Friday, February 13, 2015

ಇರುವ ಭಾಗ್ಯವ ನೆನೆದು

೨೬ ಜನವರಿ, ೨೦೧೫

ಅನಿರೀಕ್ಷಿತವಾಗಿ ಪೋಷಕರು ಊರಿಗೆ ತೆರಳಬೇಕಾಗಿ ಬಂತು. ಸ್ವಲ್ಪ ದಿನದ ಬಳಿಕ, ಅಪ್ಪ ಕಾರು ತರಲು ನನ್ನ ಬಳಿ ಹೇಳಿದರು. ಸಿಕ್ಕಿದ್ದೆ ಅವಕಾಶ ಎಂದುಕೊಂಡು ಒಬ್ಬನೆ ನಾಗರಹೊಳೆ ಮೂಲಕವಾಗಿ ತೆರಳಲು ಯೋಜನೆ ಹಾಕಿದೆ. ಇದರ ಪರಿಣಾಮ, ಒಬ್ಬನೆ ನಾಗರಹೊಳೆ ಮೂಲಕವಾಗಿ ಇರ್ಪು ಜಲಪಾತಕ್ಕೆ ಕಾರು ಚಲಾಯಿಸುತ್ತಿದ್ದೆ. ನಾಗರಹೊಳೆ ಗೇಟಿನಲ್ಲಿ, ಒಂದಿಬ್ಬರು ಅತಿಥಿಗಳು ನನ್ನ ಜೊತೆಯಾದರು. ದಟ್ಟ ಕಾನನದ ರಮಣೀಯ ನೋಟ, ಆಕಾಶಕ್ಕೆ ಏಣಿ ಇಟ್ಟಂತೆ ನಿಂತಿರುವ ಉದ್ದನೆಯ ಮರಗಳು, ಆಗಾಗ ಕಾಣಸಿಗುವ ಸುಂದರ ಜಿಂಕೆಗಳು, ಹಕ್ಕಿಗಳ ಸುಮಧುರ ಕಲರವ ಎಂತವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಎಷ್ಟು ಬಾರಿ ಕಾರು ನಿಲ್ಲಿಸಿದ್ದೆ ಎನ್ನುವುದು ನನಗೆ ತಿಳಿಯದು. ಮಳೆಗಾಲದಲ್ಲಿ, ಭೂಲೋಕದ ಸ್ವರ್ಗವೇ ಎಂದು ಉದ್ಘಾರ ತೆಗೆದರೂ ಉತ್ಪ್ರೇಕ್ಷೆಯಾಗದು. ಕಣ್ಮನ ಸೆಳೆಯುವ ನಿಸರ್ಗದ ನೈಜ ದೃಶ್ಯಾವಳಿಗಳನ್ನು ತುಂಬುಹೃದಯದಿಂದ ಆನಂದಿಸುತ್ತಿದೆ. ರಾಷ್ಟ್ರೀಯ ಉದ್ಯಾನವನದ ಕಿರೀಟ ಮುಡಿಗೇರಿಸಿದ್ದೆ ತಡ, ನಾಗರಹೊಳೆ ಜನವಾಸಕ್ಕೆ ನಿಷಿದ್ಧವಾಗಿದೆ. ಇದರಿಂದಾಗಿ ಇಲ್ಲಿನ ಗಿರಿಜನರಾದ 'ಹಾಡಿ' ಮೂಲದವರು, ತಮ್ಮ ಮನೆ-ಮಠ ಕಳೆದುಕೊಂಡರು. ಇವರಿಗೆ ಪುನರ್ವಸತಿಯಾಗಿ ಒಂದು ಮನೆ, ೩ ಎಕರೆ ಜಾಗ ಮತ್ತು ತಿಂಗಳಿಗೆ ೧೦,೦೦೦ ರುಪಾಯಿಯಷ್ಟು ಸಹಾಯಧನವನ್ನು ಸರಕಾರ ನೀಡಿತೆಂದು ನನ್ನ ಜೊತೆ ಇದ್ದ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು. ಇಷ್ಟಾದರೂ, ಕೆಲವರಿಗೆ ಕಾಡಿನ ಮೇಲೆ ಬಹಳ ಪ್ರೀತಿ. ಸುಮಾರು ವರುಷಗಳು ಕಳೆದರೂ, ಕಾಡನ್ನು ಬಿಟ್ಟು ಬರಲು ಒಲ್ಲೆ ಎನ್ನುವವರು. ಕಾಡಿನಲ್ಲೇ ಸಣ್ಣ ಗುಡಿಸಲಿನಲ್ಲಿ, ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಾ, ಸಂತೋಷವಾಗಿ ವನ್ಯಜೀವಿಗಳೊಂದಿಗೆ ಬದುಕಲು ಇಷ್ಟಪಡುವವರು. ಸರಕಾರದ ಯಾವ ಸವಲತ್ತುಗಳು ಇವರಿಗೆ ಬೇಡವಂತೆ. ತಮ್ಮಲಿರುವ ಭಾಗ್ಯವನ್ನು ನೆನೆದು ದೂರದ ಸರಕಾರ ಕೊಡುವ ಆಸೆಗೆ ಮಣಿಯದೆ ಸುಖಿಯಾಗಿ ಇರಬಯಸುವವರು. ಇಲ್ಲಿರುವ ಜನಗಳಿಗೆ, ನೀರು,ದೀಪದ ವ್ಯವಸ್ಠೆಯೂ ಇಲ್ಲದಿದ್ದರೂ, ತಮಗಿಲ್ಲೇ ವಾಸಿಸಲು ಅವಕಾಶ ಕೊಡಿ ಎಂದು ಸರಕಾರದ ಮೊರೆ ಹೊಕ್ಕಿದ್ದಾರಂತೆ. ಎಲ್ಲವನ್ನೂ ಮೂದಲಿಸುವ ನಗರವಾಸಿಗಳಿಗೆ, ಊರೆಲ್ಲ ಕೊಳ್ಳೆಹೊಡೆದು ಸಾಕೆನಿಸದ ರಾಜಕಾರಣಿಗಳಿಗೆ, ಇನ್ನೂ ಬೇಕೆಂದು ಸದಾ ಚಿಂತಿತರಾಗಿರುವ ಜನರಿಗೆ, ಇವರಿಂದ ಕಲಿಯುವುದು ಬಹಳಷ್ಟಿದೆ.



