Saturday, February 4, 2023

ನಿಗೂಢ ಬಾತ್-ರೂಮ್

ಮನೆಗೆ ಬರುವವರನ್ನೆಲ್ಲಾ ಕೋಣೆಯೊಳಗಿರುವ ಬಾತ್-ರೂಮ್ ಗೆ ಹೋಗದಂತೆ ನಿಷೇಧ ಹೇರಿದ್ದ ಪಚ್ಚ. ಪಕ್ಕಾ ಕರ್ಫ್ಯೂ ವಾತಾವರಣ ನೆಂಟರಿಗೆ. ಸ್ನೇಹಿತರು ಪ್ರತಿ ಬಾರಿ ಮನೆಗೆ ಬಂದಾಗ  "ಈ ಬಾತ್-ರೂಮ್ ಗೆ ಕಾಲೇ ಇಡಬೇಡಿ" ಎಂಬ ಖಡಕ್ ಮಾತು ಅವನದು. ಎಷ್ಟೇ ಆದರೂ ಪಚ್ಚ ಬಾತ್-ರೂಮ್ ನಿಗೂಢತೆಯನ್ನು ಬಿಚ್ಚುತ್ತಿರಲಿಲ್ಲ.

ಈ ಬಾತ್-ರೂಮ್ ಗೆ ಕಾಲು ಇಡುವುದು ಬಿಡಿ, ಯಾರಿಗೂ ತೆರೆಯಲೂ ಸಹ ಬಿಡುತ್ತಿರಲಿಲ್ಲ. ಒಮ್ಮೆ ಹಲವಾರು ಸ್ನೇಹಿತರು ಇವನ ಮನೆಗೆ ಬಂದಾಗ ಒಂದೇ ಬಾತ್-ರೂಮಿನಲ್ಲಿ ಅಡ್ಜಸ್ಟ್ ಮಾಡುವುದು ಅವರಿಗೆಲ್ಲಾ ರೋದನೆಯಾಗಿತ್ತು. ಪಚ್ಚ ಇತ್ತೀಚಿಗೆ ಯಾಕೆ ಹೀಗೆ ಮಾಡುತ್ತಿದ್ದಾನೋ ಎಂಬ ಸಂಶಯ ಕೂಡಾ ಎದ್ದಿತ್ತು. ಪಚ್ಚ ಕೂಡಾ ಇದಕ್ಕೆ ಸರಿಯಾದ ಉತ್ತರ ನೀಡುತ್ತಿರಲಿಲ್ಲ. ಎಷ್ಟೇ ಬೇಡಿಕೊಂಡರೂ ಪಚ್ಚ ಮಾತ್ರ ಬಾತ್-ರೂಮ್ ತೆರೆಯಲು ಬಿಲ್ಕುಲ್ ಒಪ್ಪುತ್ತಿರಲಿಲ್ಲ.

ನೆಂಟರು ಅಥವಾ ಸ್ನೇಹಿತರಿಗೆ ದಿನೇ ದಿನೇ ಈ ಬಾತ್-ರೂಮ್ ನಿಗೂಢತೆ ಬಗ್ಗೆ ಕುತೂಹಲ ಹೆಚ್ಚಾಗತೊಡಗಿತು.  ಏನಾದ್ರೂ ಮಾಡಿ ಇದರ ರಹಸ್ಯವನ್ನು ಬಯಲು ಮಾಡಬೇಕು ಅನ್ನೋದು ಕೆಲವು ಸ್ನೇಹಿತರ ದೃಢ ನಿರ್ಧಾರವಾಯಿತು. 

