Saturday, March 12, 2016

ದಿನ ಭವಿಷ್ಯದ ಕಣ್ಣೀರು

ಪ್ರತಿದಿನ ಪೇಪರ್ ಹುಡುಗನ ಡಿಸ್ಕ್ ಥ್ರೋ, ಮನೆಯ ಮಹಾದ್ವಾರಕ್ಕೆ ರಪಕ್ಕನೆ ತಟ್ಟಿದಾಗ, ರಾಮು ಒಡೋಡಿ ಬಂದು ಪೇಪರನ್ನು ಬಿರುಸಿನಲ್ಲಿ ಬಾಗಿಲಿನ ತಪ್ಪಲಿನಿಂದ ಎತ್ತಿಕೊಳ್ಳುತ್ತಿದ್ದ. ಮನೆಯಲ್ಲಿ ಓದುವವರು ಇವನನ್ನು ಬಿಟ್ಟರೆ ಮಡದಿ ಮಾತ್ರ. ಆಗಷ್ಟೇ ಮದುವೆಯಾಗಿದ್ದವನಿಗೆ ಭವಿಷ್ಯದ ಮೇಲೆ ಅತಿಯಾದ ಕೌತುಕ. ಬೆಳ್ಳಂಬೆಳಗ್ಗೆ "ಬಾಗಿಲನು ತೆರೆದು ದಿನದ ಮುನ್ನುಡಿ ತೋರು ಪತ್ರಿಕೆಯೇ" ಎನ್ನುವಷ್ಟು ದಿನದ ಭವಿಷ್ಯದತ್ತ ಕಣ್ಣು ಹಾಯಿಸುತ್ತಿದ್ದ. ತಿರುಪತಿಯ ವೈಕುಂಠದ ಬಾಗಿಲು ತೆರೆದಂತೆ ಪ್ರತಿದಿನ ಭವಿಷ್ಯದ ಪುಟವನ್ನು ತೆರೆಯುತ್ತಿದ್ದ. ಕೆಲವೊಮ್ಮೆ ಅದರ ನಿಮಿತ್ತ ಶೌಚ ಮರೆತಿದ್ದು ಕೂಡ ಉಂಟು. ಯಾರಾದರು ಬೈದರೆ ಕುಜನ ಸಿಡುಕೆಂದು, ಮಡದಿಯಿಂದ ಬೈಗುಳ ತಿಂದರೆ ಶುಕ್ರನ ರಂಪಾಟವೆಂದು, ಸರಿಯಾದ ಸಮಯಕ್ಕೆ ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳದಿದ್ದರೆ ಶನಿಯ ಮಂದಗತಿಯ ಪ್ರತಿಕೂಲತೆಯೆಂದು, ಸರಿಯಾದ ಸಮಯಕ್ಕೆ ತಲೆ ಓಡದಿದ್ದರೆ ಬುಧನ ದುರ್ಬುದ್ಧಿಯೆಂದು, ಮನಸ್ಸು ಹತೋಟಿಗೆ ಬರದಿದ್ದರೆ ಚಂದ್ರನ ದುರ್ಬಲತೆಯೆಂದು, ಪೂಜಾ ಕಾರ್ಯಗಳಿಗೆ ವಿಪರೀತ ಖರ್ಚಾದರೆ ಗುರುವಿನ ಧರ್ಮಬಾಧೆಯೆಂದು, ರೋಗಗಳು ಬಂದರೆ ಸೂರ್ಯನ ಪ್ರಖರತೆಯೆಂದು, ಯಾರಾದರು ಮೋಸ ಮಾಡಿದರೆ ಇದು ರಾಹು-ಕೇತುವಿನ ಕುತಂತ್ರವೆಂದು, ಹೀಗೆ ಜೀವನದ ಎಲ್ಲಾ ಮಜಲುಗಳನ್ನು ಗ್ರಹಗಳ ಸ್ಥಿತಿ-ಗತಿಗಳಿಗೆ ಹೋಲಿಸುತ್ತಿದ್ದ. ಆಗೊಮ್ಮೆ ಈಗೊಮ್ಮೆ ಭವಿಷ್ಯದ ಮಾತು ಸರಿಯಾಗುತ್ತಿತ್ತೆನ್ನಿ, ಆದರೆ ವಿಷಾದವೆಂದರೆ ದಿನದ ಭವಿಷ್ಯವನ್ನು ಹೇಗಾದರೂ ಮಾಡಿ ತನ್ನ ವಾಸ್ತವಕ್ಕೆ ತುಲನೆ ಮಾಡುತ್ತಿದ್ದ. ಸೋಜಿಗವೆಂದರೆ, ದಿನದ ಘಟನಾವಳಿಗಳನ್ನು ಮತ್ತು ಕಾಕತಾಳಿಯಗಳನ್ನು ರಾಶಿ ಭವಿಷ್ಯದೊಂದಿಗೆ ಜೋಡಿಸುತ್ತಿದ್ದ ಕೂಡ. ಮಡದಿಗೂ ಗಂಡನ ಈ ವಿಚಿತ್ರ ವರ್ತನೆಯಿಂದ ರೋಸಿಹೋಗಿತ್ತು. "ನೋಡೇ ಇಂದು ರಾಶಿ ಭವಿಷ್ಯದಲ್ಲಿ ವಿಪರೀತ ಖರ್ಚು ಅಂತ ಬರೆದಿತ್ತು ಅದಿಕ್ಕೆ ಫ್ಯಾಂಸಿ ಅಂಗಡಿಯಲ್ಲಿ ದುಡ್ಡೆಲ್ಲಾ ಪುಡಿಯಾಯಿತು" ಎಂಬುದು ಅವನ ವಿಮರ್ಶೆ. ಪ್ರಯಾಣ ವಿಚಾರದಲ್ಲಿ ತಪ್ಪದೆ ಅಂದಿನ ದಿನದ ಭವಿಷ್ಯವನ್ನು ಓದಿಯೇ ಮುಂದುವರೆಯುತ್ತಿದ್ದ. ಕೆಲವೊಮ್ಮೆ ಬಸ್ ಟಿಕೆಟ್ ಕ್ಯಾನ್ಸೆಲ್ ಮಾಡಿದ ನಿದರ್ಶನಗಳೂ ಇದೆ!

