Saturday, October 13, 2018

ಗುಂಡನ ಪ್ರಯಾಣದ ಮುನ್ನ

ಊರಿಗೆ ತೆರಳಲು ಅತ್ಯುತ್ತಮ ಮಲಗುವ ಬಸ್ಸಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಗುಂಡ. ಅಂದಹಾಗೆ ಮಲಗುವ ಬಸ್ಸೆಂದರೆ ಮಲಗಿಕೊಳ್ಳಲು ಇರುವ ಆಸನದ ಬಸ್ಸು. ಬಸ್ಸು ಮಲಗಿದರೆ ಒಂದೋ ನಾವು ಕೂಡ ಶಾಶ್ವತವಾಗಿ ಮಲಗಿಕೊಳ್ಳಬೇಕಾಗುತ್ತದೆ ಇಲ್ಲಾ ಬೆಂಗಳೂರಿಲ್ಲೆ ಉಳಿದುಕೊಳ್ಳಬೇಕಾಗುತ್ತದೆ.

ರಾತ್ರಿಯ ಊಟೋಪಚಾರಗಳನ್ನು ಮುಗಿಸಿ ಬಸ್ಸು ಬರುವ ಸ್ಥಾನಕ್ಕೆ ಗುಂಡ ೧೦ ನಿಮಿಷ ಮುಂಚಿತವಾಗಿ ಬಂದು ಸೇರಿದ್ದ. ತಲುಪುವಷ್ಟರಲ್ಲಿ ಅವನ ತರಂಗ ವಾಣಿ ಹಾಡಲು ಶುರು ಮಾಡಿತು. ಅವನು ಎಣಿಸಿದಂತೆ ಬಸ್ಸಿನವರು ಕಾಲ್ ಮಾಡಿದ್ದರು.

"ಹೇಲೋ ಗುಂಡ ಅವರಾ. ನಾವು ಕ್ಷೇಮ ಟ್ರಾವೆಲ್ಸ್ ಇಂದ ಮಾತನಾಡುತ್ತಿರುವುದು. ಎಲ್ಲಿದ್ದೀರಾ ನೀವು ಈಗ?"

"ನಾನು ಸ್ಟಾಪಿನಲ್ಲಿ ನಿಂತಿದ್ದೇನೆ" ಅಂದ ಗುಂಡ.

"ಒಹ್ ಹೌದಾ ೫ ನಿಮಿಷ ಬರ್ತೀವಿ" ಎಂದು ಮೊಬೈಲ್ ಕೆಳಗಿಟ್ಟ ಡ್ರೈವರ್.

ಇತ್ತ ಬಂದು ಸುಮಾರು ೧೫ ನಿಮಿಷ ಕಳೆದಿರಬೇಕು ಬಸ್ಸಿನ ಪತ್ತೆಯೇ ಇಲ್ಲ. ಸಣ್ಣಗೆ ಸುರಿಯುತ್ತಿದ್ದ ಮಳೆಯಿಂದಾಗಿ ಟ್ರಾಫಿಕ್ ಬೇರೆ ಇಲ್ಲ. ಎಲ್ಲಿ ಹೋದನಪ್ಪ ಇವನು! ಕ್ಷೇಮವಾಗಿದೆಯಲ್ಲ ಬಸ್ಸು ಎಂದು ಮನಸ್ಸಿನಲ್ಲಿ ಗೋಳಾಡಿಕೊಂಡ ಗುಂಡ. ಫೋನ್ ಮಾಡಿದ ೨೦ ನಿಮಿಷದ ಬಳಿಕ ಬಸ್ಸು ಗುಂಡನಿರುವ ಜಾಗಕ್ಕೆ ಬಂದಿತು.

"ಏನ್ ಸರ್ ೫ ನಿಮಿಷ ಹೇಳಿ ೨೦ ನಿಮಿಷ ಜಾಸ್ತಿ ಆಯ್ತು. ಮಳೆಯಲ್ಲಿ ಫುಲ್ ಒದ್ದೆ ನೋಡಿ" ಎಂದು ತಲೆ ಒರೆಸಿಕೊಳ್ಳುತ್ತ ಬೇಸರಿಸಿದ ಗುಂಡ.

"ಏನ್ ಮಾಡೋದು ಸರ್ ಮಳೆಯಿಂದಾಗಿ ಫುಲ್ ಟ್ರಾಫಿಕ್ ಜಾಮ್. ಅದಿಕ್ಕೆ ನೋಡಿ ತಡವಾಯ್ತು" ಎಂದು ನೆಪ ಉದುರಿದನು ಡ್ರೈವರ್.

