ಸೋಮವಾರ ಪೂಜೆಗೆಂದು ಹೂವಿನಂಗಡಿಗೆ ಎಂದಿನಂತೆ ಹೋದೆ. ಅಷ್ಟರಲ್ಲಿ ಸುಂದರವಾದ ಚೆಲುವೆಯೊಬ್ಬಳು ಸ್ಕೂಟಿಯಲ್ಲಿ ರೊಯ್ಯನೆ ಬಂದು ಹೂವಿನ ಗಾಡಿಯ ಮುಂದೆ ನಿಲ್ಲಿಸಿದಳು. ಅದರಲ್ಲೇ ಕುಳಿತುಕೊಂಡು
"ಮಾಜಿ ತುಲ್ಸಿ ಹೈ ಕ್ಯಾ?"
"ಹು ಇದೆ ಕಣಮ್ಮ"
ಸ್ಕೂಟಿ ಸಂಪೂರ್ಣ ಹೂವಿನ ಗಾಡಿಯ ಮುಂದಿದ್ದ ಜಾಗವನ್ನು ಆವರಿಸಿತ್ತು. ಇವಳಿಗೆ ಗಾಡಿಯನ್ನು ಬದಿಯಲ್ಲಿ ನಿಲ್ಲಿಸಿ ಬರ್ಲಿಕ್ಕೆ ಆಗಲ್ವೆ ಅಂತ ಅಲ್ಲಿದ್ದವರು ಗುಸು ಗುಸು ಮಾತನಾಡುತ್ತಿದ್ದರು. ಹೂವು ಆರಿಸುವುದು ಅಲ್ಲಿದ್ದವರಿಗೆ ಕಷ್ಟವಾಗುತ್ತಿತ್ತು.
ಮತ್ತೆ ಕೇಳಿದಳು "ಮಾಜಿ ತುಲ್ಸಿ ಹೈ ಕ್ಯಾ?"
ಹೂವು ಕಟ್ಟುವುದರಲ್ಲಿ ಬ್ಯುಸಿಯಾಗಿದ್ದ ಹೂವಿನವಳು "ಹು ಕಣಮ್ಮ" ಅಂತ ತನ್ನ ಕಾರ್ಯದಲ್ಲಿ ಮಗ್ನಳಾದಳು.
ಮತ್ತೊಮ್ಮೆ "ಮಾಜಿ ತುಲ್ಸಿ ಹೈ ಕ್ಯಾ?"
ಹೂವಿನವಳು ಸಿಟ್ಟು ಮಾಡಿಕೊಂಡು ಅಲ್ಲೇ ಇದ್ದ ತುಲಸಿಯ ಮಾಲೆಯನ್ನು ತೋರಿಸಿದಳು "ಎಷ್ಟಕ್ಕೆ ಬೇಕು?"
"ತುಲ್ಸಿ ದೇದೋ ಮಾಜಿ"
"ಎಷ್ಟಕ್ಕೆ ಬೇಕು"
ಇವರ ಇಂಫಿನಿಟ್ ಲೂಪ್ ನಿಲ್ಲಿಸಲು ಅಲ್ಲಿದ್ದ ಹೆಂಗಸರೊಬ್ಬರು ಮಧ್ಯೆ ಮಾತನಾಡಿ "ಮಾಜಿ ಪೂಚ್ ರಹಿ ಹೈ ಕಿತ್ನೆ ಕೋ ಚಾಹಿಯೆ?"
ಚೆಲುವೆಯು "ಪಾಂಚ್ ರುಪಾಯಿ ಕೊ ದೇದೋ" ಅಂತ ಹೂವಿನವಳತ್ತ ಮುಖ ಮಾಡುತ್ತ ಹೇಳಿದಳು.
