Thursday, January 12, 2023

ನೀರಿನ ತರ್ಕ

"ರೀ ನಾಳೆ ಬೆಟ್ಟ ಹತ್ತೋಕೆ ಎಷ್ಟು ಮೆಟ್ಲು ಇದೆ. ನೀರು ಎಷ್ಟು ಬೇಕಾಗಬಹುದು" ನಿಂಗಿ ಪ್ರಶ್ನೆ ಹಾಕಿದಳು.

"ಸುಮಾರಾಗಿದೆ ಕಣೆ. ಅಂದಾಜಲ್ಲಿ ಇಟ್ಕೋ ಅಂತಾ" ಎಂದು ಕೆಲಸದಲ್ಲಿ ಬ್ಯುಸಿಯಾಗಿದ್ದ ಗುಂಡ ಮಾರುತ್ತರ ನೀಡಿದ.

"ಅಲ್ರೀ ನಾನು ಮೊದಲ ಸಲ ಹೋಗೋದು. ನಾನು ಹೇಗೆ ಅಂದಾಜು ಮಾಡೋದು. ಸುಮ್ನೆ ಹಾರಿಕೆ ಉತ್ತರ ನೀಡಬೇಡಿ. ಖಚಿತವಾಗಿ ಹೇಳಿ" ಅಂತ ನಿಂಗಿ ತಾಕೀತು ಮಾಡಿದಳು. 

"ಸರಿ ಅಂದಾಜಿಗೆ ಮೂರು ಲೀಟರ್ ಇಟ್ಕೋ" ಅಂತ ಗುಂಡ ಹೇಳಿದನು

"ಅಷ್ಟು ಬೇಡ , ೨ಲೀಟರ್ ಸಾಕು" ಎಂದು ನಿಂಗಿ ಹೇಳಿದಾಗ ಗುಂಡನಿಗೆ ಆಶ್ಚರ್ಯವಾಯ್ತು.

"ಅಲ್ವೇ ಮೊದಲನೇ ಸಲ ಅಂತೀಯಾ! ಜೊತೆಗೆ ನಾನು ಹೇಳಿದ್ದನ್ನು ಉಲ್ಟಾ ಮಾಡ್ತಿಯಾ! ಮತ್ಯಾಕೆ ಕೇಳ್ತಿಯ ನನ್ನ?" ಅಂತಾ ಗುಂಡ ಬೇಸರ ವ್ಯಕ್ತಪಡಿಸಿದನು. 

"ಅನುಭವ ಪ್ರಕಾರ ನಿಮ್ಮ ಅಂದಾಜು ಜಾಸ್ತಿಯೇ ಇರುತ್ತದೆ ಅದಿಕ್ಕೆ ಕಡಿಮೆ ಇಟ್ಕೊತಿನಿ" ಎಂದು ನಿಂಗಿ ತನ್ನ ನಿರ್ಣಯಕ್ಕೆ ಅಂಟಿಕೊಂಡಳು.

"ಸರಿ ಬಿಡು 😶" ಎಂದು ಗುಂಡ ಮೆಲ್ಲಗೆ ತಲೆ ಅಲ್ಲಾಡಿಸಿ ಆಕಾಶದತ್ತ ಮುಖ ಮಾಡಿದನು

---------------------------------------------------------------------------------------------------------------------

ಬೆಟ್ಟ ಹತ್ತಿ ಸುಸ್ತಾಗಿ ನೀರೆಲ್ಲಾ ಖಾಲಿಯಾಯಿತು. ಮಕ್ಕಳಿಗೂ ಬಾಯಾರಿಕೆ ತಡೆಯಲಾಗಲಿಲ್ಲ.

"ಮೂರು ಲೀಟರ್ ಹೇಳಿದ್ದೆ ಅಲ್ವೇನೆ, ನೋಡಿಗಾ ಏನಾಯ್ತು. ಅಷ್ಟಕ್ಕೂ ಬ್ಯಾಗಲ್ಲಿ ಭಾರ ಹೋರುವವನು ನಾನು ಜೊತೆಗೆ ದೂರದಿಂದ ಸಾಗಿಸೋದು ಕಾರು. ಸುಮ್ನೆ ಮೂರು ಲೀಟರ್ ತರಲಿಕ್ಕೆ ಏನು ನಿಂಗೆ" ಅಂತಾ ಗುಂಡ ಗೋಗರೆದನು.

