ಬಹಳ ದಿನಗಳಾಯ್ತು ನೋಡಿ ಕ್ಯಾಶ್ ಉಪಯೋಗ ಮಾಡಿ. ಎಲ್ಲೆಲ್ಲೂ UPI ದೇ ಕಾರುಬಾರು ಇಲ್ಲಾ ಡೆಬಿಟ್ ಕಾರ್ಡ್. ಇದರಿಂದ ನಮಗೆ ತುಂಬಾ ಉಪಕಾರವಾದರೂ ಟ್ಯಾಕ್ಸ್ ಕಟ್ಟದ ಮಂದಿಗೆ ಒಳ್ಳೆ ತಲೆನೋವು. ಕೆಲವರು ಯಾರ್ಯಾರ್ದೋ ಹೆಸರಲ್ಲಿ UPI ಲಿಂಕ್ ಮಾಡಿ ಸರಕಾರದ ಕಣ್ಣು ತಪ್ಪಿಸುವವರು ಇದ್ದಾರೆ (ಹೆಚ್ಚಲಾಗಿ ಚಿನ್ನದ ಅಂಗಡಿಯವರು). ಇರಲಿ ನನ್ನಂತವರಿಗೆ UPI ಇಂದ ಟಾಫಿ ಸಂಗ್ರಹಣೆ ಕಡಿಮೆಯಾಯಿತು. ಅಲ್ಲಾ ಮಾರಾಯ್ರೇ ಟೋಲ್-ಗೆಟ್ ನಲ್ಲಿ ಕೂಡಾ ಚಿಲ್ಲರೆ ಇಲ್ಲಾ ಅಂತಾ ಚಾಕಲೇಟ್ ತಿನ್ನಿಸುತ್ತಿದ್ದರು. ಒಟ್ಟಾರೆ ತಿಂಗಳ ಕೊನೆಗೆ ಸುಮಾರು ೧೦ರ ವರೆಗೆ ಚಾಕಲೇಟ್ ಸಂಗ್ರಹವಾಗುತ್ತಿತ್ತು. ಇದರಿಂದ ಟಾಫಿ ಕಂಪನಿಗೆ ಒಳ್ಳೆ ಲಾಭ ಜೊತೆಗೆ ಅಂಗಡಿಯವರಿಗೆ ವ್ಯಾಪಾರ. ಕೆಲವರು ಚಿಲ್ಲರೆ ಇದ್ದರೂ ಟಾಫಿ ಕೊಡುತ್ತಿದ್ದರು. ಅಂಗಡಿ ಮುಚ್ಚೋವರೆಗೆ ಚಿಲ್ಲರೆ ಬೇಕಾಗುತ್ತೆ ಎನ್ನುವ ನೆಪ ಬೇರೆ. ಟಾಫಿ ಮತ್ತು ಅಂಗಡಿಯವರ ಮಧ್ಯೆ ಡೀಲ್ ಇತ್ತೇನೋ ಅನ್ನಿಸುತ್ತಿತ್ತು. ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ೫ ರೂಪಾಯಿ ಚಿಲ್ಲರೆ ಇಲ್ಲವೆಂದು ಮಂಚ್ ಬೇರೆ ಕೊಡುತ್ತಿದ್ದರು. ಚಾಕಲೇಟ್ ಬೇಡವೆಂದರೆ "ಚೇಂಜ್ ಇಲ್ಲ ಸಾರ್" ಅನ್ನುವ ಧಿಮಾಕು ಬೇರೆ :-(. ಚಾಕಲೇಟ್ ಬೇಡವೆಂದಾಗ ಕೆಲವೊಮ್ಮೆ ಅದರ ಬದಲಾಗಿ ಅನಿವಾರ್ಯವಾಗಿ ಅಗತ್ಯವಿಲ್ಲದಿದ್ದರೂ ಅಗತ್ಯವಿರುವ ಸಾಮಾನು ಖರೀದಿಸುತ್ತಿದ್ದೆವು. ಇದರ ಮೌಲ್ಯ ೫ ರೂಪಾಯಿ ಮೀರುತ್ತಿತ್ತು. ಅಂಗಡಿಯವನಿಗೆ ಬಂಪರ್ ವ್ಯಾಪಾರ, ನಮ್ಮ ಕಡೆಯಿಂದ ಸದ್ದಿಲ್ಲದ ಧಿಕ್ಕಾರ. ಕೆಲವು ಎಡಪಂಥೀಯ ಮಾರ್ಕೆಟ್ ಬರಹಗಾರರು "UPI ಬಂದ ಮೇಲೆ ಟಾಫಿ ವ್ಯಾಪಾರ ಮೇಲೆ ಗಂಭೀರ ಪರಿಣಾಮ ಬೀರಿದೆ" ಅಂತಾ ಅದಕ್ಕೂ ಮೋದಿಯ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯುತ್ತಿದ್ದಾರೆ 😂😂😂😂. ಅವರಿಗೋ ಒಳ್ಳೆಯತನದ ಮಧ್ಯೆ ಹುಳುಕು ಹುಡುಕುವುದೇ ಕೆಲಸ. ಟಾಫಿ ತಿಂದು ಎಷ್ಟು ಮಕ್ಕಳ ಹಲ್ಲು ಮತ್ತು ಹೊಟ್ಟೆ ಹಾಳಾಗಿದೆಯೋ. ಅಥವಾ ಅದನ್ನು ಪದೇ ಪದೇ ತಿಂದು ಎಷ್ಟು ಜನಕ್ಕೆ ಸಕ್ಕರೆ ಕಾಯಿಲೆ ಅಂಟಿಕೊಂಡಿದೆಯೋ! ಅದನ್ನು ಯಾರು ಬರೆಯುವವರಿಲ್ಲ.
