Wednesday, December 6, 2017

ವಾಟ್ಸಾಪ್ ಇದಿಯಲ್ಲ!

"ರೀ! ನಾವು ಸ್ವಂತ ಊರಿನಿಂದ ಆದಷ್ಟು ದೂರ ಇದ್ರೇನೆ ಒಳ್ಳೆಯದು ಅನ್ಸುತ್ತೆ" ಎಂದಳು ಮಡದಿ ಬೇಸರದಿಂದ.

"ಅದ್ಯಾಕೆ  ಇಂತಹ ಯೋಚನೆ ನಿಂಗೆ ಈಗ ಬರ್ತಾ ಇದೆ. ಸುಂದರ ಊರು, ಫ್ರೆಶ್ ಗಾಳಿ, ಆಹ್ಲಾದಕರ ವಾತಾವರಣ, ಇನ್ನೇನು ಬೇಕು ನಮಗೆ! ನೋಡು ಬೆಂಗಳೂರಿನ ಮಾಮನಿಗೆ ಯಾವಾಗ ನೋಡಿದ್ರು ಹುಷಾರಿರಲ್ಲ. ಇಲ್ಲಿ ಲಾಂಡ್ ಆಗಿತಕ್ಷಣ ಅವರ ರೋಗ ಎಲ್ಲಾ ಮಾಯ ಆಗಿಬಿಡುತ್ತೆ. ನಿನಗೇನಾಯಿತು ಸಡನ್ ಆಗಿ" ಎಂದು ಗಂಡ ಆಶ್ಚರ್ಯ ನೋಟದಿಂದ ಪ್ರಶ್ನಿಸಿದನು.

"ಹಾಗಲ್ರಿ! ಈ ಬಂಧುಗಳದ್ದೇ ಕಾಟ ಊರಲ್ಲಿ ಇದ್ರೆ! ಅಲ್ರಿ ಮೊನ್ನೆ ನಮ್ಮ ಮಾವನ ಮಗಳು ನಿಂಗವ್ವ ಹೊಸದಾಗಿ ತಗೊಂಡಿರೋ ಚಿನ್ನದ ಸರ ತೋರ್ಸಕ್ಕೆ  ಅಂತ ಬಂದಿದ್ಲು. ಮತ್ತೆ ಅವತ್ತು ಚಿಕ್ಕಮ್ಮನ ಮಗಳು ಗೌರಮ್ಮ ಅಂತೂ ದಿನಪೂರ್ತಿ ಚಾಡಿ ಮಾತಾಡ್ತಾ ಇದ್ಲು. ಇಲ್ಲೇ ಪಕ್ಕದಲ್ಲಿರೋ ನನ್ನ ಕಸಿನ್ ದಿನಾ ಹೊಸ ಮನೆ ನೋಡಕ್ಕೆ ಕರೀತಾಳೆ. ನಾನು ೧೦ ಸಲ ನೋಡಿದ್ದಾಯ್ತು ಆದ್ರೂ ಬಿಡ್ತಾ ಇಲ್ಲ. ಬಂದಿಲ್ಲಾಂದ್ರೆ ವಿಡಿಯೋ ತಂದು ತೋರಿಸ್ತಾಳೆ. ಇದಂತೂ ತುಂಬಾ ಅತಿ ಆಯ್ತು ಅಲ್ವಾ!? ಅದಿಕ್ಕೆ ಊರಿಂದ ದೂರ ಇದ್ರೇನೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಅನ್ನಿಸ್ತಾ ಇದೆ!" ಎಂದು ಪೇಚು ಮೊರೆ ಹಾಕಿಕೊಂಡು ಗಂಡನ ಬಳಿ ತನ್ನ ಅಳಲು ತೋಡಿಕೊಂಡಳು.

"ಒಹೋ ಹಾಗಾ ವಿಷಯ! ಹಾಗಾದ್ರೆ ಇದು ವಿಶ್ವದ ಯಾವ ಮೂಲೆಗೆ ಹೋದರು ನಿವಾರಣೆಯಾಗದ ಸಮಸ್ಯೆನೆ ಕಣೆ" ಎಂದು ಗಂಡ ನಕ್ಕು ಹೇಳಿದನು.

"ಏನ್ರಿ ನಾನು ಸ್ವಲ್ಪ ಸೀರಿಯಸ್ ಆಗಿ ವಿವರಿಸಿದ್ರೆ ನಿಮಗೆ ಇದ್ರಲ್ಲಿ ಹ್ಯೂಮರ್ ಕಾಣಿಸ್ತಾ ಇದ್ದೀಯ. ನಿಮಗೇನು ಗೊತ್ತಾಗ್ಬೇಕು ಗೃಹಿಣಿಯ ಕಷ್ಟ. ಅದ್ಯಾಕ್ರೀ ಸಮಸ್ಯೆ ಹೋಗಲ್ಲ ಅಂದಿದ್ದು ನೀವು?" ಎಂದು ಸಿಟ್ಟಿನಿಂದ ಮರು ಪ್ರಶ್ನಿಸಿದಳು.

"ವಾಟ್ಸಾಪ್ ಇದ್ಯಲ್ಲ ಸಮಸ್ಯೆನ ಜೀವಂತ ಇಡಕ್ಕೆ!!" ಎಂದು ಗಂಡ ಉದುರಿದ್ದೆ ತಡ, ಮಡದಿ ಪೆಚ್ಚು ಮೊರೆ ಹಾಕಿಕೊಂಡು ಸೀದಾ ಅಡುಗೆ ಮನೆಗೆ ನಡೆದು ಹೋದಳು.

No comments:

Post a Comment

Printfriendly

Related Posts Plugin for WordPress, Blogger...