ಬಹಳಷ್ಟು ವಾಟ್ಸಾಪ್ ಗುಂಪುಗಳು ಇರುವುದೇ ಸುಮ್ಮನೆ ಸುಪ್ರಭಾತ ಸಂದೇಶ ಕಳಿಸಲು ಅನ್ನಿಸುತ್ತದೆ. ಬಹಳಷ್ಟು ಬಾರಿ ಈ ಗುಡ್-ಮಾರ್ನಿಂಗ್ ಸ್ಪಾಮ್ ಇಂದಾಗಿ ಬೇಕಾಗಿರುವ ಸಂದೇಶಗಳು ಮಿಸ್ ಆಗುವುದು ನೋಡಿದ್ದೇವೆ. ಗುಡ್-ಮಾರ್ನಿಂಗ್ ಸಂದೇಶಗಳು ಹೇಗಿರುತ್ತದೆ ಅಂದರೆ ಸೂರ್ಯ ಬರೋಕ್ಕಿಂತ ಮುಂಚೆನೇ ವಕ್ಕರಿಸುತ್ತವೆ. ನನ್ನಂತವರು ಸೂರ್ಯ ಪ್ರಕಾಶ ಬೀರುವ ನಂತರವೇ ಅಂತರ್ಜಾಲ ಆನ್ ಮಾಡುವುದರಿಂದ ನನಗೆ ಅಷ್ಟೊಂದು ಮೆಸೇಜ್-ಗಳು ಪ್ರಭಾವ ಬೀರುವುದಿಲ್ಲ. ಆದರೆ ಗುಡ್-ಮಾರ್ನಿಂಗ್ ಸಂದೇಶಗಳು ತುಂಬಿ ತುಂಬಿ ಕೊನೆಗೆ ವಾರದ ಅಂತ್ಯದಲ್ಲಿ ಗ್ರೂಪ್ ಚಾಟ್ ಗಳನ್ನೂ ಡಿಲೀಟ್ ಮಾಡುವುದೇ ಕೆಲಸವಾಗಿಬಿಟ್ಟಿದೆ!
ಬೇಗ ಏಳಲೆಂದು ಮಡದಿ ಮೊಬೈಲ್ ನಲ್ಲಿ ಅಲಾರ್ಮ್ ಹಚ್ಚುತ್ತಾಳೆ. ಕೆಲವೊಮ್ಮೆ ನನಗೆ ಅದರಿಂದ ನಿದ್ದೆ ಕೆಟ್ಟಿದ್ದೂ ಉಂಟು. ನಾನೂ ಅದೇ ಸಮಯಕ್ಕೆ ಏಳುವುದ್ದಾದರೂ ಕೆಲವೊಮ್ಮೆ ರಜಾ ದಿನಗಳಲ್ಲಿ ಅದನ್ನು ಆಫ್ ಮಾಡಲು ಮರೆತಿರುತ್ತಾಳೆ. ಆ ದಿನ ನಿದ್ರಾಭಂಗವಾದರೆ ತಲೆ ಕೆಟ್ಟು ಹೋಗುವುದುಂಟು! ಅದಕ್ಕೆ ಒಮ್ಮೆ ಹೇಳಿಯೇ ಬಿಟ್ಟೆ "ನಿನಗ್ಯಾಕೆ ಅಲಾರ್ಮ್ ಮಾರಾಯ್ತಿ! ಬೆಳಗ್ಗೆ ಏಳಿಸಲು ಬ್ರಾಹ್ಮಿ ಮುಹೂರ್ತದ ಪವಿತ್ರ ಗುಡ್-ಮಾರ್ನಿಂಗ್ ವ್ಯಾಟ್ಸಾಪ್ ಸಂದೇಶಗಳು ಬರುತ್ತವೆ. ಸುಮ್ಮನೆ ಡಾಟಾ ಆನ್ ಮಾಡಿ ನೋಟಿಫಿಕೇಶನ್ ಕೇಳಿಸಿದರೆ ಆಯ್ತು. ಎಚ್ಚರ ಆಗಿ ಬಿಡುತ್ತೆ. ಹಲವಾರು ಮಂದಿ ಐದೈದು ನಿಮಿಷ ಬಿಟ್ಟು ಕಲಿಸುವುದರಿಂದ, snooze ಕೂಡಾಅದರಲ್ಲೇ ಅಂತರ್ಗತವಾಗಿದೆ ಕೂಡಾ! ನಿನ್ನನು ಎಬ್ಬಿಸಲು ಸಾಕು. ಸುಮ್ಮನೆ ಅಲಾರ್ಮ್ ಅಂತಾ ಎಲ್ಲರಿಗೂ ಕಿರಿಕಿರಿ ಯಾಕೆ" ಎಂದಿದ್ದೆ ತಡ ಮಡದಿ ಮುಖ ಸಿಂಡರಿಸಿಕೊಂಡು ಹೋದಳು.
ಗುಡ್-ಮಾರ್ನಿಂಗ್ ಸಂದೇಶಗಳೇನೂ ಕಡಿಮೆಯಾಗಲಿಲ್ಲ, ಅಲಾರ್ಮ್ ಕೂಡಾ ಬಂದ್ ಆಗಲಿಲ್ಲ. ಬಿಡಿ ಬೆಳಗ್ಗೆ ಬೇಗ ಏಳುವುದರಿಂದ ಇಂತಹ ಸುಂದರವಾದ ಸೂರ್ಯೋದಯವನ್ನು ಸವಿಯುವ ಭಾಗ್ಯವಿದೆ ನೋಡಿ!
No comments:
Post a Comment