Saturday, March 14, 2015

ಪಚ್ಚನ ಪ್ಯಾಂಟು, ಮತ್ತು ತೂಕ

"ನಿನ್ನ ಅರ್ಧ ಅಂಗಿಗಳು ಸರಿಯಾಗಿ ಒಪ್ಪುವವರೆಗೂ ನಿನಗೆ ಅರ್ಧಾಂಗಿ ಸಿಗುವುದು ದೂರದ ಮಾತು..." ತಾಳ್ಮೆ ಕಳೆದುಕೊಂಡ ಪಚ್ಚನ ತಂದೆ ಮಗನಿಗೆ ಗದರಿದರು. ಪಚ್ಚನಿಗೆ ಬೇಜಾರಿನ ಜೊತೆಗೆ ಮುಜುಗರವು ಆಯಿತು. ಅದೇನಾಯಿತೋ, ಮರುದಿನ ಮುಂಜಾವಿನ ಸಮಯದಲ್ಲಿ ಶೂ ಲೆಸ್ ಕಟ್ಟಿಕೊಂಡು ಸೀದಾ ಪಾರ್ಕಿನ ಕಡೆಗೆ ನಡೆದ. ೧೦ ಸುತ್ತು ಓಡಲು ಧೃಡಸಂಕಲ್ಪ ಮಾಡಿದ ಕೂಡ! ಆದರೆ ದೇಹ ಬಿಡಬೇಕಲ್ವೆ! ಸರಿಯಾಗಿ ಪಳಗಿಸದ ದೇಹವು ಅಷ್ಟು ಬೇಗ ಹೊಂದಿಕೊಳ್ಳುವುದಿಲ್ಲವೆಂಬುದು ಅವನಿಗೆ ಅರಿವಾದದ್ದು ಆಗಲೇ! ಆಂಗ್ಲದಲ್ಲಿ  "presumptuous" ಎನ್ನುವಂತೆ ಹಠಾತ್ ಪ್ರವೃತ್ತಿ, ಅತಿಯಾದ ಆತ್ಮವಿಶ್ವಾಸ ನಮಗೆ ಮುಳುವಾಗುತ್ತದೆ. ಕೆಲವೊಮ್ಮೆ ಲಿಮಿಟ್ ಅಲ್ಲಿ ಇದ್ದರೆ ಕೆಲಸ ಸರಾಗವಾಗುತ್ತದೆ (ನನ್ನ ಗಡಿಯಾರಕ್ಕೆ ಸಹ ಡ್ಯೂರಾಸೆಲ್ ಬ್ಯಾಟರಿ ಅಂದರೆ ಅಲರ್ಜಿ ಆದರೆ ಎವರೆಡಿ ಹಾಕಿದರೆ ಬೊಂಬಾಟಾಗಿ ಓಡುತ್ತದೆ).  ಬ್ಯಾಕ್ ಟು ಪಚ್ಚ! ಆದರೂ ಕಷ್ಟಪಟ್ಟು ೫ ರೌಂಡ್ ಓಡಿದ ಅದು ಕೂಡ ೩-೪ ವಿರಾಮದೊಂದಿಗೆ. ಇದೆ ದಾಟಿ ೨ ವಾರದವರೆಗೂ ನಡೆಯಿತು. ದಿನ ಕಳೆದಂತೆ, ಸ್ವಲ್ಪ ಪ್ರಗತಿ ಕಂಡು ಬಂತು. ಕೇವಲ ಒಂದೆ ವಿರಾಮದಲ್ಲಿ ೫ ರೌಂಡ್ ಓಡುತ್ತಿದ್ದ ಪಚ್ಚ. ಆದರು ೧೦ ಸುತ್ತು ಓಡುವುದು ಇನ್ನು ಕನಸಾಗೆ ಉಳಿದಿತ್ತು.