ಇವರನ್ನು ಕಂಡಾಗ, ಡಿ.ವಿ.ಜಿ ಯವರ ಈ ಸುಂದರ ಕಗ್ಗ ನೆನಪಿಗೆ ಬಂತು.

"ಇರುವ ಭಾಗ್ಯವ ನೆನೆದು,
ಬಾರೆನೆಂಬುದ‌ನ್ನು ಬಿಡು.
ಹರುಷ‌ಕ್ಕಿದೆ ದಾರಿ - ಮಂಕುತಿಮ್ಮ"


ಎಷ್ಟು ಅರ್ಥಪೂರ್ಣವಲ್ಲವೆ! ಸಧ್ಯಕ್ಕೆ ನಗರ ಜೀವಿಯಾದ ನನಗೆ ಇವರಿಂದ ಕಲಿಯುವುದು ಬಹಳಷ್ಟಿದೆ. ಹಾಡಿ ಜನಾಂಗದವರು ಗಟ್ಟಿಮುಟ್ಟಾಗಿ, ಆರೋಗ್ಯವಂತರಾಗಿದ್ದಾರೆ. ಪಶ್ಚಿಮ ಘಟ್ಟದಲ್ಲಿ ವಾಸಿಸುವವರಿಗೆ ಯಾವ ತೆರನಾದ ರೋಗ ಹೇಳಿ! ಮೊದಲಿನಿಂದಲೂ ಮಾನವ ಕಾಡು ಜೀವಿ. ಕಾಲಾನಂತರ, ವಿಜ್ಞಾನ ಮುಂದುವರಿದಂತೆ, ನಗರ, ಹಳ್ಳಿ, ಕಾಡು ಎಂಬ ಭೇದಗಳು ಹುಟ್ಟಿಕೊಂಡವು. ಕಾಡುಗಳು ನಾಶವಾಗಿ, ಕಾಂಕ್ರೀಟ್ ಕಾಡುಗಳು ಎದ್ದಿವೆ. ಈಗ ಕಾಡನ್ನು ಉಳಿಸಲು, ಸರಕಾರಗಳು ವಿಧಿಯಿಲ್ಲದೆ ರಾಷ್ಟ್ರೀಯ ಉದ್ಯಾನಗಳನ್ನು ಘೋಷಿಸಲು ಮುಂದಾಗಿವೆ, ಕೆಟ್ಟ ಮೇಲೆ ಬುದ್ಧಿ ಬಂತು ಹೇಳಿದಂತೆ.

