Monday, November 19, 2018

ಹಾಗೆ ಸುಮ್ಮನೆ - ಹೋಗಿದ್ದು ಕಾರ್ ಅಂಗಡಿ ಕೊನೆಗೆ ಬೈಕ್ ಎತ್ತಂಗಡಿ

೧೪ ಏಪ್ರಿಲ್ ೨೦೧೮,

ಆಹಾಹ ಎಂತಹ ಬಿಸಿಲು. ಸೂರ್ಯ ಮೇಷ ರಾಶಿಗೆ ಬಂದಾಯಿತು ಬಿಸಿಲು ಪ್ರಖರವಾಯಿತು. ದೇಹವೆಲ್ಲಾ ಬೆವರುಮಯ ಜೊತೆಗೆ ಫ್ಯಾನ್ ಕೂಡ ಫುಲ್ ಸ್ಪೀಡ್. ಅದಕ್ಕೂ ದಿನವೆಲ್ಲಾ ತಿರುಗಿ ತಿರುಗಿ ಬೆವರಿಳಿದಿರಬೇಕು. ಬಿಸಿಲಾದರೇನೂ, ಇವತ್ತು ನನ್ನ ಪ್ರಮುಖ ಕಾರ್ಯ ಹೊಸ ಸ್ವಿಫ್ಟ್ ಗಾಡಿಯನ್ನು ಟ್ರಯಲ್ ಮಾಡುವುದು. ಅದಕ್ಕೆ ಪ್ರಥಮ್ ಮೋಟಾರ್ಸ್ ಅವರನ್ನು ಸಂಪರ್ಕಿಸಿ ಸ್ಲಾಟ್ ಬುಕ್ ಮಾಡಿದ್ದೂ ಆಯಿತೆನ್ನಿ. ಅವತ್ತು ೩:೨೦ ಮಧ್ಯಾಹ್ನ ಸಮಯಕ್ಕೆ ಕಾರ್ ಅಂಗಡಿಗೆ ತಲುಪಿದ್ದು ಆಯಿತು. ಬೈಕನ್ನು ಕಾಲುದಾರಿಯಲ್ಲಿ ನಿಲ್ಲಿಸಿ ಅಂಗಡಿ ಒಳ ಹೊಕ್ಕೆ. ಮರದ ಹಿಂಬದಿ ನಿಲ್ಲಿಸಿದ್ದರಿಂದ ಯಾರು ನೋಡಲ್ಲ ಅಂದುಕೊಂಡು ಯಾವುದೇ ಸಂಕೋಚ ಇಲ್ಲದೆ ಅಂಗಡಿಗೆ ನುಗ್ಗಿದೆ. ಸರಿ ಅಂಗಡಿಯವರ ಪಾರ್ಕಿಂಗ್ ಜಾಗ ಯಾವುದೆನ್ನುವುದಾದರೂ ಕೇಳಲೂ ಹೋಗಲಿಲ್ಲ ಪೆದ್ದು ಮುಂಡೆದು. ಅಂಗಡಿ ಒಳಹೊಕ್ಕಿದ್ದೇ, ಬೈಕ್ ಬಗ್ಗೆ ಮರೆತೇಹೋಗಿತ್ತು.

