Wednesday, February 15, 2023

ಕ್ಯಾಂಡಲ್ ಲೈಟ್ ಡಿನ್ನರ್!

 "ರೀ.. ಕ್ಯಾಂಡಲ್ ಲೈಟ್ ಡಿನ್ನರ್ ಅಂದ್ರೆ ಏನು? ಜನ ಯಾಕೆ ಅಷ್ಟೊಂದು ಮುಗಿಬೀಳ್ತಾರೆ" ಲಚ್ಚಿ ಕುತೂಹಲದಿಂದ ಬಸವನನ್ನು ಪ್ರಶ್ನಿಸಿದಳು. 

"ನಿಂಗ್ಯಾಕೆ ಅದ್ರ ಬಗ್ಗೆ ಕುತೂಹಲ ಸಡನ್ನಾಗಿ" ಬಸವ ಆಶ್ಚರ್ಯದಿಂದ ಕೇಳಿದನು.

"ಈ ಕರಪತ್ರದಲ್ಲಿ ಇದೆ ನೋಡಿ. ಅಷ್ಟೊಂದು ಫೇಮಸ್ಸಾ ಅದು. ೧೦೦೦ ಅಂತೆ ರೀ!!" ಲಚ್ಚಿ ಆಶ್ಚರ್ಯದಿಂದ. 

"ಅಂತಾದ್ದು ಏನು ಇಲ್ಲ ಕಣೇ. ದುಡ್ಡು ಜಾಸ್ತಿ ಇದ್ರೆ ಎಲ್ಲವು ಚೆನ್ನಾಗಿರುತ್ತೆ ಅನ್ನೋ ಭ್ರಮೆ ನಿನಗೆ!" ಅಂತ ಬಸವ ಜಾರಿಕೊಂಡನು. 

"ಹೇಳ್ರಿ! ಹಳ್ಳಿಯಿಂದ ಬಂದವರಿಗೆ ಅಷ್ಟೊಂದು ತಿರಸ್ಕಾರ ಮಾಡ್ತೀರಾ" ಅಂತ ಲಚ್ಚಿ ಬೇಸರ ನುಡಿದಳು. 

"ಏನೇ ನೀನು ಏನೇನೋ ತಲೆಯಲ್ಲಿ ಇಟ್ಕೋತಿಯಾ. ಸಣ್ಣವರಿರುವಾಗ ರಾತ್ರಿ ಕರೆಂಟ್ ಇಲ್ಲಾಂದ್ರೆ ನಾವು ಹೇಗೆ ಊಟ ಮಾಡ್ತಾ ಇದ್ವಿ ಹೇಳು? ಮಧ್ಯೆ ಮೇಣದ ಬತ್ತಿ ಹಚ್ಕೊಂಡು ಸುತ್ತ ಕೂತು ತಿಂತಾ ಇದ್ವಿ ಆಲ್ವಾ. ಅದಿಕ್ಕೆ ಆಂಗ್ಲದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಅಂತಾರೆ. ಕನ್ನಡಕ್ಕೆ ಹಸಿಯಾಗಿ ಅನುವಾದ ಮಾಡಿದ್ರೆ 'ಮೇಣದ ಬತ್ತಿ ಬೆಳಕಿನ ರಾತ್ರಿ ಭೋಜನ' ಅಂತಾ. ಈ ಸಿಟಿಯವರಿಗೆ ಒಂದೋ ಕರೆಂಟ್ ಯಾವಾಗ್ಲೂ ಇರುತ್ತೆ ಅಥವಾ ಕರೆಂಟ್ ಹೋದ್ರು ಸಹ ಜನರೇಟರ್ ಅಥವಾ ಇನ್ವರ್ಟರ್ ಇರುತ್ತೆ. ಆದ್ರಿಂದ ಅವರಿಗೆ ರಾತ್ರಿ ಹೊತ್ತು ಕ್ಯಾಂಡಲ್ ಹಚ್ಕೊಂಡು ತಿನ್ನೋದು ಗೊತ್ತಿರಲ್ಲ. ಅದಿಕ್ಕೆ ಹೋಟೆಲ್ ನವ್ರು ರೊಮಾಂಟಿಕ್ ಟಚ್ ಕೊಟ್ಟು ದುಡ್ಡು ಮಾಡೋಕ್ಕೆ ದಾರಿ ಹುಡುಕಿದ್ರು ಅಷ್ಟೇ. ವ್ಯತ್ಯಾಸ ಏನಂದ್ರೆ, ಕರೆಂಟ್ ಇಲ್ದೆ ರಾತ್ರಿ ತಿನ್ನುವಾಗ ಎಲ್ರೂ ಶಾಪ ಹಾಕೊಂಡು ತಿಂತಾರೆ. ಹೋಟೆಲ್-ನಲ್ಲಿ ಏನೋ ರೊಮಾಂಟಿಕ್ ಆಗಿ ತಿಂತಾರೆ ಅನ್ಸುತ್ತೆ! ನಮ್ಮ ಇಂಡಿಯಾದವರಿಗೆ ತಮ್ಮ ತಾಯ್ನುಡಿಯಲ್ಲಿ ಬರೆದರೆ ಅಸಡ್ಡೆ. ಅದಿಕ್ಕೆ ಸ್ವಲ್ಪ ಆಕರ್ಷಣೆ ಇರಲಿ ಅಂತಾ ವ್ಯಾಪಾರ ಮಾಡೋರು ಆಂಗ್ಲದಲ್ಲೋ ಅಥವಾ ಫ್ರೆಂಚ್ ಭಾಷೆಯಲ್ಲೋ ಹೆಸರು ಇಡ್ತಾರೆ. ಕಾಫಿ ಅಂಗಡಿ ಅಂತ ಹೆಸರು ಇಟ್ರೆ ಯಾರು ಬರ್ತಾರೆ? ಅದೇ ಕೆಫೆ ಅಂದ್ರೆ ನಿನ್ನಂತವರಿಗೂ ಆಸೆ ಆಗುತ್ತೆ. ಇದು ಕೂಡಾ ಹಾಗೆ ಅಷ್ಟೇ!" ಎಂದು ಬಸವ ಸಮಜಾಯಿಷಿ ನೀಡಿದನು. 