ಹೇಳಿಕೊಳ್ಳುವಂತೆ ಪಚ್ಚ ಅಷ್ಟೇನೂ ದಪ್ಪ ಇರಲಿಲ್ಲ. ಈಗಿನ ಕಾಲದ ಸ್ಲಿಮ್ ಹುಡುಗಿಯರ ಮುಂದೆ ಸ್ವಲ್ಪ ಕೋಣದಂತೆ ಕಾಣುತ್ತಿದ್ದನಷ್ಟೆ. ಅಪ್ಪನಿಗಿಂತ ಸ್ವಲ್ಪ ಸಣಕಲು ಎನ್ನಬಹುದು. ಆದರೂ ಜನರೇಶನ್ ಗ್ಯಾಪ್ ಅನ್ನುವುದು ಇರುತ್ತದೆ, ಆದ್ದರಿಂದ ಹುಡುಗಿ ಹೊಂದಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಮೊದಲೇ ಕುಳಿತು ಕುರ್ಚಿ ಬಿಸಿ ಮಾಡುವ ಕಾರ್ಯ ಅದರ ಜೊತೆಗೆ ರುಚಿಯಾದ ಅಮ್ಮನ ಅಡುಗೆ. ಬೆಳಗ್ಗೆ ಎದ್ದ ತಕ್ಷಣ ಆಫೀಸಿಗೆ ಓಟ. ರಾತ್ರಿ ಬಂದನೆಂದರೆ ಊಟ ಮುಗಿಸಿ ಸೀದಾ ನಿದ್ರಾ ದೇವಿಗೆ ಶರಣು. ವೀಕೆಂಡ್ ಬಂತೆಂದರೆ ೫ ದಿನದ ಅಳಿದುಳಿದ ನಿದ್ದೆಯನ್ನು ಸರಿದೂಗಿಸಲು ಸರಿಯಾಗುತ್ತಿತ್ತು. ಇವೆಲ್ಲದರ ಮಧ್ಯೆ ವ್ಯಾಯಾಮಕ್ಕೆ ಜಾಗವೇ ಇರುತ್ತಿರಲಿಲ್ಲ.  ದೇಹ ಸ್ವಲ್ಪ ದಪ್ಪವಿದ್ದರೂ ಚಿತ್ರನಟಿಯಂತಹ ಹುಡುಗಿಗೆ ಆಸೆ ಪಟ್ಟಿದ್ದ. ಹೋದ ವರುಷ ಖರೀದಿಸಿದ ಬಟ್ಟೆಗಳು ಆಗಲೇ ಸೊಂಟಕ್ಕೆ ಸರಿಯಾಗಿ ಒಗ್ಗುತ್ತಿರಲಿಲ್ಲ. ತಂದೆ ಗದರಿದ ಬಳಿಕ ಬೇಸತ್ತು ತೂಕ ಇಳಿಸಿಕೊಳ್ಳಲು ಓಟಕ್ಕೆ ಶರಣಾದ. ಹೀಗೆ ಸುಮಾರು ೨ ವಾರ ಅವನ ಓಟ ಸಾಗಿತ್ತು.