ನನಗಾಗಿ ಕಾದಿರಿಸಿದ ಸಮಯದಲ್ಲಿ, ಕಾರು ಡ್ರೈವ್ ಮಾಡಿ ಪುಳಕಿತಗೊಂಡೆ. ಆಹಾ ಅದರ ಪಿಕ್-ಅಪ್ ಅದ್ಭುತವಾಗಿತ್ತು. ಡೀಸೆಲ್ ನಲ್ಲಿ ಮಾತ್ರ ಇಂತಹ ಸಾಮರ್ಥ್ಯ ಇರುವುದೆನ್ನುವ ನನ್ನ ಅಭಿಪ್ರಾಯ ಹುಸಿಯಾಯಿತು. ಟೆಸ್ಟ್ ಡ್ರೈವ್ ಮುಗಿದ ತಕ್ಷಣ ಮನಸ್ಸು ಆನಂದಗೊಂಡಿತು. ಮುಂದಿನ ವಾರ ಯೋಚಿಸಿ ಹೇಳುತ್ತೇನೆಂದು ಅಂಗಡಿಯಿಂದ ಹೊರನಡೆದೆ. ಈವಾಗ ನೋಡಪ್ಪಾ ಅಸಲಿ ಫನ್ ಶುರು ಆಗಿದ್ದು. ಹೋರನಡೆದದ್ದೇ ತಡ ಬೈಕ್ ಮಾಯವಾಗಿತ್ತು. ಸ್ವಲ್ಪ ಹೊತ್ತು ತಳಮಳಗೊಂಡ ಮನಸ್ಸು ನಿರಾಳವಾಯಿತು. ಏಕೆಂದರೆ ಕಾಲುದಾರಿಯಲ್ಲಿದ್ದ ಬೈಕನ್ನು ಸಂಚಾರಿ ಪೋಲಿಸ್ನವರು ಟೋ ಮಾಡಿದ್ದಾರೆಂದು ಮನದಟ್ಟಾಯಿತು. ಪುಣ್ಯಕ್ಕೆ ಸ್ವಲ್ಪ ದೂರದಲ್ಲಿ ಟ್ರಾಫಿಕ್ ಪೋಲಿಸರೊಬ್ಬರು ಕಂಡರು. ಅವರು ಠಾಣೆಗೆ ಫೋನಾಯಿಸಿ ಎಲ್ಲಿಗೆ ನನ್ನ ಬೈಕನ್ನು ಎಳೆದುಕೊಂಡು ಹೋಗಿದ್ದಾರೆಂಬುದನ್ನು ವಿಚಾರಿಸಿದರು. ಸ್ವಲ್ಪ ಸಮಯ ನಂತರ "ನಿಮ್ಮ ಬೈಕ್ ಹೈ-ಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿದೆ" ಎಂದು ಧೃಡಪಡಿಸಿದರು. ಪರ್ಸಿನಲ್ಲಿ ಕಾಸಿರಲಿಲ್ಲ ಮತ್ತು ಪೋಲಿಸ್ ಠಾಣೆ ಎಲ್ಲಿದೆನ್ನುವ ಪರಿಚಯ ಇರಲಿಲ್ಲ. ಇದ್ದಿದ್ದು ೫೦೦ ರುಪಾಯಿಯ ಒಂದು ನೋಟು ಇದನ್ನು ರಿಕ್ಷಾದವರು ರಿಜೆಕ್ಟ್ ಮಾಡುವುದಂತು ಗ್ಯಾರಂಟಿ. ನೇರ ಬಸ್ಸು ಸೇವೆಗಳಂತು ಇಲ್ಲ. ಕೊನೆಯದಾಗಿ ಪ್ರಥಮ್ ಮೋಟಾರ್ಸಿನ ಶ್ರೀನಿವಾಸ್ ಅವರಿಗೆ ಫೋನಾಯಿಸಿದಾಗ ಅವರು ಧಾರಳವಾಗಿ ೧೫೦ ರುಪಾಯಿ ಕೈಗಿತ್ತರು. ಇಷ್ಟು ಬೈಕಿದ್ದ ಸ್ಥಳಕ್ಕೆ ತಲುಪಲು ಸಾಕಾಗಿತ್ತು. ಹಲವು ಆಟೋದವರನ್ನು ಕೇಳಿದ ನಂತರ ಒಬ್ಬರು ಮಹಾತ್ಮರು ಒಪ್ಪಿಕೊಂಡರು. ದಾರಿ ಮಧ್ಯೆ ಮತ್ತೊಂದು ಟ್ರಾಫಿಕ್ ಪೋಲಿಸ್ ಬಳಿ ವಿಚಾರಿಸಿದಾಗ, ಠಾಣೆ ಸ್ಥಳ ಬದಲಾಯಿಸಿದೆ, ರೇಸ್-ಕೋರ್ಸ್ ಮುಂಭಾಗಕ್ಕೆ ತೆರಳಲು ಸೂಚಿಸಿದರು. ೧೦ನಿಮಿಷದಲ್ಲಿ ಜಾಗ ತಲುಪಿದೆವು. ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತಾ, ಆಟೋ ಚಾಲಕನನ್ನು ಬೀಳ್ಕೊಟ್ಟೆ. ಮತ್ತೊಂದು ವಿಷಯವೆಂದರೆ, ಅವರು ಮೀಟರ್ ಹಾಕಿ ಓಡಿಸಿದರು ಮತ್ತು ಅಷ್ಟೇ ಮೊತ್ತವನ್ನು ಕೇಳಿದರು ಕೂಡಾ!