ಹೇಳಿ ಕೇಳಿ ಪಚ್ಚ ಬಹಳ ಪಾಪದ ಹುಡುಗ. ಸೋಮಾರಿ ಬೇರೆ. ಇವನು ಅಂತದ್ದೇನೂ ಮಾಡಿರಬಹುದು ಎಂದು ಸ್ನೇಹಿತರು ಸಂಶಯಪಟ್ಟರು. ಏನೇ ಆಗಲಿ ಕಲಿಯುಗದಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲ ಅದಕ್ಕಾಗಿ ಇದನ್ನು ಭೇಧಿಸಲು ಒಂದು ಮಾಸ್ಟರ್ ಪ್ಲಾನ್ ಅನ್ನು ಸ್ನೇಹಿತರು ಜೊತೆಗೂಡಿ ಸಿದ್ಧಪಡಿಸಿದರು. "ನೀನು ಆ ಕಡೆಯಿಂದ ಬಾ, ನೀನು ಅವನ ಕೈ, ನೀನು ಕಾಲು, ನೀನು ಬಿಗ" ಹೀಗೆ ಸಾಗಿತ್ತು ಅವರ ಯೋಜನೆ. ಹಾಗೆ ಬೇಕಾದ ಕೋಡ್-ವರ್ಡ್ ಗಳನ್ನೂ ಹಂಚಿಕೊಂಡು ಹಲವು ಬಾರಿ ಅಭ್ಯಾಸ ಮಾಡಿದರು ಕೂಡಾ!

ಅಂದು ಅಮಾವಾಸ್ಯೆಯ ರಾತ್ರಿ. ಪೂರ್ವ ನಿರ್ಧಾರದಂತೆ, ಎಲ್ಲಾ ಸ್ನೇಹಿತರು ಪಚ್ಚನ ಮನೆಯಲ್ಲೇ ಊಟ ಮಾಡುವ ಯೋಜನೆ ಹಾಕಿಕೊಂಡಿದ್ದರು. ಈ ದಿನವೇ ಯೋಜನೆಯನ್ನು ಕಾರ್ಯಗತಗೊಳಿಸಲು ಸ್ನೇಹಿತರು ಬಹಳಷ್ಟು ಅಭ್ಯಾಸ ನಡೆಸಿದ್ದರು. 

ಸುಮಾರು ೩ ತಿಂಗಳಾಗಿರಬೇಕು, ಹೆರಿಗೆಗೆಂದು ಮಡದಿ ಊರಿಗೆ ಹೋಗಿದ್ದಳು.  ಪಚ್ಚ ನಗರದ ಪ್ರತಿಷ್ಠಿತ ಹೋಟೆಲಿನ ಊಟವನ್ನು ಪಾರ್ಸೆಲ್ ತರಿಸಿದ್ದ. ಜೊತೆಗೆ ಸಿಹಿ-ತಿಂಡಿ ಹಾಗು ತಂಪು ಪಾನೀಯಗಳನ್ನು ತರಿಸಿದ್ದ. ಏನೂ ತಿಳಿದಿರದ ಪಚ್ಚನು ಸ್ನೇಹಿತರನ್ನು ಆತ್ಮೀಯವಾಗಿ ಬರಮಾಡಿಕೊಂಡನು. 

ಆಹಾ! ಅದೇನು ರಸಭೋಜನ! ಎಲ್ಲವು ಪಾರ್ಸೆಲ್ ಅನ್ನೋದು ಮರಿಯಬೇಕಿಲ್ಲ ಏಕೆಂದರೆ ಪಚ್ಚನ ಹೆಂಡತಿ ಊರಿಗೆ ತೆರಳಿದ್ದಳು. ತಂಪು-ಪಾನೀಯ, ಗೋಬಿ, ರೋಟಿ-ಕರಿ ಜೊತೆಗೆ ಬಸ್ಕಿನ್-ರಾಬಿನ್ಸ್ ಐಸ್-ಕ್ರೀಮ್ ಕೂಡಾ ಸೇರಿತ್ತು. ಎಲ್ಲಾರೂ ಹೊಟ್ಟೆ ತುಂಬಾ ತಿಂದು ತೇಗಿದ್ದೂ ಆಯಿತು. ಅಳಿದುಳಿದ್ದನ್ನು ಕಸದ ಬುಟ್ಟಿಗೆ ಬಿಸಾಡಿದ ನಂತರ ಸ್ನೇಹಿತರ ಹರಟೆ ಶುರುವಾಯಿತು. 


"ತುಂಬಾ ಥ್ಯಾಂಕ್ಸ್ ಕಣೋ ಪಚ್ಚ! ಸೂಪರ್ ಪಾರ್ಟಿ ನಿನ್-ಕಡೆಯಿಂದ!" ಸ್ನೇಹಿತರು ಪಚ್ಚನನ್ನು ಹೊಗಳಿದರು. 

