Friday, December 2, 2022

ಡಿಸೆಂಬರ್ ರಜೆ ಲೆಕ್ಕಾಚಾರ

ಇದೊಂದು ಕಾಲ್ಪನಿಕ ಬರಹ. ಹಾಗೆಯೇ ಮನಸ್ಸಿನಲ್ಲಿ ಥಟ್ ಅಂತ ಹೊಳೆದಿದ್ದು. ನಿಮ್ಮ ದೈನಂದಿನ ಜೀವನದೊಂದಿಗೆ ಹೊಂದಿಕೆಯಾದರೆ ಅದೊಂದು ಕಾಕತಾಳೀಯವಷ್ಟೇ!

=========================================================================

ಎಂದಿನಂತೆ ನಿಂಗಿ ಮತ್ತು ಗುಂಡ ಬೆಳಗ್ಗಿನ ಚಹಾವನ್ನು ಸವಿಯುತ್ತಿದ್ದರು. ಮಾತನಾಡುತ್ತಾ ಹಾಗೆಯೇ ಡಿಸೆಂಬರ್  ರಜೆಯ ಲೆಕ್ಕಾಚಾರ ನಡೆಯುತ್ತಿತ್ತು. ಅದಕ್ಕೆ ಸರಿಯಾಗಿ ಪ್ರವಾಸದ ನೀಲಿನಕ್ಷೆ ಸಿದ್ಧಪಡಿಸುವುದೆಂಬ ನಿರ್ಧಾರಕ್ಕೆ ಬಂದಿದ್ದರು.

ಗುಂಡ ಕೂಡಾ ಮೊಬೈಲ್ ತೆರೆದು ಕ್ಯಾಲೆಂಡರ್ ತೆರೆದು ಡಿಸೆಂಬರ್ ತಿಂಗಳ ತಾರೀಕುಗಳತ್ತ ಕಣ್ಣಾಡಿಸಿದ. "ಥೋ ಎಂತಾ ಮಾರಾಯ್ತಿ. ೨೦೨೨ ಡಿಸೆಂಬರ್ ೨೫ ಹಾಗು ೨೦೨೩ ಜನವರಿ ೧ ಎರಡೂ ಭಾನುವಾರ ಬಂದಿದೆ. ಛೇ, ಎರಡು ರಜೆ ಹಾಳಾಯ್ತು ನೋಡು" ಎಂದು ಗುಂಡ ಬೇಸರದಿಂದ ನುಡಿದ.


"ಹೌದೇನ್ರೀ ಏನು ಹಾಳು ವರ್ಷಾನೋ. ಡಿಸೆಂಬರ್ ೨೫ ಶುಕ್ರವಾರ ಬಂದು ಜನವರಿ ೧ ಸೋಮವಾರ ಬರಕ್ಕೆ ಆಗಲ್ವಾ. ಈ ಸಲ ಏನೂ ಪ್ಲಾನ್ ಮಾಡಕ್ಕೆ ಆಗಲ್ಲ ನೋಡಿ" ಅಂತ ಗುಂಡನಿಗೆ ಸಾಥ್ ನೀಡಿದಳು ನಿಂಗಿ.

ಅಷ್ಟೊತ್ತು ಬೇಸರದಿಂದ ತುಂಬಿದ್ದ ಗುಂಡನಿಗೆ ನಗು ಮೆಲ್ಲನೆ ಅರಳತೊಡಗಿತು. "ಯಾಕ್ರೀ ಈ ಮುಸಿ ಮುಸಿ ನಗು" ಎಂದು ನಿಂಗಿ ವಿಚಾರಿಸಿದಾಗ, ನಗು ತಡೆದುಕೊಂಡು "ಅಲ್ವೇ! ಡಿಸೆಂಬರ್ ೨೫ ಶುಕ್ರವಾರ ಬಂದ್ರೆ ಜನವರಿ ೧ ಹೇಗೆ ಸೋಮವಾರ ಬರಕ್ಕೆ ಸಾಧ್ಯ ಹೇಳು" ಎಂದು ಹೇಳಿ ಗುಂಡನ  ನಗು ಇಮ್ಮಡಿಯಾಯಿತು.