ಅದೊಂದು ದೊಡ್ಡಿ ಬೈಕುಗಳದ್ದು. ಬೇಕಾಬಿಟ್ಟಿ ನಿಲ್ಲಿಸಿದ್ದರು. ಆ ಬೈಕುಗಳ ಮಂದೆಯಲ್ಲಿ ನನ್ನ ಐರಾವತವನ್ನು ಕಂಡಾಗ ಮುಖ ಅರಳಿತು, ಮನಸ್ಸು ನಿರಾಳವಾಯಿತು. "ಏನ್ ಸರ್ ಹೆದ್ರುಕೊಂಡಿದ್ರಾ" ಎಂದು ಕೇಳಿದನು ಅಲ್ಲಿನ ಕೇರ್-ಟೇಕರ್. "ಹೆದ್ರಿಕೆ ಏನೂ ಇಲ್ಲಾ, ನೀವು ಎಲ್ಲಿ ಇಡ್ತಿರಾ ಅನ್ನೋದೇ ಒಗಟು" ಎಂದು ಉತ್ತರಿಸಿದೆ. ಹೌದು ಸಂಚಾರಿ ಠಾಣೆಯವರು ಗಾಡಿ ಎಲ್ಲಿ ನಿಲ್ಲಿಸಿದ್ದಾರೆ ಎನ್ನುವ ಸೂಚನೆಯನ್ನೂ ಕೊಡುವುದಿಲ್ಲ. ನಾವೆ ಟ್ರೆಶರ್ ಹಂಟ್ ಆಟದಂತೆ ಹುಡುಕಿಕೊಂಡು ಹೋಗಬೇಕು. ತಪ್ಪು ನನ್ನದೆನ್ನುವುದು ಶೇಕಡಾ ನೂರರಷ್ಟು ಹೌದು. ಆದರೆ ಎಲ್ಲಿಟ್ಟಿದ್ದಾರೆಂಬುದನ್ನು ಅವರು ಹೇಳುವುದು ಅವರ ಕರ್ತವ್ಯ ಎನ್ನುವುದು ನನ್ನ ಅಭಿಪ್ರಾಯ.ಸರಿ ಬೈಕ್ ಕಂಡಿತಲ್ಲ ಅದಕ್ಕಿಂತ ಸಂತೋಷ ಬೇರೊಂದಿಲ್ಲ.

ಸರ್ ೭೫೦ ರುಪಾಯಿ ಫೈನ್ ಅಂದಾಗ ಜೇಬಲ್ಲಿ ಅಷ್ಟು ದುಡ್ಡು ಇರಲಿಲ್ಲ. ಶಿವಾನಂದ ವೃತ್ತದವರೆಗೆ ನಡೆದುಕೊಂಡು ಹೋಗಿ ಅಲ್ಲಿ ಎಟಿಎಮ್ ನಿಂದ ಹಣ ತೆಗೆದೆ. ವಾಪಾಸ್ ಬಂದು ಬೈಕನ್ನು ಬಂದಿಖಾನೆಯಿಂದ ಬಿಡಿಸಿದೆ. ಮನೆಗೆ ತಲುಪಲು ಅಣಿಯಾದೆ. ದಾರಿ ಮಧ್ಯೆ ಶ್ರೀನಿವಾಸ್ ಅವರ ೧೫೦ ರುಪಾಯಿ ವಾಪಾಸ್ ಕೂಡ ಮಾಡಿದೆ. ಅವರ ಸಹಾಯ ಹಸ್ತವನ್ನು ಮರೆಯಲು ಸಾಧ್ಯವೇ ಇಲ್ಲ. ಅವರು ಕೂಡಾ ನನ್ನ ಕ್ಷಮೆ ಕೇಳಿದರು ಅಲ್ಲಿನ ಸೆಕ್ಯೂರಿಟಿಯವರ ನಿರ್ಲಕ್ಷತನಕ್ಕೆ. ಇವರು ಎಷ್ಟು ಸಲ ಹೇಳಿದ್ರೂ ಕಸ್ಟಮರ್ ಎಲ್ಲಿ ಪಾರ್ಕ್ ಮಾಡ್ಬೇಕು ಅನ್ನೋದು ತೋರಿಸೋದೆ ಇಲ್ಲ ಎಂದು ಬೇಸರಿಸಿದರೂ ಕೂಡ.