"ಹೇ ಹೇ ಹಾಗೇನು ಇಲ್ಲ. ಎಲ್ಲಾ ಪಾರ್ಸಲ್ ತರಿಸಿದ್ದು" ಅಂತಾ ಬೀಗುತ್ತ ಹೇಳಿದನು ಪಚ್ಚ!

"ಆದ್ರೂ ಚಾಯ್ಸಸ್ ಎಲ್ಲಾ ನಿನದೆ ಆಲ್ವಾ" ಅಂತಾ ಸ್ನೇಹಿತರು ಅವನನ್ನು ಮತ್ತೆ ಅಟ್ಟಕ್ಕೆ ಏರಿಸಲು ಹೊರಟರು. 

"ಹೂ ಮತ್ತೆ.. ಸ್ನೇಹಿತರು ಇರೋದೇ ಮಜಾ ಮಾಡಕ್ಕೆ" ಅಂತಾ ಪಚ್ಚ ಮಾರುತ್ತರ ನೀಡಿದನು. 

ಸ್ನೇಹಿತರು ವಿಷಯವನ್ನು ತಿರುವುತ್ತಾ "ಅಲ್ಲೋ ಯಾವಾಗಿಂದ ನೋಡ್ತಾ ಇದೀವಿ, ಏನಕ್ಕೆ ಒಳಗಡೆ ಇರೋ ಬಾತ್-ರೂಮ್ ಗೆ ಎಂಟ್ರಿನೇ ಕೊಡ್ತಾ ಇಲ್ಲ ನೀನು ಅಂತಾ?"

"ಏ ಏ ಏ ನಿಮಗ್ಯಾಕೋ ಅದೆಲ್ಲಾ. ಅಲ್ಲೇನು ನಾನು ಕಪ್ಪು ಹಣ ಇಟ್ಟಿಲ್ಲ. ನಿಮ್ ನೇಚರ್ ಕಾಲ್ ಗೆ ಒಂದೇ ಬಾತ್-ರೂಮ್ ಉಪಯೋಗಿಸೋಕ್ಕೆ ತೊಂದರೆ ಅಗ್ತಾ ಇದ್ದೀಯ" ದಿಗ್ಭ್ರಮೆಗೊಂಡ ಪಚ್ಚ ತೊದಲುತ್ತಾ ಉತ್ತರ ನೀಡಿದ. 

"ಚೇ ಚೇ! ಹಾಗಲ್ಲ ಶಿಷ್ಯ! ಸುಮ್ಮನೆ ಕೇಳಿದ್ವಿ. ಸ್ವಲ್ಪ ಕುತೂಹಲ ಅಷ್ಟೇ" ಅಂತಾ ಸ್ನೇಹಿತನೊಬ್ಬ ಉತ್ತರಿಸಿದ. 

"ಸರಿ ಸರಿ ಅದು ಬಿಟ್ಟು ಬೇರೆ ಏನಾದ್ರೂ ಮಾತಾಡೋಣ" ಅಂತ ಪಚ್ಚ ಅಲ್ಲಿಗೆ ವಿಷಯನ್ನು ಮುಗಿಸಲು ಪ್ರಯತ್ನಿಸಿದ. 


ಇತ್ತ ಮಿತ್ರರೆಲ್ಲ ಸೇರಿ ಕೋಡ್-ವರ್ಡ್ ಗಳನ್ನು ಮತ್ತೆ ನೆನಪಿಸಿಕೊಂಡರು. ಅದರಂತೆ ಮೊದಲು ಪಚ್ಚನನ್ನು ಅಡುಗೆ ಮನೆಗೆ ಕಳಿಸಬೇಕಿತ್ತು. 


ಸ್ವಲ್ಪ ಹೊತ್ತಿನ ನಂತರ ಮಿತ್ರನೊಬ್ಬನು... 


"ಶಿಷ್ಯಾ... ಪೆಪ್ಸಿ ಕಾಲಿ ಆಗೋಯ್ತು. ಫ್ರಿಡ್ಜ್ ಅಲ್ಲಿ ಇದಿಯಾ ನೋಡು ಸ್ವಲ್ಪಾ ?"