ರಸ್ತೆಗೆ ನೈಸರ್ಗಿಕ ಗೋಪುರ

ಸ್ವಲ್ಪ ದೂರದ ಬಳಿಕ, ನಾಗರಹೊಳೆ ತಲುಪಿದೆವು. ಅಲ್ಲಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಬುಡಕಟ್ಟು ಜನಾಂಗದ ಮಕ್ಕಳು ಖುಷಿಯಿಂದ ಆಡುತ್ತಿರುವುದನ್ನು ಕಂಡೆ. ದಟ್ಟ ಮಳೆಕಾಡಿನ ಮಧ್ಯೆ ಇರುವ ಬಯಲಿನಲ್ಲಿ ಆಡುವ ಸೌಭಾಗ್ಯ ಯಾರಿಗಿದೆ ಹೇಳಿ. ಇವರ ಮಧ್ಯೆ ಜಿಂಕೆಗಳು ಮೇಯುತ್ತಿದ್ದವು. ಸಣ್ಣವನಿರುವಾಗ, ಜೋರು ಮಳೆಯ ಜೊತೆಗೆ, ಭೋರ್ಗರೆವ ಕಾಲುವೆಯ ಮಧ್ಯೆ, ತುಂಬಿದ ಭತ್ತದ ಗದ್ದೆಯ ನಡುವಿನ ಕಾಲುದಾರಿಯಲ್ಲಿ ನಡೆದು ಶಾಲೆಗೆ ಹೋಗುತ್ತಿದ್ದುದ್ದು ನೆನಪಾಯಿತು. ಕುಂಭದ್ರೋಣ ಮಳೆಗೆ ಭತ್ತದ ಗದ್ದೆಗಳು ನೀರಿನಿಂದ ತುಂಬಿ ಒಂದಾದಾಗ, ಕಾಲುದಾರಿಯೂ ಸರಿಯಾಗಿ ಕಾಣುತ್ತಿರಲಿಲ್ಲ. ಜಡಿಮಳೆಯನ್ನು ಲೆಕ್ಕಿಸದೆ, ಉತ್ಸಾಹದಿಂದ ಶಾಲೆಗೆ ಹೆಜ್ಜೆ ಹಾಕುತ್ತಿದ್ದೆವು. ಅಂತಹ ಮಳೆಯು ಸ್ವಲ್ಪವೂ ಕಷ್ಟವೆನಿಸುತ್ತಿರಲಿಲ್ಲ. ಈಗಲೂ ಊರಿಗೆ ಹೋದಾಗ ಹಳೆಯ ಮಧುರ ನೆನಪುಗಳು ಮತ್ತೆ ಕಣ್ಣ ಮುಂದೆ ನಿಲ್ಲುತ್ತವೆ. ಇಂತಹ ಸವಿನೆನಪುಗಳನ್ನು ಮೆಲುಕು ಹಾಕಿದಾಗ ಮನಸ್ಸು ಉಲ್ಲಾಸಭರಿತವಾಗುತ್ತದೆ. ಈಗಿನ ನಗರ ಜೀವನದೊಂದಿಗೆ ತುಲನೆ ಮಾಡಿದರೆ, ಹಿಂದಿನ ದಿನಗಳೇ ಚಂದವೆನಿಸುತ್ತದೆ. ಈ ಅನುಭವಗಳನ್ನು ಕೀಲಿಮಣೆಯಲ್ಲಿ ಛಾಪಿಸುತ್ತಿದ್ದಾಗ, ತಿಳಿಯದೆ ಕಣ್ಣಿನಿಂದ ಎರಡು ಹನಿಗಳು ಜಾರಿದವು. ಪಕ್ಕದ ಮನೆಯ ಸೊಂಪಾದ ಹುಲ್ಲನ್ನು ದುರುಗುಟ್ಟುತ್ತಾ ಕ್ಲೇಶದಲ್ಲೇ ಕಾಲ ಕಳೆಯುವ ನಮಗೆ, ಸ್ವಂತ ಮನೆಯ ಹುಲ್ಲನ್ನೂ ಪೋಷಿಸುವ ಯೋಚನೆಯೇ ಬರುವುದಿಲ್ಲ. ಪರಿಣಾಮವಾಗಿ, ನಮ್ಮ ಮನೆಯ ಹುಲ್ಲು ಒಣಗಿ, ಬಾಳು ಬರಡಾದಂತೆ ತೋರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ನಮ್ಮದೇ ಮನೆಯ ಹುಲ್ಲಿಗೆ ಆರೈಕೆ ಮಾಡಿದರೆ, ಕ್ಲೇಶ ಕಡಿಮೆಯಾಗುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಮೊನ್ನೆಯ ಅನುಭವಗಳನ್ನು ಮೆಲುಕು ಹಾಕುತ್ತಾ, ಮಂಗಳೂರಿನ ಬಸ್ ನಿಲ್ಧಾಣದಲ್ಲಿ ಕುಳಿತ ಬರೆದ ಬರಹವಿದು. ಈ ಬಾರಿ ಪೆನ್ನು, ಪುಸ್ತಕವನ್ನು ಭದ್ರವಾಗಿ ಇಟ್ಟುಕೊಂಡಿದ್ದೆ. ಮುಂದೆ ನಿಂತ ಕೆಂಪು ಬಸ್ಸನ್ನು ನೋಡುತ್ತಿರುವಾಗ, ಈ ತಲೆಬರಹ ನೆನಪಿಗೆ ಬಂತು. ಏಕೆಂದರೆ ಪ್ರತಿಯೊಂದು ಕೆಂಪುಬಸ್ಸಿನಲ್ಲಿ, ಈ ಬಿಲ್ಲೆಯನ್ನು ಅಂಟಿಸಿರುತ್ತಾರೆ. ಕೆಂಪುಬಸ್ಸು, ಇರುವುದರಲ್ಲಿ ನಿಧಾನವಾಗಿ ಚಲಿಸುವ ವಾಹನ.  ಮಾರುದ್ದ ಹೆದ್ದಾರಿಯಲ್ಲಿ ಬಹಳಷ್ಟು ವಾಹನಗಳು ರೊಯ್ಯ್ ಎಂದು ಬಸ್ಸಿನ್ನು ಹಿಂದಿಕ್ಕಿದಾಗ, ನನಗೆ ಅಷ್ಟು ಬೇಗ ತಲುಪುವ ಯೋಗವಿಲ್ಲವಲ್ಲ ಎಂದು ತವಕಿಸುತ್ತೇನೆ. ಮೆಲ್ಲನೆ ಮುಖ ಮುಂದಕ್ಕೆ ತಿರಿಗಿಸುವಾಗ, ಬಸ್ಸಿನಲ್ಲಿ ಅಂಟಿಸಿದ ಈ ಕಗ್ಗ ಕಾಣಿಸುತ್ತದೆ. ಕಂಡ ತಕ್ಷಣ, ಮನಸ್ಸು ನಿರ್ಲಿಪ್ತವಾಗುತ್ತದೆ, ಮುಖದಲ್ಲಿ ಸಣ್ಣದಾದ ಮಂದಹಾಸ ಅರಳುತ್ತದೆ, ಸುಖವಾಗಿ ತಲುಪಿದರೆ ಸಾಕೆನಿಸುತ್ತದೆ.

