Thursday, October 13, 2022

ಬ್ಯಾಕೆಂಡ್ - ೨೯

ಹಲವು ಬ್ಯಾಕೆಂಡ್ ಸರಣಿಗಳು ಹಾಗೆ ಉಳಿದಿದೆ. ಆದರೂ ಇತ್ತೀಚಿಗೆ ತೆಗೆದ ಈ ಬ್ಯಾಕೆಂಡ್ ಚಿತ್ರವನ್ನು ಯಾಕೆ ಮೊದಲೇ ವಿಸ್ತರಿಸಿದೆ ಎಂಬುದನ್ನು ಈ ಬರಹದ ಮೂಲಕ ವಿಸ್ತಾರವಾಗಿ ತಿಳಿಸುತ್ತೇನೆ. ಕೆಲವರಿಗೆ ಇದೆಲ್ಲ ಕಾಲ್ಪನಿಕ ಅನ್ನಿಸಿದರೂ, ಆಟೋ ಹಿಂದಿನ ಈ ಬರಹ ನನ್ನ ಜೀವನದಲ್ಲಾದ ಕಹಿ ಘಟನೆಗಳನ್ನು ನೆನಪಿಸಿತು. ಮುಂದೆ ಓದಿ!

ಮೊದಲನೆಯದಾಗಿ,  ಆಟೋ ಮೇಲೆ ಬರೆಯಲಾದ ವಾಕ್ಯಕ್ಕೆ ನನ್ನದು ೯೫% ಅಸಮ್ಮತಿ ಮತ್ತು ೫% ಸಮ್ಮತಿ ಇದೆ. ಯಾಕೆಂದು ತಿಳಿಸುತ್ತೇನೆ! ಆಟೋ ಮೇಲಿನ ವಾಕ್ಯ ಹೀಗಿದೆ.

ಕಷ್ಟ ಆದರು ಪರವಾಗಿಲ್ಲ. 

ನೋಯಿಸಿದವರ ಮುಂದೆ

ನಗುನಗುತ್ತಾ ಬದುಕಬೇಕು!


ನಿಮ್ಮ ಖುಷಿಯಿಂದ ಯಾರಿಗೂ ಖುಷಿ ಇಲ್ಲ ತಿಳ್ಕೊಳಿ! ನಿಮ್ಮ ರಕ್ತಸಂಬಂಧಿಗಳೂ ಕೂಡಾ, ಬಹುಶಃ ನಿಮ್ಮ ಹೆತ್ತವರು ಕೂಡಾ!  ಹೌದು ನೀವು ಓದಿದ್ದು ಸರಿಯಾಗಿಯೇ ಇದೆ! ಸಮಯ ಬಂದಾಗ ದೇವರೇ ಅದನ್ನು ನಿಮಗೆ ತೋರ್ಪಿಡಿಸುತ್ತಾನೆ! ಬಹುಶಃ ಡ್ರೈವ್ ಮಾಡುವಾಗ ಇದರ ಚಿತ್ರ ತೆಗೆದವರು ಅಂತವರೇ ಆಗಿದ್ದರೆ ಆಶ್ಚರ್ಯವೇನಿಲ್ಲ!

ನೋಯಿಸಿದವರ ಮುಂದೆ ಯಾವತ್ತೂ ನಿಮ್ಮ ನಗುವನ್ನು ಪ್ರದರ್ಶಿಸಬೇಡಿ ಪ್ರಮುಖವಾಗಿ ನಿಮ್ಮ ಒಡಹುಟ್ಟಿದವರ ಬಳಿ. ಯಾಕೆಂದರೆ ಶತ್ರುಗಳಿಗಿಂತ ಹಿತಶತ್ರುಗಳು ಬಹಳ ಅಪಾಯ! ತುಂಬಾ ಖುಷಿಯಾಗಿದೆನೆಂದು ಇರೋ ಬರೋ ಸ್ಟೇಟಸ್-ನಲ್ಲಿ ತೋರಿಸಿದರೆ, ಹಿತಶತ್ರುಗಳು ಹಿಂದಿನಿಂದ ಏನು ಪ್ಲಾನ್ ಮಾಡಿರುತ್ತಾರೋ ನಾ ಕಾಣೆ.