"ಅದಿಕ್ಕೇನು ಮಚ್ಚ ಈಗಲೇ ತಗೋಬರ್ತೀನಿ" ಎಂದು ಏನೂ ತಿಳಿಯದ ಮುಗ್ಧ ಪಚ್ಚ ಅಡುಗೆ ಮನೆಗೆ ತೆರಳಿದನು. 


ಮೊದಲನೆ ಪ್ಲಾನ್ ಸಕ್ಸಸ್ ಆಗುತ್ತಿದ್ದಂತೆ, ಮಿತ್ರರೆಲ್ಲರೂ ಸೇರಿ ಚಕ್ರವ್ಯೂಹ ರಚಿಸಿ, ತಾವು ತಂದಿದ್ದ ಹಗ್ಗವನ್ನು ಬಹುಬೇಗನೆ ಬಿಡಿಸಿ, ಪಚ್ಚನ ಬರುವಿಕೆಯನ್ನು ಕಾದು ನೋಡುತ್ತಿದ್ದರು. 


ಪಚ್ಚ ಬರುತ್ತಿದ್ದಂತೆ ಗಾಬರಿಯಿಂದ "ಅಯ್ಯೋ! ಇದೇನ್ರೋ ನಿಮ್ ಸೆಟಪ್ಪು?!!"


ಅಷ್ಟು ಹೇಳುವಷ್ಟರಲ್ಲಿ ಒಬ್ಬ ಸ್ನೇಹಿತ ಒಮ್ಮೆಲೆ ಬಂದು ಪಚ್ಚನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಇನ್ನೊಬ್ಬ ಸ್ಕ್ವಯರ್ ಡ್ರೈವ್ ನಲ್ಲಿ ಕ್ಯಾಚ್ ಹಿಡಿಯುವಂತೆ ಡೈವ್ ಹೊಡೆದು ಪಚ್ಚನ ಕಾಲುಗಳನ್ನು ಹಿಡಿದುಕೊಂಡು ಪಾದಕ್ಕೆ ಗಂಟು ಬಿಗಿದನು. 


"ಬಾ ಮಗನೆ.. ಏನು ಬಚ್ಚಿಟ್ಟಿದ್ದೀಯ ಬಾತ್-ರೂಮ್ ನಲ್ಲಿ?!!" ಎಂದು ಸ್ನೇಹಿತರು ಗದರಿಸಿದರು. 

"ಲೋ ಬಕ್ರಾ ಮಾಡಕ್ಕೆ ನನ್ನ ಮನೆನೇ ಆಗ್ಬೇಕಿತ್ತಾ" ಎಂದು ಪಚ್ಚ ಹಾಸ್ಯದಿಂದ ನುಡಿದನು. 

"ಬಾಯಿ ಮುಚ್ಚಿ ನಿಂತ್ಕೋ ಇಲ್ಲಿ.. ನಾವೇನು ಕಾಮೆಡಿ ಷೋ ಮಾಡ್ತಿಲ್ಲ ಇಲ್ಲಿ" ಎಂದು ಒಬ್ಬ ಸ್ನೇಹಿತ ಜೋರಾಗಿ ಗದರಿದನು. 

"ಅಯ್ಯೋ ರಿಲಾಕ್ಸ್ ಐ ಸೇ ! ಹೊಟ್ಟೆ ತುಂಬಾ ತಿಂದುಬಿಟ್ಟಿದ್ದೀನಿ. ತಮಾಷೆಗೆ ನನ್ನಲ್ಲಿ ಶಕ್ತಿ ಇಲ್ಲ ಕಣ್ರೋ" ಎಂದು ಪಚ್ಚ ಜೋರಾಗಿ ತೇಗಿದನು. 

"ಸ್ಟಾಪ್ ಇಟ್ ಐ ಸೇ! ಇದು ನಿಜ ಕಣಲ್ಲೇ!.. ಸುಮ್ನೆ ಸರೀ ದಾರಿಗೆ ಬಾ. ಇಲ್ಲಾಂದ್ರೆ .." ಮತ್ತೊಮ್ಮೆ ಸ್ನೇಹಿತ ಗದರಿದನು. 

