ಊರಿಗೆ ಬೇಗ ಹೊರಟರೆ, ಮಧ್ಯಾಹ್ನ ಉಡುಪಿಯಲ್ಲಿ ಸೂಪರ್ ಊಟ ಮಾಡಬಹುದು ಅಂತಾ ಲೆಕ್ಕ ಹಾಕಿ ಬೆಳಗ್ಗೆ ಬೇಗ ಎದ್ದು, ಸರಳ ಪೂಜೆ ಮುಗಿಸಿ ಹೊರಡುವುದು ಈಗ ಅಭ್ಯಾಸವಾಗಿದೆ. ಮಕ್ಕಳ ಕೂಡಾ ಸಾಥ್ ನೀಡುತ್ತಾರೆ. ಆದರೆ ಬಹಳ ಸಲ, ಟ್ರಾಫಿಕ್ ಮತ್ತು ಮ್ಯಾಪ್ ಸಾಥ್ ನೀಡುವುದಿಲ್ಲ ನೋಡಿ :-(. ಪದೇ ಪದೇ ಬೇಡವೆಂದರೂ ಗೊತ್ತಿರುವ ಮಾರ್ಗಕ್ಕೆ ಮ್ಯಾಪ್ ಹಾಕುವುದು ದುರಾಭ್ಯಾಸವಾಗಿಬಿಟ್ಟಿದೆ. ಹೀಗಿದೆ ನೋಡಿ ಮುಂಜಾವಿನ ಪುರಾಣ ಸಚಿತ್ರ ವರದಿಯೊಂದಿಗೆ!
ಮತ್ತೆ ಮ್ಯಾಪ್ ನೋಡಿದೆ. ಸರಿ ಕಣಪ್ಪಾ ಗೊರಗೊಂಟೆಪಾಳ್ಯದಿಂದ ಸಂಚರಿಸು ಅಂತಾ ಮ್ಯಾಪ್ ಸೂಚಿಸಿತು. ಗ್ರಹಚಾರಕ್ಕೆಅದನ್ನೇ ಪಾಲಿಸಿದೆ. ಬಳ್ಳಾರಿ ರಸ್ತೆಗೆ ಕಾರು ಬಂದಾಗಲೇ ತಿಳಿಯಿತು, ಕತ್ತಲು ಆವರಿಸಿದ ಬೆಳಗಿನ ಸಮಯದಲ್ಲಿ ವೀಕೆಂಡ್ ಟ್ರಾಫಿಕ್ ಜೋರಾಗಿದೆ ಅಂತಾ. ಮೊದಲನೆಯದಾಗಿ ಎದುರಿಸಿದ್ದು ನಾಗಶೆಟ್ಟಿಹಳ್ಳಿಯ ಮೇಲ್ಸೇತುವೆಯಲ್ಲಿ ಟ್ರಕ್ಕುಗಳ ಮೆರವಣಿಗೆ. ಪಾಪ ಅವರೇನು ಮಾಡುವರು. ರಾತ್ರಿ ಮಾತ್ರ ನಗರದ ಒಳಗೆ ಅವರಿಗೆ ಸಂಚರಿಸಬಹುದು. ಪೆರಿಫೆರಲ್ ರಿಂಗ್-ರಸ್ತೆ ಯಾವಾಗ ಶುರು ಆಗುತ್ತೋ? ಅದಾದರೆ ಹೊರವರ್ತುಲ ರಸ್ತೆ ನಿರಾಳವಾಗಬಹುದು. ಇರಲಿ ಸಧ್ಯಕ್ಕೆ ಇದು ಸಾಧ್ಯವಿಲ್ಲ. ಅಂದಹಾಗೆ, ದೊಡ್ಡ ಟ್ರಕ್ಕುಗಳು ಮೇಲ್ಸುತುವೆಯನ್ನು ಬಸವನಹುಳುವಿನಂತೆ ದಾಟುತ್ತಿದ್ದವು. ಅದರ ಹರಸಾಹಸದ ಮಧ್ಯೆ ನಾವು ೧ ನೇ ಗೇಯರಿನಲ್ಲಿ ಚಲಿಸುತ್ತಿದ್ದೆವು. ಅದು ಸಾಲದೆ, ರಸ್ತೆ ಪೂರ್ತಿ ಗಜಗಾತ್ರದ ಹೊಂಡಗಳು ಜೊತೆಗೆ ಬೀದಿದೀಪವಿಲ್ಲದ ದಾರಿಗಳು. ಅಬ್ಬಾಬ್ಬಾ ಗೊರಗುಂಟೆ ಪಾಳ್ಯ ಹೇಗೂ ತಲುಪಿದೆವು.
