Friday, November 9, 2018

ಹಾಗೆ ಸುಮ್ಮನೆ - ೨೦ಕಿ.ಮೀ ೨ ಘಂಟೆ

ಜನವರಿ ೩ ಅಥವಾ ೪ ನೇ ವಾರ, ೨೦೧೭

ಇದು ಬಹಳ ಹಿಂದಿನ ಅನುಭವ. ಈಗ ಹೇಗಿದೆಯೋ ನಾ ತಿಳಿಯೆ

ಮಡದಿಯನ್ನು ಕುಂದಾಪುರಕ್ಕೆ ಬಿಡಲು, ಬೆಂಗಳೂರಿನಿಂದ ಕಾರವಾರದ ರೈಲಿನಲ್ಲಿ ಹೊರಟಿದ್ದೆ. ಮಂಗಳೂರು ರೈಲಿನ ಬಗ್ಗೆ ಎಲ್ಲರಿಗೂ ತಿಳಿದದ್ದೆ, ಬಸವನ ಹುಳುವಿಗೆ ಹೋಲಿಸಿದರೂ ಅತಿಶಯೋಕ್ತಿಯಾಗಲಾರದು. ತೆವಳಿಕೊಂಡು ಹೇಗೋ ೮:೧೫ಕ್ಕೆ ಮಂಗಳೂರು ತಲುಪಿತು. ಒಹೋ ಬೇಗನೇ ಮುಟ್ಟಿತು, ಇನ್ನೇನೂ ಹತ್ತಕ್ಕೆ ದಡ ಸೇರೋದು ಖಾತ್ರಿ ಎಂದು ಖುಷಿಪಟ್ಟೆ. ಯಾರ ದೃಷ್ಟಿ ತಾಗಿತೋ, ೧೦:೧೫ ಆದರೂ ಸುರತ್ಕಲ್ ತಲುಪಿರಲಿಲ್ಲ. ೨೦ ಕಿ.ಮೀ ಕ್ರಮಿಸಲು ೨ ಘಂಟೆ ತೆಗೆದುಕೊಂಡಿದ್ದು ಒಂದು ಹೊಸ ವಿಶ್ವ ದಾಖಲೆಯೆಂದೇ ಹೇಳಬಹುದು. ಭಾರತೀಯ ರೈಲ್ವೆಗೆ ಅತ್ಯಂತ ಉತ್ತಮ ನಿದರ್ಶನವನ್ನು ನಮ್ಮ ರೈಲು ಪ್ರದರ್ಶಿಸಿತ್ತು. ಮಂಗಳೂರಿನಲ್ಲಿ ಅದೇನಾಯಿತೆಂದರೆ, ರೈಲಿನ ಅರ್ಧಭಾಗ ಕಣ್ಣೂರಿಗೆ ತೆರಳಬೇಕು, ಉಳಿದರ್ಧ ಕಾರವಾರಕ್ಕೆ. ಮೊದಲು ಕಣ್ಣೂರಿನ ಭಾಗವನ್ನು ಬೇರ್ಪಡಿಸಿ ಅದಕ್ಕೆ  ಪ್ರತ್ಯೇಕ ಇಂಜಿನನ್ನು ಜೋಡಿಸಿ, ತದನಂತರ ಅದನ್ನು ಬೀಳ್ಕೊಡುವುದು. ಕಾದು ಕಾದು ಬೀಳ್ಕೊಟ್ಟಾಗ ಅಳುವವರು ನಾವು ಕನ್ನಡಿಗರು. ಕರ್ನಾಟಕದಲ್ಲಿ ಕನ್ನಡಿಗನೇ ರಾಜ ಅನ್ನುವುದಕ್ಕಿಂತ, ಕನ್ನಡಿಗರನ್ನು ಹೊರತು ಪಡಿಸಿ ಮತ್ತೆಲ್ಲರೂ‌ ರಾಜರೇ ಅನ್ನಬಹುದು. ಆಯ್ತಪ್ಪಾ, ಈಗ ನಮ್ಮ ಸರದಿ. ಇನ್ನೇನು ಇರುವ ಇಂಜಿನ್ ರಿವರ್ಸ್ ತೆಗೆದು ಜೋಡಿಸಿದ ಬಳಿಕ ಹೊರಡುವಷ್ಟರಲ್ಲಿ ತಡವಾಯಿತು. ಮಾಮೂಲಿ ರೈಲುಗಳು ಬಿಡುತ್ತವೆಯೇ? ಅವುಗಳ ಸ್ಥಾನ ಪಲ್ಲಟ ಮಾಡಲು ಬಿಲ್ಕುಲ್ ಸಾಧ್ಯವಿಲ್ಲ. ಅದಕ್ಕೆ ಸುಮಾರು ೩೦ ನಿಮಿಷ ವ್ಯಯಿಸಿದ್ದು ಆಯಿತು. ಅಬ್ಬಬ್ಬಾ ಕೊನೆಗೂ ರೈಲು ಹೊರಡಿತು. ಮಂಗಳೂರು ಜಂಕ್ಷನ್ (ಹಿಂದಿನ ಕಂಕನಾಡಿ) ಬಂದದ್ದೇ ತಡ ಮತ್ತೆ ರೈಲು ಸ್ಥಬ್ಧವಾಯಿತು. ಬೇಸತ್ತಿದ್ದ ಮನವು ಮೆಂಟಲ್ ಆಯಿತು. ಇನ್ನೇನು ಕಂಕನಾಡಿಗೆ ಭೇಟಿಕೊಡುವುದೊಂದು ಬಾಕಿ. ಅಂತೂ ಇಂತೂ ರೈಲು ಹೊಸ ಹುರುಪಿನೊಂದಿಗೆ ಹೊರಟಿತು. ಆದರೂ ತುಂಬಾ ನರ್ವಸ್ ಆಗಿ ಸಂಚರಿಸುವುದು ಕಂಡಾಗ ಮತ್ತೆ ಎಲ್ಲೋ ಅಡಚಣೆ ಇದೆ ಎನ್ನುವುದು ಖಾತ್ರಿಯಾಗಿತ್ತು. ನಮ್ಮ ಮುಖ ಮಾತ್ರ ಚಳಿಗಾಲದ ಸೆಖೆಯಂತೆ ಕುರೂಪಿಯಾಗಿತ್ತು. ಇನ್ನೇನು ಸುರತ್ಕಲ್ ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ ಮತ್ತೊಮ್ಮೆ ಕ್ರಾಸಿಂಗ್ ತೊಂದರೆ. ತಡಮಾಡಿದ್ದಕ್ಕೆ ನಮ್ಮ ರೈಲಿಗೆ ಕ್ಷಮಾಪಣೆಯೇ ಇಲ್ಲ. ಎಲ್ಲ ರೈಲುಗಳು ತಮ್ಮ ದಾರಿಯನ್ನು ನೋಡಿಕೊಳ್ಳುತ್ತಿದ್ದವು.  ಅಬ್ಬಾಬ್ಬಾ ಅಂತೂ ಇಂತೂ ೧೦:೩೦ಗೆ ಹೇಗೂ ಸುರತ್ಕಲ್ ದರ್ಶನವಾಯಿತು. ೨ ಘಂಟೆ ಯಾತ್ರೆಗೆ ಕೊನೆಗೂ ತೆರೆ ಕಾಣಿತು. ಸುರತ್ಕಲ್ ಇಳಿಯುವವರು ಎಷ್ಟು ಶಾಪ ಹಾಕಿದ್ದರೋ. ಮಂಗಳೂರಿನಿಂದ ಸುಮ್ಮನೆ ಬಸ್ಸಿನಲ್ಲಿ ಹೋಗಿದ್ದರೆ ಇಷ್ಟೊತ್ತಿಗೆ ತಿಂಡಿ ತಿಂದು, ನಿದ್ದೆ ಮಾಡಿ ಫ್ರೆಶ್ ಆಗಿರುತ್ತಿದ್ದರೇನೋ!

