Thursday, November 8, 2018

ಹಾಗೆ ಸುಮ್ಮನೆ - ಮಿಲ್ಕ್ ಪಾರ್ಲರ್ ಘಟನೆ

ಇದು ತುಂಬಾ ಹಳೆಯ ಬರಹ ಈಗ ಬ್ಲಾಗಿಗೆ ಸೇರಿಸುತ್ತಿದ್ದೇನೆ.

ಎಂದಿನಂತೆ ಹಾಲು ತರಲು ಹೋಗಿದ್ದೆ. ಸಂಜೆ ಬೇರೆ ಕೆಲಸ ಇದ್ದರಿಂದ ಮಧ್ಯಾಹ್ನವೇ ತರುವ ಯೋಚನೆ ಆಯಿತು. ಆದರೆ ಅಲ್ಲಿ ಬೇರೆಯೆ ಸುದ್ಧಿ ಕಾಯುತ್ತಿತ್ತು ಅಂದರೆ ಹಾಲು ಖಾಲಿಯಾಗಿತ್ತು :-(. ಸರಿ ಮರುದಿನ ಬೆಳಿಗ್ಗೆ ತಂದರಾಯಿತು ಅಂತ ಸುಮ್ಮನಿದ್ದೆ. ಮತ್ತೊಬ್ಬರು ಕೂಡ ಹಾಲಿಗೆ ಬಂದಿದ್ದರು. ಕ್ಯಾಶಿಯರ್ ಹಾಲು ಇಲ್ಲ ಎಂದ ತಕ್ಷಣ, ಮಹನೀಯರ ಸಿಟ್ಟು ನೆತ್ತಿಗೇರಿತು. "ಏನ್ರಿ ಬೂತಿನಲ್ಲಿ ಹಾಲು ಇಲ್ಲ ಅಂತಿರಲ್ಲ. ಅಲ್ಲಿ ಮಾಲಿನಲ್ಲಿ ಯಾವತ್ತು ಇರುತ್ತೆ, ಕಂಪೆನಿ ಅಂಗಡಿಯಲ್ಲಿ ಇರಲ್ಲ ಅಂತ ಹೇಳ್ತಿರಲ್ಲ" ಎಂದು ದಬಾಯಿಸಿದರು. ಕ್ಯಾಶಿಯರ್ ಬಹಳಷ್ಟು ಸಮಾಧಾನಿಸಲು ಯತ್ನಿಸಿದರೂ ಆ ಪಾರ್ಟಿ ಸುಮ್ಮನೆ ಇರಲಿಲ್ಲ. ಕಡೆಗೆ ಕ್ಯಾಶಿಯರ್ ಕೂಡ ಎದುರು ಮಾತನಾಡುವುದು ಅನಿವಾರ್ಯವಾಯಿತು "ಅಲ್ಲ ಸಾರ್ ಮಾಲಿನಲ್ಲಿ ಇರುವ ಸಾಮಾನನ್ನು ಸುಮ್ಮನೆ ತೆಗೆದು ಬುಟ್ಟಿಗೆ ಹಾಕಿಕೊಳ್ಳುತ್ತೀರಾ. ದಿನಾಂಕ, ಎಕ್ಸ್-ಪೈರಿ ಕಡೆಗೆ ಗಮನಕೊಡುವುದಿಲ್ಲ. ಆದರೆ ಇಲ್ಲಿ ಹಾಗಲ್ಲ, ಪ್ರತಿಯೊಂದನ್ನು ಪರಾಮರ್ಶಿಸಿ ತೆಗೆದುಕೊಳ್ಳುತ್ತೀರಾ. ಅದಕ್ಕೆ ನಾವು ಕೂಡ ಸಮಯಕ್ಕೆ ಸರಿಯಾಗಿ ಹಾಲನ್ನು ತರಿಸುತ್ತೇವೆ" ಎಂದು ಚಾಟಿಯೇಟಿನ ಮಾತನ್ನು ನುಡಿದರು. ಮಹನೀಯರಿಗೆ ಏನು ಮಾತನಾಡಲು ತೋಚಲಿಲ್ಲ, ಸ್ವಲ್ಪ ಸಮಯದಲ್ಲೇ ಗಾಯಬ್ :-).

ಹೆಚ್ಚಾಗಿ ನಂದಿನಿ ಹಾಲಿನ ಬೂತಿನಲ್ಲಿ ಸಮಯಕ್ಕನುಗುಣವಾಗಿ ಹಾಲು ತರಿಸುತ್ತಾರೆ. ಹಾಗಾಗಿ ಕೆಲವೊಮ್ಮೆ ಹಾಲು ಇರುವುದಿಲ್ಲ. ಅದು ಸರಿ, ಕ್ಯಾಶಿಯರ್ ಮಾತಲ್ಲೂ ಹುರುಳಿದೆ. ನಮ್ಮ ದೇಶದ ಜನರಿಗೆ ಮಾಲಿನಲ್ಲಿ ಹೆಚ್ಚು ದುಡ್ಡು ಕೊಟ್ಟು ಕೊಂಡರೆ ಏನೋ ಪ್ರೆಸ್ಟಿಜ್ ವಿಷಯ ಹಾಗೆ ಎಲ್ಲವೂ ಚಂದ ಎನ್ನುವ ಭಾವನೆ. ಆದರೆ ಸಣ್ಣ ಕಿರಾಣಿ ಅಂಗಡಿ, ತರಕಾರಿ ಗಾಡಿ, ಹಾಗೆ ಇಂತಹ ಕಡೆಯಲ್ಲಿ ಫುಲ್ ದರ್ಬಾರು. ಗೋಣಿಚೀಲದಂತಹ ಬಟ್ಟೆಗೆ ಅಧಿಕ ದುಡ್ಡು ಕೊಟ್ಟು ಮಾಲಿನಲ್ಲಿ ಖರೀದಿಸುತ್ತೇವೆ ಆದರೆ ಒಂದೆರಡು ರುಪಾಯಿಗೆ ಗಾಡಿಯವನ ಹತ್ತಿರ ಚರ್ಚೆಗೆ ಇಳಿಯತ್ತೇವೆ. ಮೇರಾ ಭಾರತ್ ಮಹಾನ್ ಅನ್ನಬಹುದೇ?

No comments:

Post a Comment

Printfriendly

Related Posts Plugin for WordPress, Blogger...