ಬಹಳ ದಿನದ ಬಳಿಕ ನಿಂಗಿ ಮತ್ತು ಗುಂಡ ಊರಿನ ಕಾರ್ಯಕ್ರಮಕ್ಕೆ ತೆರಳಿದ್ದರು. ಹಲವು ನೆಂಟರ ಬಳಿ ಸುಮಾರು ೭-೮ ತಿಂಗಳು ಬಳಿಕ ಮಾತನಾಡಲು ಸಾಧ್ಯವಾಯಿತು.
ಗುಂಡನ ಚಿಕ್ಕಮ್ಮನ ಮಗಳು ಕೆಂಪಿ ಜೊತೆ ನಿಂಗಿ ಮಾತನಾಡುತ್ತಿದ್ದಳು. ಬೇಸಿಗೆ ಸೆಖೆ ಜೋರು ಬೇರೆ. ಗುಂಡ ಕೂಡಾ ಅವರಿಗೆ ಸಾಥ್ ನೀಡಿದನು. "ಇವರಿಗೇನೂ ಸುಮ್ಮನೆ ಪಂಚೆ ಸುಟ್ಟುಕೊಂಡರೆ ಆಯಿತು. ಯಾವ ಸೆಖೆಯೂ ಗೋಚರಕ್ಕೆ ಬರುವುದಿಲ್ಲ. ನಮ್ಮಂತವರು ಸೀರೆ ಹಾಕಿಕೊಂಡವರಿಗೆ ತಿಳಿಯೋದು ಸೆಖೆಯ ಧಗೆ!" ಎಂದು ನಿಂಗಿ ಗುಂಡನನ್ನು ಕಿಚಾಯಿಸಿದಳು.
ಅದಕ್ಕೆ ಕೆಂಪಿ ಸಾಥ್ ನೀಡುತ್ತಾ " ಅವನಿಗೆ ಏನು ಊರೆಲ್ಲ ಬರಿ ಟವೆಲ್ ಹಾಕಿಕೊಂಡೆ ಓಡಾಡುತ್ತಾನೆ. ಜೊತೆಗೆ ಸೆಖೆ ಇಲ್ಲ ಅಂತ ನಮಗೆ ಬುದ್ಧಿ ಹೇಳುತ್ತಾನೆ" ಎಂದು ಎಲ್ಲಾರೂ ತಮಾಷೆ ಮಾಡುತ್ತಾ ಮೈದುಂಬಿ ನಕ್ಕರು.
"ಯಾಕೆ ಎಲ್ಲರ ಮುಂದೆ ಮರ್ಯಾದೆ ತೆಗಿತಿಯಾ" ಅಂತಾ ತಂಗಿ ಕೆಂಪಿಗೆ ಗುಂಡ ಮುಜುಗುರದಿಂದ ನುಡಿದು ಕೆಂಪಿಯ ಬಾಯಿ ಮುಚ್ಚಿಸಿದನು.
ಸ್ವಲ್ಪ ಹೊತ್ತಿನ ಬಳಿಕ ಎಲ್ಲರೂ ಊಟಕ್ಕೆ ತೆರಳಿದರು. "ಅಲ್ಲ ರೀ, ನಿಮಗೆ ಊರಲ್ಲಿ respect ಕಡಿಮೆ ಆಗಿದೆ ಅನ್ಸುತ್ತೆ?! ತಂಗಿಯಂದಿರೆಲ್ಲಾ ನಿಮ್ಮನ್ನು ಅಣ್ಣ ಅಂತ ಬಹುವಚನದಲ್ಲಿ ಮಾತನಾಡುತ್ತಿದ್ದವರು ಈಗ ಏಕವಚನದಲ್ಲಿ ಸಂಭೋಧಿಸುತ್ತಿದ್ದಾರೆ!? ಏನ್ ನಿಮ್ಮ್ ಹವಾ ಮಟಾಷ್ ಆಯ್ತಾ ಹೇಗೆ" ಅಂತ ನಿಂಗಿ ಗುಂಡನನ್ನು ಗೇಲಿ ಮಾಡಿದಳು.
"ಹಾಗೇನಿಲ್ಲ ಕಣೆ. ನಾನು workout ಮಾಡಿ ಈಗ ತೆಳ್ಳಗೆ ಆಗಿದ್ದೀನಿ. So ಅವ್ರಿಗೂ ನನ್ನ ಏಕವಚನದಲ್ಲಿ ಕರಿಯಕ್ಕೆ ಮುಜುಗರ ಆಗ್ತಾ ಇದೆ. ಎಷ್ಟು young ಅಣ್ಣನಾ ಸಲಿಗೆಯಿಂದ ಮಾತಾಡಿಸ್ಬೇಕೂಂದ್ರೆ ಬಹುವಚನ ಸರಿ ಹೋಗಲ್ಲ ಅನ್ನಿಸಿರಬೇಕು. ಅದಿಕ್ಕೆ ಅಷ್ಟೇ. ನನ್ನ ಮೈ-ಕೈ changes ನೋಡಿ ನಾನು ಅವ್ರ age-ಗೆ ಸೇರಿದ್ದೀನಿ ನೋಡು. ನನ್ನ ಹವಾ ಇನ್ನು ಜಾಸ್ತಿ ಆಗಿದೆ ಕಣೆ. ಅದೆಷ್ಟು ಸುಂದರಿಯರ ಕಣ್ಣು ನನ್ನ ಮೇಲೆ ಇತ್ತೋ ಏನೋ! " ಅಂತ ಗುಂಡ ಜಂಭ ಪಟ್ಟುಕೊಂಡನು.
ನಿಂಗಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಊಟದ ನಂತರ ಇಬ್ಬರೂ ಮನೆಗೆ ತೆರಳಿದರು. ಮನೆ ಸೇರಿದ ತಕ್ಷಣ ನಿಂಗಿ ಗುಂಡನಿಗೆ ಚಿವುಟಿ ಕೋಣೆ ಬಾಗಿಲು ಹಾಕಿಕೊಂಡಳು. ಆವಾಗಲೇ ಗುಂಡಗೆ ಮಾನವರಿಕೆಯಾಗಿದ್ದು ಮೇಡಮ್ ತುಂಬಾ ಉರ್ಕೊಂಡಿದ್ದಾರೆ ಅಂತಾ ಮತ್ತು ಅವನ ಮಾತನ್ನು ಇಲ್ಲಿಯವರೆಗೂ ಅದುಮಿಟ್ಟುಕೊಂಡು carry ಮಾಡಿದ್ದಾಳೆಂದು! "ಓಹೋ! ಮೇಡಂ ಅದಿಕ್ಕೆ ತನ್ನ ಇಷ್ಟವಾದ 'ಮೈಸೂರ್-ಪಾಕ್' ಅನ್ನು ತಿನ್ನದೇ ಬಿಟ್ಟಿದ್ದು. ಇರಲಿ ಸಂಜೆ ಸರಿ ಹೋಗ್ತಾಳೆ" ಎಂದು ಮನದಲ್ಲೇ ಗುಂಡ ಸಮಾಧಾನಿಸಿಕೊಂಡು ಮಧ್ಯಾಹ್ನದ ನಿದ್ರೆಗೆ ಜಾರಿದನು.
No comments:
Post a Comment