ವಿಷಯಕ್ಕೆ ಬರೋಣ. ಇತ್ತೀಚಿಗೆ ಮಾತ್ರೆ ತಗೊಳಲು ಮೆಡಿಕಲ್ ಹೋಗಿದ್ದೆ. ಅಪರೂಪಕ್ಕೆ ಕ್ಯಾಶ್ ಕೊಟ್ಟು ಮಾತ್ರೆ ಖರೀದಿಸಿದೆ. ಚಿಲ್ಲರೆ ೧೧ ರೂಪಾಯಿ ಬದಲು ೧೦ ರೂಪಾಯಿ ಕೊಟ್ಟು ಒಂದು ರೂಪಾಯಿ ವಿಕ್ಸ್ ಚಾಕಲೇಟ್ ಕೊಟ್ಟ. ನಾನು ತಲೆ ಚಚ್ಚಿಕೊಂಡೆ. ವಿಕ್ಸ್ ಚಾಕಲೇಟ್ ತಿನ್ನುವವರಾರು. ಅದನ್ನು ಬಿಸಾಡಿದರೆ ಒಂದು ರೂಪಾಯಿ ಹಾಳು ಮಾಡಿದಂತೆ. ಸುಮ್ಮನೆ ಉದಾಸೀನ ಬದಿಗಿಟ್ಟು UPI ಮೂಲಕ ಪಾವತಿ ಮಾಡಬಹುದಿತ್ತು. ದುಡ್ಡು ಕೊಟ್ಟಾಗಿತ್ತು ಏನು ಮಾಡುವುದು. "ಯಾವನೋ ಬಕ್ರಾ ಕ್ಯಾಶ್ ಕೊಟ್ಟ, ವಿಕ್ಸ್ ಚಾಕಲೇಟ್ ಡಬ್ಬವನ್ನು ಕ್ಲಿಯರ್ ಮಾಡೋಣ" ಎಂದು ಅಂಗಡಿಯವನು ಪ್ರೀ-ಪ್ಲಾನ್ ಮಾಡಿರಬೇಕು. ಏಕೆಂದರೆ ಚಿಲ್ಲರೆ ಇದಿಯೋ ಇಲ್ಲವೋ ಅಂತ ಖಾತ್ರಿ ಮಾಡಿಕೊಳ್ಳೋ ಮುಂಚೆನೇ ಅವನು ಚಾಕಲೇಟ್ ಡಬ್ಬವನ್ನು ತಿರುವಲು ಶುರು ಮಾಡಿದ್ದ. ಇನ್ನು ಮುಂದೆ ನೇರವಾಗಿ ಮೊಬೈಲ್ ಪಾವತಿ ಮಾಡುವುದೇ ಒಳಿತು ಅಂತಾ ನಿರ್ಧರಿಸಿದೆ. ಚಾಕಲೇಟ್ ಬೇಡ ಎಂದು ತಿರಸ್ಕಿರಿಸಿ ಚಿಲ್ಲರೆ ಇಟ್ಟುಕೋ ಎನ್ನುವವರು ಇರುತ್ತಾರೆ. ಇದರಿಂದಾಗಿ ಅಂಗಡಿಯವರಿಗೆ ಲಾಭ ನೋಡಿ. ಚಿಲ್ಲರೆ ಇದ್ದರೂ ದುಡ್ಡು ಮಾಡುವ ಕಪಟ ಬುದ್ಧಿ ಇವರದ್ದು.
ಅಂದ ಹಾಗೆ ಈಗಲೂ ವಿಕ್ಸ್ ಚಾಕಲೇಟ್ ಹಾಗೆ ಮೂಲೆಯಲ್ಲಿ ಬಿದ್ದಿದೆ.
No comments:
Post a Comment