ಹೊರಗೆ ತರ್ತಿರಾ ಬಿಡಿ. ಶನಿವಾರ ಆದ್ರೂ ಆಚರಣೆ ಮಾಡಬಹುದಿತ್ತು ಹಾಗಿದ್ರಿ" ಅಂತ ಛೇಡಿಸಿದನು
"ನಿಮ್ಮ ಜೆನೆರೇಷನ್ ನವರಿಗೆ ಹಿರಿಯರಿಗೆ ಹೀಯಾಳಿಸುವುದು ತಿಳಿದಿದೆ ಈಗ. ಕಾಲ ಕೆಟ್ಟೋಗಿದೆ ನೋಡು. ಈಗೇನಾಯಿತು ಹೇಳು. ಊರಿನವರ ಕಾರ್ಯಕ್ರಮಕ್ಕೆ ಹೋಗದೆ ಇರಕ್ಕಾಗುತ್ತ ಅಂತಾ" ತಿಮ್ಮರಾಯರು ಅದೇ ಜಾರಿಕೊಳ್ಳುವ ಮಾತು ಹೇಳಿದರು.
"ನಿಶ್ಚಿತ ತಾಂಬೂಲ ಹೋಗ್ಬೇಡಿ ಅಂತಾ ನಾನೇನು ಹೇಳಿಲ್ಲ. ಸುಮ್ಮನೆ ಚಾ-ಕಾಫಿ ಕುಡಿದು ಬರಬಹುದಿತ್ತಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾಕೆ ಆಚರಣೆಗಳನ್ನು ಮಾಡ್ತಿರಾ ಅಂತ" ಮತ್ತೆ ಪ್ರಶ್ನಿಸಿದನು.
"ನಾವೇನು ಅನ್ನ ತಿಂದಿಲ್ಲ, ಅಲ್ಲೂ ಫಲಾಹಾರ ಮಾಡಿದ್ದು ತಿಳಿತಾ" ಎಂದು ತಿಮ್ಮರಾಯರು ಗದರಿದರು.
"ಹಾಗಾದ್ರೆ ನಮಗೆ ಇನ್ನು ಮುಂದೆ ಪಾಠ ಹೇಳ್ಬೇಡಿ . ನಾನು ಬೇಕಾದಾಗ ತಿಂತೀನಿ , ಬೇಕಾದಾಗ ಏಕಾದಶಿ ಆಚರಣೆ ಮಾಡ್ಕೋತೀನಿ. ಮತ್ತೆ ಅಮಾವಾಸ್ಯೆ ಕೂದಲು ಕಟ್ ಮಾಡ್ಬೇಡ, ಶುಕ್ರವಾರ ಎಣ್ಣೆ ಹಚ್ಕೋಬೇಡ ಅಂತಾ ಬೇಡದೆ ಇರೋ ಆಚರಣೆ ನನ್ನ ಮೇಲೆ ಹೇರಬೇಡಿ. ನಿಮಗೆ ಬೇಕಾದಂತೆ ಇರ್ತೀರಾ ಬೇರೆಯವರಿಗೆ ನಿಯಮಗಳನ್ನ ಹೇರ್ತೀರಾ. ಬೇಕಾದ್ರೆ ನಿಮ್ಮದೇ ಪಂಚಾಗ ಪ್ರಿಂಟ್ ಮಾಡಿ ಏಕಾದಶಿಗೆ ಅಕ್ಕಿಯ ಫಲಾಹಾರ ಮಾಡಬಹುದು ಆದರೆ ಅನ್ನ ತಿನ್ನಬಾರದು ಅಂತಾ! ಇದೆಂತ ಹಿರಿತನನೊ" ಎಂದು ಬೇಸರದಿಂದ ನಂಜುಂಡ ಫೋನ್ ಇಟ್ಟನು.
ಹಲವು ಬಾರಿ ಹೀಗೆ ಆದರೂ ತಿಮ್ಮರಾಯ ದಂಪತಿಗಳಿಗೆ ತಾವೇ ಸರಿ ಅನ್ನೋ ಅಹಂ ಹೋಗಿರಲಿಲ್ಲ. "maturity has no relation to age" ಅಂತಾ ನಂಜುಂಡನಿಗೂ ಮನವರಿಕೆಯಾಯಿತು. ತನ್ನ ಹೆತ್ತವರು "ಏಕಾದಶಿ ವಿಷಯದಲ್ಲಿ ಚೌಕಾಶಿ" ಮಾಡಿದ್ದು ನಂಜುಂಡಗೆ ಸ್ವಲ್ಪವೂ ಹಿಡಿಸಿರಲಿಲ್ಲ. ಅವರ ಅನುಕೂಲ ಶಾಸ್ತ್ರದ ಆಚರಣೆಯ ದ್ವಂದ್ವತನದಿಂದ ಅವನು ರೋಸಿಹೋಗಿದ್ದ. ತನ್ನ ಆಚರಣೆ ತನಗೆ ಎಂದು ಹೆತ್ತವರ ಯಾವುದೇ ಆಚರಣೆಗೆ ಕಿವಿಗೊಡುತ್ತಿರಲಿಲ್ಲ.