Tuesday, March 26, 2019

ಹಾಗೆ ಸುಮ್ಮನೆ - ಪೌಡರ್ ಮ್ಯಾಂಗೋ

ಬೇಸಿಗೆ ಎಂದರೆ ಹಣ್ಣುಗಳ ರಾಜ ಮಾವಿನಹಣ್ಣಿ ನ ತೇರು. ನನಗೂ ಸವಿಯುವ ಕಾತರ. ಕಚೇರಿಯಿಂದ ಬಂದಾಗಲೆಲ್ಲಾ, ಮಾವಿನಹಣ್ಣಿನ ರಾಶಿಯನ್ನು ಕಂಡಾಗಲೆಲ್ಲಾ ನಾಲಿಗೆಯ ಜೊಲ್ಲು ದುಪ್ಪಟ್ಟಗಾವುದು. ಆದರೂ ಸೋಮಾರಿತನ ಬಿಡೋದಿಲ್ಲ ನೋಡಿ. ಬೈಕಿನಿಂದ ಇಳಿಯುವುದು ಸ್ವಲ್ಪ ಕಷ್ಟವೇ ಎನ್ನಿ.

ನಿನ್ನೆ ಹಾಗೆ ನಮ್ಮ ಮಾಮೂಲು ಅಂಗಡಿಯಲ್ಲಿ ವಿಚಾರಿಸಿ ನೋಡಿದೆ. ಅವನು ಇದುವರೆಗೆ ಮಾವಿನಕಾಯಿ ಅಥವಾ ತೋತಾಪುರಿ ಬಿಟ್ಟರೆ ಬೇರೆ ಯಾವುದೇ ತರಿಸುತ್ತಿಲ್ಲ. ಸರಿ ನಿನ್ನೆ ಹಾಗೆ ಕೇಳಿ ನೋಡಿದೆ. ಸಂಭಾಷಣೆ ಹೀಗೆ ನಡೆದಿತ್ತು.

"ಏನ್ ಸಾರ್ ಮಾವಿನಹಣ್ಣು ತರಿಸುತ್ತಿಲ್ಲವಾ?"
"ಇಲ್ಲ ಸಾರ್ ಎಲ್ಲಿ ಸೀಸನ್ ಶುರು ಆಗಿದೆ. ಇನ್ನೂ ಒಂದುವರೆ ತಿಂಗಳು ಆಗುತ್ತೆ"
"ಹೌದಾ! ಅಲ್ಲಾ ಅಲ್ಲಿ ಗಾಡಿಯಲ್ಲಿ ಮತ್ತು ಕೆಲವು ಅಂಗಡಿಯಲ್ಲಿ ಆಗಲೇ ನೋಡಿದ್ದೆನ್ನಲ್ಲಾ?"
"ಅದೆಲ್ಲಾ ಪೌಡರ್ ಹಾಕಿ ಮಾಗಿದ್ದು ಸಾರ್. ಕೆಮಿಕಲ್ ಹಾಕಿ ಅದನ್ನ ಆರ್ಟಿಫಿಶಿಯಲ್ ಆಗಿ ಹಣ್ಣಾಗಿ ಮಾಡ್ತಾರೆ. ದುಡ್ಡು ಮಾಡಕ್ಕೆ ಹಾಗೆ ಮಾಡ್ತಾರೆ ಅಷ್ಟೆ"
"ಓ ಹೌದಾ" ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

ಹೌದು. ಇತ್ತೀಚಿಗೆ ಹಣಕ್ಕಾಗಿ ಜನರು ಅಡ್ಡದಾರಿ ಹಿಡಿಯೋದು ಮಾಮೂಲಾಗಿದೆ. ಆದರೆ ಅದು ಜನರ ಆರೋಗ್ಯದ ಮೇಲಿನ ಪರಿಣಾಮವನ್ನು ವಿಶ್ಲೇಷಿಸದೆ ಬೇಕಾಬಿಟ್ಟಿ ಕೆಮಿಕಲ್ ಸೇರಿಸುತ್ತಾರೆ. ಅಧಿಕಾರಿಗಳಿಗೆ ಮಾಮೂಲಿ ಕೊಟ್ಟರೆ ಸಾಕು ಎಲ್ಲವೂ ನ್ಯಾಯಯುತ!

ಆದರೆ ತರಕಾರಿ ಅಂಗಡಿಯವನ ಮಾತು ನನಗೆ ಇಷ್ಟವಾಯಿತು. ಹೆಚ್ಚಾಗಿ ಅವನು ಸರಿಯಾದ ಮಾಹಿತಿಯನ್ನು ಹಲವು ಬಾರಿ ತಿಳಿಸಿದ್ದಾನೆ. ಮತ್ತೊಂದು ಬಾರಿ ನನ್ನ ಕಣ್ತೆರಿಸದ ಕೂಡಾ. ಮಾವು ಕೊಳ್ಳುವ ಮುಂಚೆ ನೀವು ಒಮ್ಮೆ ಯೋಚಿಸಿ ನೋಡಿ.

ಹಾಗೆ ಅರ್ಧ ಕೆಜಿ ಬಾಳೆಹಣ್ಣು ತೆಗೆದುಕೊಂಡು ಮನೆಗೆ ನಡೆದೆವು.

No comments:

Post a Comment

Printfriendly

Related Posts Plugin for WordPress, Blogger...