"ಸಾಕು ಸುಮ್ನಿರಿ, ೨.೫ ಲೀಟರ್ ತಂದಿದ್ದೆ ಇಬ್ರಿಗೂ ಬೇಸರ ಬೇಡಂತಾ. ಅಷ್ಟಕ್ಕೂ ಹೇಳಿದಕ್ಕಿಂತ ಜಾಸ್ತಿನೇ ತಂದಿದ್ದೀನಿ! ಇಷ್ಟೊಂದು ಖಾಲಿ ಆಗುತ್ತೆ ಅಂತಾ ನನಗೇನು ಗೊತ್ತು. ನೀವು ಅಂದಾಜು ಬದಲು ಇಷ್ಟೇ ಖರ್ಚು ಆಗುತ್ತೆ ಅಂತಾ ನಿಖರವಾಗಿ ಹೇಳಿದ್ರೆ ಇಷ್ಟೆಲ್ಲಾ ಶಾರ್ಟೇಜ್ ಬರ್ತಾ ಇರ್ಲಿಲ್ಲ. ಅದಿಕ್ಕೆ ಕೆಲಸ ಮಾಡ್ಬೇಕಾದ್ರೆ ಅಂದಾಜು ಎಲ್ಲಾ ಹೇಳ್ಬಾರ್ದು ಅನ್ನೋದು" ಅಂತಾ ನಿಂಗಿ ಗುಂಡನಿಗೆ ಬುದ್ಧಿವಾದ ಹೇಳಿ ಮೆಲ್ಲನೆ ಜಾರಿಕೊಂಡಳು

ಗುಂಡ ಆಶ್ಚರ್ಯದಿಂದ, "ಎಲಾ ಇವಳಾ! ಅಲ್ವೇ ನೀನೇ ಅಂದಾಜು ಕೇಳಿದ್ದಲ್ಲಾ! ನೀವು ಹೆಂಗಸರು ಸುಮ್ನೆ ಕಾಟಾಚಾರಕ್ಕೆ ಪ್ರಪಂಚದ ಅಭಿಪ್ರಾಯ ಕೇಳಿ ಕೊನೆಗೆ ನಿಮ್ದೇ ದಾರೀಲಿ ನಡೆಯೋದು ಬಿಡು" ಎಂದು ಹೇಳುವಷ್ಟರಲ್ಲಿ ನಿಂಗಿ ಸಿಡಿಮಿಡಿಗೊಂಡಳು.

"ಏನೀವಾಗ ನಾನು ತಪ್ಪು ಮಾಡಿದ್ನ, ಅಲ್ಲೇ ಪಕ್ಕದ ಅಂಗಡಿಯಲ್ಲಿ ಮಿನರಲ್ ವಾಟರ್ ತಗೊಳ್ಳಿ. ಅಷ್ಟು ಸಾಲಲ್ಲ ಅಂದ್ರೆ ತಾಜಾ ಕಬ್ಬಿಣ ಹಾಲು ಇದೆ, ಎಳನೀರು ಇದೆ ಜೊತೆಗೆ ಕಲ್ಲಂಗಡಿ ಹಣ್ಣು ಕೂಡಾ ಇದೆ. ತಗೊಂಡ್ರೆ ಪಾಪ ಹಳ್ಳಿಯವರಿಗೆ ವ್ಯಾಪಾರ ಆಗುತ್ತೆ. ನಡು ಬೀದಿಲಿ ಸುಮ್ನೆ ಯಾಕೆ ರಾದ್ಧಾಂತ ಮಾಡಿ ನನಗೆ ಅವಮಾನ ಮಾಡ್ತೀರಾ" ಅಂತಾ ನಿಂಗಿ ಗುಂಡನ ಮೇಲೆ ಗೂಬೆ ಕೂರಿಸಿದಳು.

ಗುಂಡನೋ, ತೆಪ್ಪಗೆ ಅಂಗಡಿಯ ಬಳಿ ತೆರಳಿದನು. ಅವಮಾನ ಇವನಿಗೆ ಆಯಿತೋ ಅಥವಾ ಅವಳಿಗೆ ಆಯಿತೋ ತಿಳಿಲಿಲ್ಲ. ಒಟ್ಟಿನಲ್ಲಿ ೨೦೦ ರೂಪಾಯಿ ಜೇಬಿನಿಂದ ಹರಿದು ಹೋಗಿದ್ದು ಮಾತ್ರ ನಿಜ. 

No comments:

Post a Comment

Printfriendly

Related Posts Plugin for WordPress, Blogger...