"ಲೋ ಏನ್ರಪ್ಪಾ ಮಾಡ್ತಾ ಇದೀರಾ .. ಸ್ನೇಹಿತರು ಭಯೋತ್ಪಾದಕರು ಆಗಬಿಟ್ರಲ್ಲ! ದೇವರೇ ಕಾಪಾಡು" ಎಂದು ಪಚ್ಚ ನಡುಗಲು ಪ್ರಾರಂಭಿಸಿದನು. 

"ತಾಳು ಮಾಡ್ತಿವಿ ಬಡ್ಡಿ ಮಗನೆ. ಜನಗಳಿಗೆ ಮೋಸ ಮಾಡ್ತಿಯಾ. ಏನಿಟ್ಟಿದ್ದೀಯಾ ಬಾತ್-ರೂಮ್ ನಲ್ಲಿ. ಇತ್ತೀಚಿಗೆ ತೀರಾ ವಿಚಿತ್ರ ಆಡ್ತಾ ಇದೀಯಾ ಅತ್ತಿಗೆ ಊರಿಗೆ ಹೋದ್ಮೇಲೆ. ಬೊಗಳು ಬೇಗಾ" ಎಂದು ವಿಚಾರಣೆ ಶುರು ಮಾಡಿದರು. 

"ಲೋ ಏನು ಇಲ್ಲ ಕಣ್ರೀ.. ಸುಮ್ನೆ ಬಿಡ್ರೋ .. ನಾನು ನಿಮ್ಮಂಗೆ ಮಾಮೂಲಿ ಜನ" ಎಂದು ಗುಂಡ ಅಂಗಲಾಚಿದನು. 

"ಹಾಗಾದ್ರೆ ಬಾತ್-ರೂಮ್ ಕೀ ಕೊಡು" ಸ್ನೇಹಿತರು ಆದೇಶಿಸಿದರು. 

"ಅದೊಂದು ಬಿಟ್ಟು ಏನಾದ್ರೂ ಕೇಳ್ರೋ " ಎಂದು ಪಚ್ಚ ಮನವಿ ಮಾಡಿಕೊಂಡನು.


ಪಚ್ಚನ ಆಕ್ಷೇಪ, ಸ್ನೇಹಿತರ ಸಂಶಯವನ್ನು ಇಮ್ಮಡಿಯಾಗಿಸಿತು. ಕಟ್ಟಿ ಹಾಕಿದರೂ ಇವನು ಕೇಳ್ತಾ ಇಲ್ಲ ಅಂದ್ರೆ ಏನೋ ನಡೆದಿದೆ ಎಂದು ಅವರವರೊಳಗೆ ಮಾತನಾಡಿಕೊಂಡರು.


"ಅದ್ಯಾಕೋ ಆಗಲ್ಲಾ.. ಹಾಗಾದರೆ ಏನೋ ಇದೆ ಅಲ್ಲಿ ಅಂತ ತಾನೇ.. ಬೇಗಾ ಕೊಡು ಇಲ್ಲಾಂದ್ರೆ" ಸ್ನೇಹಿತರು ಮತ್ತೆ ಎಚ್ಚರಿಸಿದರು. 

"ಇಲ್ಲ ಅಂದ್ರೆ  ಏನೋ ಮಾಡ್ತೀರಾ .. ನಾನಂತು ಕೊಡಲ್ಲಾ ಏನೋ ಮಾಡ್ತೀರಾ?!! ಥೂ ನನ್ ಮಕ್ಳ . ನೀವು ಇಷ್ಟೊಂದು ಕ್ರೂರಿಗಳು ಅಂತ ಗೊತ್ತಿರಲಿಲ್ಲ" ಎಂದು ಸಿಟ್ಟಿನಿಂದ ನುಡಿದನು ಪಚ್ಚ 

ಒಬ್ಬ ಸ್ನೇಹಿತನಂತೂ ನಿಯಂತ್ರಣ ಕಳೆದುಕೊಂಡು "ಲೇ.. ಕೊಡ್ತಿಯೋ ಇಲ್ವೋ ಇಲ್ಲಾಂದ್ರೆ ಪೊಲೀಸ್ ಕರಿಸಬೇಕಾಗುತ್ತೆ ಅಷ್ಟೇ.. " ಅಂತಾ ಪಚ್ಚನನ್ನು ಹೊಡೆಯಲು ಕೈ ಎತ್ತಿದ್ದ. 

