Sunday, October 25, 2015

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೋ!

ರಾಜ್ಯದಲ್ಲಿ ಇತ್ತೀಚೆಗೆ ಭಾಗ್ಯಗಳದ್ದೆ ಕಾರುಬಾರು. ಜನಸಾಮಾನ್ಯರ ತೆರಿಗೆಯ ಹಣದಿಂದ ಸರಕಾರವು ತನಗೆ ಬೇಕಾದವರಿಗೆ ಪುಕ್ಕಟೆಯಾಗಿ ಭಾಗ್ಯಗಳನ್ನು ಧಾರೆ ಎರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ! ತಮ್ಮವರನ್ನು ಓಲೈಸಲು (ಪೊಲಿಟಿಕಲೀ ಡ್ರಿವೆನ್ ಅನ್ನಬಹುದು) ಭಾಗ್ಯಗಳ ಸರಮಾಲೆಯನ್ನೇ ಕರುಣಿಸಿದೆ. ಮದುವೆ ಭಾಗ್ಯ, ಅನ್ನ ಭಾಗ್ಯ, ಕ್ಷೀರಭಾಗ್ಯ ಹೀಗೆ ಕೆಲವು ಉದಾಹರಣೆಗಳು. ಮದುವೆ ಭಾಗ್ಯದ ನಂತರ ಮುಂದೆ ಭಾಗ್ಯದ ಸುಪರ್ದಿಗೆ, ಮನೆ ಖರ್ಚಿಗೆ ಶಾಪಿಂಗ್ ಭಾಗ್ಯ, ಮಗುವಾದ ಬಳಿಕ ಹೆರಿಗೆ ಭಾಗ್ಯ, ಕುಟುಂಬ ಸಾಗಲು ಸಂಸಾರ ಭಾಗ್ಯ, ಓದಲು ಶಾಲೆ ಭಾಗ್ಯ, ಹೀಗೆ ಭಾಗ್ಯದ ಓಕುಳಿಯೇ ಹರಿಯಬಹುದು. ಸಂಸಾರ ಸರಿಹೊಂದದವರಿಗೆ ವಿಚ್ಛೇದನ ಭಾಗ್ಯ ಕೂಡ ಸೇರಬಹುದು. ಗೋವು ಕಳ್ಳರಿಗೆ ರಕ್ಷಣೆ ಮತ್ತು ಪರಿಹಾರ ಭಾಗ್ಯ (ನನ್ನ ಊರಿನಲ್ಲೇ ಬಹಳಷ್ಟು ಕೇಳಿದ್ದೇನೆ). ಸೋಜಿಗವೆಂದರೆ, ಅನ್ನಭಾಗ್ಯದ ಅಕ್ಕಿಯು ಕಾಳಸಂತೆಯಲ್ಲಿ ಸುಮಾರು ೨೦ ರುಪಾಯಿಗೆ ಮಾರಾಟವಾಗುತ್ತಿದೆ ಎನ್ನುವುದು ಹಳೆ ಸುದ್ಧಿ. ಭಾಗ್ಯಗಳ ಸುಪರ್ದಿಗೆ ಇತ್ತೀಚಿಗೆ 'ಸೈಟು ಭಾಗ್ಯ' ಕೂಡ ಸೇರಿಕೊಂಡಿದೆ ಎಂಬುದು ದಿನಪತ್ರಿಕೆಗಳ ಸುದ್ಧಿ. ಎಲ್ಲಾ ಭಾಗ್ಯಗಳನ್ನು ಪಡೆದುಕೊಂಡವರಿಗೆ ರಾಜಯೋಗ ಎಂದರೆ ತಪ್ಪಾಗದು ಅಥವಾ ಅಖಂಡ ಸೋಮಾರಿ ಭಾಗ್ಯ ಎನ್ನಲೂಬಹುದು. ಭಾಗ್ಯಾಧಿಪತಿಯಾದ ಗುರುಗ್ರಹವು ಸಿಂಹರಾಶಿಯಲ್ಲಿರುವುದರಿಂದ, ಸಿಂಹ ಭಾಗ್ಯ ಎಂದರೂ ತಪ್ಪಾಗದು. ಈ ಎಲ್ಲಾ ಭಾಗ್ಯಗಳನ್ನು ದಯಪಾಲಿಸಿದ ಸರಕಾರಕ್ಕೆ ಕರೆಂಟು ಖರೀದಿಸಲು ಹಣವಿಲ್ಲವಂತೆ! ಓಟ್ಟಾರೆ ತೆರಿಗೆ ಕಟ್ಟುವ ಸಾಮಾನ್ಯ ನಾಗರಿಕನಿಗೆ ತೆರಿಗೆ ಹೆಚ್ಚಳದ ದುರ್ದೈವ ಭಾಗ್ಯ (ದಾರಿದ್ರ್ಯ ಭಾಗ್ಯ ಎಂದರೂ ತಪ್ಪಾಗದು). ಹಾಗೆ ಅರ್ಚಕರಿಗೆ ಈಗ ಕಡಿತದ ಭಾಗ್ಯ. ಅವರಿಗೆ ಸಂದಾಯವಾಗುತ್ತಿರುವ ಕಾಸಿಗೂ ಪಿಕ್ಕಾಸಿ ಹಾಕಿದ್ದಾರೆ ನಮ್ಮ ಘನ ಸರಕಾರ!. [ಸೆಕ್ಯುಲರಿಸಂ ನೆಪದಲ್ಲಿ ಕೂಡ ಇರಬಹುದು.  ಶಾದಿ ಭಾಗ್ಯಕ್ಕೆ ಹಣ ಬೇಡವೇ ;)]

