Sunday, October 7, 2018

ಹಾಟ್ ಆಂಡ್ ಕೋಲ್ಡ್ ಸಂಭಾಷಣೆ

ವಸಂತ ಮಾಸವೆಂದರೆ ಕಾರ್ಯಕ್ರಮಗಳ ಸರಮಾಲೆ. ದಿವಸ ಏನಾದರೂ ಇರುತ್ತದೆ. ಮಕ್ಕಳಿಗೆ ರಜೆ ಬೇರೆ, ಆದರೆ ಗುಂಡನಿಗೆ ಸಜೆಯಾಗಿಬಿಟ್ಟಿತ್ತು. ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡೆ ಬೆಂಗಳೂರಿಗೆ ವಾಪಾಸ್ ಬಾ ಅಂತಾ ಮಡದಿ ನಿಂಗಿಗೆ  ತಾಕೀತು ಮಾಡಿದ್ದ. ಇದರಿಂದ ಪದೇ ಪದೇ ಹೋಗಿ ಬರುವ  ಬಸ್ಸು ಖರ್ಚನ್ನು ಉಳಿಸುವ ಯೋಚನೆಯಾಗಿತ್ತು ಅವನದು.

ಅನ್-ಲಿಮಿಟೆಡ್ ಪ್ಲಾನ್ ಬಂದ ನಂತರ ಹೆಂಗಳೆಯರ ಮಾತಿಗೆ ಮತ್ತಷ್ಟು ಪುಷ್ಟಿ ಬಂದಿದೆ. ನಿಂಗಿ ಕೂಡಾ ಗುಂಡನಿಗೆ ಡೈಲಿ ಅಪ್ಡೇಟ್ಸ್ ಉದುರುತ್ತಿದ್ದಳು. ಗುಂಡ ಇತ್ತ ಬಿಡಲೂ ಆಗದೆ ಮಾತನಾಡಲೂ ಆಗದೆ ಚಡಪಡಿಸುತ್ತಿದ್ದ. ನಿಂಗಿ ಫೋನು ಕೆಳಗಿಟ್ಟ ಸಮಯ ಅವನಿಗೆ ಸ್ವರ್ಗದ ಅನುಭವಾಗುತ್ತಿತ್ತು.

"ಏನ್ ಗೊತ್ತೇನ್ರಿ, ಇವತ್ತು ನನ್ನ ಸೀರೆ ಬಗ್ಗೆನೇ ಎಲ್ಲಾ ಮಾತಾಡ್ತಾ ಇದ್ರು. ನನ್ನ ಸೆಲ್ಫಿ ಎಷ್ಟು ಲೈಕ್, ಕಾಮೆಂಟ್ ಬಂದಿದೆ ನೋಡಿದ್ರಾ. ಏನೂಂದ್ರೆ ನಾಡಿದ್ದು ಫಂಕ್ಷನ್ ಗೆ ಹೊಸ ಸೀರೆ ತಗೊಂಡೆ ಬರಿ ೨೦೦೦ ಅಷ್ಟೇ! (ಈ ಸಾಲನ್ನು ಬಹುಶಃ ಗುಂಡ ೨೦೦೦ ಬಾರಿ ಕೇಳಿರಬೇಕೆನೋ! ಖರ್ಚಿಗೆ ಮಿತಿ ಹಾಕೊಳೆ ಅಂದ್ರೆ, ಈ‌ ಬಾರಿ ಮಾತ್ರ ತಗೊಂಡಿದ್ದು ಎಂದು ಹಲವು ಬಾರಿ ಹೇಳಿದ್ದುಂಟು!) ಎಲ್ರಿಗೂ ನನ್ನ ಸರದ ಮೇಲೆ ಕಣ್ಣು ಗೊತ್ತಾ!" ಹೀಗೆ ನಿಂಗಿ ಎಕ್ಸ್-ಪ್ರೆಸ್ ರೈಲಿನಂತೆ ಮುಂದುವರೆಸುತ್ತಾ ಹೋದಳು. ಗುಂಡನಿಗೆ ಇದು ಪ್ರತಿ ದಿನದ ಗೋಳು. ಅವನಿಗೂ ಗೊತ್ತಿದೆ ಮಡದಿ ಹೇಳಿದಂತೆ ಅವಳೇನೂ "centre of attraction" ಅಲ್ಲಾಂತಾ. ಅಫೀಸಿನಿಂದ ಸುಸ್ತಾಗಿ ಬಂದಾಗ ಮಾತನಾಡಲೂ ಏನು ತೋಚುತ್ತಿರಲಿಲ್ಲ. ಹಾಗಾಗಿ ಸುಮ್ನೆ ಲೌಡ್-ಸ್ಪೀಕರ್ ನಲ್ಲಿ ನಿಂಗಿಯ ಭಾಷಣ ಕೇಳುತ್ತಿದ್ದನು. ಫೋನ್ ಕಟ್ ಮಾಡಿಸುವುದು ಗುಂಡನಿಗೆ ಸಾಹಸದ ಕೆಲಸವಾಗಿತ್ತು.

