ಬಹಳ ದಿನದಿಂದ ಅಪಾರ್ಟ್-ಮೆಂಟ್ ಬಾಲ್ಕನಿಯಲ್ಲಿ ವಿಸ್ಮಯ ಕಾದಿತ್ತು. ಪಾಟ್-ಗಳ ಮಧ್ಯದಲ್ಲಿ ಹುಲ್ಲುಹಾಸು ತಲೆ ಎತ್ತುತ್ತಿತ್ತು. ಅರೆರೆ ಇದೇನಪ್ಪಾ ಅಂತಾ ಆಶ್ಚರ್ಯಗೊಂಡ ಮಡದಿ, ಪ್ರತಿದಿನ ಅದನ್ನು ಕ್ಲೀನ್ ಮಾಡುವದರಲ್ಲೇ ಸಮಯ ಕಳೆಯುತ್ತಿದ್ದಳು. ಪಾರಿವಾಳಕ್ಕೆ ಹೇಗೂ ಸುರಕ್ಷಾ ನೆಟ್ ಹಾಕಲಾಗಿದೆ, ಮತ್ಯಾರಪ್ಪಾ ಇದು ಅಂತಾ ಯೋಚನೆ ಮಾಡುತ್ತಿದ್ದೆವು. ಫ್ರೆಶ್ ಹುಲ್ಲುಹಾಸು ಎಲ್ಲಿಂದ ಬರುತ್ತಿದ್ದೆ ಅದು ಕೂಡಾ ದಿನಕ್ಕೆ ಮೂರು ಬಾರಿ. ಏನಪ್ಪಾ ಎಂದು ಯೋಚಿಸುತ್ತಿರುವಾಗ ಒಂದು ದಿನ ಮಡದಿಗೆ "ರೀ ಬನ್ರೀ! ಸಣ್ಣ ಹಕ್ಕಿ ತಂದು ತಂದು ಗುಡ್ಡೆ ಹಾಕ್ತಾ ಇದೆ ನೋಡಿ" ಅಂದು ಜೋರಾಗಿ ಕೂಗಿದಳು. ನಾನು ಬಂದು ನೋಡಿದಾಗ ನಮ್ಮ ಮುನಿಯ () ಸಾಹೇಬರು ಇಲ್ಲಿ ತಮ್ಮ ಸಂತಾನೋತ್ಪತ್ತಿಗೆ ಸ್ಕೆಚ್ ಹಾಕುತ್ತಿರುವುದು ಕನ್ಫರ್ಮ್ ಆಯಿತು. ಅದರ ಪ್ರಯತ್ನಕ್ಕೆ ಮೆಚ್ಚಲೇ ಬೇಕು ನೋಡಿ! ಹಲವಾರು ಸಲ ನಾವು ಅದರ ಹುಲ್ಲುಹಾಸನ್ನು ಬಿಸಾಡಿದರೂ ಅದು ಛಲ ಬಿಡಲಿಲ್ಲ. ಕೊನೆಗೆ ನಾವೇ ರೋಸಿ ಹೋಗಿ, ಬಾಲ್ಕನಿಯಲ್ಲಿ ಉಳಿದ ಸಣ್ಣ ಗ್ಯಾಪ್ ಅನ್ನು ಪ್ಲಾಸ್ಟಿಕ್ ಕವರ್ ಮೂಲಕ ಮುಚ್ಚಿದೆವು.
ಮುನಿಯಾಗೆ ಮತ್ತೆ ಬರಲು ಸಾಧ್ಯವಾಗಲಿಲ್ಲ. ಅದು ದುರುಗುಟ್ಟಿ ನಮ್ಮನ್ನೇ ನೋಡುತ್ತಿತ್ತು. "ಏನ್ ಮನುಷ್ಯರೋ ನೀವು! ನಮ್ಮ ಜಾಗಾನೇಲ್ಲಾ ಕಾಂಕ್ರೀಟ್ ಕಾಡು ಮಾಡಿ, ನಮ್ಮ ಜೀವನವನ್ನ ಕಿತ್ಕೊಂಡು, ನಿಮ್ಮ ಜಾಗದಲ್ಲೂ ಬದುಕಕ್ಕೆ ಬಿಡಲ್ಲ. ಒಂದಲ್ಲಾ ಒಂದು ದಿನ ಪ್ರಕೃತಿನೇ ನಿಮಗೆ ಪಾಠ ಕಲಿಸುತ್ತೆ ನೋಡ್ತಾ ಇರಿ" ಅಂತಾ ಶಾಪ ಇಟ್ಟಂತಿತ್ತು. ನನಗು ಬೇಜಾರಾದರು ಚಾರ್ಲ್ಸ್ ಡಾರ್ವಿನ್ ಅವರ "Survival of Fittest" ಘೋಷಣೆ ನೆನಪು ಮಾಡಿಕೊಂಡು ವಿಷಯವನ್ನು ಅಲ್ಲೇ ಮುಕ್ತಾಯ ಮಾಡಿದೆನು!




No comments:
Post a Comment