ಕರಾವಳಿಯಲ್ಲಿ ಲಾಬಿಯದ್ದೇ ಕಾಟ. ರೈಲಿಗೂ ಬಸ್ಸಿನವರ ಕಾಟ. ಮಂಗಳೂರು-ಮಣಿಪಾಲ ವೊಲ್ವೋ ಬಸ್ ಓಡಾಟಕ್ಕೆ ಎಕ್ಸ್-ಪ್ರೆಸ್ ಬಸ್ಸುಗಳ ಬ್ರೇಕು. ಎಕ್ಸ್-ಪ್ರೆಸ್ ಬಸ್ಸುಗಳಿಗೆ ಮಾತ್ರ ಬ್ರೇಕಿಲ್ಲ ಎಂಬುವುದು ಕಟು ಸತ್ಯ. ಗ್ರಾಮೀಣ ಭಾಗದಲ್ಲಿ ಹೊಸದಾಗಿ ಸಂಚರಿಸುತ್ತಿದ್ದ ಸರಕಾರಿ ಬಸ್ಸುಗಳು ಮಾಯವಾಗಿವೆ. ಒಟ್ಟಿನಲ್ಲಿ ಕರಾವಳಿ ಜನರ ರೋದನ ಕೇಳುವವರಿಲ್ಲವಾಗಿದೆ.