ಅದೊಂದು ದಿನ, ಸ್ವಲ್ಪ ತರಾತುರಿಯಲ್ಲಿ ತಿಂಡಿ ತಿಂದು ಡ್ರೆಸ್ ಮಾಡಿಕೊಂಡು ಕಂಪೆನಿ ಬಸ್ಸು ಬರುವಲ್ಲಿಗೆ ಓಡಿದ. ಎದ್ದದ್ದು ತಡವಾದ್ದರಿಂದ ಗಡಿಬಿಡಿಯಲ್ಲಿ ಆಫೀಸಿಗೆ ತೆರಳಬೇಕಾಗಿ ಬಂತು. ಸ್ವಲ್ಪದರಲ್ಲಿ ಬಸ್ಸು ತಪ್ಪುವುದು ತಪ್ಪಿತು. ಬಸ್ಸಿನಲ್ಲಿ ಕೂತು ಸ್ವಲ್ಪ ಹೊತ್ತು ಆಗಿರಬೇಕು, ಅವನಿಗೆ ಪ್ಯಾಂಟ್ ಮೆಲ್ಲನೆ ಜಾರುತ್ತಿರುವ ಅನುಭವವಾಯಿತು. ಯಾಕಾಗಿರಬಹುದು ಎಂದು ಯೋಚಿಸುವಾಗ ಅವನಿಗೆ ಪಕ್ಕನೆ ನೆನಪಾಗಿದ್ದು ದಿನನಿತ್ಯದ ಓಟ. ಅವನಿಗೆ ಆಶ್ಚರ್ಯದ ಜೊತೆಗೆ ಹೆಮ್ಮೆಯು ಆಯಿತು. ಹೆಮ್ಮೆಯ ಬಗ್ಗೆ ವಿವರಣೆ ಅಗತ್ಯ ಇಲ್ಲ, ಏಕೆಂದರೆ ೨ ವಾರದ ಓಡಿ ಹೊಟ್ಟೆ ಕರಗಿದೆಯೆಂದು ಅವನು ಭಾವಿಸಿದ್ದ. ಆಫೀಸು ತಲುಪಿದ್ದೆ ತಡ, ರಾಜ ಗಾಂಭೀರ್ಯದಿಂದ ನಡೆಯುತ್ತಿದ್ದ.  ಅವನ ಸಹೋದ್ಯೋಗಿಗಳಿಗೆ ಇವನ ವರ್ತನೆ ಕಂಡು ದಿಗ್ಭ್ರಮೆಯಾಯಿತು. ಅವನು ಪದೆ ಪದೆ ಪ್ಯಾಂಟ್ ಮೇಲೆರಿಸುವುದನ್ನು ನೋಡಿ ಕೆಲವರಿಗೆ ಅಸಹ್ಯವೆನಿಸಿತು. ಯಾರಾದರು ವಿಚಾರಿಸಿದರೆ "ನನ್ನಲ್ಲಿ ಬದಲಾವಣೆ ಕಾಣುತ್ತಿಲ್ಲವೇ?" ಎಂದು ಗರ್ವದಿಂದ ಪ್ರಶ್ನಿಸುತ್ತಿದ್ದ. ಅಲ್ಲಿರುವವರಿಗೆ ಇವನು ಪ್ಯಾಂಟನ್ನು ಮೇಲೆರಿಸುವುದು ಹೊರತಾಗಿ ಬೇರೆ ಯಾವ ಬದಲಾವಣೆಯನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಹಲವು ಜನರು ಇವನ ವಿಚಿತ್ರ ವರ್ತನೆಯ ಬಗ್ಗೆ ಆಡಿಕೊಳ್ಳುತ್ತಿದ್ದರು ಕೂಡ. ಪಚ್ಚ ಕೂಡ ಮಾಯಾಲೋಕದಲ್ಲಿ ಕಿನ್ನರಿಯ ಜೊತೆ ವಿಹರಿಸುವ ಕನಸು ಕಾಣುತ್ತಿದ್ದ. ಬಹುಶಃ ಅಂದಿನ ಕೆಲಸವೂ ಶೂನ್ಯ ಅಂದರೆ ತಪ್ಪಾಗದು.

ಕೆಲಸದ ಸಮಯ ಮುಗಿಯುತ್ತಿದ್ದಂತೆ ಪಚ್ಚ ಮನೆಯ ಕಡೆ ಪ್ರಯಾಣ ಬೆಳೆಸಿದ. ಬಾಗಿಲಲ್ಲಿ ಬಳಿ ನಿಂದು ಬೆಲ್ ಹೊಡೆದ ತಕ್ಷಣ ಅಪ್ಪ ಬಾಗಿಲು ತೆರೆದರು. ಅಪ್ಪನ ಮುಖದಲ್ಲಿ ಬದಲಾವಣೆಯ ಛಾಯೆ ಕಂಡು ಬಹುಶಃ ತನ್ನ ತೂಕದ ವಿಚಾರದಲ್ಲಿ ಅಪ್ಪನಿಗೆ ಆಶ್ಚರ್ಯವಾಗಿರಬೇಕೆಂದು ಒಳಗೊಳಗೇ ಹೆಮ್ಮೆ ಪಟ್ಟ. ಮನೆಗೆ ಬಂದು ಬಹಳ ಹೊತ್ತಾದರೂ ಡ್ರೆಸ್ ಬದಲಾಯಿಸಲಿಲ್ಲ ಪಾರ್ಟಿ. ಎಲ್ಲರೂ ಗಮನಿಸಲಿ ಎಂದು ಬೇಕೆಂದಲೇ ತನ್ನ ವೈಯ್ಯಾರವನ್ನು ಪ್ರದರ್ಶಿಸುತ್ತಿದ್ದ.  ಇವನ ಈ ವರ್ತನೆಯನ್ನು ಗಮನಿಸುತ್ತಿದ್ದ ತಂದೆ ಸ್ವಲ್ಪ ಹೊತ್ತಿನ ಬಳಿಕ ತಾಳ್ಮೆ ಕಳೆದುಕೊಂಡರು.