ಇದರ ಇನ್ನೊಂದು ಮುಖ ಕೂಡ ಇದೆ. ನಿಂಗಿಯ ಸೆಲ್ಫ್ ಮತ್ತು ಸೆಲ್ಫಿ ಮಾತಿಗೆ ಯಾರೂ ಗಮನ ಕೊಡುತ್ತಿರಲಿಲ್ಲ. ಇದು ಗುಂಡನಿಗೂ ತಿಳಿದ ವಿಷಯ. ಆದರೂ ಸುಮ್ಮನೆ ಮನಸ್ಸು ಯಾಕೆ ನೋಯಿಸುವುದೆಂಬುದು ಗುಂಡನ ದೊಡ್ಡಗುಣವಾಗಿತ್ತು.

ಹೀಗೆ ೧೦ ದಿನ ನಡೆದು ಗುಂಡನಿಗೆ ರೋಸಿಹೋಗಿತ್ತು. ಅದೊಂದು ದಿನ ಯಾವುದೆ ಕಾರ್ಯಕ್ರಮವಿಲ್ಲವಾದ್ದರಿಂದ, ನಿಂಗಿ ತುಸು ಬೇಗನೆ ಫೋನಾಯಿಸಿದಳು. ಗುಂಡನಿಗೆ ಆಫೀಸ್ ಇದ್ದರಿಂದ ಪದೆ ಪದೆ ಕಟ್ ಮಾಡುತ್ತಿದ್ದನು. ನಿಂಗಿಗೂ ಅನುಮಾನ ಹೆಚ್ಚಾಗತೊಡಗಿತು. ವಾಟ್ಸಾಪ್ ಅಲ್ಲಿ ಕೂಡಾ ರಿಪ್ಲೈ ಇಲ್ಲ, ಏನಾಯಿತು ಅಂತ ಮನದಲ್ಲೇ ಕಸಿವಿಸಿಗೊಂಡಳು ನಿಂಗಿ. ಸುಮಾರು ಸಂಜೆ ೭ ಆಗಿರಬೇಕು, ನಿಂಗಿ ಮತ್ತೆ ಫೋನ್ ಹಚ್ಚಿದಳು.

"ಏನ್ರೀ ಆವಾಗಿಂದ ಫೋನ್ ಮಾಡ್ತಾ ಇದೀನಿ ಏನು ತೆಗಿತಾನೆ ಇಲ್ಲ" ಜಮಾಯಿಸಿದಳು ನಿಂಗಿ

"ಹೂ ಕಣೆ ನಿಂಗೆ ಮನೆಯಲ್ಲಿ ಕೆಲ್ಸಾ ಇಲ್ಲಾಂದ್ರೆ ನಂಗೆ ಆಫೀಸಲ್ಲಿ ಕೆಲ್ಸಾ ಇರಲ್ವಾ" ಎಂದು ಚಟಾಕಿ ಹಾರಿಸಿದನು ಗುಂಡ

"ಒಹೋ ಸರಿ ಸರಿ. ಏನ್ ಮಾಡ್ತಾ ಇದೀರಾ?"

ಗುಂಡನಿಗೆ ಮೊದಲೇ ಸುಸ್ತು, ಅದರ ಮಧ್ಯೆ ಇಂತಹ ಪ್ರಶ್ನೆ ಕೇಳಿ ರೋಸಿಹೋಯಿತು

"ಏನಿಲ್ಲಾ ಆಫಿಸಿಂದ ಬಂದಿ ತಕ್ಷಣ ಹಾಟ್ ಮತ್ತೆ ಕೋಲ್ಡ್ ಮಿಕ್ಷ್ ಮಾಡಿ ಗಂಟಲಿಗೆ ಏರಿಸ್ತಾ ಇದೀನಿ" ಅಂತಾ ಒಗಟಿನ ಉತ್ತರ ಹೇಳಿದನು.

ಈ ಮಾತನ್ನು ಕೇಳಿ ನಿಂಗಿಗೆ ದಿಗಿಲಾಯಿತು ಮತ್ತೆ ವಿಪರೀತ ಸಿಟ್ಟು ಬರಿಸಿತು.