ಎಂದಿನಂತೆ ಇಂದು ಕೂಡ ರಾಮು ಭವಿಷ್ಯದ ಮೇಲೆ ದುರುಗುಟ್ಟಿ ನೋಡುತ್ತಿದ್ದಾಗ, ತನ್ನ ರಾಶಿ ಭವಿಷ್ಯ ಕಂಡು ಅವನು ಒಮ್ಮೆಲೆ ದಿಗಿಲಾದನು. ಅಂದು "ನೀವು ಮಾಡಿದ ಪ್ರಮಾದದಿಂದಾಗಿ ಕಣ್ಣೀರಿಡುವ ದಿನ" ಎಂದು ಭವಿಷ್ಯ ಬರೆದಿತ್ತು. ಇವನಿಗೆ ದಿಕ್ಕೇ ತೋಚದಂತಾಯಿತು. ಗ್ರಹಗಳೆಲ್ಲವೂ ಕೂಡಿ ನನ್ನ ತೇಜೋವಧೆಗೆ ಸಂಚು ರೂಪಿಸಿವೆಯೆಂಬ ಸಂಶಯದೊಂದಿಗೆ ಒಳಗೊಳಗೆ ವಿಚಲಿತನಾದ. ಗಡಿಬಿಡಿಯಲ್ಲಿ ಇಲ್ಲಸಲ್ಲದ ಯೋಚನೆಗಳು ತಲೆಯಲ್ಲಿ ಹೊಕ್ಕತೊಡಗಿತು. ಯೋಚನೆಗಳ ಸಾಗರದಲ್ಲಿ ಸುಮಾರು ೩ ತಿಂಗಳು ಹಿಂದೆ ಸ್ನೇಹಿತನಿಗೆ ನೀಡಿದ ಸಾಲ ನೆನಪಾಯಿತು. ಸಂಶಯವಿದ್ದರೂ ಮಡದಿಯ ಆಣತಿಯಂತೆ ಸಾಲ ನೀಡಿದ್ದ. ಈಗ ಎಲ್ಲಿ ಕೊಟ್ಟ ಹಣ ಕೈತಪ್ಪಿಬಿಡುವುದೋ ಎಂಬ ಗಾಬರಿ ಭುಗಿಲೆದ್ದಿತು. ಅದಕ್ಕೆ ಸರಿಯಾಗಿ, ಸ್ವಲ್ಪ ಹೊತ್ತಿನಲ್ಲಿ ಫೋನು ರಿಂಗಣಿಸಿತು. ಇವನ ದುಗುಡ ಇಮ್ಮಡಿಯಾಯಿತು ಕೂಡ. ಸ್ನೇಹಿತನೇ ಫೋನಾಯಿಸಿರಬೇಕೆಂಬ ಸಂಶಯದಿಂದ, ಫೋನು ಎತ್ತುವ ಧೈರ್ಯ ಕೂಡ ತೋರಲಿಲ್ಲ. ಎಲ್ಲಿ ಅವನು ಊರು ಬಿಟ್ಟು ಹೋಗುವ ಸುದ್ಧಿಯನ್ನು ತಿಳಿಸಿ ತನ್ನ ಹಣ ಕೈತಪ್ಪಿ ಹೋಗುವುದೋ ಎಂಬ ಅಸಂಬದ್ಧ ಯೋಚನೆ ಮೂಡಿತು. "ಏನ್ರಿ ಆವಾಗಿಂದ ಮಾವನವರು ಫೋನ್ ಮಾಡ್ತಾ ಇದಾರಂತೆ ನೀವು ಯಾಕೆ ಎತ್ಲಿಲ್ಲ" ಸಿಡುಕಿದ ಮಡದಿ ತಿಳಿಸಿದಾಗ ಇವನಿಗಷ್ಟು ಸಮಾಧಾನವಾಯಿತು. ಮನಸ್ಸಿನೊಳಗಿನ ಯೋಚನೆಗಳ ಯುದ್ಧ ಮಾತ್ರ ಅವಿರತವಾಗಿ ನರವನ್ನು ಹಿಂಡುತ್ತಿದ್ದವು. ದಿನಪೂರ್ತಿ ಕೆಲಸದಲ್ಲಿ ತೊಡಗಿಕೊಂಡಿದ್ದ ಮಡದಿಗೂ ಇದರ ಮೇಲೆ ಗಮನ ಹರಿಸಲು ಪುರುಸೊತ್ತಿರಲಿಲ್ಲ.

