Friday, November 16, 2018

ಹಾಗೆ ಸುಮ್ಮನೆ - ಹುಳಿ ಜ್ಯೂಸ್ ಟಾಕ್ಸ್ ಕಂಜ್ಯೂಸ್

ಡಿಸೆಂಬರ್ ಕೊನೆಯ ವಾರ ಇರಬೇಕು, ೨೦೧೭

ನಮ್ಮ ಕಚೇರಿಯಲ್ಲಿ ಎಲ್ಲವೂ ಹೊಸತು ಮಾಡುತ್ತಿದ್ದಾರೆ. ಹೊಸ ಕ್ಯಾಂಟೀನ್ ವಿನ್ಯಾಸ, ಹೊಸ ತಂತ್ರಜ್ಞಾನ ಮೊದಲಾದವು. ಹಾಗೆಯೇ ಹೊಸ ಜ್ಯೂಸ್ ಅಂಗಡಿ ಕೂಡಾ ಬಂದಿದೆ. ಮೋದಿಯವರ ಕಪ್ಪು ಹಣ ದಾಳಿಯಲ್ಲಿ ಇವರು ಕೂಡಾ ಮಿಕ್ಸಿಯಲ್ಲಿ ಹಿಂಡಿದ ಹಣ್ಣಿನಂತೆ ದಣಿದಿದ್ದಾರೆ. ಪ್ರತಿದಿನಿ ಚಿಲ್ಲರೆ ಕೊಡೋದೆ ಕಷ್ಟ. ಮೊನ್ನೆ ಮೊನ್ನೆ ಮೋದಿಯವರು ಕ್ಯಾಶ್-ಲೆಸ್ ಮಾಡಿದವರಿಗೆ ಬೋನಸ್ ಅನ್ನೋ ಪ್ರಕಟಣೆ ಕೊಟ್ಟು ಜನರನ್ನು ಕಾರ್ಡ್ ಕಡೆ ವಾಲುವತ್ತ ಮಾಡಿದ್ದಾರೆ. ಇದರ ಪರಿಣಾಮ ಸಿಸ್ಟೆಮ್ ಅಲ್ಲಿ ಸ್ವಲ್ಪವಾದರೂ ಪಾರದರ್ಶಕತೆ ಇರಬಹುದು ಅನ್ನೋದು ಊಹೆ. ಮೋದಿಯವರ ಯೋಜನೆ ಸರಿಯಾಗಿದೆ ಆದರೆ ಬ್ಯಾಂಕಿನ ಭ್ರಷ್ಟರು ಅದನ್ನೇಲ್ಲಾ ನೀರು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಮತ್ತು ವಿಷಾದಕರ

ಎಂದಿನಂತೆ ಸಂಜೆ ಜ್ಯೂಸ್ ಕುಡಿಯಲಿಕ್ಕೆ ಹೊಸ ಅಂಗಡಿಗೆ ಬಂದಿದ್ದೆ. ಮಾಲಿಕರು ಕನ್ನಡದವರೇ ಅನ್ನಿ. ಕಿತ್ತಳೆ ಸೀಸನ್ ಆಗಿದ್ದರಿಂದ, "ಒಂದು ಕಿತ್ತಳೆ ಜ್ಯೂಸ್ ಕೊಡಿ ಸರ್" ಅಂತ ನನ್ನ ಆರ್ಡರ್ ಹೇಳಿದೆ. ಜ್ಯೂಸೇನೋ ಕೊಟ್ಟ ಆದರೆ ಹುಳಿಯಪ್ಪಾ ಹುಳಿ. ಅಯ್ಯೋ ಮನೆಯಲ್ಲಿ ಒಳ್ಳೆಯ ಹಣ್ಣುಗಳು ಇದ್ದವು, ಇವನದೇನಪ್ಪ ಹುಳಿ ಜ್ಯೂಸ್ ಅಂದುಕೊಂಡೆ. ಏನ್ರಿ ಇಷ್ಟೊಂದು ಹುಳಿ ಅಂತ ಕೇಳಿದ್ರೆ "ಸೀಸನ್ ಅಲ್ವಾ ಸರ್ ಅನ್ನೋದೇ!!". "ರೀ ಮಾರಾಯ್ರೆ, ಸೀಸನ್ ಅಲ್ಲಿ ಹಣ್ಣು ಚೆನ್ನಾಗಿರುತ್ತೆ" ಅಂದ್ರೆ, ಸುಮ್ಮನೆ ಕಿಸಿದುಕೊಂಡು "ಇನ್ನೊಂದು ವಾಟರ್-ಮೆಲನ್" ಅಂತಾ ತನ್ನ ಕೆಲಸ ಮುಂ‌ದುವರೆಸಿದ. ಜ್ಯೂಸ್ ಅಂಗಡಿಯವರ ಈ ಹುಳಿ ಹಣ್ಣುಗಳು ಆರೋಗ್ಯಕ್ಕೂ ಹಾನಿಕರ ಏಕೆಂದರೆ ಹುಳಿ ಕಡಿಮೆ ಮಾಡಲು ಸಿಕ್ಕಾಪಟ್ಟೆ ಸಕ್ಕರೆ ಸುರಿಯುವುದೂ ಇದೆ. ಬಹುಶಃ  ಬ್ಲ್ಯಾಕ್ ನಲ್ಲಿ ರೇಶನ್ ಸಕ್ಕರೆ ಸುಮಾರು ಸಿಗುತ್ತೇನೋ ಇವರಿಗೆ (ಅದೂ ಕೂಡ ಕಪ್ಪು ಸಕ್ಕರೆ ಅನ್ನಬಹುದು). ಇರಲಿ, ಹಾಗೆ ಕಷ್ಟದಲಿ ೧೦೦ ರುಪಾಯಿ ಕೈಗಿತ್ತೆ. "ಸರ್ ಚೇಂಜ್ ಇಲ್ವಾ, ಎಲ್ಲಾರ್ಗು ಕೊಟ್ಟು ಖಾಲಿಯಾಗಿದೆ". "ಅಲ್ರಿ ಮೋದಿಯವರು ಕ್ಯಾಶ್-ಲೆಸ್ ಮಾಡಿದ್ರೆ ರಿಯಾಯಿತಿ ಕೊಡ್ತಾರೆ ಅಂತೆ, ನೀವು ಮೆಶಿನ್ ತರಿಸಿ" ಅಂತಾ ಸಲಹೆ ಇತ್ತೆ. "ಇಲ್ಲಾ ಸಾರ್! ಕಾರ್ಡ್ ಉಪಯೋಗಿಸಿದ್ರೆ ಬ್ಯಾಂಕ್ ಅಕೌಂಟ್ ಹೋಗಿ ಸುಮ್ನೆ ಟಾಕ್ಸ್ ಬೀಳುತ್ತೆ. ಅದಿಕ್ಕೆ ತರ್ಸಿಲ್ಲ!!" ಅನ್ನೋದೇ. ನನಗೆ ಆಶ್ಚರ್ಯದೊಂದಿಗೆ ವಿಪರೀತ ಸಿಟ್ಟು ಕೂಡಾ ಬಂತು. "ನಿಮ್ಮವರಿಂದಾಗಿ ನಮಗೆ ಸುಮ್ನೆ ಬೇಕಾಬಿಟ್ಟಿ  ಟಾಕ್ಸ್ ಹಾಕ್ತಾರೆ. ಟಾಕ್ಸ್ ಕಟ್ಟಕ್ಕೆ ಏನ್ ಕಷ್ಟ ನಿಮಗೆ" ಅಂತಾ ಚೇಂಜ್ ತಗೊಂಡು ಹೊರನಡೆದೆ.