ಅಷ್ಟೊಂದು ಹೆದರಿಕೆ ಯಾಕಪ್ಪಾ. ಅದನ್ನ ಧೈರ್ಯದಿಂದ ಎದುರಿಸಬಹುದಲ್ಲವೇ? ಯಾಕಿಲ್ಲ? ಆದರೆ ಅದರಿಂದ ಸುಮ್ಮನೆ ನಮ್ಮ ನೆಮ್ಮದಿ ಹಾಳು. ನಮ್ಮ ಖುಷಿಗೋಸ್ಕರ ನಗುವುದೇ ವಿನಹಾ ಬೇರೆಯವರಿಗೆ ತೋರಿಸಿಕೊಳ್ಳಲು ಅಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ನಿಮ್ಮ ಖುಷಿ ಮತ್ತು ನಗು ನಿಮ್ಮ ಬಳಿಯ ಇದ್ದು ಆನಂದಿಸಿ. ಬಹುಶಃ ಪ್ರೀತಿಪಾತ್ರರೊಂದಿಗೆ ಹಂಚಿಕೊಂಡರೆ ಸಾಕು! ಒಡಹುಟ್ಟಿದವರೆಲ್ಲಾ ಪ್ರೀತಿಪಾತ್ರರಿರಬೇಕೆಂದಿಲ್ಲ. ನಿಮಗೆ ಕಷ್ಟ ಬಂದಾಗಲೇ ಪ್ರೀತಿಪಾತ್ರರು ಯಾರೆಂದು ತಿಳಿವುದು. 

ಹಿತಶತ್ರುಗಳ ಬಳಿ ಖುಷಿ ಹೇಳ್ಕೊಂಡಿಲ್ಲ ಅಂದ್ರು ಪರವಾಗಿಲ್ಲ, ಕಷ್ಟ ಹೇಳಿಕೊಳ್ಳಿ. ಹಾಗಾದ್ರೆ ಕಷ್ಟ ಯಾಕೆ ಹೇಳ್ಕೊಬೇಕು? ಈ ಆಂಗ್ಲ ವಾಕ್ಯವನ್ನು ಓದಿ ನಿಮಗೆ ತಿಳಿಯುತ್ತದೆ!

"At your lowest, you realize a lot!"

ಹೌದು! ನಿಮ್ಮ ಬದುಕು ನೆಲಕಚ್ಚಿದಾಗಲೇ ನಿಮಗೆ ಎಲ್ಲಾ ತಿಳಿವುದು ಮತ್ತು ಜ್ಞಾನೋದಯವಾಗುವುದು. ಆಗಲೇ ಜೀವನದ ನೈಜ ಚಿತ್ರಣ ಹೊರಗೆ ಬರುವುದು! ನನಗೆ ಇದರ ಕಠಿಣ ಅನುಭವವಾಗಿದೆ. ಆವಾಗಲೇ ನಿಮಗೆ ತಿಳಿವುದು "ಯಾರು ನೈಜ ಬಂಧುಗಳು ಯಾರು ಹಿತಶತ್ರುಗಳು ಎಂದು" :-(. ನನಗೆ ಇದರ ಅನುಭವ ಬಹಳಷ್ಟು ಆಗಿದೆ. ಅತಿಯಾದ ನೋವನ್ನು ಅನುಭವಿಸಿದ್ದೇನೆ, ಈಗಲೂ ಅನುಭವಿಸುತ್ತಿದ್ದೇನೆ.

೫ ಮತ್ತು ೧೬ ವರುಷದ ಮಕ್ಕಳ ಮಧ್ಯೆ ಹೋಲಿಕೆ ಮಾಡಿ, ೫ ವರ್ಷದ ಮಕ್ಕಳನ್ನು ದೂಷಿಸುವುದನ್ನು, ಗೇಲಿಮಾಡುವ ಮತ್ತು ಕಡೆಗಣಿಸುವ ರಕ್ತ ಸಂಬಂಧಿಗಳನ್ನು ಕಂಡಿದ್ದೇನೆ. ರಕ್ತಸಂಬಂಧಗಳೂ ಕೂಡಾ ದುಡ್ಡಿಗೆ ಮಾತ್ರ ಬೆಲೆ ಕೊಡುವವರೆಂದು ದೇವರು ನನಗೆ ಮನದಟ್ಟು ಮಾಡಿದ್ದಾರೆ. ಇಂತಹವರು ನಾವು ನಗುವುದನ್ನು ಕಂಡಾಗ ಅಥವಾ ಖುಷಿಯಾಗಿದ್ದಾಗ ಅವರ ಅಸೂಯೆ, ತಾರತಮ್ಯ ಇಮ್ಮಡಿಯಾಗುತ್ತದೆ. ಪಾಪ ೫ ವರ್ಷದ ಮಕ್ಕಳಿಗೇನು ತಿಳಿಯಬೇಕು. ಕಷ್ಟ ಕಾಲದಲ್ಲಿ ಎಲ್ಲದಕ್ಕೂ ಅವರ ಬೆನ್ನೆಲುಬಾಗಿ ಇದ್ದು ಕರ್ತವ್ಯ ನಿರ್ವಹಿಸಿದಕ್ಕಾಗಿ ನನ್ನ ಕಷ್ಟಕಾಲದಲ್ಲಿ ಲೆಕ್ಕ ಇಟ್ಟುಕೊಂಡು ಬೆನ್ನಿಗೆ ಚೂರಿ ಇಟ್ಟರು. ಎಲ್ಲವೂ ಹಿಂದಿನ ಜನ್ಮದ ಪಾಪವೆಂದು ತಿಳಿದುಕೊಳ್ಳುವುದು. ಹಾಗಂತ ಸುಮ್ಮನಿರದೆ ಮುಂದಿನ ಜಾಗ್ರತೆ ನಮ್ಮದಾಗಿರಬೇಕು.

