ಕೊಡಿಗೆಹಳ್ಳಿ ಸಿಗ್ನಲ್ ಬಳಿ ದೀಪ ಹಸಿರು ಬಣ್ಣಕ್ಕೆ ತಿರುಗಲು ಕಾಯುತ್ತಿದ್ದೆ. ಇನ್ನೂ ೯೦ ಸೆಕಂಡ್ ಬಾಕಿ ಇತ್ತು. ಜನ ಕ್ರಾಸ್ ಮಾಡಲೆಂದೇ ಸಂಪೂರ್ಣ ಟ್ರಾಫಿಕ್ ಸ್ಥಬ್ಧವಾಗಿತ್ತು. ಹಿಂಬದಿಯಿಂದ ಒಂದೇ ಸಮನೆ ರಿಕ್ಷಾದವನೊಬ್ಬ ಬಿಗಿಲು ಹಾಕಲು ಪ್ರಾರಂಭಿಸಿದನು. ನಾನು ಗಮನ ಕೊಡಲಿಲ್ಲ. ನಂತರ ಟಿಪಿಕಲ್ ರಿಕ್ಷಾದವರ ಶೈಲಿಯಲ್ಲಿ ಒಯ್ ಅಂತಾ ಜೋರಾಗಿ ಚೀರಿದನು. ಸರಿ ಕಣಪ್ಪ ಇವರ ಜೊತೆ ಯಾರು ಗುದ್ದಾಡೋದು ಅಂತಾ ಜಾಗ ಬಿಟ್ಟುಕೊಟ್ಟೆ. ಅವನು ಬಾಯಲ್ಲಿ ವಟವಟ ಅಂದುಕೊಂಡು ಮುಂದೆ ಸಾಗಿದನು. ಏನೋ ಬೈಕೊಂಡಿರೊದಂತೂ ಗ್ಯಾರಂಟಿ. ಪಾಪ ಓಲಾ ಆಟೋ ಇರಬೇಕು ಅದಕ್ಕೆ ಅವಸರ ಅಂದುಕೊಂಡೆ.
ಸಿಗ್ನಲ್ ಹಸಿರಾದ ತಕ್ಷಣ ನಾನು ಅವನ ದಾರಿಯಲ್ಲೇ ಸಾಗಬೇಕಿತ್ತು. ಸ್ವಲ್ಪ ದೂರ ಹೋದ ಬಳಿಕ ಏನಾಶ್ಚರ್ಯ. ಪಾರ್ಟಿ ಬಿಗಿಲು ಹಾಕಿ, ಸಂಚಾರಿ ನಿಯಮ ಮುರಿದು, ಸಾಲದೆಂಬಂತೆ ಬಿಟ್ಟಿಯಾಗಿ ಬೈದು ತದನಂತರ ನೋಡಿದರೆ ಪೆಟ್ಟಿಗೆ ಅಂಗಡಿಯಲ್ಲಿ ಚಾ ಕುಡಿಯುತ್ತಾ, ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿದ್ದಾನೆ. ಸುಮಾರು ಒಂದೂವರೆ ನಿಮಿಷದಿಂದ ಅಲ್ಲೇ ಇದ್ದಿದ್ದಾನೆ. ಇನ್ನೂ ಹತ್ತು ನಿಮಿಷ ಇವನ ಹರಟೆ ನಡೆಯಬಹುದೇನೋ? ಬಹುಶಃ ಯಾರೋ ಓಲಾ ಗ್ರಾಹಕರು ರದ್ದು ಮಾಡಿರಬೇಕು ಅಂತಾ ನೀವುಭಾವಿಸಿದರೆ, ಅವನ ರಿಕ್ಷಾದಲ್ಲಿ ಓಲಾ ಮೊಬೈಲ್ ಕಾಣಿಸಲಿಲ್ಲ ಅನ್ನೋದನ್ನ ತಿಳ್ಕೊಳ್ಳಿ.
ಈ ಕ್ಯಾಬ್ ಮತ್ತು ರಿಕ್ಷಾ ಚಾಲಕರೇ ಹೀಗೆ. ಯಾವುದೇ ಸಿಗ್ನಲ್ ಪಾಲಿಸಲು ತಯಾರಿಲ್ಲ. ಟೆಂಪೋ ಟ್ರಾವೆಲರ್ ಗಳಂತೂ ವಿಪರೀತ ಸದ್ದು ಮಾಡುತ್ತಾರೆ. ಅವರ ಬೈಗುಳಗಳು ಎಂತಹವರಿಗೂ ಅಸಹ್ಯ ಬರಿಸುತ್ತದೆ. ನಮ್ಮಂತವರು ನಿಯಮ ಪಾಲಿಸಿದ್ದಕ್ಕೆ ಅವರ ಬೈಗುಳವನ್ನು ಉಡುಗೊರೆಯಾಗಿ ಪಡೆಯಬೇಕು. ಇವರ ನಿಯಮ ಉಲ್ಲಂಘನೆಗೆ ಸಂಚಾರಿ ಪೋಲಿಸರು ಕಣ್ಣಿದ್ದು ಕುರುಡಾಗಿ ವರ್ತಿಸುತ್ತಾರೆ. ಜಾಗ ಬಿಡುವ ಬದಲು ನಾವು ಕೂಡಾ ಇವರಂತೆ ಉಲ್ಲಂಘನೆ ಮಾಡಿದರೆ ಪೊಲೀಸರು ಅಲ್ಲೇ ನಮ್ಮನ್ನು ಹಿಡಿಯುವುದು ಖಚಿತ!
No comments:
Post a Comment