"ಈ‌ ಚಟ ನಿಮಗೆ ಯಾವತ್ತಿಂದಾ ಇದೆ.  ಮದುವೆಗೆ ಮುಂಚೆನೆ ಯಾಕೆ ಹೇಳಿಲ್ಲಾ! ಇಷ್ಟು ವರ್ಷ ಆದ್ಮೇಲೆ ನನಗೆ ಇಂಡೈರೆಕ್ಟ್ ಆಗಿ ತಿಳಿತು ನೋಡಿ. ನಾನು  ಇನ್ನು ನಿಮ್ಮನ್ನು ಬಿಟ್ಟು ಬರಲ್ಲಾ ಕಣ್ರೀ. ಇಷ್ಟು ದೊಡ್ಡವರಾದ್ರೂ ಬುದ್ಧಿ ಇಲ್ಲ ನಿಮ್ಗೆ. ಅಟ್ಲೀಸ್ಟ್ ಮಕ್ಕಳಿಗಾದ್ರೂ ಆ ಚಟನ ಬಿಡಿ. ಇದಕ್ಕೇನೂ ನನ್ನ ತಿಂಗಳಾಗಟ್ಲೆ ಊರಿಗೆ ಕಳಿಸೋದು. ಅವತ್ತು ಅಪಾರ್ಟಮೆಂಟ್ ಹುಡುಗ ರಾತ್ರಿ ಕುಡಿದು ಗಲಾಟೆ ಮಾಡಿದಾಗ ಬುದ್ಧಿವಾದ ಹೇಳಿದ್ರಿ ಈಗ ನೀವೆ… ಅಪಾರ್ಟಮೆಂಟ್ ಕಸದಬುಟ್ಟಿ ಪಕ್ಕ ಇಡುವ ಸಾರಾಯಿ ಬಾಟಲಿನ ಸಾಲಿನಲ್ಲಿ ನಿಮ್ಮದೂ ಇದೆ ಅಂತಾ ಆಯ್ತು. ನಾನು ಖರ್ಚು ಮಾಡಬಾರದು, ನೀವು ಮಾತ್ರ ಉಪಯೋಗವಿಲ್ಲದ ಸಾರಾಯಿಗೆ ಸಾವಿರಾರು ರುಪಾಯಿ ಸುರಿಬಹುದಲ್ಲವೇ! ಒಹೋ ಬೇಸಗೆ ರಜೆ ಮುಗಿಸಿ ಬಂದ್ಮೇಲೆ ಅದಕ್ಕೆ ಫ್ರೀಜರ್ ನಲ್ಲಿ ಅಷ್ಟೊಂದು ಐಸ್ ತುಂಬಿರೋದು. ಗೊತ್ತಾಯ್ತು ಬಿಡಿ! ಈಗಲೇ ಊರಿಂದ ಹೊರಟು ಬರ್ತೀನಿ. ಸಾಲದಕ್ಕೆ ಫೋನ್ ಮಾಡ್ಬೇಕಾದ್ರೆ ಎಂದೂ ಇರದ ಏರು ದನಿಯಲ್ಲಿ ಮಾತಾಡ್ತಾ ಇದೀರಾ ಬೇರೆ. ಎಲ್ಲಾ ಗುಂಡಿನ ಎಫೆಕ್ಟ್ ಅನ್ನೋದರಲ್ಲಿ ಸಂಶಯವೇ ಇಲ್ಲ!" ಎಂದು ನಿಂಗಿ ಹಿಗ್ಗಾಮುಗ್ಗಾ ಅಳುತ್ತಾ ಮಾತಿನಲ್ಲಿ ಥಳಿಸಿದಳು.

"ಆಯ್ತೇನೆ ನಿಂದು" ಎಂದು ಗದರಿದ ಗುಂಡ

"ಇನ್ನೇನಾಯ್ತು, ಎಲ್ಲಾ ಮುಗಿದು ಹೋಯ್ತು. ನನ್ನ ಗಂಡ ಕುಡುಕ ಅಂತಾ ಸಾಬಿತಾಯಿತು" ಎಂದು ಹೇಳುತ್ತಾ ನಿಂಗಿಯ  ಅಳು ಮತ್ತಷ್ಟು ಜೋರಾಯಿತು.

ಗುಂಡನಿಗೆ ನಗು ತಡೆಯಲಾಗಲಿಲ್ಲ

"ಏನು ಕುಡಿತಾ ಇರೋದು ಅಂತಾದ್ರು ಕೇಳಿದ್ಯಾ. ಸುಮ್ನೆ ಬೇಕಾಬಿಟ್ಟಿ ಮಾತಾಡ್ತಿಯಾ ಅಲ್ವಾ. ನೆಗಡಿ ಆಗಿದೆ ಕಣೆ ಗಂಟಲು ನೋವು. ಬಿಸಿನೀರಿಗೆ ತಣ್ಣೀರು ಹಾಕಿ ಕುಡಿತಾ ಇದೀನಿ. ಮೊದಲೇ ಸುಸ್ತಾಗಿದೆ ಅದರ ಮಧ್ಯೆ ನಿಂದು"

"ಹೌದೇನ್ರಿ. ಮೊದಲೇ ಹೇಳೋದಲ್ವಾ ನಿಜ ತಾನೆ!" ಆಶ್ಚರ್ಯದಿಂದ ನುಡಿದಳು ನಿಂಗಿ

"ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ, ನಾನು ಸಾರಾಯಿ ಕುಡಿಯಲ್ಲ ಅಂತಾ!"