 "ಇರಲಿ ಬಿಡಿ ಡಿಸೆಂಬರ್ ೨೫ ಸೋಮವಾರ ಬಂದು ಜನವರಿ ೧ ಮಗಳವಾರ ಇದ್ದರು ಉಪಯೋಗವಾಗುತ್ತಿತ್ತು" ಎಂದು ಮತ್ತೆ ಒದರಿದಳು. ಗುಂಡನಿಗೆ ನಗು ತಡೆಯಲಾಗದೆ "ಅದು ಹೇಗೆ ಆಗುತ್ತೆ? ಡಿಸೆಂಬರ್ ೨೫ ಸೋಮವಾರ ಬಂದರೆ ಜನವರಿ ೧ ಕೂಡಾ  ಸೋಮವಾರ ಬರುತ್ತೆ ಅಲ್ವೇನೆ" ಎಂದು ನಗು ಮುಂದುವರೆಸಿದನು.

"ಅದೇ ಕಣ್ರೀ ಡಿಸೆಂಬರ್ ೨೫ ಮತ್ತು ಜನವರಿ ೧ ಎರಡೂ ಸೋಮವಾರ ಬಂದಿದ್ರೆ ಎರಡು ದಿನ ಜಾಸ್ತಿ ಸಿಗುತ್ತೆ ಅಂತಾನೆ ಹೇಳಕ್ಕೆ ಹೋಗಿದ್ದು. ಅಷ್ಟು ಅರ್ಥ ಆಗಲ್ವಾ ನಿಮಗೆ. ಸುಮ್ಮನೆ ಎಲ್ಲದು ಲೆಕ್ಕಾಚಾರ ನಿಮ್ಮದು" ಎಂದು ಮುಖ ಸಿಂಡರಿಸಿಕೊಂಡಳು. ಸ್ವಲ್ಪ ಹೊತ್ತು ನಿಶ್ಯಬ್ಧ ಆವರಿಸಿತು.

ಚಹಾ ಕುಡಿದ ಬಳಿಕ ನಿಂಗಿ ತನ್ನ ಲೋಟ ಮಾತ್ರ ತೊಳೆಯಲು ತೆಗೆದುಕೊಂಡು ಹೋದಳು. ಯಾವಾಗಲೂ ತನ್ನ ಲೋಟವನ್ನೂ ತೊಳೆಯಲು ತೆಗೆದುಕೊಂಡು ಹೋಗುತ್ತಿದ್ದವಳು ಏನಾಯ್ತಪ್ಪ ಅಂತ ಗುಂಡ ಆಶ್ಚರ್ಯಪಟ್ಟನು.

"ದೋಸೆಗೆ ಬೆಣ್ಣೆ ತೆಗೆದಿಡೆ" ಸ್ನಾನಕ್ಕೆ ಹೋಗುವ ಮುಂಚೆ ಗುಂಡ ನಿಂಗಿಗೆ ಸೂಚಿಸಿದಾಗ, "ಪಕ್ಕದಲ್ಲಿ ನಂದಿನಿ ಪಾರ್ಲರ್ ಇದೆ ಅಲ್ಲಿಂದ ತಗೊಂಡು ಬನ್ನಿ ವಾಕಿಂಗ್ ಆಗುತ್ತೆ" ಅಂತಾ ಥಟ್ ಅಂತಾ ನಿಂಗಿ ಘರ್ಜಿಸಿದಳು. ತಾರೀಕಿನ ಹಾಸ್ಯದಲ್ಲಿ ಮೇಡಂ ಫುಲ್ ಗರಂ ಆಗಿದ್ದಾರೆ ಅನ್ನೋದು ಗುಂಡನಿಗೆ ಆಗಲೇ  ಮನವರಿಕೆಯಾಗಿದ್ದು.

2 comments:

  1. Hello,
    Nice to read your travelogues. The images are very impressive.
    Thank you for visiting my blog and posting a comment.
    PS: Red munias can be easily sighted at Muthanallur lake.

    ReplyDelete
  2. ...your header image is gorgeous!

    ReplyDelete

Printfriendly

Related Posts Plugin for WordPress, Blogger...