ಮೋದಿ ಇನ್ನು ೩೦ ವರ್ಷ ರಾಷ್ಟ್ರವಾಳಿದರೂ ಈ ದೇಶವನ್ನು ಸರಿದಾರಿಗೆ ತರುವುದು ಕನಸಿನ ಮಾತೆ ಸರಿ. ಶ್ರೀ ಕೃಷ್ಣ ಪರಮಾತ್ಮ ಮತ್ತೊಂದು ಅವತಾರ ಎತ್ತಬೇಕಷ್ಟೆ. ಏನ್ ಬ್ಲಾಕ್ ಮನಿ ಬ್ಯಾನ್ ಮಾಡ್ತಾರೋ, ಈ ದೇಶದ ಜನ ಉದ್ಧಾರ ಆಗಲ್ಲ ಯಾಕಂದ್ರೆ ಕಳೆದ ಐದು ದಶಕಗಳಿಂದ ರಾಜ್ಯಭಾರ ನಡೆಸಿದವರು ಜನಗಳಿಗೆ ಸುಲಭವಾಗಿ ದುಡ್ಡು ಮಾಡೋದನ್ನ ಕಲಿಸಿದ್ದಾರೆಯೇ ವಿನಹಾ ಕಷ್ಟಪಡುವ ದಾರಿಯಲ್ಲ. ಈ ದೇಶವೇ ಹಾಗೆ, ದುರಾಸೆಗೆ ಮಿತಿಯೇ ಇಲ್ಲ. ನಮ್ಮಂತವರು ಸುಮ್ಮನೆ ಪ್ರತಿ ತಿಂಗಳು ಕರ ಕಟ್ಟಬೇಕು. ಕಂಪನಿಯವರು ಇನ್ನಾದರೂ ಕಾರ್ಡ್ ಮೆಶಿನ್ ತರಲೂ ಅಂಗಡಿಗಳ ಒತ್ತಡ ಹೇರುತ್ತಾರೆಂಬುದು ನನ್ನ ಆಶಯ.

ಹುಳಿ ಜ್ಯೂಸ್ ಕೊಟ್ಟು ಟಾಕ್ಸ್ ಕೊಡಲು ಕಂಜ್ಯೂಸ್ ಮಾಡುವವರ ದುರಾಸೆಗೆ ಮಿತಿಯೇ ಇಲ್ಲ. ಮಾರ್ಕೆಟ್ ನಲ್ಲಿ ಅಳಿದುಳಿದ ಹಣ್ಣುಗಳನ್ನು ತಂದು ಇಲ್ಲಿ ಜ್ಯೂಸ್ ಮಾಡಿದಂತೆ ಇದೆ. ಅದೆಷ್ಟು ದುಡ್ಡು ಹೊಡಿತಾರಪ್ಪಾ ಈ ಬಿಸಿನೆಸ್ ನವರು. ಅಥವಾ ನಿಯತ್ತು-ಬಿಸಿನೆಸ್ ಅನ್ನುವುದು ವಿರೋಧ ಪದವೇ? ನಿಯತ್ತಿನ ಬಿಸಿನೆಸ್ ಅನ್ನೋದು ಒಂತರಾ ಪ್ಯಾರಡಾಕ್ಸ್ ಅಂತಾನು ಕರಿಬಹುದೇನೋ!

No comments:

Post a Comment

Printfriendly

Related Posts Plugin for WordPress, Blogger...