ಅಂದ ಹಾಗೆ, ಬೆಂಗಳೂರಿನ ರಸ್ತೆಗಳಲ್ಲೆಲ್ಲಾ ಹೊಂಡಗಳದ್ದೆ ಕಾರುಬಾರು. ಶಿರಾಡಿ ರಸ್ತೆ ಇತ್ತೀಚೆಗೆ 'ಕಾಂಕ್ರೀಟ್ ಭಾಗ್ಯ'ದಿಂದ ಕಂಗೊಳಿಸುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ರಸ್ತೆಗಳು ಅಗ್ರಪಟ್ಟಿಯನ್ನು ಅಲಂಕರಿಸಿಕೊಂಡಿವೆ (ಕಳಪೆ ಗುಣಮಟ್ಟದಲ್ಲಿ). ಹೊಸ ರಸ್ತೆ ನಿರ್ಮಿಸುವಷ್ಟರಲ್ಲಿ, ಮಳೆಯಿಂದಲೋ ಅಥವಾ ಜಲಮಂಡಳಿ ಕೃಪೆಯಿಂದಲೋ, ಹೊಸ ಬಗೆಯ ಹೊಂಡಗಳು ಸೃಷ್ಟಿಯಾಗುತ್ತವೆ.

ಬಹುಶಃ ಪುರಂದರದಾಸರ ಕೀರ್ತನೆಯನ್ನು ಹೀಗೆ ಮಾರ್ಪಾಟು ಮಾಡಬಹುದು!

ಅಲ್ಲಿ ನೋಡಲು ಹೊಂಡ
ಇಲ್ಲಿ ನೋಡಲು ಹೊಂಡ
ಎಲ್ಲೆಲ್ಲಿ ನೋಡಿದರಲ್ಲಿ ಯಮ ಹೊಂಡ


ಬೈಕ್ ನವರ ಪಾಡಂತು ಹೇಳತೀರದು. ಎಂದು ಬೆನ್ನ ಮೂಳೆ ಕೈಗೆ ಸಿಗುವುದೋ ಎಂಬುದು ತಿಳಿಯದು. ಮಳೆ ಬಂತೆಂದರೆ ರಸ್ತೆಗಳು ಅಪ್ಪಟ "ಡರ್ಟ್ ಟ್ರಾಕ್" ಆಗಿ ಮಾರ್ಪಾಟುಗೊಳ್ಳುತ್ತವೆ. ಬಹುಶಃ ಇದಕ್ಕೆ "ಕೆಸರು ಭಾಗ್ಯ" ಎಂದರೂ ತಪ್ಪಾಗದು ಅದು ಕೂಡ ಉಚಿತವಾಗಿ.

ಹೀಗೆಯೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನ ಚಿತ್ರಣವನ್ನು ಕೆಳಗೆ ತಿಳಿಸಿದಂತೆ ಬದಲಿಸಬಹುದು!

ಹೊಂಡದೂರು ಬೆಂಗಳೂರು
ಬೆನ್ನು-ನೋವಿನ ತವರೂರು!


ಸಾವಿರದ ಮನೆಯಿಂದ ಸಾಸಿವೆ ಕಾಳನ್ನು ತಾ ಎಂದ ಬುದ್ಧ;
ಬಹುಶಃ ಈಗ ಹೊಂಡವಿಲ್ಲದ ರಸ್ತೆಯನ್ನು ಬೆಂಗಳೂರಿನಲ್ಲಿ ತೋರಿಸು ಬಾ ಎಂಬಂತಾಗಿದೆ.