"ಶ್ರೀ ರಂಗಾಪುರ ವಿಹಾರ, ಜಯ ಕೋದಂಡರಾಮಾವತಾರ ರಘುವೀರ...", ದೀಕ್ಷಿತರ ಬೃಂದಾವನ ಸಾರಂಗ ರಾಗದ ಈ ಕೀರ್ತನೆಯು, ಎಂ ಎಸ್ ಸುಬ್ಬಲಕ್ಷ್ಮೀಯವರ ಮಧುರ ಕಂಠದಿಂದ ಮೊಳಗುತ್ತಿತ್ತು (ಇಷ್ಟವಿದ್ದರೆ ಇಲ್ಲಿ ಆಲಿಸಿ, ಆನಂದಿಸಿ). ಬಹುಶಃ ಬಸ್ ಸ್ಟಾಂಡಿನಲ್ಲಿ ಮೊದಲ ಬಾರಿ ಇಂತಹ ಹಾಡನ್ನು ಕೇಳಿದ್ದು. ಈ ಹಾಡು ನನ್ನ ಇಷ್ಟದ ಸಂಗ್ರಹದಲ್ಲೊಂದು. ಕೆಲವೊಮ್ಮೆ ಬಯಸದೆ ಬಂದ ಭಾಗ್ಯ ಸಿಕ್ಕಾಗ, ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ಬರಹ ಗೀಚಿದ ತಕ್ಷಣ, ಬಸ್ಸು ಬೆಂಗಳೂರಿನೆಡೆಗೆ ತಿರುಗಿತು. ಸಂಪಾಜೆಯಲ್ಲಿ ಮತ್ತೆ ಮಳೆಕಾಡುಗಳನ್ನು ಅನಂದಿಸಿದೆ; ಮನಸ್ಸು ನಿರಾಳವಾಯಿತು.

ಕನ್ನಡದಲ್ಲಿ ಬರೆಯದೆ ಬಹಳ ದಿನಗಳಾಗಿತ್ತು. ಇನ್ನೇನು, ಸ್ವಲ್ಪ ದಿನಗಳ ಬಳಿಕ ಶ್ರವಣಬೆಳಗೊಳದಲ್ಲಿ ಕನ್ನಡ ಸಾಹಿತ್ಯದ ತೇರು ಶುರುವಾಗುತ್ತದೆ, ಅದಕ್ಕೆ ಈ ಸಣ್ಣ ಬರಹ. ಅಂದ ಹಾಗೇ ಈ ಬರಹದ ಮಂಕುತಿಮ್ಮನ ಪಾತ್ರಧಾರಿ ನಾನೇ ಆಗಿದ್ದೇನೆ!

No comments:

Post a Comment

Printfriendly

Related Posts Plugin for WordPress, Blogger...