Saturday, October 6, 2018

ಗುಂಡನ ಆಸಿಡ್ ಮಳೆ

ಮನೆಯಲ್ಲಾ ಧೂಳು ಮತ್ತೆ ಕೊಳೆ. ಶುಕ್ರವಾರ ಸಂಜೆ ಗುಂಡ ಮನೆಗೆ ತಲುಪಿದವನೆ, ದಿನಚರಿ ಮುಗಿಸಿ, ಪೊರಕೆ ಸೇವೆಗೆ ಅಣಿಯಾದ. ಗುಂಡ ಬಹಳ ಸೋಮಾರಿ. ಧೂಳಿನ ಮಧ್ಯ ಸೀನುತ್ತಿದ್ದರೂ ಗುಡಿಸಲು ಮೈ ಬಗ್ಗದು. ಬಚ್ಚಿಲು ಮನೆ ಕೆಸರಾಗಲು ಶುರುವಾಯಿತು. ಸರಕಾರಿ ಶೌಚಾಲಯಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಾಗ, ಗುಂಡನಿಗೆ  ಜ್ಞಾನೋದಯವಾಯಿತು. ಹೇಗೂ ಇನ್ನೆರಡು ದಿನ ರಜೆ, ಮಡದಿ ಬೇರೆ ಬೆಂಗಳೂರಿನಲ್ಲಿ ಇಲ್ಲ. ಸುಮ್ಮನೆ ವೀಕೆಂಡ್ ಹಾಳು ಮಾಡಬಾರದೆಂಬ ಕಾರಣಕ್ಕೆ ಶುಕ್ರವಾರ ಸಂಜೆಯೆ ಪೊರಕೆ ಹಿಡಿದಿದ್ದ.

ಗುಡಿಸಿ ಗುಡಿಸಿ ಸುಸ್ತಾಯಿತು ಗುಂಡನಿಗೆ. ಅಷ್ಟೊಂದು ಧೂಳು. ಎಷ್ಟೋ ಬಾರಿ ಸೀನುವುದಕ್ಕೆ ಬ್ರೇಕ್ ತಗೊಂಡಿದ್ದುಂಟು. ಸ್ವಲ್ಪ ಹೊತ್ತಿನ ಬಳಿಕ ಪಟ ಪಟ ಎಂದು ಮಳೆ ಬೀಳುವ ಶಬ್ಧ ಕೇಳಿತು ಗುಂಡನಿಗೆ. ಅಪಾರ್ಟಮೆಂಟಿನ ಕಸದಬುಟ್ಟಿಯನ್ನು ಮಳೆಯಿಂದ ರಕ್ಷಿಸಲು ಪ್ಲಾಸ್ಟಿಕ್ ಶೀಟ್ ಹಾಕಿದ್ದರು. ಅದರ ಮೇಲೆ ಮಳೆ ಸುರಿದಾಗ ಬರುವ ಶಬ್ಧ ಗುಂಡನ ಫ್ಲಾಟ್ ಗೆ ಸರಿಯಾಗಿ ಕೇಳುತ್ತಿತ್ತು. "ಅರೆರೆ ಇದ್ಯಾವ ಸೀಮೆ ಮಳೆಯಪ್ಪಾ! ಬೆಂಗಳೂರಿನಲ್ಲಿ ಯಾವಗ ಮಳೆ ಬರುತ್ತೋ ಹೇಳೋದೆ ಕಷ್ಟ. ವಾತಾವರಣ ಎಷ್ಟೊಂದು ಬದಲಾಗಿದೆ. ಭೂಮಿ ಬೆವತುಹೋಗಿದೆ. ಯಾವಾಗ ಸೆಖೆ, ಯಾವಾಗ ಚಳಿ ಹೇಳೋಕ್ಕೆ ಆಗಲ್ಲ. ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜನ ಈಗಲೇ ಎಚ್ಚೆತ್ತುಕೊಳ್ಳಬೇಕೆಂದು" ಮನದಲ್ಲಿ ಹೇಳಿಕೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದ ಗುಂಡ.

