ಹಬ್ಬ ಜೋರಾಗೆ ನಡೆಯುತ್ತಿದೆ. ಯಾರು ಏನು ಹೇಳಿದರೂ ಕಿವಿ ಒಡೆಯುವಷ್ಟು ಪಟಾಕಿಗಳ ಚೀರಾಟ. ಇರಲಿ ಬಿಡಿ ಹಬ್ಬ ಜೋರಾಗೆ ನಡೆಯಲಿ. ಎಲ್ಲ ಪ್ರವಚನಗಳು ಒಂದೇ ಧರ್ಮದವರಿಗೆ ಯಾಕೆ ಅಂತಾ ಜನ ಕೂಡಾ ಬೊಂಬಾಟ್ ಆಗೇ ಪಟಾಕಿ ಸಿಡಿಸುತ್ತಿದ್ದಾರೆ. ದನ, ಕುರಿ, ಮೇಕೆ ತಿನ್ನುವವರು ಬೀದಿ ನಾಯಿಗಳ ಪರವಾಗಿ ಮಾತನಾಡುತ್ತಾರೆ. ಬೀದಿ ನಾಯಿಗಳು ವರ್ಷಪೂರ್ತಿ ತೊಂದರೆ ಕೊಡುವುದು ಯಾರಿಗೂ ತಿಳಿಯುವುದಿಲ್ಲ. ಬೆಳ್ಳಂಬೆಳ್ಳಗ್ಗೆ ಶಾಂತಿದೂತರಿಗಿಂತ ಮೊದಲೇ ಊಳಿಡಲು ಶುರು ಮಾಡಿ ನಿದ್ದೆಯನ್ನೆಲ್ಲ ಕೆಡಿಸುತ್ತವೆ. ನಿದ್ದೆ ಬೇಡ ವಾಕಿಂಗ್ ಹೋಗೋಣವೆಂದರೆ ಅಲ್ಲೂ ಬೊಗಳಿ ಅಟ್ಟಿಸಿಕೊಂಡು ಬರುತ್ತವೆ. ಒಟ್ಟಿನಲ್ಲಿ ಇವುಗಳ ಸಮಸ್ಯೆಯೇ ಹೆಚ್ಚು. ಅದನೆಲ್ಲಾ ಬುದ್ಧಿವಂತರಾದ ಮನುಷ್ಯರು ಸಹಿಸಿಕೊಳ್ಳಬೇಕು ಅನ್ನೋದು ಬುದ್ಧಿಜೀವಿಗಳ ಕಿವಿಮಾತು. ಇರಲಿ ಬಿಡಿ ಪಟಾಕಿ ಹೊಡೆಯೋರು ಮಾತ್ರ ಹೆಚ್ಚಲಾಗುತ್ತಲೇ ಇದೆ ಬುದ್ಧಿಜೀವಿಗಳ ಉಪದೇಶದಿಂದ.
ಇಂದು ಹಬ್ಬಕ್ಕಾಗಿ ಹೂವು ತಗೊಳ್ಳಲೆಂದು ಮೈ ರೋಡ್ ಪೂರಾ ಒದ್ದಾಡಿದ್ದೆ ಒದ್ದಾಡಿದ್ದು. ಕೆಲವರು ಬಾಯಿಗೆ ಬಂದ ರೇಟ್ ಹೇಳುತ್ತಿದ್ದರು. ಕಡೆಗೆ ಒಂದು ಗಾಡಿಯ ಬಳಿ ನಿಂತು ಹೂವಿನ ದರ ಕೇಳಿದೆವು. ಅಲ್ಲಿದ್ದ ಹೆಂಗಸು ಒರಟಾಗಿ ಕಾಲು ಕೆ.ಜಿ ೮೦ ರೂಪಾಯಿ. ಹೂವು ಕೂಡಾ ಕಪ್ಪಾಗಿತ್ತು. "ಅಲ್ಲಕ್ಕ ಹೂವು ಕಪ್ಪಾಗಿದೆ ಅಲ್ವಾ ಹಬ್ಬಕ್ಕೆ ಹೇಗೆ ಉಪಯೋಗ ಮಾಡೋದು" ಅಂತಾ ಮಡದಿ ಕೇಳಿದಳು. ಕೆಲವರು ಬೇರೆ ಸ್ಟಾಕ್ ಇಟ್ಟುಕೊಂಡಿರುತ್ತಾರೆ. ಹಾಗೆ ಇವಳ ಬಳಿಯೂ ಇರಬಹುದು ಅಂದುಕೊಂಡಿದ್ದೆವು. "ಸೇವಂತಿಗೆ ಎಷ್ಟಕ್ಕ" ಎಂದು ಕೇಳಿದಾಗ, "ಚೆನ್ನಾಗಿಲ್ವಲ್ಲ ಹೋಗಿ..." ಎಂದು ಒರಟಾಗಿ ಹೇಳೋದೇ? ಅಬ್ಬಬ್ಬಾ ವ್ಯಾಪಾರ ಮಾಡುವ ಪರಿಯೇ. ಅದಿಕ್ಕೆ ಅವಳ ಗಾಡಿ ಕಾಲಿ ಹೊಡೆಯುತ್ತಿತ್ತು. ವಾಹನದ ದಟ್ಟಣೆಯ ಧೂಳು ಮಾತ್ರ ಹೂವಿನ ಬಳಿ ಬರುತ್ತಿದ್ದವು.