ಬಹುದೊಡ್ಡ ದುರಂತ ಕಾಡಿತ್ತು. ಗೊರಗುಂಟೆಪಾಳ್ಯದಿಂದ ಚಾಲನೆ ಮಾಡಿದ್ದೆ ಜಾಲಹಳ್ಳಿ ಎಲಿವೇಟೆಡ್ ಹೆದ್ದಾರಿಯಲ್ಲಿ ಸಂಚರಿಸಲು. ಹೆದ್ದಾರಿ ಇಲಾಖೆಯವರು ತುಮಕೂರು ಕಡೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳಿಗೆ (ಸೈಕಲ್ ಕೂಡಾ ಸೇರಿಸಿ) ಹೈವೇ ಬಂದ್ ಮಾಡಿದ್ದಾರೆ. ನಾವು ಹಿಡಿಶಾಪ ಹಾಕಿದೆವು ಮ್ಯಾಪ್ ಗೆ. ಕಷ್ಟಪಟ್ಟು ಲಾರಿಗಳನ್ನು ಬೇಧಿಸಿದ್ದೆಲ್ಲಾ ವ್ಯರ್ಥವಾಯಿತು ನೋಡಿ. ನಗರದ ರಸ್ತೆಯಲ್ಲೇ ಮತ್ತೆ ಸಾಗಬೇಕಾಯಿತು. ಸಾಲದಕ್ಕೆ ಮತ್ತೆ ಟ್ರಕ್ಕುಗಳ ಸಾಲು. ಕಡೆಗೆ ವಸೂಲಿ ಮಾಡಿದ ಹೆದ್ದಾರಿ ಸುಂಕ ಬೆಂಕಿಯ ಮೇಲೆ ತುಪ್ಪ ಸುರಿದಂತಾಯಿತು. ರಸ್ತೆ ಬೇರೆ ಸರಿಯಿಲ್ಲ ಜೊತೆಗೆ ಶುಲ್ಕ ಬೇರೆ!
ನಗರದ ಟ್ರಾಫಿಕ್ ಮಧ್ಯೆ ಬಟ್ಟೆ ಹರ್ಕೊಂಡು ಸೈಕಲ್ ನಂತೆ ಚಲಾಯಿಸುವ ಕ್ಯಾಬ್-ಗಳು ಈಗ ಖಾಲಿ ಹೆದ್ದಾರಿಯ ಸ್ಪೀಡ್ ಪಥದಲ್ಲಿ ಎತ್ತಿನಗಾಡಿಯಂತೆ ಚಲಾಯಿಸುತ್ತಾರೆ. ಹಾರ್ನ್ ಹಾಕಿದರೂ ತಮ್ಮ ಸ್ವಸ್ಥಾನದಿಂದ ಕದಲುವುದಿಲ್ಲ ಅಥವಾ ಸ್ವಲ್ಪ ವೇಗದಿಂದ ಮುಂದೆ ಕೂಡಾ ಹೋಗುವುದಿಲ್ಲ. ಕೆಲವರು ಬೇಕೆಂದೇ ಲಾರಿಗಳ ಸಮಾನಾದ ವೇಗದಲ್ಲಿ ಸಂಚರಿಸಿ ವಿಚಿತ್ರ ಖುಷಿಯನ್ನು ಪಡೆಯುತ್ತಾರೆ (ಕುಣಿಗಲ್ ಬೈಪಾಸ್-ನಲ್ಲಿ ಅನುಭವವಾಗಿದೆ). ತಲೆಕೆಟ್ಟು ಹೋಗೋ ಸ್ಥಿತಿ. ಅವರ ಜೊತೆಗೆ ಟ್ರಕ್ಕುಗಳ ಜುಗಲ್-ಬಂದಿ. ಮೂರು ಟ್ರಕ್ಕುಗಳು ಒಂದೇ ವೇಗದಲ್ಲಿ ಸಂಚರಿಸಿ ಸುಮಾರು ೫ ನಿಮಿಷ ಸಮಯ ಹಾಳಾಯಿತು. ಅವುಗಳನ್ನು ಹಿಂದೆ ಹಾಕಲು ಹಾರ್ನ್ ಹೊಡೆದು ಹೊಡೆದು ಬ್ಯಾಟರಿ ಕೆಡುವುದೊಂದು ಬಾಕಿ. ಅಲ್ಲಾ, ವೇಗಮಿತಿ ಮೀರಿದರೆ ಇಂಟರ್ಸೆಪ್ಟರ್ ಮೂಲಕ ದಂಡ ವಿಧಿಸುವ ಪೊಲೀಸರು, ಸ್ಪೀಡ್ ಲೇನ್-ನಲ್ಲಿ ನಿಧಾನ ಚಲಿಸುವವರಿಗೆ ಯಾಕೆ ದಂಡ ಹಾಕುವುದಿಲ್ಲ. ಇದು ಕೂಡಾ ಹೆದ್ದಾರಿ ನಿಯಮದ ಭಾಗವಲ್ಲವೇ? ಅಷ್ಟಕ್ಕೂ ಒಳ್ಳೆ ರಸ್ತೆಯಲ್ಲಿ ಶುಲ್ಕ ಕೊಟ್ಟು ಸಂಚರಿಸಿ ಜೊತೆಗೆ ಪೊಲೀಸರಿಗೆ ದಂಡ ಕಟ್ಟುವುದೆಂದರೆ ಅದರಷ್ಟು ಹಾಸ್ಯಾಸ್ಪದ ದೃಶ್ಯ ಬೇರೆಲ್ಲೂ ಸಿಗದು. ಟೋಲ್-ಗೇಟ್ ಬಳಿಕ ಹಲವು ಗುಂಡಿಗಳಿವೆ ನೆಲಮಂಗಲದವರೆಗೆ. ಆ ಹೊಂಡಗಳನ್ನು ತಪ್ಪಿಸಲು ಒಮ್ಮೆಲೇ ಪಥ ಬದಲಿಸುವ ಲಾರಿಗಳು ನಡುರಾತ್ರಿಯಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತವೆ! ಕೆಲಸ ಮಾಡದ ಬೀದಿ ದೀಪಗಳ ಜೊತೆಗೆ ಲೇನ್ ಮಾರ್ಕಿಂಗ್ ಕೂಡಾ ಅಳಿಸಿ ಹೋಗಿದೆ. ರಸ್ತೆ ಎಲ್ಲಿಗೆ ತಿರುಗುತ್ತದೆ ಎಂದೇ ತಿಳಿಯುವುದಿಲ್ಲ. ನನ್ನಂತೆ ಮಾರ್ಪಾಡು ಮಾಡದ ಹೆಡ್-ಲೈಟ್ ಇದ್ದವರಿಗೆ ರಾತ್ರಿ ಸಂಚರಿಸುವವರಿಗೆ ಯಮನ ದಾರಿಯೇ ಇದು ಅಂದರೂ ತಪ್ಪಾಗದು.
ನೆಲಮಂಗಲದ ಬಳಿಕ ವಾಹನ ಸಂಚಾರ ಸುಗಮವಾಗಿ ಸಾಗಿತ್ತು. ಕುಣಿಗಲ್ ಬೈಪಾಸ್ ಖಾಲಿ ಹೊಡೆಯುತ್ತಿತ್ತು.