"ಏನು ಯಜಮಾನರು, ರಾತ್ರಿ ಪಾರ್ಟಿ ಇದಿಯೋ ಅಥವಾ ಇನ್ನು ಬಟ್ಟೆ ಬದಲಾಯಿಸಲಿಕ್ಕೆ ಮುಹೂರ್ತ ಕೂಡಿ ಬರಲಿಲ್ಲವೇ? ಬೇರೆ ಪ್ಯಾಂಟ್ ಧರಿಸಬಹುದಿತ್ತಲ್ಲ?" ವ್ಯಂಗ್ಯವಾಗಿ ಪ್ರಶ್ನಿಸಿದರು ತಂದೆ.

ಜಾರುತ್ತಿರುವ ಪ್ಯಾಂಟನ್ನು ಅಪ್ಪ ಕಂಡಿದ್ದಾರೆಂದು ಗೊತ್ತಾದ ನಂತರ ಪಚ್ಚನ ಉಲ್ಲಾಸ ಇಮ್ಮಡಿಯಾಯಿತು.

"ನನ್ನಲ್ಲಿನ ಬದಲಾವಣೆ ನಿಮಗಾದರೂ ಕಂಡಿತಲ್ಲ" ನಿಟ್ಟುಸಿರುಬಿಟ್ಟ ಪಚ್ಚ.
"ಅಂತದ್ದೇನು ಆಗಿದೆಯೋ ಮಾರಾಯ.." ಮರುಪ್ರಶ್ನಿಸಿದರು ತಂದೆ.
"ನೀವೇ ಹೇಳಿದರಲ್ಲವೇ ಪ್ಯಾಂಟ್ ಪದೆ ಪದೆ ಜಾರುತ್ತಿದೆ ಎಂದು. ಇದು ನನ್ನ ತೂಕ ಇಳಿದ ಸೂಚನೆ ಅಲ್ಲವೇ?.. ಪ್ರತಿದಿನ ನೋಡುವವರಿಗೆ ಇಂತಹ ವಿಷಯಗಳನ್ನು ಗಮನಿಸುವುದು ಸ್ವಲ್ಪ ಕಷ್ಟವೇ ಅನ್ನಿ"  ಎಂದು ಹೆಮ್ಮೆಯಿಂದ ಮಾರುತ್ತರಿಸಿದ.
"ಹ್ಹ ಹ್ಹ ಹ್ಹ ಹ್ಹ...." ಇತ್ತ ತಂದೆಗೆ ನಗು ತಡೆಯಲಾಗಲಿಲ್ಲ. ಮಾತು ಮುಂದುವರೆಸುತ್ತಾ, "ಅಲ್ವೋ ಮಾರಾಯ, ನನ್ನ ಪ್ಯಾಂಟ್ ಹಾಕಿಕೊಂಡು ನಿನ್ನ ತೂಕ ಇಳಿಯುವ ನಾಟಕ ಮಾಡುತ್ತಿದ್ದಿಯೇನೂ? ೨ ವಾರದಲ್ಲಿ ಯಾವ ಮಣ್ಣು ತೂಕನೂ ಇಳಿಯುವುದಿಲ್ಲವೋ ಕಪಿಯೇ! ಆಫೀಸ್ ಅಲ್ಲಿ ಸಹ ಇದೇ ವೇಷವೋ ನಿಂದು?" ಹಾಗೆ ನಗು ಮುಂದುವರೆದಿತ್ತು..