ಅಲ್ಲೇ ಎದುರುಗಡೆ ಇದ್ದ ಗಾಡಿ ಬಳಿ ತೆರಳಿದೆವು. ಹೂವು ಅಲ್ಲಿ ಕೂಡಾ ಕಪ್ಪಾಗಿತ್ತು. ನಗುನಗುತ್ತಲೇ ಹೂವು ಮಾರುವವಳು ನಮ್ಮನ್ನು ಸ್ವಾಗಿತಿಸಿ, "ಏನ್ ಕೊಡ್ಲಿ ಅಮ್ಮಾ" ಎಂದು ವಿನಯದಿಂದ ನುಡಿದಳು. "ಕಪ್ಪಾಗಿದೆ ಅಲ್ವಾಮ್ಮಾ ಅಂದಾಗ, ಮಳೆ ಕಣಮ್ಮ ಜೊತೆಗೆ ಸಂಜೆ ಆಯ್ತಲ್ವಾ ಅದಿಕ್ಕೆ ಕಪ್ಪಾಗಿದೆ" ಎಂದು ಮಾರುತ್ತರ ನೀಡಿದಳು. "ನೀವು ಬೆಳಗ್ಗೆ ಟೈಮ್ ನಲ್ಲಿ ಬನ್ನಿ ಒಳ್ಳೆ ಫ್ರೆಶ್ ಹೂವಾ ಇರುತ್ತೆ" ಎಂದು ನಯವಾಗಿ ಉತ್ತರಿಸಿದಳು. ನಮಗೂ ಖುಷಿಯಾಗಿ ಹೂವು ತೆಗೆದುಕೊಂಡು ಹೋದೆವು.
ಈ ಎರಡು ಸಂಭಾಷಣೆ ಹೀಗೆ ಎನ್ನಿಸಿತು? ವಿನಯವಂತಿಕೆ ಇರಬೇಕಲ್ಲವೇ? ಮೊದಲನವಳಿಗೆ ಸುಸ್ತಾಗಿದೆಯೋ ಅಥವಾ ವ್ಯಾಪಾರ ಬೇಕಾದಷ್ಟು ಆಗಿದೆಯೋ? ಅಥವಾ ಮತ್ತೇನೋ ತಿಳಿದಿಲ್ಲ. ಹಬ್ಬದ ದಿನ ಒಂದೆರಡು ಒಳ್ಳೆಯ ಮಾತನ್ನು ಆಡಿ್ದರೆ ಮುಂದಿನ ಹಬ್ಬದವರೆಗೂ ಒಳ್ಳೆಯದಾಗುತ್ತೆ ಅನ್ನುವ ನಂಬಿಕೆ. ಇಲ್ಲಿ ಯಾರಿಗೆ ಒಳ್ಳೆಯದಾಗುತ್ತೋ ಇಲ್ಲವೋ ತಿಳಿದಿಲ್ಲ ಆದರೆ ನಾವಂತೂ ಮತ್ತೆ ಅವಳ ಹೂವಿನ ಅಂಗಡಿ ಬಳಿ ಎಂದೂ ಸುಳಿಯಲಿಲ್ಲ.
No comments:
Post a Comment