"ಅಲ್ರೊ ಇಷ್ಟು ಸಣ್ಣ ವಿಷಯಕ್ಕೆಲ್ಲ ಅದು ಕೂಡಾ ನನ್ನ ಅಆಂತರಿಕ ವಿಷಯಕ್ಕೆ ಪೊಲೀಸ್ ಯಾಕೋ ಕರಿಸ್ತೀರಾ. ನಿಮಗೆ ನಾಚಿಕೆ ಆಗಲ್ವಾ. ಛೀ ಹೇಡಿಗಳಾ" ಎಂದು ಗುಂಡನು ಕೂಡಾ ಗುಡುಗಿದನು. 

"ನಾಚಿಕೆ ನಿಂಗೆ ಆಗ್ಬೇಕು ಲೋಫರ್ ನನ್ ಮಗನೆ. ಸಣ್ಣ ವಿಷಯ ಆದ್ರೆ ಯಾಕೆ ಅಷ್ಟೊಂದು ನಿಗೂಢತೆ ಹೇಳು. ಏನ್ ಮುಚ್ಚಿಟ್ಟಿದ್ದೀಯಾ ಹೇಳು! ನೋಟ್ ಬ್ಯಾನ್ ಆದ್ಮೇಲೆ ಕಪ್ಪು ಹಣ ಇಡಕ್ಕೆ ಯಾರಾದ್ರೂ ಕೇಳಿದ್ರಾ ಹೇಳು. ಇಲ್ಲಾಂದ್ರೆ ಈಗಲೇ ಆರಕ್ಷರಿಗೆ ಫೋನ್ ಹೋಗುತ್ತೆ ನೋಡು" ಎಂದು ಸ್ನೇಹಿತನೊಬ್ಬ ಎಚ್ಚರಿಸಿದನು. 

"ಲೋ ಬಿಟ್ ಬಿಡ್ರೋ.. ಅಲ್ಲಿ ಅಂತಾದ್ದೇನೂ ಇಲ್ಲ" ಎಂದು ಪಚ್ಚ ಬೇಡಿಕೊಂಡನು 

"ಹಾಗಾದ್ರೆ ಕೀ ಕೊಡು. ನಾನು ನಿನ್ನ ಬಿಡ್ತಿವಿ" ಅಂತಾ ಸ್ನೇಹಿತರು ಪಟ್ಟು ಹಿಡಿದರು. 

ಕೊನೆಗೂ ಪಚ್ಚ ತಲೆಬಾಗಿ "ಸರಿ ತಗೋಳ್ರಪ್ಪಾ. ಏನಾದ್ರೂ ಮಾಡ್ಕೊಳಿ" ಅಂತಾ  ಕೀ ಇರುವ ಜಾಗವನ್ನು ತೋರಿಸಿದ. 

"ಅಯ್ಯೋ ದೇವ್ರೇ ಏನ್ ಗ್ರಹಚಾರನೊ" ಪಚ್ಚ ಗೋಳಾಡಿದನು  

"ಗ್ರಹಚಾರ ಈಗ ನಿನಗೆ ಬಿಡಿಸ್ತೀವಿ ಮಗನೆ" ಅಂತಾ ಸ್ನೇಹಿತರು ಬಚ್ಚಲು ಮನೆಯ ಬೀಗ ತೆರೆದರು. 


ಬೀಗ ತೆಗೆದ ತಕ್ಷಣ ಬಚ್ಚಲು ಮನೆಯೆಲ್ಲಾ ಹುಡುಕಾಡಿದರು. ಸರ್ಚ್ ವಾರಂಟ್ ಸಿಕ್ಕಂತೆ ಬಚ್ಚಲು ಮನೆಯೆಲ್ಲ ಜಾಲಾಡಿದರು. ಆದರೂ ಏನು ಪತ್ತೆ ಆಗಾಲಿಲ್ಲ. ಒಬ್ಬನಂತೂ ಕಮೋಡ್ ಒಳಗೆ CID ಏಜೇಂಟ್ ನಂತೆ ಮುಖ ತೂರಿಸಿದ್ದು ಪಚ್ಚನಿಗೆ ಅಸಹ್ಯವಾಗಿ ಕಂಡಿತು. ಎಷ್ಟು ಹುಡುಕಾಡಿದರೂ ಸ್ನೇಹತರಿಗೆ ಯಾವುದೇ ಅನುಮಾಸ್ಪದ ಕುರುಹುಗಳು ದೊರೆಯಲಿಲ್ಲ. 


