ಏನು ತಲೆಬರಹ ನೋಡಿ ಬೆರಗಾದರೆ. ಇನ್ನು ಸ್ವಲ್ಪವೇ ಸಮಯದಲ್ಲಿ ಇದರ ಒಳ ಮರ್ಮ ತಿಳಿಯುವುದು. ಓದಲು ತಯಾರಾಗಿದ್ದೀರಾ? ಹಾಗಾದ್ರೆ ಶುರು ಹಚ್ಕೊಳೋಣ ಬನ್ನಿ 😀
ನಮ್ಮ ಹೋಮ್-ಮಿನಿಸ್ಟರ್ ಕಾರ್ ಕಲಿಯಲು ತುದಿಗಾಲಲ್ಲಿ ನಿಂತಿದ್ದಾಳೆ. ಹಾಗೆ ಕ್ಲಾಸ್ ಕೂಡಾ ಸೇರಿದಳು ನೋಡಿ. ಇರಲಿ ನನಗು ತುಂಬಾ ಡ್ರೈವ್ ಮಾಡಿ ಸುಸ್ತಾದಾಗ ಉಪಯೋಗವಾಗುತ್ತೆ ಅಂತ ನಾನು ಅಸ್ತು ಎಂದಿದ್ದೆ. ಕಲಿಸುವವನು ಮಂಡ್ಯದವನು. ಇನ್ನೂ ಮದುವೆ ಆಗಿಲ್ಲವಂತೆ. ಅವನು ಸುಮಾರು ಕಥೆ ಹೊಡೀತಾನೆ ಅಂತ ಹೇಳ್ತಿದ್ಲು ನಮ್ಮ ಗೃಹಿಣಿ. ಅದರಲ್ಲಿ ಕೆಳಗೆ ಗೀಚಿರುವುದು ಸ್ವಲ್ಪ ಕುತೂಹಲಕಾರಿಯಾಗಿತ್ತು. ಓದಿ ಆನಂದಿಸಿ!
ಕಾರು ಕಲಿಸುವವನಿಗೆ ಹಾಲನ್ನ ಮತ್ತು ಮೊಸರನ್ನ ಆಗಲ್ಲ ಅಂತೆ. ಸಣ್ಣವರಿರುವಾಗ ಖಾರ ತಿನ್ನಿಸಿ ತಿನ್ನಿಸಿ ಈಗ ಕೋಪ ಜಾಸ್ತಿ ಆಗಿದೆ ಅಂತ ಅವನ ತಾಯಿ ಪ್ರತಿ ಬಾರಿ ಮನೆಗೆ ಹೋದಾಗ ಮೊಸರನ್ನವನ್ನೇ ಹೆಚ್ಚಾಗಿ ಬಡಿಸುತ್ತಾರೆ ಅಂತೆ. ಇಷ್ಟ ಇರದಿದ್ದರೂ ಕಣ್ಣು ಮುಚ್ಚಿಕೊಂಡು ಎಂಜಾಯ್ ಮಾಡಿಕೊಂಡು ತಿಂತಾನೆ ಅನ್ನೋದು ಅವನ ಹೇಳಿಕೆ. "ಅಲ್ಲಾ ಮೇಡಂ ಸಣ್ಣವರಿರುವಾಗ ಖಾರ ತಿನ್ನಿಸಿ ತಿನ್ನಿಸಿ ಅದೇ ಅಭ್ಯಾಸವಾಗಿದೆ. ಈಗ ಒಂದೇ ಸಲ ಆಹಾರ ಪದ್ಧತಿ ಬದಲು ಮಾಡು ಅಂದ್ರೆ ಯಾರಿಗೆ ರುಚಿಯಾಗುತ್ತೆ ಹೇಳಿ" ಎನ್ನೋದು ಅವನ ವಾದ. "ಏನೋ ಕಣ್-ಮುಚ್ಕೊಂಡು ತಿಂದು ಎಂಜಾಯ್ ಮಾಡೋದು ಮೇಡಂ. ನೀವು ಹಾಗೆ, ಟ್ರಾಫಿಕ್ ಇದೆ ಅಂತಾ ಟೆನ್ಷನ್ ಆಗಬೇಡಿ. ಎಂಜಾಯ್ ಮಾಡಿ, ತಂತಾನೆ ಭಯ ಹೋಗಿ ಒಳ್ಳೆ ಡ್ರೈವರ್ ಆಗ್ತೀರಾ ನೋಡಿ" ಅಂತಾ ಹುರಿದುಂಬಿಸುತ್ತಾನೆ ಕೂಡಾ. ನಮ್ಮ ಮಡದಿಯೋ, ಸ್ಪಾಟ್ ಅಲ್ಲಿ ಒಳಒಳಗೆ ನಕ್ಕು ಸುಮ್ಮನಾಗುತ್ತಾಳೆ, ಮನೆಗೆ ಬಂದು ನನ್ನ ಬಳಿ ಎಲ್ಲಾ ಒದರಿ ಬಾಯಿ ತುಂಬಾ ನಗುತ್ತಾಳೆ 😂.