ಮತ್ತೊಂದು ವಿಷಯ ನಾನು ಗಮನಿಸಿದ್ದು. ಎಷ್ಟೋ ಲಾರಿಗಳಿಗೆ, ಸಣ್ಣ ವಾಹನಗಳಿಗೆ, ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಲೈಟ್ ಕೂಡಾ ಇಲ್ಲ. ರಾತ್ರಿ ಹೊತ್ತು ಬೀದಿ ದೀಪ ಇಲ್ಲದ ಹೆದ್ದಾರಿಯಲ್ಲಿ ವಾಹನವನ್ನು ಗುರಿತುಸುವುದು ಕೇವಲ ಬ್ರೇಕ್ ಲೈಟ್ ಅಥವಾ ರಿಫ್ಲೆಕ್ಟರ್ ಇಂದ ಮಾತ್ರ. ಅದು ಇಲ್ಲದಿದ್ದರೆ ವೇಗದ ದಾರಿಯಲ್ಲಿ ಹಲವಾರು ಅಪಾಯವನ್ನು ತಂದೊಡ್ಡುತ್ತವೆ. ಕೆಲವರು ಲೇನ್-ಮಾರ್ಕಿಂಗ್, ಬ್ರೇಕ್-ಲೈಟ್ ಗಳನ್ನೂ, ಬೀದಿ ದೀಪಗಳನ್ನು ಆಕರ್ಷಣೆ ಎಂದುಕೊಳ್ಳುತ್ತಾರೆ. ಅದರ ಪ್ರಾಮುಖ್ಯತೆ ರಾತ್ರಿಯಲ್ಲಿ ವಾಹನ ಚಲಾಯಿಸುವವರಿಗೆ ತಿಳಿದಿರುವುದು!
ಹಿರಿಸಾವೆಯಿಂದ ಹಾಸನದವರೆಗೆ ಹಲವು ಮೇಲ್ದರ್ಜೆ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ಒಂದು ಮೇಲ್ಸುತುವೆ ಬಿಟ್ಟರೆ ಎಲ್ಲವೂ ಧೂಳಿನಲ್ಲಿ ತುಂಬಿದೆ. ಚನ್ನರಾಯಣಪಟ್ಟಣ ಬೈಪಾಸ್ ಪೂರ್ತಿ ಹಲವು ಕೆಲಸಗಳು ಬಾಕಿ ಉಳಿದಿದೆ. ಅಷ್ಟೇ ಅಲ್ಲದೆ ಕೆಲವು ಕಡೆ ಉದ್ದದ ಮೇಲ್ಸುತುವೆ ಮುಗಿಸಲು ಹಲವು ವರ್ಷಗಳೇ ತಗುಲಬಹುದು. ಹಲವು ಅಡೆ-ತಡೆಗಳಿಂದ ಕೂಡಿದ ತಡೆರಹಿತ ಹೆದ್ದಾರಿಯಲ್ಲಿ ಪೂರ್ತಿ ಶುಲ್ಕ ಕಟ್ಟುವುದು ಹಾಸ್ಯಾಸ್ಪದ ಅನಿಸುವುದಿಲ್ಲವೇ? ಹೆಚ್ಚಾಗಿ ಸರ್ವಿಸ್ ರಸ್ತೆರ್ಯಲ್ಲೇ ನಮ್ಮ ಪ್ರಯಾಣ ಸಾಗಿತ್ತು. ಶುಲ್ಕವನ್ನು ಮನಸ್ಸಿಲ್ಲದೆ ಕಟ್ಟುತ್ತಿದ್ದೆವು.