ಇತ್ತೀಚಿನ ಸುದ್ಧಿಯ ಪ್ರಕಾರ ಹಲವು ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಪಾರಿತೋಷಕದ ಜೊತೆಗೆ ಹಣವನ್ನು ವಾಪಸ್ ಮಾಡಿದರೆ ಅದನ್ನು ಹೊಂಡ ಮುಚ್ಚಲು ಸರಾಗವಾಗಿ ಬಳಸಬಹುದು.

ಡಿ.ವಿ.ಜಿಯವರ ಕಗ್ಗವನ್ನು ಸ್ವಲ್ಪ ಮಾರ್ಪಾಡು ಮಾಡುತ್ತಾ, ನಾಗರಿಕರು ಹೀಗೆಂದುಕೊಂಡು ಸಮಾಧಾನಪಟ್ಟಿಕೊಳ್ಳಬಹುದು

ಇರುವ ಭಾಗ್ಯಗಳನ್ನೆಲ್ಲ ಪಡೆದು
ರಸ್ತೆ ಹೊಂಡಮಯವೆನ್ನುವುದಾ ಬಿಡು
ಪಾತಾಳಕ್ಕಿದೇ ದಾರಿ ನಂದತಿಮ್ಮ


ಹಾಗೆಯೇ ಸರಕಾರದವರು ಹೀಗೆಂದುಕೊಂಡು ಜನರ ಬಾಯಿ ಮುಚ್ಚಿಸಬಹುದು!

ಇರುವುದೆಲ್ಲವ ಭಾಗ್ಯವ ಕೊಟ್ಟು
ಖಜಾನೆ ಬರಿದೆನ್ನುವುದಾ ಬಿಡು
ಸರಕಾರಕ್ಕಿದೇ ದಾರಿ ನಂದತಿಮ್ಮ


ಸರಕಾರದ ಬಿಟ್ಟಿ ಸವಲತ್ತುಗಳನ್ನು ಪಡೆದುಕೊಂಡವರು "ನಮ್ಮ ಭಾಗ್ಯ ದೊಡ್ಡದೋ ನಿಮ್ಮ ಭಾಗ್ಯ ದೊಡ್ಡದೋ" ಎಂದು ತೆರಿಗೆದಾರರನ್ನು ಅಣಕವಾಡುವಂತಿದೆ.

ಕೊನೆಯ ಭಾಗ್ಯ:

ಹಸಿರು ಹೊದಿಕೆಯ ಮೇಲೆ ನಿರಂತರವಾಗಿ ಸಿಮೆಂಟಿನ ಮರಳುಗಳನ್ನು ಸಿಂಪಡಿಸುತ್ತಿರುವ ನಮಗೆ ಈ ಬಾರಿ ಪ್ರಕೃತಿಯು 'ಬರ ಭಾಗ್ಯ' ಕರುಣಿಸಿ ಆಶೀರ್ವದಿ(ಧಿ)ಸಿದೆ. ಕರೆಂಟ್ ಇಲ್ಲದೇ ಶಾಕ್ ಭಾಗ್ಯ ಜೊತೆಗೆ ಕತ್ತಲು ಭಾಗ್ಯ ಉಚಿತವಾಗಿ ಇದರೊಂದಿಗೆ ದೊರೆತಿದೆ. ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು ಎತ್ತಿನಹೊಳೆ ಯೋಜನೆಗೆ ಸುರಿಯುತ್ತಿರುವ ಸರಕಾರ, ಸುಂದರ ಪಶ್ಚಿಮ ಘಟ್ಟದ ಕಣಿವೆಗಳಿಗೆ "ಸಮಾಧಿ ಭಾಗ್ಯ"ವನ್ನು ಕರುಣಿಸಿದೆ. ಮೊದಲೇ ಕುಂಠಿತಗೊಂಡಿರುವ ಮುಂಗಾರಿನ ಮಧ್ಯೆ, ವಿಜ್ಞಾನಿಗಳ ಮಾತುಗಳಿಗೂ ಕಿವಿಗೊಡದೆ ತನ್ನ ಅಜ್ಞಾನವನ್ನು ಪ್ರದರ್ಶಿಸಿದೆ. ತಮ್ಮ ವಿಲಾಸಿ ಜೀವನಕ್ಕೆ ವನ್ಯ ಸಂಪತ್ತನ್ನು ಪರೋಕ್ಷವಾಗಿ ನಾಶಪಡಿಸುತ್ತಿರುವ ಶೋಕಿ ಜನಾಂಗವು, ಮುಂದೆ "ಗುಡಿಸಲಿದ್ದರೂ ಪರವಾಗಿಲ್ಲ ನೀರಿದ್ದರೆ ಸಾಕು" ಎಂದು ಗೋಳಿಡುವ  ದಿನ ದೂರವಿಲ್ಲ.

No comments:

Post a Comment

Printfriendly

Related Posts Plugin for WordPress, Blogger...