ಕೆಲವೇ ಸೆಕಂಡುಗಳ ಬಳಿಕ ಅವನಿಗೆ ಸುಟ್ಟ ವಾಸನೆ ಹರಡಲು ಪ್ರಾರಂಭವಾಯಿತು. "ಏನಪ್ಪಾ ಇದು ಆಸಿಡ್ ಮಳೆ ಬರ್ತಾ ಇದಿಯಾ! ಬೆಂಗಳೂರಿನ ಮಾಲಿನ್ಯ ಅತಿರೇಕವಾಗಿದೆ ಅನ್ಸುತ್ತೆ " ಅಂದುಕೊಂಡ ಗುಂಡ. ತದನಂತರ ಕೋಣೆಯೆಲ್ಲ ಹೊಗೆಯಾಡಲು ಪ್ರಾರಂಭವಾಯಿತು. "ಯಪ್ಪಾ ಇದೇನು ಆಸಿಡ್ ಮಳೆಗೆ ಭೂಮಿ ಕೂಡಾ ಸುಡುತ್ತಾ ಇದಿಯಲ್ಲ" ಅಂತ ನೋಡಲು ಬಾಲ್ಕನಿಗೆ ಓಡಿ ಬಂದ ಗುಂಡ. ಹೊರಗೆ ನೋಡಿದಾಗ, ಶುಭ್ರ ಆಕಾಶ, ಹುಣ್ಣಮೆ ಚಂದ್ರ ನಗುತ್ತಿದ್ದಾನೆ, ಒಂದೇ ಒಂದು ಹನಿ ನೀರು ಭೂಮಿಯ ಮೇಲೆ ಇರಲಿಲ್ಲ.

ಅಯ್ಯಯ್ಯೋ!! ಎಂದು ಚೀರುತ್ತಾ ಧರಧರನೇ ಅಡುಗೆ ಮನೆಗೆ ಓಡಿ ಹೋದ ಗುಂಡ. ಮಡದಿ ಇಲ್ಲದ್ದರಿಂದ ಬೆಳಗ್ಗೆ-ಸಂಜೆಯ ತಿಂಡಿ ಒಟ್ಟಿಗೆ ತಯಾರಿಸುತ್ತಿದ್ದ. ಧೂಳು ಹೊಡೆಯುವ ಗೋಜಿನಲ್ಲಿ  ಬಿಸಿ ಮಾಡಲು ಸ್ಟೌವ್ ಮೇಲಿಟ್ಟಿದ್ದ ಉಪ್ಪಿಟ್ಟು ಅವನಿಗೆ ಮರೆತೇ ಹೋಗಿತ್ತು. ಅವನಿಗೆ ಆಗಲೇ‌ ತಿಳಿದದ್ದು ಶಬ್ಧ ಮಾಡುತ್ತಿದ್ದದ್ದು ಬೇಯುತ್ತಿದ್ದ ಉಪ್ಪಿಟ್ಟು. ಉಪ್ಪಿಟ್ಟು ಅತಿಯಾದ ಶಾಖದಿಂದಾಗಿ ಸೀದುಹೋಗಿ ಹೊಗೆಯಾಡಲು ಶುರುಮಾಡಿತು. ಒಟ್ಟಿನಲ್ಲಿ ಉಪ್ಪಿಟ್ಟು ಮಾತ್ರ ಕೆಂಡವಾಗಿತ್ತು. ಆಸಿಡ್ ಮಳೆ ಬಂತೋ ಇಲ್ಲವೋ, ಇವನ ಅಡುಗೆ ಮನೆ ಮಾತ್ರ ಸಲ್ಫ್ಯೂರಿಕ್ ಆಸಿಡ್ ಗೆ ನೀರು ಬಿದ್ದಂತಾಗಿತ್ತು. ಧೂಳು ಹೊಡಿಯುವ ಜೊತೆ, ಬಾಣಲಿ ತಿಕ್ಕುವುದರಲ್ಲಿ ಗುಂಡನ ಸೇವೆ ರಾತ್ರಿಯವರೆಗೂ ನಡೀತಾ ಇತ್ತು. ಸುಸ್ತಾದ ಗುಂಡ ವಿಧಿಯಿಲ್ಲದೆ ಊಟವನ್ನು ಹೋಟೆಲ್ ಅಲ್ಲಿ ಉಣ್ಣಬೇಕಾಯಿತು!

No comments:

Post a Comment

Printfriendly

Related Posts Plugin for WordPress, Blogger...