ಸಂತೋಷದ ವಿಷಯವೆಂದರೆ, ಹಾಸನ-ಸಕಲೇಶಪುರ ಕಾಮಗಾರಿ ತುಂಬಾ ಅಭಿವೃದ್ಧಿ ಕಂಡಿದೆ. ಬಾಳ್ಳುಪೇಟೆ ದಾಟಿದ್ದೆ ಗೊತ್ತಾಗುವುದಿಲ್ಲ. ಸಂಪೂರ್ಣ ಕಾಂಕ್ರೀಟ್ ರಸ್ತೆ ಮತ್ತು ಹಲವು ಬೈಪಾಸ್-ಗಳು. ಸಕಲೇಶಪುರಕ್ಕಿಂತ ಸ್ವಲ್ಪ ಹಿಂದೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ (ಬಹುಷಃ ಮಳೆಗಾಲವಾದ್ದರಿಂದ). ಆಗಲೇ ತುಂಬಾ ತಡವಾಗಿದೆ ಕಾಮಗಾರಿ. ಬಹುಬೇಗ ಮುಗಿಯಬಹುದು ಅಂದುಕೊಳ್ಳುತ್ತೇನೆ. ಕಾಮಗಾರಿ ಚುರುಕುಗೊಂಡರೆ ಬರುವ ಬೇಸಿಗೆಗೆ ಬೆಂಗಳೂರಿನಿಂದ ಸಕಲೇಶಪುರ ತಲುಪುವುದು ಕೇವಲ ೪ ಘಂಟೆಯ ಕೆಲಸ. ಅದು ಕೂಡಾ ಬೈಪಾಸ್ ಇರುವುದರಿಂದ, ಪೇಟೆಯನ್ನು ಕೂಡಾ ಬೇಧಿಸುವ ಅಗತ್ಯವಿಲ್ಲ! ಶಿರಾಡಿ ಘಾಟಿಗೆ ಸೀದಾ ತಲುಪುತ್ತೇವೆ!
ಜೊತೆಗೆ ಗುಂಡ್ಯ-ಅಡ್ಡಹೊಳೆ ಕಾಮಗಾರಿ ಕೂಡಾ ಭರದಿಂದ ಸಾಗುತ್ತಿದೆ. ಇದು ಕೂಡಾ ಸಂಪೂರ್ಣ ಸಿಮೆಂಟ್ ರಸ್ತೆ. ಹಲವು ಕಡೆ ಒಂದು ಪಥದ ಕಾಮಗಾರಿ ಮುಗಿದಿದೆ. ಇಲ್ಲಿ ರಸ್ತೆ ನಿರ್ಮಿಸುವುದು ಶ್ರಮದ ಕೆಲಸ. ಭಾರಿ ಮಳೆ, ಬೆಟ್ಟಗುಡ್ಡಗಳು, ಕಲ್ಲು ಗುಡ್ಡೆಗಳು ಇರುವುದರಿಂದ ಈ ಕಾಮಗಾರಿ ಅಷ್ಟು ಬೇಗ ಮುಗಿಯುವ ಸೂಚನೆ ಇಲ್ಲ. ಕೆಲವು ವರ್ಷಗಳ ಬಳಿಕ ಇದೆ ವೇಗದಲ್ಲಿ ಕಾಮಗಾರಿ ನಡೆದರೆ, ಉತ್ತಮ ರಸ್ತೆಯಲ್ಲಿ ಚಾಲನೆ ಮಾಡುವ ಭಾಗ್ಯ ಕರಾವಳಿಗರಿಗೆ ದೊರಕುವುದು ನಿಶ್ಚಿತ.