ಕೊನೆಯದಾಗಿ ಶೇಕಡಾ ೫ ಸಮ್ಮತಿ ಶತ್ರುಗಳಿಗೆ ಮಾತ್ರ ಸೀಮಿತ. ನಿಮಗೆ ಗೊತ್ತಿರುವ ಶತ್ರುಗಳ ಮುಂದೆ ಮಾತ್ರ  ಕೃತಕವಾದರೂ ನಗುನಗುತ್ತಾ ಬದುಕಿ! ಶತ್ರುಗಳಿಗಿಂತ ಹಿತಶತ್ರುಗಳು ಬಹಳ ಅಪಾಯ ತಂದೊಟ್ಟುತ್ತಾರೆ. ಯಾವಾಗ ಕಷ್ಟ ಇರುವುದೋ ಆವಾಗಲೇ ಕೈ ಬಿಡುತ್ತಾರೆ (ನಿಮ್ಮ ರಕ್ತಸಂಬಂಧಿಗಳೇ ಹೆಚ್ಚಾಗಿ!). ಕೊನೆಗೂ ಉಳಿಯುವುದು ಶ್ರೀ ಕೃಷ್ಣನ ಕೃಪೆ ಮಾತ್ರ!

ಚಿತ್ರ ತೆಗೆದಿದ್ದು, ಉಪ್ಪಿನಂಗಡಿ ಬಳಿ. ಉಪ್ಪಿನಂಗಡಿ -ಸಕಲೇಶಪುರ ರಸ್ತೆ ಗಬ್ಬೆದ್ದು ಹೋಗಿದೆ. ಉಪ್ಪಿನಂಗಡಿಯಿಂದ ಗುಂಡ್ಯದವರೆಗೆ ಅಲ್ಲಲ್ಲಿ ರಸ್ತೆ ಸರಿ ಇದೆ, ಹೊಸ ರಸ್ತೆಯು ಆಗುತ್ತಿದೆ. ಆದರೆ ಶಿರಾಡಿ ಘಾಟಿ ರಸ್ತೆ ಸಂಪೂರ್ಣ ನಾಶವಾಗಿದೆ. ಎಲ್ಲಾ ಅಲ್ಲ ಮಾರಾಯ್ರೆ, ಕೊನೆಯ ೧೫ ಕಿ.ಮೀ ಮಾತ್ರ. ಇನ್ನೇನು ಸಲೀಸಾಗಿ ಕಾರು ಸಂಚರಿಸುವಾಗ, ಕೊನೆಯ ೧೫ ಕಿ.ಮೀ ಕಂಟಕವಾಗಿ ಎದುರುಗೊಳ್ಳುತ್ತದೆ. ಜೀವನದಲ್ಲಿ ಕಷ್ಟಗಳೂ ಹಾಗೆ! ಎಲ್ಲವು ಸುಗಮವಾಗಿ ಸಾಗುವಾಗ ಒಮ್ಮೆಲೇ ಮೈಮೇಲೆ ಕಷ್ಟಗಳು ಬರುತ್ತವೆ. ಕೆಲವನ್ನು ತಪ್ಪಿಸಬಹುದು ಆದರೆ ಹಲವನ್ನು ದಾಟಲೇಬೇಕು, ಶಿರಾಡಿ ಘಾಟಿ ರಸ್ತೆಯಂತೆ. ಕಡೆಯ ೧೫ ಕಿ.ಮೀ ಕ್ರಮಿಸಲು ಹರಸಾಹಸವೇ ಪಡಬೇಕು. ಎಲ್ಲೂ ರಸ್ತೆ ಸರಿ ಇಲ್ಲ. ಧೂಳಾಗಲಿ, ಮಳೆಯಾಗಲಿ, ಹೊಂಡವಾಗಲಿ, ರಸ್ತೆ ದಾಟದೆ ಬೇರೆ ಆಯ್ಕೆಯೇ ಇಲ್ಲ.

ಶ್ರೀ ಕೃಷ್ಣನ ದಯೆಯಿಂದ ಒಡಹುಟ್ಟಿದವರು ಕೊಡುವ ನೋವನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಾಗಿದೆ.  ಆಟೋದ ಬ್ಯಾಕೆಂಡ್ ಬರಹ ಹಲವು ದುಃಖದ ಸಮಯಗಳನ್ನು ನೆನಪಿಸಿತು. ದುಃಖಪಟ್ಟವರಿಗೆ ತಿಳಿದಿದೆ ಅದರ ನೋವಿನ ಬೆಲೆ :-(. ಇಷ್ಟು ಸಾಕು ಬಿಡಿ ಸಧ್ಯಕ್ಕೆ!

No comments:

Post a Comment

Printfriendly

Related Posts Plugin for WordPress, Blogger...