"ನಾನು ಮೊದಲೇ ಹೇಳಿದ್ದೆ. ಅಲ್ಲಿ ಏನು ಇಲ್ಲ. ನೀವು ಒಳ್ಳೆ ಶೆರ್ಲಾಕ್ ಹೋಮ್ಸ್ ಶೈಲಿಯಲ್ಲಿ ದೊಡ್ಡ ಡಿಟೆಕ್ಟಿವ್ ಆಗಲು ಹೊರಟು ನನ್ನ ಮೇಲೆ ಸಂಶಯ ಮಾಡಿದ್ರಿ" ಎಂದು ಪಚ್ಚ ಅಣಕವಾಡಿದನು. 

"ಮತ್ಯಾಕೋ ಇಷ್ಟು ದಿನ ಅಲ್ಲಿಗೆ ಹೋಗದಂತೆ ತಡಿತಾ ಇದ್ದೆ. ಹೇಳು ಮಾತಾಡು" ಎಂದು ಪಚ್ಚನನ್ನು ಸ್ನೇಹಿತರು ಗದರಿದರು. 


ಪಚ್ಚ ಬಾಯೇ ಬಿಡಲಿಲ್ಲ. ಪಚ್ಚನಿಗೆ ತನ್ನ ಸ್ನೇಹಿತರು ದ್ರೋಹ ಬಗೆದರೆಂದು ಬಹಳ ಬೇಸರವಾಯಿತು. 

ಸ್ನೇಹಿತರು ಪದೇ ಪದೇ ಪೀಡಿಸಿದಾಗ ಪಚ್ಚ ಬಾಯಿಬಿಟ್ಟನು. 


"ಎಲವೋ ಬೇವರ್ಸಿಗಳಾ! ಬಾತ್-ರೂಮ್ ಎಲ್ಲಾ ಗಲೀಜು ಮಾಡ್ಬಿಟ್ರಲ್ಲೋ. ಹೆಂಡತಿ ಊರಿಂದ ಬರೋದು ಇನ್ನು ೪ ತಿಂಗಳು ಆಗುತ್ತೆ. ಬಚ್ಚಲು ಮನೆ ತೊಳಿಯೋದು ಕಷ್ಟ ಆಗುತ್ತೆ ಅಂತ ಒಂದ್ರಲ್ಲೇ ಅಡ್ಜಸ್ಟ್ ಮಾಡ್ಕೋತಿದ್ದೆ. ಈಗ ನೀವುಗಳು ಮತ್ತೆ ಗಲೀಜು ಮಾಡ್ಬಿಟ್ರಿ. ನೀವು ಈ ಲೆವೆಲ್ ಗೆ ಕೆಳಮಟ್ಟಕ್ಕೆ ಹೋಗ್ತೀರಾ ಅಂದ್ಕೊಂಡಿರ್ಲಿಲ್ಲ." ಅಂತಾ ಪಕ್ಕಾ ಯಗ್ಗ ಮಗ್ಗಾ ಸ್ನೇಹಿತರಿಗೆ ಉಗಿದನು. 

"ಮೊದಲೇ ಹೇಳಬೇಕಿತ್ತಲ್ವಾ" ಸ್ನೇಹಿತರು ಹೇಳಿದಾಗ 

"ಹೇಳಿಲ್ವೇನೋ ಹೇಡಿಗಳಾ! ಸಣ್ಣ ವಿಷಯ ಅಂತಾ. ನೀವೆಲ್ಲಿ ಕೇಳಿದ್ರಿ. ಸುಮ್ಮನೆ ಪರಿಹಾಸ್ಯಕ್ಕೆ ಯಾಕೆ ಒಳಗಾಗೋದು ಅಂತ ಸುಮ್ಮನಿದ್ದೆ. ನೀವು ಪೊಲೀಸ್ ತರ ಆಕ್ಷನ್ ತಗೋತೀರಾ ಅಂತಾ ಯಾರಿಗೆ ಗೊತ್ತಿತ್ತು. ಮ್ಯಾಟರ್ ಸಣ್ಣದ್ರಲ್ಲೇ ಮುಗಿಯುತ್ತೆ ಅಂದುಕೊಂಡೆ. ನೀವು ನೋಡಿದ್ರೆ.." ಸಿಡಿಮಿಡಿಗೊಂಡ ಪಚ್ಚ ಘರ್ಜಿಸಿದನು. 