ಹಾಗೆಯೇ ಹಾಲನ್ನ ದ್ವೇಷದ ಬಗ್ಗೆಯೂ ಅವನು ಹೇಳಿದ್ದನಂತೆ! ೩-೪ ತರಗತಿಯಲ್ಲಿ ಓದುತ್ತಿದ್ದಾಗ ಅಪರೂಪಕ್ಕೆ ಅಮ್ಮ ಪುಲಾವ್ ಮಾಡಿದ್ದರಂತೆ. ಹಿಂದಿನ ಕಾಲದಲ್ಲಿ ಹಾಗೆ ಅಲ್ಲವೇ! ಇಡ್ಲಿ-ದೋಸೆ ಎಲ್ಲಾ ಅಪರೂಪಕ್ಕೆ ತಯಾರಿಸುತ್ತಿದ್ದರು. ದಿನಾ ತಿಂಡಿಗೆ ಇರುವುದು ಕುಚಲಕ್ಕಿ ಗಂಜಿ ಮಾತ್ರ. ಅವನಿಗೆ ಪುಲಾವ್ ಅಂದ್ರೆ ತುಂಬಾ ಇಷ್ಟ. ಇಷ್ಟ ಅಂತಾ ಮಧ್ಯಾಹ್ನಕ್ಕೆ ಸ್ವಲ್ಪ ಜಾಸ್ತಿನೇ ಬುತ್ತಿ ಕಟ್ಟಿಕೊಂಡು ಹೋಗಿದ್ದನಂತೆ. ಮಧ್ಯಾಹ್ನ ಊಟ ಮಾಡುವ ಸಮಯ ಬಂದೆ ಬಿಟ್ಟಿತು. ಡಬ್ಬ ಕಳಚಿದ್ದೂ ಆಯಿತು. ಇನ್ನೇನು ತಿನ್ನಲಿಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ , ತುಂಟಾಟದ ಮಧ್ಯೆ ಓಡಿ ಬಂದು ಸಹಪಾಠಿಯೊಬ್ಬ ಇವನ ಹಿಂದೆಯೇ ಜಾರಿ ಬಿದ್ದನಂತೆ. ಆವಾಗೆಲ್ಲ ಬಯಲಿನಲ್ಲೇ ಊಟ ಅಲ್ಲವೇ, ಸಹಪಾಠಿ ಜಾರಿ ಬಿದ್ದ ಪ್ರಭಾವಕ್ಕೆ ಇವನ ಪುಲಾವ್ ಪೂರ್ತಿ ಮಣ್ಣುಪಾಲಾಯಿತಂತೆ. ಇವನಿಗೋ ಸಿಟ್ಟು ನೆತ್ತಿಗೇರಿತ್ತು ಆದರೂ ಶಾಲೆ ಆದ್ದರಿಂದ ಸುಮ್ಮನಿರಬೇಕಾಯಿತು. ತರಗತಿಯ ಶಿಕ್ಷಕಿ ಸಹಪಾಠಿಗೆ ತಕ್ಕ ಶಿಕ್ಷೆ ಕೂಡಾ ನೀಡಿದ್ದರಂತೆ. ಅದೇನೆಂದರೆ ಸಹಪಾಠಿಯ ಊಟದ ಬುತ್ತಿ ನಮ್ಮ ಜೂನಿಯರ್-ಡ್ರೈವರ್ ಮಹಾಶಯನಿಗೆ ಸಿಕ್ಕಿತಂತೆ. ತೆರೆದು ನೋಡಿದರೆ ಅದರಲ್ಲಿ ಇದ್ದಿದ್ದು ಹಾಲನ್ನವಂತೆ 😂. ಮೊದಲೇ ಕುದಿಯುತ್ತಿದ್ದ ಬೆಂಕಿಗೆ, ಪೆಟ್ರೋಲ್ ಸುರಿದಂತಾಯಿತಂತು ಅವನಿಗೆ. "ಅಲ್ಲ ಮೇಡಂ ಅವ್ನಿಗೆ ಡೈರೆಕ್ಟ್ ಶಿಕ್ಷೆ, ನನಗೆ ಇಂಡೈರೆಕ್ಟ್ ಶಿಕ್ಷೆ ಅಷ್ಟೇ ಇದ್ದಿದ್ದು ವ್ಯತ್ಯಾಸ. ಟೀಚರ್ ಅವನಿಗೇನೋ ಶಿಕ್ಷೆ ಕೊಟ್ರು ಆದರೆ ನನಗೆ ಹಾಲನ್ನ ಅಲ್ಲಲ್ಲ ಹಾಳನ್ನ ತಿನ್ನೋ ಶಿಕ್ಷೆ. ಬೋಳಿ ಮಗನಿಗೆ ಬೇರೆ ಏನಾದ್ರೂ ತರಕ್ಕೆ ಆಗ್ಲಿಲ್ವಾ. ಹೋಗಿ ಹೋಗಿ ನನಗೆ ಗ್ರಹಚಾರ ಒಕ್ಕರಿಸಬೇಕಾ ನೋಡಿ. ಹಸಿವು ಬೇರೆ ಆಗಿತ್ತು. ಬೇರೆ ದಾರಿಯಿಲ್ಲದೆ ತಿಂದುಬಿಟ್ಟೆ. ಆವ್ತತಿಂದ ನಂಗೆ ಅವನ ಕಂಡರು ಆಗಲ್ಲ ಜೊತೆಗೆ ಹಾಲನ್ನ ಕೂಡಾ! ಈಗ ಎಲ್ಲಿದ್ದಾನೋ ಗೊತ್ತಿಲ್ಲ ಆದರೂ ಅವನ ಮೇಲಿರೋ ಕೋಪ ಇನ್ನು ತಗ್ಗಿಲ್ಲ ನೋಡಿ. ಮದುವೆ ಹೋಗಿ ಗಂಜಿ ಉಣ್ಕೊಂಡು ತರ ನನ್ ಪರಿಸ್ಥಿತಿ" ಎಂದು ಅಳಲು ತೋಡಿಕೊಂಡನಂತೆ 😂. ಸಹಪಾಠಿ ಮಾತ್ರ ಮತ್ತೆ ಏನು ತಿಂದಾ ಅನ್ನೋ ಕ್ಲಾರಿಟಿ ಇದುವರೆಗೆ ಸಿಕ್ಕಿಲ್ಲ ಬಹುಶಃ ನನ್ನ ಮಡದಿ ಅದನ್ನ ಮತ್ತೆ ಕೆದಕುವ ಸಾಧ್ಯತೆಯೂ ಶೂನ್ಯ.
"ಆವಾಗಿನ ಟೀಚರ್ ಎಲ್ಲ ಒಳ್ಳೆಯವರಿದ್ರು ಮೇಡಂ. ತಪ್ಪು ಮಾಡಿದವರಿಗೆ ಶಿಕ್ಷೆ ಜೊತೆಗೆ ಚೆನ್ನಾಗಿ ಹೇಳಿಕೊಡ್ತಾ ಇದ್ರು. ನಾವು ಕಲಿಲಿಲ್ಲ ಅಷ್ಟೇ! ಅದಿಕ್ಕೆ ಈಗ ಒದ್ದಾಡಿಕೊಂಡು ಬೆಂಗಳೂರಲ್ಲಿ ಜೀವನ ನಡೆಸ್ತಾ ಇದೀವಿ. ಈಗಿನ ಟೀಚರ್-ಗಳು ಶಿಕ್ಷೆ ಕೊಡಕ್ಕೆ ಹೆದರ್ತಾರೆ ಅಂದ್ರೆ ನೋಡಿ ಕಾಲ ಹೇಗೆ ಬದಲಾಗಿದೆ ಅಂತಾ" ಎಂಬ ಬೇಸರದ ಮಾತುಗಳನ್ನೂ ಆಡಿದನಂತೆ.
ಎಷ್ಟು ನಿಜಾನೋ ಎಷ್ಟು ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಬ್ಲಾಗ್ ಬರೆಯಲು ಒಳ್ಳೇ ಟಾಪಿಕ್ ಸಿಕ್ಕಿತು 😂.
No comments:
Post a Comment