ಪಚ್ಚನಿಗೆ ಒಮ್ಮೆಲೆ ಮುಖಕ್ಕೆ ಹೊಡೆದಂತಾಯಿತು. ಅವಸರದಲ್ಲಿ ಅಪ್ಪನ ಪ್ಯಾಂಟನ್ನು ಸಿಕ್ಕಿಸಿಕೊಂಡಿದ್ದ. ಸುಮಾರು ೧೦ ಘಂಟೆಯಿಂದ ಮಾಯಾಲೋಕದಲ್ಲಿ ವಿಹರಿಸುತ್ತಿದ್ದ ದೇಹವು, ವಾಸ್ತವಕ್ಕೆ ಬಂತು. ಜಂಬದಿಂದ ರೇಗುತ್ತಿದ್ದ ಜೀವವು ಇದ್ದಕ್ಕಿದ್ದಂತೆ ಸಿಡಿಲು ಬಡಿದಂತಾಗಿ ಮೂಕವಾಗಿತ್ತು. ಅವನಿಗೆ ತಾನು ಸೃಷ್ಟಿಸಿದ ಅವಾಂತರದ ಬಗ್ಗೆ ಮುಜುಗರವಾಯಿತು. ನಾಚಿಕೆಯಿಂದ ಏನು ಮಾತನಾಡದೆ ತನ್ನ ರೂಮಿನ ಕಡೆ ನಡೆದ. ಬರಿದಾದ ಹೊಟ್ಟೆಯಲ್ಲಿ ನಿದ್ರಾದೇವಿಗೆ ಶರಣಾದ. ಅವನ ತಾಯಿಗೆ ಮಗನ ಮುಖವನ್ನು ನೋಡಿ ಬೇಸರವಾಯಿತು. "ಆಲ್ರೀ ಸ್ವಲ್ಪ ಸಾವಧಾನವಾಗಿ ಹೇಳಬಹುದಿತ್ತಲ್ಲ.. ಆ ಪರಿಯಲ್ಲಿ ಅಣಕಿಸುವ ಅಗತ್ಯವಾದರೂ ಏನಿತ್ತು?" ಎಂದು ಮಗನ ಸಪೋರ್ಟಿಗೆ ಅಮ್ಮ ನಿಂತಳು. "ಅಲ್ವೇ, ಬೆಳೆದಿರುವ ಹುಡುಗನಿಗೆ ಸ್ವಲ್ಪವಾದರೂ ಪರಿಜ್ಞಾನ ಬೇಕು. ನಾನೇನೋ ಹೇಳಿದೆ, ಆದರೆ ನಾಳೆ ಆಫೀಸಿಗೆ ಯಾವ ಮುಖ ಇಟ್ಟು ಹೋಗುತ್ತಾನೆ ಇವನು" ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಮರುದಿನ ಮತ್ತೆ ಶೂ ಲೇಸ್ ಕಟ್ಟಿಕೊಂಡು ಎಂದಿನಂತೆ ಓಟಕ್ಕೆ ಅಣಿಯಾದ. ಪ್ರತಿ ಕ್ಷಣವೂ ಅವನಿಗೆ ನಿನ್ನೆಯ ಘಟನೆ ನೆನಪಾಗಿ ಮುಜುಗರವಾಗುತ್ತಿತ್ತು. ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಎದುರಿಸುವುದೇ ಅವನಿಗೆ ಇಂದಿನ ಬಹುದೊಡ್ಡ ಸವಾಲಾಗಿತ್ತು. ಕಚೇರಿಯಲ್ಲಿ ತೂಕದ ವಿಷಯದಲ್ಲಿ ಮೂರ್ಖತನ ಪ್ರದರ್ಶಿಸದಿದ್ದುದ್ದೆ ಅವನಿಗಿದ್ದ ಸಮಾಧಾನಕರದ ಸಂಗತಿ.

No comments:

Post a Comment

Printfriendly

Related Posts Plugin for WordPress, Blogger...