"ವಾರದ ಹಿಂದೆ ಸೆಕ್ಯೂರಿಟಿ ಕ್ಯಾಮರಾ ಹಾಕ್ಸಿದ್ದು ಒಳ್ಳೆದಾಯ್ತು ನೋಡಿ. ನಿಮ್ಮ ಪುಂಡಾಟ ಎಲ್ಲಾ ರೆಕಾರ್ಡ್ ಆಗಿದೆ ಬೋಳಿಮಕ್ಳಾ!! ವಿಡಿಯೋ ಎಲ್ಲಾ ಕ್ಲೌಡ್ ಸಿಂಕ್ ಬೇರೆ ಆಗಿದೆ. ಇವತ್ತು ಪೂರ್ತಿ ಮನೆ ಕ್ಲೀನ್ ಮಾಡಿಲ್ಲಾ ಅಂದ್ರೆ ವಿಡಿಯೋ ಪೊಲೀಸ್ ಗೆ ಸೀದಾ ಹೋಗುತ್ತೆ. ಎಲ್ಲಾರು ಒಳಗೆ ಸೇರ್ಕೋತೀರಾ ನೋಡಿ" ಎಂದು ಖಡಕ್ ಎಚ್ಚರಿಕೆ ನೀಡಿದ ಪಚ್ಚ


ಸ್ವಲ್ಪ ದಿನದ ಹಿಂದೆ ಪತ್ತೇದಾರಿ ಪುಸ್ತಕವನ್ನು ಇಟ್ಟುಕೊಂಡು ಯೋಜನೆ ಹಾಕಿದ ಸ್ನೇಹಿತರು ಈಗ ಟಾಯ್ಲೆಟ್ ಬ್ರಶ್ ಮತ್ತು ಹಾರ್ಪಿಕ್ ಇಟ್ಟುಕೊಂಡಿದ್ದರು. ಒಂದು ಬಾತ್-ರೂಮ್ ಗಲೀಜು ಮಾಡಿದಕ್ಕೆ ಪಚ್ಚನು ಅವರಿಗೆ ಎರಡು ಬಾತ್-ರೂಮ್ ಸೇರಿಸಿ ಮನೆ ಪೂರ್ತಿ ಕ್ಲೀನ್ ಜೊತೆಗೆ ಪಾತ್ರೆ ಪೂರ್ತಿ ತೊಳೆಯುವ ಶಿಕ್ಷೆ ನೀಡಿದ್ದ!

ಇಷ್ಟು ಹೊತ್ತು ಗೋಳಾಡಿಸಿದ ಸ್ನೇಹಿತರು, ಸೆಕ್ಯೂರಿಟಿ ಕ್ಯಾಮರಾದಲ್ಲಿ ದಾಖಲೆಯಾದಂತ ವಿಡಿಯೋ ಡಿಲೀಟ್ ಮಾಡುವಂತೆ ಪಚ್ಚನ ಮುಂದೆ ಕೆಲಸ ಮಾಡುತ್ತಲೇ ದಮ್ಮಯ್ಯ ಹಾಕುತ್ತಿದ್ದರು. 

ಅವತ್ತಿನಿಂದ, ಸ್ನೇಹಿತರಿಲ್ಲದಿದ್ದರೂ ಪರವಾಗಿಲ್ಲ. ಒಬ್ಬಂಟಿಯಾಗಿ ಸುಖವಾಗಿರೋಣ ಅಂತಾ ಪಚ್ಚ ನಿರ್ಧರಿಸಿದನು. 

No comments:

Post a Comment

Printfriendly

Related Posts Plugin for WordPress, Blogger...