"ಟಿಂಗ್ ಟಾಂಗ್" ಕಾಲಿಂಗ್ ಬೆಲ್ ಶಬ್ಧ ಮಾಡಿತು. ಎಲ್ಲಿ ಕಳ್ಳ ಬಂದಿದ್ದಾನೋ ಮತ್ತೊಂದು ಸಂಶಯ ರಾಮುವಿಗೆ. ಮೊದಲೇ ಭವಿಷ್ಯ ಓದಿ ವಿಚಲಿತನಾಗಿದ್ದವನಿಗೆ ಧೈರ್ಯ ಮತ್ತಷ್ಟು ಕುಂಠಿತಗೊಂಡಿತು.ಬಾಗಿಲು ತೆರೆಯಲು ಮನಸ್ಸು ಒಪ್ಪಲಿಲ್ಲ. "ಏನ್ ಮಾಡ್ತಾ ಇದೀರಾ ನೀವು. ಸುಮ್ನೆ ಬುದ್ಧನ ಹಾಗೆ ಕುಳಿತುಕೊಳ್ಳುವವರು ಬಾಗಿಲು ತೆರೆಯಲೇನು ದಾಡಿ" ಎಂದು ಮಡದಿ ಧರಧರನೆ ದ್ವಾರದ ಬಾಗಿಲು ತೆರೆದಳು. ಇವನಿಗೆ ಅದೇನು ನರಕದ ಬಾಗಿಲು ತೆರೆದಂತೆ ಭಾಸವಾಯಿತು. "ಓ ಬನ್ನಿ ಅಣ್ಣ ಬಹಳ ದಿನ ಆಯ್ತು ಬಾಯಾರಿಕೆ ಕುಡಿತಿರಾ?" ಎಂದು ರಾಮುವಿನ ಮಡದಿ ಅತಿಥಿಯಿನ್ನು ವಿನಯದಿಂದ ಬರಮಾಡಿಕೊಂಡಳು. ತಾನು ಸಾಲ ಕೊಟ್ಟ ಸ್ನೇಹಿತನನ್ನು ಕಂಡ ರಾಮುವಿಗೆ ತನ್ನ ಒಳಗಿನ ಮಿಥ್ಯಾ ಪರ್ವತ ಮತ್ತಷ್ಟು ಏರಿತು. ಮತ್ತಷ್ಟು ಸಾಲ ಕೇಳಲು ಬಂದಿರಬೇಕೆಂದು ಎಣಿಸುತ್ತಾ ಹೇಗಾದರೂ ಮಾಡಿ ತಪ್ಪಿಸಬೇಕೆಂದು ಶಪಥ ಮಾಡಿದನು. "ಏನಯ್ಯಾ ಹೇಗಿದ್ದೀಯಾ. ನನ್ ಬಿಸಿನೆಸ್ ಈಗ ಬೊಂಬಾಟ್ ಆಗಿ ನಡಿತಿದೆ. ಮತ್ತೆ ಸಾಲಕ್ಕೆ ಕೇಳಕ್ಕೆ ಬಂದಿದಿನಿ ಅಂತ ಒಳಗೊಳಗೆ ಅಂದ್ಕೋಬೇಡ. ಫರ್ಸ್ಟ್ ಪ್ರಾಫಿಟ್ ನಿನ್ ಸಾಲ ತೀರಿಸಿದಕ್ಕೆ ತಂದಿದೀನಿ ನೋಡು. ತುಂಬಾ ಥ್ಯಾಂಕ್ಸ್ ಕಣಯ್ಯಾ" ಎಂದು ಕೊಟ್ಟ ಸಾಲ ಮರುಳಿಸಿದನು ಸ್ನೇಹಿತ. ರಾಮುವಿನ ಬಾಯಿ ಸ್ವಲ್ಪ ಹೊತ್ತಿಗೆ ಸ್ಥಬ್ಧವಾಯಿತು. "ಏನಯ್ಯಾ ನಿನ್ ಮಾತು ನಿಂತು ಹೋಯಿತಾ?" ಎಂದು ಸ್ನೇಹಿತ ಪ್ರಶ್ನಿಸಿದಾಗ, "ಇಲ್ಲಾ ಅಣ್ಣ ಬಹುಶಃ ಬೆಳಗ್ಗಿನ ಪೇಪರ್ ನಲ್ಲಿ ಬಂದಿರೋ ಬುದ್ಧನ ಕಥೆಯನ್ನು ಓದಿ ಹೀಗಾಗಿರಬಹುದು. ಬೆಳಗ್ಗಿನಿಂದ ಹೀಗೆ ಇದ್ದಾರೆ" ಎಂದು ರಾಮುವಿನ ಮಡದಿ ಮಧ್ಯಸ್ಥಿಕೆ ವಹಿಸಿದಳು. "ಹಾಗೆನಿಲ್ಲ ಕಣಯ್ಯಾ. ಸುಮ್ನೆ ಸ್ವಲ್ಪ ಮಾತು ಕಡಿಮೆ ಮಾಡೋಣ ಅಂತ ಸ್ವಲ್ಪ ಟ್ರೈ ಮಾಡ್ತಾ ಇದೀನಿ. ಅದಿಕ್ಕೆ ಈ ರೀತಿಯ ವೇಷ" ಎಂದು ರಾಮು ನಿರಾಳವಾಗಿ ಪ್ರತ್ಯುತ್ತರ ನೀಡಿದನು. "ಸರಿ ಸರಿ ಬಿಡು. ನನಗೆ ತುಂಬಾ ಕೆಲಸ ಇದೆ ಬರ್ತೀನಿ ಕಣಯ್ಯಾ. ಅತ್ತಿಗೆ ಇನ್ನೊಮ್ಮೆ ಚಾ ಕುಡಿಲಿಕ್ಕೆ ಬರ್ತಿನಿ" ಎಂದು ಸ್ನೇಹಿತ ಅವಸರದಲ್ಲಿ ಹೊರನಡೆದನು.