ಈ ಮಾತನ್ನು ಕೇಳಿ ಕುದಿಯುತ್ತಿದ್ದ ನಿಂಗಿ ತಣ್ಣಗಾದಳು ಆದರೆ ಗುಂಡನ ನಗು ಮಾತ್ರ ನಿರಂತರವಾಗಿತ್ತು.

"ಮೊದಲೇ ಹೇಳೋದಲ್ವೇನ್ರೀ ಮತ್ತೆ"

"ನೀನು ಶತಾಬ್ಧಿ ರೈಲಿನ ತರ ಸಿಗ್ನಲ್ ಇಲ್ಲದೆ ಮಾತಾಡ್ತಾ ಹೋದ್ರೆ ನಂಗೆ ಅವಕಾಶ ಯಾವಾಗ ಸಿಗುತ್ತೆ ಹೇಳು. ಮೊದಲೇ ಗಂಟಲು ನೋವು ಪದೆ ಪದೆ ಮಾತನಾಡುವುದು ಕೂಡಾ ಕಷ್ಟ. ನನಗೆ ಕೊನೆಗೂ ಕುಡುಕ ಅಂತ ಬಿರುದು ನಿಡಿದ್ಯಲ್ಲಾ ಮಾರಾಯ್ತಿ. ಸೆಖೆಗಾಲದಲ್ಲಿ ಐಸ್ ಹಾಕೊಂಡು ನೀರು ಕುಡಿತಾ ಇದ್ದೆ. ಅದು ಜಾಸ್ತಿ ಆಗಿ ಈಗ ನೆಗಡಿ ಶುರುವಾಗಿದೆ" ಎಂದು ಉದಾಹರಿಸಿ ಮಾರುತ್ತರ ನೀಡಿದ ಗುಂಡ.

"ಏನೇನೋ ಮಾತಾಡ್ಬಿಟ್ಟೆ ಸಾರಿ ಕಣ್ರೀ! ಆದರೂ ನೀವು ಯೋಚಿಸಿ ಮಾತಾಡ್ಬೇಕಿತ್ತು." ನಾಚಿಕೊಂಡು ಕ್ಷಮೆಯಾಚಿಸಿದಳು  ನಿಂಗಿ

"ದಿನಾ ಮಾತಾಡಿ ಬೋರ್ ಆಗಿತ್ತು ಅದಿಕ್ಕೆ ಇವತ್ತು ಸ್ವಲ್ಪ ಸ್ವಾರಸ್ಯ ಇರಲಿ ಅಂತ ಹೀಗೆ ಮಾತನಾಡಿದ್ರೆ ನೀನು ಚಾಮುಂಡಿ ಆಗೋದಾ" ಗುಂಡನ ನಗು ಮತ್ತಷ್ಟು ಹೆಚ್ಚಾಯಿತು.

"ಸಾಕು ಸುಮ್ನೇರಿ ನಕ್ಕಿದ್ದು. ಸರಿ ಸರಿ ಇಡ್ತೀನಿ ನಂಗೆ ಕೆಲಸ ಇದೆ" ಎಂದು ತಟ್ಟನೆ ಫೋನ್ ಕಟ್ ಮಾಡಿದಳು ನಿಂಗಿ.

ಫೋನ್ ಕಟ್ ಮಾಡಲು ದಿನಾ ನೆವ ಹುಡುಕುತ್ತಿದ್ದ ಗುಂಡ ಇಂದು ನಿರಾಳನಾಗಿದ್ದ.

ಹಾಗೆ ಹಾಟ್ ಆಗಿ ಶುರು ಆದ ಸಂಭಾಷಣೆ ಕೂಲ್ ಆಗಿ ಮುಕ್ತಾಯವಾಯಿತೆಂದು ಹೇಳೋದು ಬೇಕಾಗಿಲ್ಲ! ಗುಂಡನ ನೆಗಡಿ ಈ ಹಾಸ್ಯ ಪ್ರಸಂಗದಿಂದ ಅರ್ಧದಷ್ಟು ಹಾರಿಹೋಗಿತ್ತು :-)

No comments:

Post a Comment

Printfriendly

Related Posts Plugin for WordPress, Blogger...