ದೂರದವರೆಗೆ ಕಣ್ಣು ಹಾಯಿಸಿದರೂ ಬೆಳಕಲ್ಲಿ ಮುಳುಗುವ ಬೆಂಗಳೂರಿನ ಇರುಳಿನ ರಸ್ತೆಗಳು, ಇಂದು ಮಳೆಯಿಂದಾಗಿ ಕಪ್ಪಾಗಿತ್ತು. ನಮ್ಮ ಇಂಟಿಲೈಜೇಂಟ್ ಗುಂಡ ಒಂದು ಹೆಜ್ಜೆ ಮುಂದೆ ಹೋಗಿ ಗೂಗಲ್ ಮ್ಯಾಪ್ ನಲ್ಲಿ ಬಸ್ ಹೊರಡುವ ಜಾಗದಿಂದ ತಾನು ಬರುವ ಸ್ಥಳಕ್ಕೆ ದಾರಿ ಹುಡುಕಿದ. ಅರೆರೆ ಎಲ್ಲಾ ರಸ್ತೆಗಳು ಗ್ರೀನ್. ಆಗಲೇ ತಿಳಿದದ್ದು ಬಸ್ಸಿನವರ ಲಾಜಿಕ್ ಗುಂಡನಿಗೆ! ಮಳೆರಾಯ ಪ್ರತ್ಯಕ್ಷವಾದರೆ "ನಿನ್ನ ಬಸ್ಸನ್ನೇ ಮುಳುಗಿಸುವಷ್ಟು ಮಳೆ ಸುರಿಸುತ್ತೇನೆ" ಎಂದು ಡ್ರೈವರ್ ಗೆ  ಶಾಪ ಹಾಕುತ್ತಿದ್ದನೋ ಎಂದು ಮನದಲ್ಲೇ ಎನಿಸಿಕೊಂಡ ಗುಂಡ.

ಮುಂದಿನ ಬಾರಿಯೂ ಹೀಗೆಯೇ ಆಯಿತೆನ್ನಿ. ಗುಂಡ ತನ್ನ ಸ್ಥಳಕ್ಕೆ ಬೇಗ ತಲುಪಿದ್ದನು. ಸ್ವಲ್ಪ ಟ್ವಿಸ್ಟ್ ಇರಲಿ ಎಂದು ಡ್ರೈವರ್ ನ ಕರೆ ಬಂದಾಗ "ಬರೋದು ಇನ್ನು ೧೦ ನಿಮಿಷ ಆಗುತ್ತದೆ" ಎಂದು ಮಿಥ್ಯ ನುಡಿದನು.

"ಏನ್ ಸರ್ ನಾವು ಬಂದಾಗಿದೆ. ಎಷ್ಟು ಹೊತ್ತು ನಿಮ್ಮನ್ನು ಕಾಯುವುದು. ಟ್ರಾಫಿಕ್ ಬೇರೆ ಜಾಸ್ತಿ" ಎಂದು ಜಬರ್ದಸ್ತ್ ನುಡಿದನು.

ಗುಂಡನಿಗೆ ಬಿಟ್ಟಿ  ಮನೋರಂಜನೆ ಮತ್ತು ಅವನ ಪತ್ತೇದಾರಿ ಕೆಲಸಕ್ಕೆ ಈ ಘಟನೆ ಪುಷ್ಟಿ ನೀಡಿತ್ತು. ಗೊತ್ತಿಲ್ಲದವರಾಗಿದ್ದರೆ ಒಡೋಡುತ್ತಾ ಬರುತ್ತಿದ್ದರೇನೋ. ಬಹುಶ: ಸಣ್ಣ ದೂರಕ್ಕೂ ದುಬಾರಿ ರಿಕ್ಷಾ ಹಣ ಕೊಟ್ಟು ಬಂದರು ಆಶರ್ಯವಿಲ್ಲ.

ಅನಿವಾರ್ಯವಾಗಿ ಕೆಲವೊಮ್ಮೆ ಸ್ವಲ್ಪ ತಡವಾದರೂ ಆರಾಮಾಗಿ ತಲುಪುವ ನಿರ್ಧಾರಕ್ಕೆ ಬಂದ. ಯಾರೇನು ಬಿಟ್ಟು ಹೋಗುವುದಿಲ್ಲ ಅವಸರಿಸುವ ಅಗತ್ಯವೂ ಇಲ್ಲ ಎಂಬ ವಿಷಯವನ್ನು ತಿಳಿದುಕೊಂಡ ಗುಂಡ.

ಬಸ್ಸು ಹತ್ತುವಾಗ ಗುಂಡನಿಗೆ ಜೋರು ನಗು. ಬಹುಶಃ ಡ್ರೈವರ್ ಗು ಮನದಟ್ಟಾಗಿರಬೇಕು ಗುಂಡನ ತರ್ಲೆ!

No comments:

Post a Comment

Printfriendly

Related Posts Plugin for WordPress, Blogger...