"ಏನೋ ಹಳ್ಳಿಯಿಂದ ಬಂದವಳು ಅಂತಾ ಗೇಲಿ ಮಾಡ್ತಿರಾ. ನಾನೇನು ಅಲ್ಲಿ ಕರ್ಕೊಂಡು  ಹೋಗಿ ನಿಮಗೆ ಖರ್ಚು ಮಾಡಿಸಲ್ಲ. ಸುಮ್ಮನೆ ತಿಳ್ಕೊಳಕ್ಕೆ ಕೇಳಿದ್ದೆ ಅಷ್ಟೇ. ಹೇಳಿ ಈಗ ಸರಿಯಾಗಿ"  ಅಂತ ಲಚ್ಚಿ ಪಟ್ಟು ಹಿಡಿದಳು. 

"ಸರಿಯಾಗೇ ಹೇಳ್ತಾ ಇದೀನಿ ಕಣೆ! ನಿನ್ನಂತವರಿಗೆ ಮಂಗ ಮಾಡಿ ದುಡ್ಡು ಮಾಡಕ್ಕೆ ಅಂತದ್ದು ಶುರು ಮಾಡ್ತಾರೆ ಹೋಟೆಲ್-ನವ್ರು. ಎಲ್ಲಾ ನಾವು ಅನುಭವಿಸಿದ್ದೆ. ಹೆಚ್ಚು ಅಂದ್ರೆ ಅಲಂಕಾರ ಇರುತ್ತೆ ಮತ್ತೆ ಏ.ಸಿ. ಇರುತ್ತೆ ಅಷ್ಟೇ! ಕೆಲವೊಮ್ಮೆ ಓಪನ್ ಇರುತ್ತೆ, ಕ್ಯಾಂಡಲ್ ಜೊತೆ ನಕ್ಷತ್ರನೂ ನೋಡಿ ಅಂತಾ. ಇದರಿಂದ ಹೋಟೆಲ್-ನವರಿಗೂ ಲಾಭ. ಜನ ಊಟ ಹೇಗೆ ಇದ್ರೂ ತಿಂತಾರೆ. ಯಾಕಂದ್ರೆ ರೋಮಾಟಿಕ್ ಮೂಡ್ನಲ್ಲಿ ಊಟ ಹೇಗಿದೆ ಅಂತಾನೆ ಮರ್ತು ಬಿಡ್ತಾರೆ ಜನ. ಹಾಗೆ ಕತ್ತಲು ಇರೋದಿಂದ ಊಟಕ್ಕೆ ಹಲ್ಲಿ, ಜಿರಲೆ ಬಿದ್ರು ಜನಕ್ಕೆ ಗೊತ್ತೇ ಆಗಲ್ಲ ನೋಡು. ಬಹುಷ ಅದನ್ನ ತಿಂದೆ ಜನಕ್ಕೆ ರುಚಿ ಜಾಸ್ತಿ ಆಗಿರಬೇಕು ಅಂದ್ಕೋತೀನಿ! ಹೋಟೆಲ್-ನವರಿಗೂ ಕೆಟ್ಟ ಹೆಸರು ಬರಲ್ಲ" ಎಂದು ಪ್ರಾಮಾಣಿಕ ಉತ್ತರ ನೀಡಿದನು ಗುಂಡ. 

"ಇರ್ಲಿ ಬಿಡಿ ನಿಮಗೆ ಹೇಳೋಕ್ಕೆ ಇಷ್ಟ ಇಲ್ಲ" ಅಂತ ಲಚ್ಚಿ ಮುಖ ತಿರುಗಿಸಿಕೊಂಡಳು. 

"ಬೇಕಾದ್ರೆ ಕೇಳು ಇಲ್ಲಾಂದ್ರೆ ಬಿಡು. ಕೈಯಲ್ಲಿ ಮೊಬೈಲ್ ಇದೆ, ಮೊಬೈಲ್ ಒಳಗೆ ಅಂತರ್ಜಾಲದ ಕೊಡೆ (ವೈ-ಫೈ ಚಿಹ್ನೆ) ಇದೆ. ಗೂಗಲ್ ನಲ್ಲಿ ಸರ್ಚ್ ಮಾಡು" ಗುಂಡ ತಲೆ ಚಚ್ಚಿಕೊಂಡು ಕೆಲಸ ಮುಂದುವರೆಸಿದನು.

No comments:

Post a Comment

Printfriendly

Related Posts Plugin for WordPress, Blogger...