ಅವರು "ಐದು ರುಪಾಯಿಗೆ ಬೇಕಂತಮ್ಮ. ಇವರಿಗೆ ಕನ್ನಡ ಕಲಿಯಕ್ಕೇನು ದಾಡಿ. ಯಹ್ ಪರ್ ಆಯೆ ತೋ ಕನ್ನಡ್ ಕ್ಯೂ ನಹಿ ಸೀಕ್ತೆ ಆಪ್ ಲೋಗ್?" ಎಂದು ಪ್ರಶ್ನಿಸಿದರು.
"ಹಾ ಹಾ ಸೀಕ್ ರಹಿ ಹೂಂ" ಅಂತ ಹುಸಿ ನಗೆ ಬೀರಿದಳೋ ಅಥವಾ ಅಣಕವಾಡಿದಳೋ ತಿಳಿಯಲಿಲ್ಲ. ಒಟ್ಟಿನಲ್ಲಿ ಅವಳ ಮಾತು ಕೃತಕವಾಗಿತ್ತು. ಇದರಲ್ಲಿ ಆಶ್ಚರ್ಯವೇನೋ ಇಲ್ಲ ಅನ್ನಿ. ಇಷ್ಟು ಮಾತನಾಡಿದರೂ ಒಂದೇ ಒಂದು ಕನ್ನಡ ಪದ ಹೊರಬಂದಿರಲಿಲ್ಲ. ಇನ್ನು ಅದೇನು ಕಲಿತಿದ್ದಾಳೋ!
ನನ್ನ ಹೂವಿನ ಹಣ ಕೊಟ್ಟು ಮನೆಯ ದಾರಿ ಹಿಡಿದೆ
ಇದೊಂದು ಉದಾಹರಣೆಯಷ್ಟೇ. ನಮ್ಮ ಅಪಾರ್ಟಮೆಂಟಿನ ಹಿಂದಿ ಜನರೂ ಕೂಡಾ "ಏ ಸೆಕ್ಯೂರಿಟಿ ಕೋ ಹಿಂದಿ ನಹಿ ಆತಾ ಹೈ" ಅಂತ ದೂರು ಹೇಳೋದು ಇದೆ! ಇವರೆಲ್ಲಾ ಇತ್ತೀಚಿಗೆ ಬಂದವರಲ್ಲ ಬದಲಾಗಿ ಸುಮಾರು ೧೦ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವವರು. ಅಲ್ಲಾ ಮಾರಾಯ್ರೆ, ಕರ್ನಾಟಕದಲ್ಲಿ ನಿಮಗೆ ಹಿಂದಿ ಮಾತನಾಡುವ ಸೇವಕರು ಹೇಗೆ ಸಿಗುತ್ತಾರೆ. ಕನ್ನಡ ಕಲಿಯಲಾಗದೆ?
ಹೌದು ಹೊಟ್ಟೆಪಾಡಿಗಾಗಿ, ಕನ್ನಡ ಸಣ್ಣ ವ್ಯಾಪಾರಿಗಳೂ ಅಲ್ಪ-ಸ್ವಲ್ಪ ಹಿಂದಿ ಕಲಿತಿದ್ದಾರೆ. ಅದರಲ್ಲಿ ಹೂವಮ್ಮ ಕನ್ನಡದಲ್ಲೇ ಉತ್ತರಿಸಿದಾಗ ನನಗೆ ಬಹಳ ಖುಷಿಯಾಗಿತ್ತು ಕೂಡ. ಎಲ್ಲರೂ ಹೀಗೆ ಉತ್ತರಿಸಿದರೆ ಕೊನೆಗೆ ಅನಿವಾರ್ಯವಾಗಿ ಅನ್ಯಭಾಷಿಕರು ಕನ್ನಡ ಕಲಿಯಬೇಕಾಗುತ್ತದೆ.
ಕನ್ನಡಿಗರ ಔದಾರ್ಯಕ್ಕೆ ಮಿತಿಯೇ ಇಲ್ಲ ಮತ್ತು ಅದನ್ನು ದುರ್ಬಳಕೆ ಮಾಡುವವರಿಗೆ ಕೊನೆಯೇ ಇಲ್ಲ!
No comments:
Post a Comment