Thursday, October 15, 2015

ವಾಟ್ಸ್ ಆಪ್ ಮಹಿಮೆ - ಬಣ್ಣದ ಹೂವುಗಳು

ಜಗವು ಸಾಮಾಜಿಕ ತಾಣಗಳಿಗೆ ತಲೆಬಾಗಿದೆ. ಅದರ ಕೆಲವು ವಿರೋಧಾಭಾಸದ ಛಾಯೆಗಳನ್ನು ಇಲ್ಲಿ ತೋರ್ಪಡಿಸಲು ಪ್ರಯತ್ನ ಪಟ್ಟಿದ್ದೇನೆ. ಇಂತಹ ಬರಹಗಳು ಯಾರನ್ನು ದೂಷಿಸಲು ಅಥವಾ ವ್ಯವಸ್ಥೆಯನ್ನು ಖಂಡಿಸುವ ಸಲುವಾಗಿ ಬರೆದುದಲ್ಲ. ಬದಲಾಗಿ ಜೀವನದ ವಿಪರ್ಯಾಸಗಳನ್ನು ಬಿಂಬಿಸುವ ಪ್ರಯತ್ನವಷ್ಟೆ! ಇಂತಹ ಸರಣಿಗಳು ಅನುಭವದ ಮಾತುಗಳೇ ವಿನಃ ಕಟ್ಟುಕಥೆಗಳಲ್ಲ ಎನ್ನುವ ಖಾತರಿಯನ್ನು ನಾನು ನೀಡಬಯಸುತ್ತೇನೆ :). ಹಾಗೆಯೇ ಈ  ಸರಣಿಯ ಮೊದಲನೆಯ ಥೀಮ್ "ಬಣ್ಣದ ಹೂವುಗಳು".

ಹಬ್ಬದ ದಿನದ ಪೂಜೆಯ ಬಳಿಕ ಬಂಧುಮಿತ್ರರ ಮನೆಯ ದೇವರ ಅಲಂಕಾರವನ್ನು ಕಂಡು ಅವಳು ಆನಂದಿಸಿದ್ದೆ ಆನಂದಿಸಿದ್ದು. ತನ್ನವರ ಮನೆಯ ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡ ಭಗವಂತನ ಸೌಂದರ್ಯವನ್ನು ಹಲವು ಕೋನಗಳಿಂದ ಕಂಡು ಉತ್ಸಾಹ ಪಟ್ಟಳು. ಅಲ್ಲಿ ಉಪಯೋಗಿಸಿದ ಬಹುವಿಧದ ಹೂವುಗಳ ಬಗ್ಗೆ ಗಂಡನ ಬಳಿ ಅರುಹುತ್ತಿದ್ದಳು. ಪೋಸ್ಟ್ ಗಳನ್ನು ತಿರುವಿ ತಿರುವಿ, ಚಿತ್ರಗಳನ್ನು ಜೂಮ್ ಮಾಡಿ ಅವರು ಉಪಯೋಗಿಸಿದ ಪುಷ್ಪಗಳ ಮೇಲೆ ದೃಷ್ಟಿ ಹಾಯಿಸುತ್ತಿದ್ದಾಗ ಸಮಯ ಸರಿದದ್ದೇ ತಿಳಿಯಲಿಲ್ಲ.

ಹಬ್ಬದ ಮುಂಚಿನ ದಿನ ಹೂವು ಮಾರುವವಳು ಇವಳಿಗೆ ಕೆಲವು ಹೊಸದಾದ ಬಣ್ಣದ ಹೂವುಗಳನ್ನು ಉಚಿತವಾಗಿ ನೀಡಿದಳು. ಅವಳಿಗೆ ಈ ಹೂವುಗಳು ಮೊದಲು ಪರಿಚಯವಾದದ್ದು ಆಗಲೇ. "ಇರ್ಲಿ ಬಿಡಿ ಅಕ್ಕ ಪೂಜೆಗೆ ನಂದು ಒಂದು ಕಾಣಿಕೆ ಇಡ್ಕೊಳಿ" ಎಂಬುದು ಹೂವು ಮಾರುವವಳ ಅಭಿಮಾನದ ಮಾತು.

ಹಬ್ಬ ಎಲ್ಲ ಜೋರಾಗಿ ನಡೆಯಿತು ಜೊತೆಗೆ ನಾನಾ ವಿಧದ ಪೋಸ್ಟ್ ಗಳ ಹಬ್ಬ ಕೂಡ.ಹಬ್ಬದ ಮರುದಿನ ಅವಳಿಗೆ ಬಣ್ಣದ ಹೂವುಗಳು ಥಟ್ಟನೆ ನೆನಪಾಗಿ, "ಈ ಹೂವುಗಳನ್ನು ಹಬ್ಬಕ್ಕೆ ಬಳಸಬಹುದಾಗಿತ್ತು" ಎಂದು ಗಂಡನ ಬಳಿ ಹೇಳಿಕೊಂಡಳು. ಗಂಡ ಏನೂ ಮಾತನಾಡದೆ ಹಾಗೆ ಮುಗುಳ್ನಗೆ ಬೀರಿ ಹೊರಟುಹೋದ. ಮಡದಿಗೆ ಗಂಡನ ವರ್ತನೆ ಅರ್ಥವಾಗದೆ ಹೋಯಿತು.

ಪೋಸ್ಟ್ ಗಳನ್ನು ತಿರುವಿಸುವ ಸಂಭ್ರಮದಲ್ಲಿ ಹಬ್ಬದ ದಿನದಂದು ತನ್ನ ಮನೆಯ ಗಣಪನ ಮುಡಿಗೇರಿಸಿದ್ದ ಹೊಸದಾದ ಬಣ್ಣದ ಹೂವುಗಳು ಅವಳ ಗೋಚರಕ್ಕೆ ಬಾರದೆ ಹೋಯಿತು

No comments:

Post a Comment

Printfriendly

Related Posts Plugin for WordPress, Blogger...