ನಾನು ನಿಯಮಗಳನ್ನು ಕಟ್ಟಾ ಪಾಲಿಸುತ್ತೇನೆ. ಇಂದು ಏನಾಯಿತು ನಾ ಕಾಣೆ. ಮೊದಲ ಬಾರಿ ಹೀಗೆ ಆಗಿರೋದು. ಪಕ್ಕದಲ್ಲಿ "ನೋ ಪಾರ್ಕಿಂಗ್" ಬೋರ್ಡ್ ಗಳು ಕಾಣಲಿಲ್ಲ. ಅಥವಾ ಮರದ ಮಧ್ಯೆ ಮಾಯವಾಗಿತ್ತೋ? ಏನೆ ಆಗಲಿ ಕಾಲುದಾರಿ ಇರುವುದು ಮನುಷ್ಯರಿಗೆ ವಾಹನಗಳಿಗಲ್ಲ. ಹೌದು ಇದು ೯೮% ನನ್ನದೇ ತಪ್ಪು. ೧% ತಪ್ಪು ಪ್ರಥಮ್ ಮೋಟಾರ್ಸ್ ಅವರ ಸೆಕ್ಯೂರಿಟಿಗೆ ಸಲ್ಲುತ್ತದೆ. ಉಳಿದ ೧% ಸಂಚಾರಿ ಪೋಲಿಸ್ ಅವರ ತಪ್ಪು. ಅವರು ಹೇಳಬೇಕು ಗಾಡಿ ಎಲ್ಲಿದೆ ಎಂದು (ಒಂದಾ ನೋಟೀಸ್ ಹಚ್ಚಬೇಕು ಇಲ್ಲಾ ಎಸ್-ಎಮ್-ಎಸ್ ಕಳಿಸಿದರೂ ಆಯಿತು). ಇದರಿಂದ ಜನ ದಿಗಿಲಾಗುವುದು ತಪ್ಪುತ್ತದೆ.

ದಿನಾಂತ್ಯ ಬೈಕ್ ಉತ್ತಮ ಸ್ಥಿತಿಯಲ್ಲಿತ್ತು ಯಾಕೆಂದರೆ ಬೈಕ್ ಎತ್ತುವವರು ತುಂಬಾ ಒರಟಾಗಿ ನಿಭಾಯಿಸುತ್ತಾರೆ (ಅವರದ್ದೇನೂ ಅಲ್ವಲ್ಲಾ). ಒಟ್ಟಾರೆ ೬೦೦ ರುಪಾಯಿ ಪೋಲಿಸ್ ಪಾಲಾಗಿತ್ತು. ೧೫೦ ಏನಕ್ಕೆ ಕಡಿಮೆ ಮಾಡಿದ ಎನ್ನುವುದು ತಿಳಿಯಲಿಲ್ಲ. ರಶೀದಿ ಇರದ ಕಾರಣ, ಪೂರ್ತಿ ಹಣ ಕಂಟ್ರಾಕ್ಟರ್ ಮತ್ತು ಪೋಲಿಸ್ ಜೇಬಿಗೆ ಅನ್ಸುತ್ತೆ. ಹೌದು ಬೈಕು ಎತ್ತುವ ಕೆಲಸವನ್ನು ಕಂಟ್ರಾಕ್ಟ್ ನೀಡುತ್ತಾರೆ. ಅವರಿಗೂ ಗೊತ್ತಿದೆ ಜನಗಳಿಗೆ ತಮ್ಮ ವಾಹನ ಸಿಕ್ಕರೆ ಸಾಕೆಂದು ಅದಕ್ಕೆ ರಿಸೀಟ್ ಕೊಡೊಕ್ಕೂ ಹೋಗಲ್ಲ. ದಯವಿಟ್ಟು ರಿಸೀಟ್ ತೆಗೆದುಕೊಳ್ಳಿ.. ಒಟ್ಟಿನಲ್ಲಿ ನನಗೆ ಇಂದು ಎಲ್ಲಾ ಕೋನಗಳಲ್ಲಿ ಏಪ್ರಿಲ್ ಫೂಲ್ ಅನುಭವವಾಯಿತು ಬಿಡಿ.

No comments:

Post a Comment

Printfriendly

Related Posts Plugin for WordPress, Blogger...