ಅಷ್ಟು ಎತ್ತರದಿಂದ ಜಿಸಿಬಿ ಕೆಲಸ ಮಾಡುತ್ತಿದ್ದಾಗ ಮೈ ಜುಮ್ಮೆಂದಿತು. ಅಲ್ಲಾ ಮಾರಾಯ ನಿಯಂತ್ರಣ ತಪ್ಪಿದರೆ ಅಧೋಗತಿ ನೋಡಿ. ಹಾಗೆಯೇ ಬರುವ ಮಳೆಗಾಲದಲ್ಲಿ ಬಹುಶಃ ಭೂಕುಸಿತಗಳ ಅಪಾಯಗಳು ಎದುರಾಗಬಹುದು. ಗುತ್ತಿದೆದಾರರಿಗೆ ಇದೆಲ್ಲ ತಿಳಿದಿರದಷ್ಟು ಮೂರ್ಖರೇನಲ್ಲ ಬಿಡಿ! ಕಡೆಗೆ ಎಲ್ಲವು ಸುಸೂತ್ರವಾಗಿರುತ್ತದೆ ಅಂದುಕೊಳ್ಳೋಣ! ಆದಷ್ಟು ಬೇಗ ಕಾಮಗಾರಿಗಳು ಉತ್ತಮ ಗುಣಮಟ್ಟದೊಂದಿಗೆ ಮುಗಿಯಲಿ. ಕರವಾಳಿಗರು ಉತ್ತಮ ರಸ್ತೆಯ ಭಾಗ್ಯವ ಪಡೆಯಲಿ.
ಈ ಬ್ಲಾಗ್ ಬರೆದಿದ್ದು ನಾವು ಗೋರುಗುಂಟನ ಪಾಳ್ಯದಲ್ಲಿ ಪಟ್ಟ ವ್ಯಥೆಯಿಂದಾಗಿ. ಎಲ್ಲೆಲ್ಲೋ ಹೋಯಿತು ಕೊನೆಗೆ. ಮ್ಯಾಪ್ ದಾರಿ ನಂಬಿ ಕೋಲು ಕೊಟ್ಟು ನಾನೇ ಪೆಟ್ಟು ತಿಂದಂತಾಯ್ತು. ಜಾಲಹಳ್ಳಿ ಕ್ರಾಸ್ ಗೆ ಬರುವ ಪೈಪ್ಲೈನ್ ಹಾದಿ ಖಾಲಿ ಹೊಡೆಯುತ್ತಿತ್ತು. ಅದನ್ನು ಕಂಡ ನನಗೆ ಹೊಟ್ಟೆ ಉರಿಯುತ್ತಿತ್ತು. ಇರಲಿ ಹೆದ್ದಾರಿ ಇಲಾಖೆಯವರು ರಾತ್ರೋರಾತ್ರಿ ರಸ್ತೆ ಮುಚ್ಚಿದರೆ ಮ್ಯಾಪ್ ಗು ಕೂಡಾ ಹೇಗೆ ತಿಳಿಯುತ್ತೆ ಹೇಳಿ?
ಕೊನೆಯದಾಗಿ ಮತ್ತೊಮ್ಮೆ ಹೇಳುತ್ತೇನೆ ಕೇಳಿ! ರಸ್ತೆ ಗೊತ್ತಿದ್ದರೆ ನಿಮ್ಮ ಮೆದುಳಿನ ಮ್ಯಾಪ್ ಉಪಯೋಗಿಸಿ ವ್ಯಥೆ ತಪ್ಪಿಸಿ :-)
ಇಷ್ಟೆಲ್ಲಾ ಗೋಳು ಹೇಳಿಕೊಂಡರೂ ಕೊನೆಗೆ ಸುರಕ್ಷಿತವಾಗಿ ಯಾವುದೇ ವಿಘ್ನವಿಲ್ಲದೆ ಸೂರು ತಲುಪಿದೆವು. ಅದಕ್ಕೂ ಮುಂಚೆ ಸೌತಡ್ಕ ಶ್ರೀ ಮಹಾಗಣಪತಿಯ ಆಶೀರ್ವಾದನ್ನು ಪಡೆದು, ಅಪ್ಪ ಪ್ರಸಾದವನ್ನು ಸವಿದೆವು. ಪ್ರಕೃತಿಯ ಹಸಿರಿನ ಮಧ್ಯೆ ಬಯಲಿನಲ್ಲಿ ವಿರಾಜಮಾನರಾದ ವಿಘ್ನರಾಜನ ಚಿತ್ರಗಳು ನಿಮಗಾಗಿ!
No comments:
Post a Comment