ಜೋಗದಲ್ಲಿ ಮುದ್ದಾದ ಬೆಕ್ಕನ್ನು ಕಂಡಾಗ ನಮ್ಮ ಮನೆಯ ಅಚ್ಚುಮೆಚ್ಚಿನ ಬೆಕ್ಕು ಲಕ್ಷ್ಮೀಯ ನೆನಪು ಕಾಡಿತು. ಆ ನೆನಪಿಗಾಗಿ ಈ ಸಣ್ಣ ಗೀಚು.
ಸ್ವಲ್ಪ ವರ್ಷಗಳ ಹಿಂದೆ ಮೈಸೂರು ಬಿಟ್ಟು ಊರಿಗೆ ಬಂದಾಗ, ನಮ್ಮ ಜೊತೆ ನೀನು ಕೂಡ ಮನೆ ಸದಸ್ಯೆಯಾದೆ. ಎಲ್ಲಿಂದಲೋ ಬಂದವಳು ಕಡೆಗೆ ನಮ್ಮ ಮನೆಯೇ ನಿನಗೆ ವಾಸಸ್ಥಳವಾಯಿತು. ಬೆಕ್ಕುಗಳೆಂದರೆ ಸಿಟ್ಟಾಗುತ್ತಿದ್ದ ಅಪ್ಪನ ಮನ ಗೆದ್ದೆ. ಸಣ್ಣವಳಿದ್ದಾಗ ನಿನ್ನ ಜೊತೆ ಆಡಿದ್ದು ಈಗಲೂ ನೆನಪಿದೆ. ಮನೆ ಮಂದಿ ತಿನ್ನುವುದೆಲ್ಲವನ್ನೂ ನೀನು ತಿನ್ನುತ್ತಿದ್ದೆ. ನಮ್ಮ ಮನೆಯಲ್ಲಿ ಮಾಂಸಾಹಾರ ಇಲ್ಲದಿದ್ದರೂ ಬೇಜಾರು ಪಟ್ಟುಕೊಳ್ಳದೆ ಅನ್ಯರ ಮನೆಯಲ್ಲಿ ತಿಂದು ಮತ್ತೆ ಮನೆಗೆ ವಾಪಾಸಾಗುತ್ತಿದ್ದೆ. ಮನೆಯಲ್ಲಿ ಇರುವಷ್ಟು ದಿನ ಒಂದು ದಿನವೂ ಹಾಲನ್ನು ಕದ್ದು ಕಳ್ಳ ಬೆಕ್ಕು ಎಂದೆಣಿಸಿಕೊಳ್ಳಲಿಲ್ಲ. ಅಮ್ಮ ತೋಟಕ್ಕೆ ಹೋದಾಗ ಅವರ ಹಿಂದೆಯೆ ಹೋಗುತ್ತಿದ್ದೆ. ಆರು ಬಾರಿ ಅಮ್ಮ ಕೂಡ ಆಗಿದ್ದೆ. ನಿನ್ನ ಒಂದು ಮರಿ, ಗಂಡು ಬೆಕ್ಕಿನ ಅಟ್ಟಹಾಸಕ್ಕೆ ಬಲಿಯಾದಾಗ ಮನೆಯವರಿಗೆ ಆದ ಬೇಸರ ಅಷ್ಟಿಷ್ಟಲ್ಲ. ಆದರೆ ನಿನ್ನ ಮಕ್ಕಳೋ, ಒಂದು ಸರಿಯಾಗಿ ಬದುಕದೆ ನಿನಗಿಂತ ಮೊದಲೇ ತೀರಿಕೊಂಡವು. ಆದರೂ ನೀನು ಗಟ್ಟಿಮುಟ್ಟಾಗಿದ್ದೆ. ಕಾಲಾನಂತರ ನಿನಗೇನಾಯಿತೋ ಕಣ್ಣು ಮಂದವಾಗತೊಡಗಿತು. ಮನೆ ಬಿಟ್ಟು ಹೋಗುತ್ತಲೇ ಇರಲಿಲ್ಲ. ಕಣ್ಣು ಮಂದವಾಗಿದ್ದರೂ ಗುಂಡನನ್ನು ಅದ್ಯಾಕೆ ಹೆದರಿಸುತ್ತಿದ್ದೆಯೋ ನಾ ಕಾಣೆ. ಎಷ್ಟೇ ಕಷ್ಟವಾದರೂ ಮನೆಯೊಳಗೆ ಹೇಸಿಗೆ ಮಾಡುತ್ತಿರಲಿಲ್ಲ. ಕಣ್ಣು ಸರಿಯಾಗಿಲ್ಲದಿದ್ದರೂ ಮನೆಯ ಪರಿಚಯ ನಿನಗೆ ಚೆನ್ನಾಗೆ ಅರಿವಿತ್ತು. ಮನೆಯ ಯಾವುದೇ ಭಾಗಕ್ಕೂ ಯಾವುದೇ ಅಂಜಿಕೆಯಿಲ್ಲದೆ, ಸಂದೇಹವಿಲ್ಲದೆ ಹೋಗುತ್ತಿದ್ದೆ.
ಅಂದು ಶುಕ್ರವಾರ ರಾತ್ರಿ ಮೇ ೨೨, ೨೦೦೯. ಸ್ವಲ್ಪ ಮೊಂಡುತನ ತೋರಿಸುತ್ತಿದ್ದ ನಿನ್ನನ್ನು ಕಿರಿಯಕ್ಕ ಸಣ್ಣಗೆ ಜೋರು ಮಾಡಿದಳೆಂದು ಪಂಪ್-ಹೌಸ್ ತನಕ ಓಡಿ ಹೋದೆ. ಅಲ್ಲಿ ನಾಯಿಗಳು ಬೊಗಳುತ್ತಿದ್ದವು. ನಿನಗೆ ಕಣ್ಣು ಬೇರೆ ಕಾಣಿಸುತ್ತಿರಲಿಲ್ಲ ಆದರೂ ಅಲ್ಲಿ ತನಕ ಯಾಕೆ ಹೋದೆಯೋ ಯಾರಿಗೆ ಗೊತ್ತು. ಹೆಚ್ಚೆಂದರೆ ಮನೆಯ ಹೊರಗೆ ಹೋಗುತ್ತಿದ್ದೆ. ಬೆಳಗ್ಗೆ ಪೂರ್ತಿ ಹುಡುಕಿದರೂ ನಿನ್ನನ್ನು ನೋಡಲಾಗದೆ ಅಮ್ಮ ತಳಮಳಿಸುತ್ತಿದ್ದರು. ಕಡೆಗೆ ನೀನು ಸಿಕ್ಕಿದ್ದು ಹೆಣವಾಗಿ ಪಂಪ್-ಹೌಸ್ ಬಳಿ. ನಾಲ್ಕು ವರ್ಷ ನಮ್ಮ ಮನೆಯ ಮುದ್ದಿನ ಸದಸ್ಯೆಯಾಗಿ ಇದ್ದವಳು, ತೀರಿಕೊಂಡಾಗ ನಮಗೆ ಆದ ದುಃಖ ಅಷ್ಟಿಷ್ಟಲ್ಲ. ಈಗಲೂ ನಿನ್ನ ನೆನಪು ನಮಗೆ ಆಗಾಗ ಕಾಡುತ್ತದೆ.
ಲಕ್ಷ್ಮೀ |

No comments:
Post a Comment