ಇಷ್ಟಾದರೂ ನಮ್ಮ ಜನಪ್ರತಿನಿಧಿಗಳು ಸುಮ್ಮನಿದ್ದಾರಲ್ಲಾ? ಹ ಹ ಹಾ! ಬೆಂಗಳೂರಿಗೆ ತೆರಳುವ ಬಸ್ಸುಗಳ ದಣಿಗಳಲ್ಲಿ ನಮ್ಮ ಜನಪ್ರತಿನಿಧಿಗಳು ಇದ್ದಾರೆಂತ ಸುದ್ಧಿ. ರೈಲು ತಡವಾದಷ್ಟು ಅವರಿಗೇ ಒಳ್ಳೆಯದು ಏಕೆಂದರೆ ಜನ ರೋಸಿ ಹೋಗಿ ಬಸ್ಸನ್ನು ಅವಲಂಬಿಸುತ್ತಾರೆನ್ನುವುದು ಅವರ ಪ್ಲಾನ್. ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲಿನ ಸನ್ನಿವೇಶ. ರೈಲಿನವರು ಏನು ಮಾಡ್ತಾ ಇಲ್ವಾ? ಮಾಡ್ತಾ ಇದಾರಲ್ಲ ಮಾಧ್ಯಮದ ಮುಂದೆ ದಿವಸ ರೈಲು ಬಿಡುವುದು!! ಜೊತೆಗೆ ಕಂಕನಾಡಿ-ಮಂಗಳೂರು ಬಂದರಿನ ರೈಲು ಪಥ ದ್ವಿಪಥಗೊಳಿಸುತ್ತಿದ್ದಾರೆ. ಇರುವ ೨೦ಕಿ.ಮೀ ವಿಸ್ತಾರಕ್ಕೆ ೨೦ ವರ್ಷ ತೆಗೆದುಕೊಂಡರೂ ಆಶ್ಚರ್ಯವಿಲ್ಲ! ಎಷ್ಟೇ ಆಗಲಿ, ರೈಲ್ವೆಗೆ ಅತಿ ಹೆಚ್ಚು  ಆದಾಯ ಬರುವುದು ಬಂದರಿನಿಂದ. ಜನಸಾಮಾನ್ಯರ ಬಗ್ಗೆ ಯಾರಿಗುಂಟು ಕಾಳಜಿ.

ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸ್ವಂತ ವಾಹನದಲ್ಲಿ ಓಡಾಡುವುದು ರಾಜಹಂಸಕ್ಕಿಂತಲೂ ಅಗ್ಗವಾಗಿದೆ. ಅದಕ್ಕೇ ಏನೋ ರಸ್ತೆಗಳನ್ನು ರಿಪೇರಿಯಾಗಲೂ ಬಸ್ಸುಗಳು ಬಿಡುವುದಿಲ್ಲ. ಸ್ವಂತ ಗಾಡಿಯಲ್ಲಿ ತಿನ್ನಲು-ಉಣ್ಣಲು ಕೂಡ ಬೇಕಿರುವ ಸ್ಥಳದಲ್ಲಿ ನಿಲ್ಲಿಸಬಹುದು. ಇತ್ತೀಚಿಗೆ ದುಬಾರಿ ವೊಲ್ವೋಗಳು ಕೂಡಾ ಕಳಪೆ ಹೋಟಲ್ ಗಳಲ್ಲಿ ನಿಲ್ಲಿಸುತ್ತಿರುವುದು ಅದರ ಸೇವೆಗೆ ಬೆಲೆ ಇಲ್ಲದಂತೆ ಮಾಡಿವೆ.

ಒಟ್ಟಾರೆ ಕಾಟ ಕೊಡುವ ರೈಲಿನವರು, ಬಸ್ಸಿನವರು, ಜನಪ್ರತಿನಿಧಿಗಳು ಹೇಳೋದಿಷ್ಟೆ

"ದುಡ್ಡೆ ದೊಡ್ಡಪ್ಪ, ಜನಸಾಮಾನ್ಯ ತೊಲಗಪ್ಪ!"

No comments:

Post a Comment

Printfriendly

Related Posts Plugin for WordPress, Blogger...