ರಾಮುವಿಗೆ ಏನಾಗುತ್ತದೆಯೆಂದು ತಿಳಿಯುತ್ತಿರಲಿಲ್ಲ. ದುಗುಡಗಳು ಕಡಿಮೆಯಾದರೂ ಮನಸ್ಸಿನ ಮೂಲೆಯಲ್ಲಿ ಕೆಲವು ವಿಚಾರಗಳು ಹಾಗೆಯೇ ಉಳಿದುಕೊಂಡವು. ಹಲವು ಘಟನೆಗಳು ನೆನಪಿಸಿಕೊಂಡರೂ ಯಾವುದೂ ಮೋಸದ ಜಾಲಕ್ಕೆ ಸೇರುತ್ತಿರಲಿಲ್ಲ. ಮುಂದೇನಾದರೂ ಆಗಬಹುದೇ ಎಂಬ ಸಂಶಯ ಮತ್ತೆ ಹುಟ್ಟುಕೊಂಡಿತು. "ಅಲ್ರೀ ಈರುಳ್ಳಿ ಪಕೋಡ ಮಾಡಲು ತಿಳಿಸಿದ್ರಿ ಅಲ್ವಾ. ಬೇಕಾದ್ರೆ ಈರುಳ್ಳಿ ಹೆಚ್ಚಿ ಕೊಡಿ" ಎಂದು ಮಡದಿ ಜೋರು ಮಾಡಿದಳು. ದುಗುಡ ಕಡಿಮೆಯಾದ್ದರಿಂದ ರಾಮು ಕೂಡಲೇ ಒಪ್ಪಿಕೊಂಡ. ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ಜಲಪಾತದಂತೆ ಕಣ್ಣೀರು ಸುರಿಯತೊಡಗಿತು. "ಏನೇ ನಿನ್ನಷ್ಟೇ ಸ್ಟ್ರಾಂಗ್ ಇದೆ ಈರುಳ್ಳಿ" ಎಂದು ರಾಮು ದುಃಖಿಸಿದಾಗ, "ನೀವಲ್ವ ಹೇಳಿದ್ದು ಮಾಡ್ಲಿಕ್ಕೆ. ಇವಾಗ ಅನುಭವಿಸಿ" ಎಂದು ಮಡದಿ ಕೊಂಕು ಮಾತನಾಡಿದಳು. ಈರುಳ್ಳಿ ತುಂಡರಿಸುವ ಕಾರ್ಯ ಸಮಾಪ್ತಿಯಾದಾಗ ಕಣ್ಣೀರಿನ ಅಂಟು ರಾಮುವಿನ ಮುಖವೆಲ್ಲಾ ಆವರಿಸಿತ್ತು. ಸಂಜೆ ರುಚಿಯಾದ ಈರುಳ್ಳಿ ಪಕೋಡ ಕೂಡಾ ಚಪ್ಪರಿಸಿಕೊಂಡು ತಿಂದ. ಮಲಗುವವರೆಗೂ ದಿನ ಎಂದಿನಂತೆ ನಡೆಯಿತು. ಯಾವುದೇ ಅವಾಂತರಗಳು ನಡೆಯಲಿಲ್ಲ. ಮರುದಿನ ಕೂಡ ರಾಮುವಿಗೆ ಅದೇನೋ ಯೋಚನೆ. ದಿನ ಭವಿಷ್ಯದ ಬಗ್ಗೆ ಸಂಶಯಗೊಂಡರೂ ಹಾಗಗಲು ಸಾಧ್ಯವಿಲ್ಲವೆಂದು ಮನಸ್ಸಿನಲ್ಲೇ ಅಂದುಕೊಂಡ. ಎಲ್ಲೋ ಬೇರೆ ರಾಶಿಯವರ ಭವಿಷ್ಯ ನೋಡಿರಬೇಕು ಎಂದುಕೊಂಡು ಮತ್ತೆ ಹಿಂದಿನ ದಿನದ ಪತ್ರಿಕೆ ತಿರುವಿದಾಗ ಅವನ ರಾಶಿ ಭವಿಷ್ಯವೇ ಆಗಿತ್ತು. ಹಿಂದಿನ ದಿನದ ದುಗುಡ ದುಮ್ಮಾನಗಳು ಬಹಳಷ್ಟು ಇಳಿದಿದ್ದರೂ, ಮೆದುಳಿನ ಮೂಲೆಯಲ್ಲಿ  ಯಾವ ಘಟನೆಯನ್ನೂ ಅವನಿಗೆ ತುಲನೆ ಮಾಡಲು ಸಾಧ್ಯವಾಗಲಿಲ್ಲ.

ಬಹಳ ದಿನದಿಂದ ಈರುಳ್ಳಿ ಪಕೋಡ ತಯಾರಿಸಲು ಮಡದಿಯನ್ನು ಒತ್ತಾಯಿಸಿದ ಪ್ರಮಾದಕ್ಕಾಗಿ, ಹಿಂದಿನ ಈರುಳ್ಳಿ ಹೆಚ್ಚಿ ಕಣ್ಣೀರು ಸುರಿಸಿದ್ದು ರಾಮುವಿಗೆ ಕೊನೆಗೂ ತಲೆಗೆ ಹೊಳೆಯಲೇ ಇಲ್ಲ!

No comments:

Post a Comment

Printfriendly

Related Posts Plugin for WordPress, Blogger...